ಮಾರ್ಚ್ 23ರಂದು ಪಾಕಿಸ್ತಾನದ ಗಣರಾಜ್ಯೋತ್ಸವದಂದು ವಾಟ್ಸಾಪ್ ಸ್ಟೇಟಸ್ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಮಾರ್ಚ್ 24 ರಂದು ಬಂಧಿಸಿದ್ದಾರೆ. ಮಹಿಳೆ ಪೋಸ್ಟ್ ಮಾಡಿದ ಸಂದೇಶದಲ್ಲಿ, “ದೇವರು ಪ್ರತಿ ರಾಷ್ಟ್ರವನ್ನು ಶಾಂತಿ, ಏಕತೆ ಮತ್ತು ಸಾಮರಸ್ಯದಿಂದ ಆಶೀರ್ವದಿಸಲಿ” ಎಂದು ಬರೆದುಕೊಂಡಿದ್ದಾರೆ.
ಕುತ್ಮಾ ಶೇಖ್ ಎಂದು ಗುರುತಿಸಲಾದ ಮಹಿಳೆ, ಕರ್ನಾಟಕದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿಯಾಗಿದ್ದು ಸ್ಥಳೀಯ ಮದರಸಾದಲ್ಲಿಓದುತಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸುವುದು) ಮತ್ತು 505 (2) (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮುಧೋಳ ಮೂಲದ ಅರುಣಕುಮಾರ ಭಜಂತ್ರಿ ಎಂಬುವರು ಆಕೆಯ ವಿರುದ್ಧ ದೂರು ದಾಖಲಿಸಿದ್ದು, ಆಕೆ ಕೋಮುಗಳ ನಡುವೆ ದ್ವೇಷ ಹುಟ್ಟು ಹಾಕಲು ಯತ್ನಿಸುತ್ತಿದ್ದು, ಪಾಕಿಸ್ತಾನ ಗಣರಾಜ್ಯೋತ್ಸವದಂದು ಸಂದೇಶ ಹಾಕಿದ್ದ ಆಕೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ. ಅಥಣಿ ಮೂಲದ ವಕೀಲ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು Scroll.in ಜೊತೆ ಮಾತನಾಡಿ, ಭಜಂತ್ರಿ ಮಾಡಿರುವ ಆರೋಪಗಳು ಕಾನೂನು ಪರಿಶೀಲನೆಗೆ ನಿಲ್ಲುವುದಿಲ್ಲ, ಪೊಲೀಸರ ಅವಸರದ ಪ್ರತಿಕ್ರಿಯೆಗಳಿಂದ ಅಮಾಯಕರು ತೊಂದರೆಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷ, ಪ್ರಧಾನಿ ಮೋದಿ ಅವರು ಪಾಕಿಸ್ತಾನದ ರಾಷ್ಟ್ರೀಯ ದಿನದಂದು ತಮ್ಮ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಶುಭ ಹಾರೈಸಿ ಭಾರತವು ನೆರೆ ರಾಷ್ಟ್ರದ ಜನರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದರು. 2015 ರಲ್ಲಿ, ಪ್ರಧಾನಿ ಮೋದಿ ಅವರು ದೇಶದ ಗಣರಾಜ್ಯೋತ್ಸವದಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಶುಭ ಹಾರೈಸಿದ್ದರು.
ಪ್ರತಿ ರಾಷ್ಟ್ರಕ್ಕೂ ಶಾಂತಿ, ಏಕತೆ ಮತ್ತು ಸೌಹಾರ್ದತೆ ಬಯಸಿ ಮಹಿಳೆಯನ್ನು ಬಂಧಿಸಿರುವ ಬಾಗಲಕೋಟೆ ಪೊಲೀಸರ ನಿರ್ಧಾರವನ್ನು ಕೆಲವು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.