ರಾಜ್ಯದಲ್ಲಿ ಉಪಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಜೆಡಿಎಸ್ ಸಿಂದಗಿ, ಹಾನಗಲ್ ಕ್ಷೇತ್ರದ ಉಪಕದನಕ್ಕೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ. ಇತ್ತ ಕಾಂಗ್ರೆಸ್ ಕೂಡ ಸಿಂಧಗಿ ಕ್ಯಾಂಡಿಡೇಟ್ ಮೊದಲೇ ಪ್ರಕಟಿಸಿದ್ದರು. ಮಂಗಳವಾರ ರಾತ್ರಿ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೂಡ ಘೋಷಣೆಯಾಗಿದೆ. ಈ ಮಧ್ಯೆ ಕಮಲ ಪಾಳಯದಲ್ಲಿ ಬೈ ಎಲೆಕ್ಷನ್ ಟಿಕೆಟ್‌ಗಾಗಿ ದೊಡ್ಡ ದಂಡೇ ಲಾಬಿಗೆ ಇಳಿದಿದೆ.
ಹಾನಗಲ್, ಸಿಂಧಗಿ ವಿಧಾನಸಭಾ ಉಪಚುನಾವಣೆಗಾಗಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಹಾನಗಲ್ ಕ್ಷೇತ್ರದ ಟಿಕೆಟ್ಗಾಗಿ ಕೇಸರಿ ಪಾಳಯದಲ್ಲಿ ಉಪಕದನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೇ ಇದೆ. ಇದು ಕೈ, ಕಮಲ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ನಗಲ್ ಕಾಂಗ್ರೆಸ್‌ನಲ್ಲಿ ಮನೋಹರ್ ತಹಶೀಲ್ದಾರ್ ಮತ್ತು ಶ್ರೀನಿವಾಸ್ ಮಾನೆ ಮಧ್ಯೆ ಟಿಕೆಟ್‌ಗಾಗಿ ಬಹಿರಂಗ ಪೈಪೋಟಿ ಆರಂಭವಾಗಿತ್ತು. ಇದು ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈ ಇಬ್ಬರ ಮನವೊಲಿಸಿ ಪರಸ್ಪರ ಕಚ್ಚಾಟಕ್ಕೆ ಬ್ರೇಕ್ ಹಾಕಿದ್ದರು. ಜೊತೆಗೆ ಒಬ್ಬರಿಗೆ ಟಿಕೆಟ್, ಮತ್ತೊಬ್ಬರಿಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ನೀಡುವ ಭರವಸೆ ನೀಡಿದ್ರು. ಇದೀಗ ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ನಡೆಸಿದ್ದ ಆಂತರಿಕ ಸಮೀಕ್ಷೆಯಲ್ಲಿ ಮಾನೆ ಕೈ ಮೇಲಾಗಿದೆ. ಹೀಗಾಗಿ ಅವರ ಹೆಸರನ್ನೇ ಹಾನಗಲ್ ಕ್ಷೇತ್ರದ ಅಭ್ಯರ್ಥಿಯಾಗಿ ಕೆಪಿಸಿಸಿ ಶಿಫಾರಸು ಮಾಡಿತ್ತು. ಹೈಕಮಾಂಡ್ ಕೂಡ ಮಾನೆಗೆ ಟಿಕೆಟ್ ಘೋಷಿಸಿದರು.
ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ್ತು ಶ್ರೀನಿವಾಸ್ ಮಾನೆ ನಡುವೆ ಪೈಪೋಟಿ ಆರಂಭವಾಗಿತ್ತು. ಇದಾದ ಬಳಿಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ವತಿಯಿಂದ ಸರ್ವೆ ನಡೆಸಲಾಗಿತ್ತು. ಪಕ್ಷ ಸಂಘಟನೆ, ಸಂಪನ್ಮೂಲದ ಜೊತೆ ಕಾರ್ಯಕರ್ತರ ಅಪೇಕ್ಷೆ ವರದಿ, ಜಾತಿ ಸಮೀಕರಣ, ಸ್ಥಳೀಯ ರಾಜಕಾರಣ ಎಲ್ಲದರ ಬಗ್ಗೆ ಕಾಂಗ್ರೆಸ್‌ನಿಂದ ಆಂತರಿಕ ಸಮೀಕ್ಷೆ ನಡೆದಿತ್ತು.
ಇನ್ನು, ಕಾಂಗ್ರೆಸ್ನ ಆಂತರಿಕ ಸರ್ವೆಯಲ್ಲಿ ಶ್ರೀನಿವಾಸ್ ಮಾನೆ ಪರವಾಗಿದೆಯೇ ವರದಿ ಬಂದಿತ್ತು. ಜೊತೆಗೆ ಇಂಟರ್ನಲ್ ಸರ್ವೆಯಲ್ಲಿ ಮಾನೆ ಪಾಲಿಗೆ ಹಾನಗಲ್‌ನಲ್ಲಿ ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಸಕಾರಾತ್ಮಕ ವರದಿ ಬಳಿಕವೇ ಮಾನೆಗೆ ಟಿಕೆಟ್ ನೀಡಲಾಗಿದೆ.
ಇನ್ನು ಬೈ ಎಲೆಕ್ಷನ್ ಗೆಲವಿಗಾಗಿ ಬಿಜೆಪಿ ಗೆಲ್ಲುವ ಕುದುರೆಗಳಿಗೆ ಗಾಳ ಹಾಕಿದೆ ಎನ್ನಲಾಗಿದೆ. ಹಾನಗಲ್ ಮತ್ತು ಸಿಂದಗಿಯಲ್ಲಿ ಪಕ್ಷದಲ್ಲಿ ಜಯದ ದಾರಿ ಯಾರಿಗೆ ಸುಗಮ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಪಟ್ಟಿಯನ್ನ ದೆಹಲಿಗೆ ಕೊಂಡೊಯ್ದಿದ್ದಾರೆ.
ಬಿಜೆಪಿ ಅಕಾಂಕ್ಷಿಗಳ ಹೆಸರು ರವಾನೆ:
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಗೆಲುವಿಗಾಗಿ ಬಿಜೆಪಿ ಕಸರತ್ತು ನಡೆಸ್ತಿದೆ. ಎರಡು ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯನ್ನ ಹೊತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದೆಹಲಿಗೆ ತೆರಳಿದ್ದಾರೆ. ಜೊತೆಗೆ ಆ ಪಟ್ಟಿಯಲ್ಲಿ ಕೇಂದ್ರ ಬಿಜೆಪಿಯ ಸಂಸದೀಯ ಮಂಡಳಿಯ ಮುಂದಿಟ್ಟಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ನಾಲ್ವರು ಆಕಾಂಕ್ಷಿಗಳು, ಸಿಂದಗಿಯಲ್ಲಿ ಮೂವರು ಆಕಾಂಕ್ಷಿಗಳ ಹೆಸರನ್ನು ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಇನ್ನು ಹಾನಗಲ್ ಕ್ಷೇತ್ರದಲ್ಲಿ ರೇವತಿ ಶಿವಕುಮಾರ್ ಹೆಸರು ಅಗ್ರಸ್ಥಾನದಲ್ಲಿದೆ. ಇತ್ತ ಸಿಂದಗಿ ಕ್ಷೇತ್ರದಲ್ಲಿ ರಮೇಶ್ ಬೂಸನೂರು ಹೆಸರು ಮುಂಚೂಣಿಯಲ್ಲಿದೆ. ಇನ್ನು ಅಕ್ಟೋಬರ್ 6ಕ್ಕೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮವಾಗುವ ಸಾಧ್ಯತೆ ಇದೆ.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರೋ ಮೊದಲ ಉಪ ಚುನಾವಣೆ ಇದಾಗಿದ್ದು, 2 ಕ್ಷೇತ್ರಗಳ ಗೆಲವಿಗೆ ಭಾರೀ ರಣತಂತ್ರ ರೂಪಿಸಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎರಡೂ ಕ್ಷೇತ್ರಗಳಿಗೂ ಚುನಾವಣೆ ಉಸ್ತುವಾರಿಯನ್ನ ನೇಮಿಸಿದ್ದಾರೆ.
ಒಟ್ಟಾರೆ, ಬಿಜೆಪಿ ಗೆಲ್ಲುವ ಕುದುರೆಗಳನ್ನ ರೇಸ್‌ಗೆ ಇಳಿಸುತ್ತಿದ್ರೆ, ಇತ್ತ ಕಾಂಗ್ರೆಸ್ ಆಂತರಿಕ ಸರ್ವೆ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದೆ. ಅದೇನೆ ಇರ್ಲಿ.. ಬೈ ಎಲೆಕ್ಷನ್‌ನಲ್ಲಿ ಪಕ್ಷಗಳ ಲೆಕ್ಕಾಚಾರದಲ್ಲಿ ಯಾರಿಗೆ ಯಶಸ್ಸು ಸಿಗುತ್ತೆ? ಮತದಾರ ಪ್ರಭು ಯಾರಿಗೆ ಮಣೆ ಹಾಕ್ತಾನೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.