ಕೊರೊನಾ ಸೋಂಕಿನ ಭೀತಿ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಪೂರೈಸಲಾಗಿದ್ದು, ಆಗಸ್ಟ್ 10ರ ಒಳಗೆ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಎಸ್ ಸುರೇಶ್ ಕುಮಾರ್ ಈ ಮುನ್ನ ಮಾಹಿತಿ ನೀಡಿದ್ದರು.
ಕರ್ನಾಟಕ ರಾಜ್ಯ ಎಸ್‌ಎಸ್‌ಎಲ್‌ಸಿ ಫಲಿತಾಂಶ 2021 ಅನ್ನು ಇಂದೇ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಫಲಿತಾಂಶ ಪ್ರಕಟ ಮಾಡುವುದಾಗಿ ತಿಳಿಸಿದ್ದರು. ಈಗಾಗಲೇ ಮೌಲ್ಯಮಾಪನ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸುವುದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದಿದ್ದರು.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಅವರಿಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕಿ ವಿ.ಸುಮಂಗಲ ಬುಧವಾರವೇ ಫಲಿತಾಂಶ ಸಲ್ಲಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಫಲಿತಾಂಶ ಪ್ರಕಟ ಮಾಡಲು ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು ಎಂದು ಶುಕ್ರವಾರ ತಿಳಿಸಿದ್ದರು, ಹಾಗಾಗಿ ಇಂದೇ ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 19 ಹಾಗು 22 ರಂದು ಎರಡು ದಿನಗಳ ಕಾಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದ್ದು, 99.65% ವಿದ್ಯಾರ್ಥಿಗಳ ಹಾಜರಾತಿಯಾಗಿತ್ತು. ಕೊರೊನಾ ಆತಂಕದ ನಡುವೆಯೂ ರಾಜ್ಯದಲ್ಲಿ ಈ ವರ್ಷ 8,19,694 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ.

ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಎಸ್‌ಎಸ್‌ಎಲ್‌ಸಿ ರಿಸಲ್ಟ್ ವೀಕ್ಷಿಸಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ sslc.karnataka.gov.in ಮೂಲಕ ನೋಡಬಹುದಾಗಿದೆ.











