
ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಾಪಸ್ಸಾತಿಗೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ. ಸದನದಲ್ಲಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ನಿರ್ಣಯ ಮಂಡನೆ ಮಾಡಿದ್ದು, ವಕ್ಫ್ ತಿದ್ದುಪಡಿ ಮಸೂದೆ ಏಕಪಕ್ಷೀಯ ತೀರ್ಮಾನವಾಗಿದೆ. ಜಂಟಿ ಸದನ ಸಮಿತಿ ಏಕಪಕ್ಷೀಯವಾಗಿ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಜಂಟಿ ಸಂಸದೀಯ ಸಮಿತಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ವಕ್ಫ್ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅನೇಕ ತೀರ್ಮಾನಗಳಿಗೆ ಪೆಟ್ಟು ಬೀಳಲಿದ್ದು, ರಾಜ್ಯ ಸರ್ಕಾರಗಳ ಸ್ವಾಯತ್ತತೆಯನ್ನು ಈ ವಿಧೇಯಕ ಮೂಲಕ ಕೇಂದ್ರ ಹತ್ತಿಕ್ಕಲು ಹೊರಟಿದೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರ ಈ ಕೂಡಲೇ ವಕ್ಫ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸರ್ಕಾರ ಸರ್ವಾನುಮತದಿಂದ ಸದನದಲ್ಲಿ ನಿರ್ಣಯ ಕೈಗೊಂಡಿರುತ್ತದೆ ಎಂದು ನಿರ್ಣಯ ಓದಿದ್ದಾರೆ ಹೆಚ್.ಕೆ ಪಾಟೀಲ್. ಇನ್ನೂ ಕೇಂದ್ರ ಸರ್ಕಾರ ಯಾವುದೇ ಕಾನೂನು ತಂದರೂ ಶೇಕಡ 50ರಷ್ಟು ರಾಜ್ಯಗಳ ಒಪ್ಪಿಗೆ ಬೇಕು. ವಕ್ಫ್ ತಿದ್ದುಪಡಿ ಮಸೂದೆಗೆ ಶೇಕಡ 50 ಕ್ಕಿಂತ ಹೆಚ್ಚು ರಾಜ್ಯಗಳ ಒಪ್ಪಿಗೆ ಇದೆ. ಇದು ಹೇಗೆ ಹಾಗಾದ್ರೆ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಆಗುತ್ತದೆ..? ಇಷ್ಟೂ ಕಾಮನ್ ಸೆನ್ಸ್ ಇಲ್ವಾ ಸರ್ಕಾರಕ್ಕೆ..? ಎಂದು ಸರ್ಕಾರದ ನಿರ್ಣಯಕ್ಕೆ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ವಿರೋಧದ ನಡುವೆಯೇ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ನಿರ್ಣಯ ಕೈಗೊಂಡಿದೆ ಸರ್ಕಾರ. ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರಿಂದ ಧಿಕ್ಕಾರ ಘೋಷಣೆ ಮೊಳಗಿಸಿದ್ದಾರೆ. ಭಾರತ್ ಮಾತಾಕಿ ಜೈ ಅಂತ ಘೋಷಣೆ ಮಾಡಿ ವಿರೋಧ ಮಾಡಿದ್ದಾರೆ. ಸರ್ಕಾರದ ನಿರ್ಣಯ ವಿರೋಧಿಸಿ ವಿಒಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಆದರೂ ಸರ್ಕಾರ ಮಾತ್ರ ನಿರ್ಣಯ ಪಾಸ್ ಮಾಡಿಕೊಂಡಿದೆ.

ವಿಪಕ್ಷ ನಾಯಕ ಆರ್ ಅಶೋಕ್ ಮಾಧ್ಯಮಗಳ ಜೊತೆಗೆ ಮಾತನಾಡಿ, ವಕ್ಪ್ ಬೋರ್ಡ್ ವಿಚಾರವಾಗಿ ರೆಸಲ್ಯೂಷನ್ ತಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ರೆಕಮಂಡೇಶನ್ ತಂದಿದ್ದಾರೆ. ನಾವು ಇದನ್ನ ವಿರೋಧಿಸಿದ್ದೇವೆ. ಇದು ಒಳ್ಳೇದಲ್ಲ, ವೋಟ್ಗಾಗಿ ಹೀಗೆ ಮಾಡಿದ್ದಾರೆ. ಮುಸ್ಲಿಂ ವೋಟ್ಗಾಗಿ ಯಾವ ಸ್ಥಿತಿಗೆ ಬೇಕಾದರೂ ಕಾಂಗ್ರೆಸ್ ಹೋಗೊದಕ್ಕೆ ತಯಾರಿದ್ದಾರೆ. ಇದರಿಂದ ಮುಸ್ಲಿಂ ಓಲೈಕೆ ಮಾಡಿ ರಾಜ್ಯವನ್ನ ದಿವಾಳಿ ಮಾಡಿದ್ದಾರೆ. ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನ ಮುಸ್ಲಿಂರಿಗೆ ಕೊಟ್ಟಿದ್ದಾರೆ. ವಕ್ಪ್ ಬೋರ್ಡ್ ರಾಜ್ಯದ ಆಸ್ತಿಯನ್ನ ನುಂಗಾಕಿದ್ದಾರೆ. ಸ್ಕೂಲ್, ದೇವಸ್ಥಾನ ಎಲ್ಲವನ್ನ ನುಂಗಾಕಿದ್ದಾರೆ. ಮತ್ತೆ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಅವತಾರ ಆಗಿದ್ದಾರೆ ಎಂದು ಟೀಕಿಸಿದ್ದಾರೆ.





