ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ರಾಜ್ಯದಲ್ಲದೇ ಈಗ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಎಷ್ಟು ದಿನ ಇರುತ್ತೋ ಅವರಿಗೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆಯೂ ಕಟಕಿ ಕರ್ನಾಟಕದಲ್ಲಿ ಆರು ತಿಂಗಳ ಹಿಂದೆ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಆಡಳಿತಕ್ಕೆ ಬಂದಿತು. ಆದರೆ ಆರು ತಿಂಗಳ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೀವೇ ನೋಡಿ. ಸಿಎಂ ಸಿದ್ದರಾಮಯ್ಯ ಅವರಿಗೆ ಎಷ್ಟು ದಿನ ನಾನು ಆ ಹುದ್ದೆಯಲ್ಲಿರುತ್ತೇನೆ ಎನ್ನುವುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.
ಕೆಲವೊಮ್ಮೆ ತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಿಡುತ್ತದೆ. ಅದೇ ಸನ್ನಿವೇಶ ಕರ್ನಾಟಕದಲ್ಲೂ ಆಗಿದೆ. ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಲೂಟಿಗಾಗಿ ಸ್ಪರ್ಧೆ ನಡೆದಿರುವುದು ಕಂಡು ಬರುತ್ತಿದೆ. ಪ್ರತಿ ದಿನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಅಧಿಕಾರದ ಕಿತ್ತಾಟದ ಸುದ್ದಿಯೇ ಬರುತ್ತಿದೆಯೇ ಹೊರತು ಬೇರೆನೂ ಇಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಮಾಫಿಯಾ ರಾಜ್, ಭ್ರಷ್ಟಾಚಾರ ಮತ್ತು ಲೂಟಿಯನ್ನು ಉತ್ತೇಜಿಸುತ್ತದೆ. ರಾಜಸ್ಥಾನದಲ್ಲಿ ವ್ಯಕ್ತಿಯ ಕತ್ತು ಸೀಳಿದ ನಂತರದ ಸಂಭ್ರಮಾಚರಣೆಗಳು ಊಹೆಗೂ ನಿಲುಕದವು. ಇದು ಕಾಂಗ್ರೆಸ್ ಆಡಳಿತದಲ್ಲಿ ನಡೆದಿದೆ ಎಂದು ಕನ್ಹಯ್ಯಾಲಾಲ್ ಹತ್ಯೆಯನ್ನು ಉಲ್ಲೇಖಿಸಿ, ಮಧ್ಯಪ್ರದೇಶವು ಇತರ ರಾಜ್ಯಗಳಿಂದ ಅರ್ಥಮಾಡಿಕೊಳ್ಳಬೇಕು ಮತ್ತು ಸಮಾಜವನ್ನು ಒಡೆಯುವ ಜನರ ಬಗ್ಗೆ ಜಾಗರೂಕರಾಗಿರಬೇಕು ಎಂದು ಮೋದಿ ಹೇಳಿದರು.