ರಾಜ್ಯದಲ್ಲಿ ತೀವ್ರ ತಾರಕಕ್ಕೇರಿರುವ ಹಿಜಾಬ್ ವಿವಾದವು ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕಳೆದ ವಾರ ಕರ್ನಾಟಕ ಹೈಕೋರ್ಟ್ ಸಮವಸ್ತ್ರ ಕಡ್ಡಾಯವಿರುವ ಶಾಲಾ ಕಳೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ತೊಡದಂತೆ ನಿಷೇಧಿಸಿತ್ತು. ಆದರೆ, ತುಮಕೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಕೋರ್ಟ್ ಆಜ್ಞೆಯನ್ನು ಧಿಕ್ಕರಿಸಿದ್ದಕ್ಕಾಗಿ ಅವರ ವಿರುದ್ದ ಕಾಲೇಜು ಆಡಳಿತ ಮಂಡಳಿ ದೂರು ದಾಖಲಿಸಿದೆ.
ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಕಳೆದ ಎರಡು ದಿನಗಳಿಂದ 15-20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ಕಾಲೇಜಿನ ಪ್ರಾಂಶುಪಾಲರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ಹಕ್ಕನ್ನು ನೀಡುವಂತೆ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಪ್ರತಿಭಟಿಸುತ್ತಾ ಇದ್ದಾರೆ.
ಇದೇ ವೇಳೆ ಮೈಸೂರಿನ ಇತಿಹಾಸ ಪ್ರಸಿದ್ದ ಖಾಸಗಿ ಕಾಲೇಜೊಂದರಲ್ಲಿ ಕಡ್ಡಾಯ ಸಮವಸ್ತ್ರ ಪಾಲನೆಯನ್ನು ಕಾಲೇಜು ಆಡಳಿತ ಮಂಡಳಿ ರದ್ದುಗೊಳಿಸಿದೆ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಿದೆ. ರಾಜ್ಯದಲ್ಲಿ ಹಿಜಾಬ್ ವಿವಾದದ ನಂತರ ಕಾಲೇಜೊಂದರಲ್ಲಿ ಕಡ್ಡಾಯ ಸಮವಸ್ತ್ರ ನೀತಿಯನ್ನು ತೆಗೆದು ಹಾಕಿದ ಮೊದಲ ಕಾಲೇಜು ಎಂಬ ಕೀರ್ತಿಗೆ ಈ ಕಾಲೇಜು ಪಾತ್ರವಾಗಿದೆ.

ಈ ಕುರಿತು ಮಾತನಾಡಿರುವ ಡಿಡಿಪಿಯು ಡಿ.ಕೆ.ಶ್ರೀನಿವಾಸಮೂರ್ತಿ ʻನಾಲ್ಕು ಜನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಗಲು ಅವಕಾಶ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದರು ಮತ್ತು ಅವರಿಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ದವು. ಈ ಕುರಿತು ನಾನು ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ ನಂತರ ಕಾಲೇಜು ಆಡಳಿತ ಮಂಡಳಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೇ ಗೃಹ ಸಚಿವ ಅರಗ ಜ್ಞಾನೇಂದ್ರ ಇನ್ನು ಮುಂದೆ ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ಮೃದು ಧೋರಣೇ ತೋರುವುದಿಲ್ಲ ಮಧ್ಯಂತರ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು.






