ಸರ್ಕಾರ ಕೈಗೊಳ್ಳುವ ಯಾವುದೇ ಕಾಮಗಾರಿ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜನ ಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ಅಳವಡಿಸಬಾರದು. ಈ ಕೂಡಲೇ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಹಾಕಲಾಗಿರುವ ಸ್ಥಳೀಯ ಜನಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ತೆಗೆದುಹಾಕಬೇಕು. ಹಾಗೆಯೇ ಅನಧಿಕೃತ ಫ್ಲೆಕ್ಸ್ ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇಂದು ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಹಾಕಲಾದ ಜನಪ್ರತಿನಿಧಿಗಳ ಹೆಸರು ಮತ್ತು ಫೋಟೋ ತೆಗೆದು ಹಾಕುವಂತೆ ಆದೇಶ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರಾ ಶರ್ಮ ಮತ್ತು ಜಸ್ಟೀಸ್ ಸಚಿನ್ ಶಂಕರ್ ನೇತೃತ್ವದ ನ್ಯಾಯಾಂಗ ಪೀಠ ಹೀಗೆ ಆದೇಶಿಸಿದೆ.
ಈ ಹಿಂದೆಯೇ ಹೈಕೋರ್ಟ್ ಈ ಆದೇಶ ಹೊರಡಿಸಿತ್ತು. ನಗರದ ಸೌಂದರ್ಯ ಹಾಳು ಮಾಡುತ್ತಿರುವ ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸುವಂತೆ ಸೂಚಿಸಿತ್ತು. ನಗರದಲ್ಲಿ ಅನಧಿಕೃತ ಜಾಹೀರಾತುಗಳಿವೆ. ಅಲ್ಲದೆ, ವಿಧಾನಸೌಧದ ಮುಂದೆಯೇ ಜಾಹೀರಾತು ಫಲಕವನ್ನು ಅಳವಡಿಸಲಾಗಿತ್ತು ಎಂದು ಪೀಠ ಹೇಳಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,806 ಅನಧಿಕೃತ ಜಾಹೀರಾತು ಫಲಕಗಳು ಮಾತ್ರ ಬಾಕಿ ಉಳಿದಿವೆ. ಆದಷ್ಟು ಬೇಗ ಅಕ್ರಮ ಮತ್ತು ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು ಮಾಡಬೇಕು ಎಂದಿದ್ದ ಹೈಕೋರ್ಟ್ ಇದಕ್ಕಾಗಿ 15 ದಿನಗಳ ಕಾಲಾವಕಾಶ ಬಿಬಿಎಂಪಿಗೆ ಕೊಟ್ಟಿತ್ತು.