ಕಾಂಗ್ರೆಸ್ ಸರ್ಕಾರ ಆಪರೇಷನ್ ಮಾಡುತ್ತಲೇ ಇದೆ. ಆದರೆ ಆಪರೇಷನ್ ಅಲ್ಲ ಕೋ ಆಪರೇಷನ್ ಎಂದು ಹೇಳುತ್ತಲೇ ಕಾಂಗ್ರೆಸ್ ಪಕ್ಷದ ಕಡೆಗೆ ಬರುವಂತೆ ಆಹ್ವಾನ ನೀಡುತ್ತಲೇ ಇದ್ದಾರೆ. ಮೂಡಿಗೆರೆ ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ, ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಸೇರಿದಂತೆ ಸಾಕಷ್ಟು ಜನರನ್ನು ಈಗಾಗಲೇ ಸಂಪರ್ಕ ಮಾಡಿರುವ ಡಿ.ಕೆ ಶಿವಕುಮಾರ್ ಲೋಕಸಭಾ ಚುನಾವಣೆ ಮೇಲಷ್ಟೇ ಕಣ್ಣು ನೆಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಬೇಕು ಅನ್ನೋ ಒಂದೇ ಗುರಿಯಿಂದ ಕಾಂಗ್ರೆಸ್‌ಗೆ ಬಂದವರನ್ನೆಲ್ಲಾ ಸೇರಿಕೊಳ್ಳುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಇದು ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಲಿದೆ ಎನ್ನುವ ಮಾತುಗಳ ನಡುವೆಯೇ ಡಿ.ಕೆ ಶಿವಕುಮಾರ್ ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಸಿಡಿದಿರುವ ನಾಯಕರನ್ನು ಸೆಳೆಯುವ ಕಸರತ್ತು ಮಾಡಿದ್ದಾರೆ.
ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್‌ಗೆ ಗಾಳ..
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ಬಿಜೆಪಿ ಹಾಗು ಜೆಡಿಎಸ್ ಎರಡೂ ಪಕ್ಷಗಳನ್ನು ಸಮಾನವಾಗಿ ವಿರೋಧಿಸಿಕೊಂಡು ಬಂದವರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿದೆ ಎನ್ನುವ ಕಾರಣಕ್ಕೆ ಪಕ್ಷಾಂತರ ಮಾಡಿದ್ದರು. ಸ್ಥಳೀಯವಾಗಿ ಎಲ್ಲಾ ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆದುಕೊಂಡು ಹೋಗಿದ್ದರು. ಆಗಲೂ ಜೆಡಿಎಸ್ ವರ್ಸಸ್ ಬಿಜೆಪಿ ಎನ್ನುವಂತಾಗಿತ್ತು. ಕಾಂಗ್ರೆಸ್ ಶೂನ್ಯ ಎನ್ನುವಂತಿತ್ತು. ಇದೀಗ ಯಶವಂತಪುರ ಕ್ಷೇತ್ರದಲ್ಲಿ ಮತಗಳಿಸುವ ಉದ್ದೇಶದಿಂದ ಡಿ.ಕೆ ಶಿವಕುಮಾರ್ ಎಸ್.ಟಿ ಸೋಮಶೇಖರ್‌ಗೆ ಅಧಿಕೃತವಾಗಿಯೇ ಆಹ್ವಾನ ಕೊಟ್ಟಿದ್ದು, ಕೆಲವೊಂದಿಷ್ಟು ನಾಯಕರನ್ನೂ ಈಗಾಗಲೇ ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ. ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲು ತಾಂತ್ರಿಕ ಸಮಸ್ಯೆ ಹೊಂದಿರುವ ಎಸ್.ಟಿ ಸೋಮಶೇಖರ್‌ಗೆ ಕಾಂಗ್ರೆಸ್ ಪಕ್ಷದ ಶಾಸಕರಿಗಿಂತೂ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗ್ತಿದೆ ಅನ್ನೋ ಚರ್ಚೆ ಶುರುವಾಗಿದೆ.

ಕೋಟಿ ಕೋಟಿ ಅನುದಾನದ ಬಳಿಕ ಕ್ಷೇತ್ರದ ಸಮಸ್ಯೆಗೆ ಮುಕ್ತಿ..
ಇತ್ತೀಚಿಗಷ್ಟೇ ಯಶವಂತಪುರ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಎಂದು ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆಗಲೂ ಸಾಕಷ್ಟು ಚರ್ಚೆ ಶುರುವಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಿದ್ದರೂ ಮಾಡಲು ಸಾಧ್ಯವಾಗದೆ ಇದ್ದ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮುಂದಾಗಿದೆ. ಮಂತ್ರಿ ಆಗಿ ಸಾಧಿಸಲು ಆಗದೆ ಇರುವ ಕೆಲಸವನ್ನು ಎಸ್.ಟಿ ಸೋಮಶೇಖರ್ ಈಗ ಸಾಧಿಸುವ ಗಡಿಯಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ S.T ಸೋಮಶೇಖರ್ ಅವರಿಗೆ ಎದುರಾಗಿದ್ದ ಕಸ ವಿಲೇವಾರಿ ಘಟಕ ಸಮಸ್ಯೆಗೆ ಮುಕ್ತಿ ನೀಡುವ ತಯಾರಿ ನಡೆದಿದೆ. ಯಶವಂತಪುರ ಕ್ಷೇತ್ರ ಒಂದರಲ್ಲೆ 5 ಕಸದ ಘಟಕಗಳನ್ನು ಸ್ಥಾಪನೆ ಮಾಡಲಾಗಿದ್ದು, ಈ ಘಟಕಗಳಿಂದ ಜನರು ಹಿಂಸೆ ಅನುಭವಿಸುತ್ತಿದ್ದರು. ಶಾಸಕರು ಆಕಡೆ ಹೋದಾಗ ಜನರು ತರಾಟೆಗೆ ತೆಗೆದುಕೊಳ್ತಿದ್ರು. ಇದೀಗ ಬೇರೆಡೆಗೆ ಶಿಫ್ಟ್ ಮಾಡುವಂತೆ ಶಾಸಕರು ಮಾಡಿದ್ದ ಒತ್ತಾಯಕ್ಕೆ ಸರ್ಕಾರ ಮಣಿಸಿದೆ. ಯಶವಂತಪುರ ಕ್ಷೇತ್ರದ 5 ಕಸದ ಘಟಕ ಸ್ಥಳಾಂತರಕ್ಕೆ ಸರ್ಕಾರ ಅಸ್ತು ಎಂದಿದ್ದಾರೆ ಬೆಂಗಳೂರು ಅಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ ಶಿವಕುಮಾರ್ ಎನ್ನಲಾಗ್ತಿದೆ.
ಎಸ್.ಟಿ ಸೋಮಶೇಖರ್ ಬಿಜೆಪಿ ಶಾಸಕರೇ ಇರಬಹುದು.. ಆದರೆ..
S.T ಸೋಮಶೇಖರ್ ಮನವಿಗೆ ಒಂದೇ ಮಾತಿನಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಅನ್ನೋ ಮಾತಿದೆ. ಆದರೆ ಕಳೆದ ಬಾರಿ ಕಾಂಗ್ರೆಸ್ ಬಿಟ್ಟು ಬಾಂಬೆ ಹಾರಿದ್ದ ಸೋಮಶೇಖರ್, ಕಾಂಗ್ರೆಸ್‌ನಲ್ಲಿ ರಾಜಕೀಯ ಗುರುಗಳ ಮಾತಿಗೇ ಬೆಲೆ ಕೊಡಲಿಲ್ಲ ಅನ್ನೋ ಅಪವಾದಗಳು ಬಂದಿದ್ದವು. ಇದೀಗ ಬಿಜೆಪಿ ಪಕ್ಷದ ಶಾಸಕನಾಗಿದ್ದರೂ ಕಾಂಗ್ರೆಸ್ ಸರ್ಕಾರದಲ್ಲಿ ಸಿಗುತ್ತಿರುವ ಮಾನ್ಯತೆಯನ್ನು ನೋಡಿದಾಗ ಈ ಹಿಂದೆ ಸರ್ಕಾರದ ವಿರುದ್ಧ ಪುಟಿದೇಳುವಂತೆ ಸ್ವತಃ ರಾಜಕೀಯ ಗುರುಗಳೇ ಸೂಚನೆ ಕೊಟ್ಟಿದ್ರಾ..? ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಈ ಮಾತಿಗೆ ಸಾಕಷ್ಇ ಎನ್ನುವಂತೆ ಇತ್ತೀಚಿಗೆ ಮಾಜಿ ಸಿಎಂ ಕುಮಾರಸ್ವಾಮಿ, ನಂಬಿಸಿ ರಸ್ತೆಯಲ್ಲಿ ನಿಲ್ಲಿಸಿಬಿಟ್ಟರು, ಬಾಂಬೆಗೆ ಹೋಗಿ ಹೋಟೆಲ್ ಮುಂದೆ ನಿಂತು ಮಾಡಿದ್ದೆಲ್ಲವೂ ಡ್ರಾಮಾ ಎಂದಿದ್ದರು. ಈ ವಿಚಾರಕ್ಕೆ ಹೋಲಿಕೆ ಮಾಡಿದಾಗ ಹೌದಲ್ವಾ..? ಎನಿಸುವುದು ಸಹಜ ಅಲ್ಲವೇ..?
ಕೃಷ್ಣಮಣಿ











