ಕರ್ನಾಟಕದ ಆರೋಗ್ಯ ಮೂಲಭೂತ ಸೌಲಭ್ಯಗಳ ಸ್ಥಿತಿಗತಿ ಹೇಗಿದೆ? ನೀತಿ ಆಯೋಗ ಪ್ರಕಟಿಸಿರುವ ನೀತಿ ಆಯೋಗ ಪ್ರಕಟಿಸಿರುವ ಆರೋಗ್ಯ ಸೂಚ್ಯಂಕದ ಅಂಕಿ ಅಂಶಗಳನ್ನೇ ನಂಬಬಹುದಾದರೆ, ಕರ್ನಾಟಕದ ಆರೋಗ್ಯ ಮೂಲಭೂತ ಸೌಲಭ್ಯಗಳ ಸ್ಥಿತಿ ಅತ್ಯಂತ ಕಳಪೆ ಇದೆ. ಎಷ್ಟು ಕಳಪೆ ಎಂದರೆ ನೀತಿ ಆಯೋಗ ಪ್ರಕಟಿಸಿರುವ ನಾಲ್ಕು ವಾರ್ಷಿಕ ವರದಿಗಳ ಪೈಕಿ ಮೂರು ಬಾರಿ ಕಳಪೆ. ಇತ್ತೀಚಿನ ಸಾಧನೆಯಂತೂ ಅತ್ಯಂತ ಕಳಪೆ. ಏಕೆಂದರೆ, ನೀತಿ ಆಯೋಗವು ವರ್ಗೀಕರಿಸಿರುವ 19 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕವು 19ನೇ ಸ್ಥಾನದಲ್ಲಿದೆ! ಅಂದರೆ, ಕರ್ನಾಟಕ ರಾಜ್ಯದ ಆರೋಗ್ಯ ಮೂಲಭೂತ ಸೌಲಭ್ಯಗಳ ಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ.
ಕರ್ನಾಟಕ ಐಟಿ, ಬಿಟಿಯಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿರುವ ರಾಜ್ಯ. ನವೋದ್ಯಮಗಳ (ಸ್ಟಾರ್ಟ್ಅಪ್) ‘ಕಾಶಿ’ ಎಂಬ ಹೆಗ್ಗಳಿಕೆ ರಾಜಧಾನಿ ಬೆಂಗಳೂರಿಗೆ ಇದೆ. ಈ ಎಲ್ಲಾ ಹೆಗ್ಗಳಿಕೆಗಳು ಆರೋಗ್ಯ ಮೂಲಭೂತ ಸೌಲಭ್ಯಗಳ ಕೊರತೆಯಂತಹ ಹುಳಕನ್ನು ಮುಚ್ಚಿ ಹಾಕುತ್ತಿವೆಯೇ? ಮೇಲ್ನೋಟಕ್ಕೆ ಹೌದು ಎನಿಸುತ್ತದೆ. ರಾಜ್ಯದ ಆರೋಗ್ಯ ಮೂಲಭೂತ ಸೌಲಭ್ಯಗಳ ಸ್ಥಿತಿ ಅಷ್ಟೇನೂ ಚನ್ನಾಗಿಲ್ಲ ಎಂಬುದು ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮೂವತ್ತು ರೋಗಿಗಳು ಮೃತಪಟ್ಟಾಗ ಜಗಜ್ಜಾಹೀರಾಗಿತ್ತು. ಆ ಮಹಾದುರಂತದ ಕಾರಣದಿಂದಾಗಿ ರಾಜ್ಯದ ಆರೋಗ್ಯ ಇಲಾಖೆಯ ವೈಫಲ್ಯ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟಿದ್ದರು ಎಂಬುದೇ ಆರೋಗ್ಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ನೀಡುತ್ತದೆ.
ಅದೇನೆ ಇರಲಿ, ಪ್ರಸ್ತುತ ನೀತಿ ಆಯೋಗದ ಪ್ರಕಟಿತ ಆರೋಗ್ಯ ಸೂಚ್ಯಂಕವು ಕೋವಿಡ್ ಪೂರ್ವದಲ್ಲಿ ನಡೆಸಿದ್ದ ಸಮೀಕ್ಷೆಯದ್ದಾಗಿದೆ. 2018-19 ಮತ್ತು 2019-20 ವರ್ಷದಲ್ಲಿನ ಅಂಕಿ ಅಂಶಗಳನ್ನಾಧರಿಸಿ ವರದಿ ಸಿದ್ದಪಡಿಸಲಾಗಿದೆ. ಅದಾದ ನಂತರವೂ ದುರಂತಗಳು ಸಂಭವಿಸಿವೆ ಎಂದರೆ, ಆರೋಗ್ಯ ಮೂಲಭೂತ ಸೌಲಭ್ಯಗಳು ಸುಧಾರಿಸಿಲ್ಲ ಎಂದೇ ಅರ್ಥ. ನೀತಿ ಆಯೋಗದ ಸೂಚ್ಯಂಕವನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತದೆ. ಆರೋಗ್ಯ ಮೂಲಭೂತ ಸೌಲಭ್ಯಗಳ ಸುಮಾರು 25ಕ್ಕೂ ಹೆಚ್ಚು ಅಂಶಗಳು ಮಾನದಂಡಗಳಾಗಿರುತ್ತವೆ. ಅವುಗಳನ್ನು ಪರಿಗಣಿಸಿ ಆಯಾ ರಾಜ್ಯಗಳ ಆರೋಗ್ಯ ಮೂಲಭೂತ ಸೌಲಭ್ಯಗಳ ಸ್ಥಿತಿ ಕುರಿತಂತೆ ಶ್ರೇಯಾಂಕ ನೀಡಲಾಗುತ್ತದೆ.
Also read : ಆರೋಗ್ಯ ಸೇವೆಯಲ್ಲಿ ಮತ್ತೆ ಕೇರಳ ಫಸ್ಟ್, ಯೋಗಿ ಆದಿತ್ಯನಾಥ್ ಸರ್ಕಾರ ಲಾಸ್ಟ್
ಪ್ರಮುಖವಾಗಿ ನವಜಾತ ಶಿಶುಮರಣ ಪ್ರಮಾಣ, ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ, ಹೆರಿಗೆ ವೇಳೆ, ಹೆರಿಗೆ ನಂತರದಲ್ಲಿ ತಾಯಿ ಮರಣ ಪ್ರಮಾಣ, ಜನನ ಲಿಂಗಾನುಪಾತ, ಲಸಿಕೆ ನೀಡಿಕೆ ಪ್ರಮಾಣ, ಸಾಂಸ್ಥಿಕ ಹೆರಿಗೆಗಳ ಪ್ರಮಾಣ (ಆಸ್ಪತ್ರೆಗಳಲ್ಲಿ ವೈದ್ಯರ ನಿಗಾದಲ್ಲಿ ನಡೆಯುವ ಹೆರಿಗೆಗಳು), ಪತ್ತೆಯಾದ ಕ್ಷಯ ರೋಗ, ಎಚ್ಐವಿ ಪ್ರಕರಣ, ಚಿಕಿತ್ಸೆ ಯಶಸ್ಸಿನ ಪ್ರಮಾಣ, ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ, ಸೇವೆ ಎಲ್ಲವೂ ಶ್ರೇಯಾಂಕ ನೀಡಲು ಮಾನದಂಡಗಳಾಗಿರುತ್ತವೆ.
ನೀತಿ ಆಯೋಗದ ಆರೋಗ್ಯ ಸೂಚ್ಯಂಕದ ಶ್ರೇಯಾಂಕದಲ್ಲಿ ಕರ್ನಾಟಕ ಸತತವಾಗಿ ಕುಸಿಯುತ್ತಲೇ ಬಂದಿದೆ. ನೀತಿ ಆಯೋಗವು 2015-16 ರಿಂದ 2019-20ರವರೆಗೆ ನಾಲ್ಕು ಸುತ್ತಿನ ಮೌಲ್ಯಮಾಪನ ಮಾಡಿ ಶ್ರೇಯಾಂಕ ನೀಡಿದೆ. ಮೂಲ ವರ್ಷದಲ್ಲಿ 19 ದೊಡ್ಡ ರಾಜ್ಯಗಳ ಪೈಕಿ ಒಟ್ಟಾರೆ ಸಾಧನೆಯಲ್ಲಿ 9ನೇ ಶ್ರೇಯಾಂಕ ಪಡೆದಿರುವ ಕರ್ನಾಟಕ ನಂತರದ ವರ್ಷಗಳಲ್ಲಿ ಕಳಪೆ ಸಾಧನೆ ಮಾಡಿದೆ. 2019-20ನೇ ಸಾಲಿನಲ್ಲಿ 19ನೇ ಶ್ರೇಯಾಂಕ ಪಡೆದಿದೆ. ಅಂದರೆ 19 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ಕೊನೆಸ್ಥಾನಕ್ಕೆ ಕುಸಿದಿದೆ. ಕರ್ನಾಟಕಕ್ಕೆ ಶೇ.-1.3ರಷ್ಟು ನೇತ್ಯಾತ್ಮಕ ಅಂಕ ಪಡೆದಿದ್ದು, ಸುಧಾರಣೆಯಾಗದ ರಾಜ್ಯಗಳ ಪಟ್ಟಿಯಲ್ಲೇ ಕೊನೆಯ ಸ್ಥಾನಕ್ಕಿಳಿದಿದೆ.

ಗೌರವ ಹರಾಜಾಗುವುದು ತಪ್ಪಿತು..
ಕರ್ನಾಟಕದ ಕಳಪೆ ಸಾಧನೆ ಮಾಡಿದ್ದರೂ ರಾಜ್ಯ ಸರ್ಕಾರಕ್ಕೆ ಒಂದು ಅನುಕೂಲ ಆಯಿತು. ಅದೇನೆಂದರೆ, ಈಗ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿರುವ ಮತ್ತು 2022ರಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ರಾಜ್ಯವು ಸೂಚ್ಯಂಕದಲ್ಲಿ ಪಡೆದಿರುವ ಸ್ಥಾನಕ್ಕೆ ಮಾಧ್ಯಮಗಳು ಗಮನ ಕೇಂದ್ರೀಕರಿಸಿ ಸುದ್ಧಿ ಬಿತ್ತರಿಸಿವೆ. ಕೊನೆ ಸ್ಥಾನಕ್ಕಿಳಿದಿರುವ ಕರ್ನಾಟಕದ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಅಷ್ಟರ ಮಟ್ಟಿಗೆ ಕರ್ನಾಟಕದ ಗೌರವ ಹರಾಜಾಗುವುದು ತಪ್ಪಿದೆ. ನೀತಿ ಆಯೋಗ ಪ್ರಕಟಿಸಿರುವ ಆರೋಗ್ಯ ಸೂಚ್ಯಂಕವನ್ನು ಕರ್ನಾಟಕ ರಾಜ್ಯ ಸರ್ಕಾರ, ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ. ಮಾಧ್ಯಮಗಳು ಮರೆತವೆಂಬ ಕಾರಣಕ್ಕೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಆರೋಗ್ಯ ಮೂಲಭೂತ ಸೌಲಭ್ಯಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿಲ್ಲ ಎಂಬುದು ರಾಜ್ಯದ ಶ್ರೇಯಾಂಕ ಕುಸಿಯುವುದಕ್ಕೆ ಪ್ರಮುಖ ಕಾರಣ ಎಂಬುದನ್ನು ನೀತಿ ಆಯೋಗದ ಸೂಚ್ಯಂಕ ಸ್ಪಷ್ಟವಾಗಿ ಹೇಳಿದೆ.
ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಆರೋಗ್ಯ ಮೂಲಭೂತ ಸೌಲಭ್ಯಗಳು ಸುಧಾರಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಎಲ್ಲಾ ಮೂಲಭೂತ ಸೌಲಭ್ಯಗಳೂ ನಗರ ಪ್ರದೇಶದಲ್ಲೇ ಕೇಂದ್ರೀಕೃತವಾಗುತ್ತಿವೆ. ಇದರಿಂದಾಗಿ ಒಟ್ಟಾರೆ ಆರೋಗ್ಯ ಸೇವೆಯು ನಗರ ಕೇಂದ್ರಿತವಾಗುತ್ತಿದ್ದು, ಗ್ರಾಮೀಣ ಪ್ರದೇಶ- ನಗರ ಪ್ರದೇಶದ ನಡುವಿನ ಕಂದಕ ಹಿಗ್ಗುತ್ತಿದೆ. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷಿಸುತ್ತಿರುವುದೇ ಇದಕ್ಕೆ ಕಾರಣ. ಗ್ರಾಮೀಣ ಪ್ರದೇಶದ ಆರೋಗ್ಯ ಮೂಲಭೂತಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ನೈತಿಕ ಹೊಣೆಯಿಂದ ರಾಜ್ಯ ಸರ್ಕಾರ ನುಣುಚಿಕೊಳ್ಳುವಂತಿಲ್ಲ. ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಮೂಲಭೂತ ಸೌಲಭ್ಯಗಳ ಸುಧಾರಣೆಗೆ ಪ್ರತಿವರ್ಷ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಡಬೇಕು. ಮತ್ತು ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನ ಮಾಡಬೇಕು. ಇಂತಹ ರಚನಾತ್ಮಕ ಕ್ರಮಗಳಿಂದ ಹಿಗ್ಗುತ್ತಿರುವ ಕಂದಕವನ್ನು ತಗ್ಗಿಸಲು ಸಾಧ್ಯ.
ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸೇವೆ ಕಡ್ಡಾಯ ಮಾಡುವ ನಿರ್ಧಾರ ಉತ್ತಮವಾದದ್ದೇ. ಆದರೆ, ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯರ ಸೇವೆ ಸಕಾಲದಲ್ಲಿ ದಕ್ಕುತ್ತಿಲ್ಲ ಎಂಬ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನೀತಿ ಆಯೋಗದ ಸೂಚ್ಯಂಕದಲ್ಲಿ ರಾಜ್ಯದ ಶ್ರೇಯಾಂಕ ಕುಸಿಯುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಬೇಕಿದೆ. ಶಿಕ್ಷಣ, ಆರೋಗ್ಯ ಸರ್ಕಾರದ ಆದ್ಯತಾ ಕ್ಷೇತ್ರಗಳು. ಆದ್ಯತಾ ಕ್ಷೇತ್ರದಲ್ಲಿಯೇ ಕಳಪೆ ಸಾಧನೆ ಆಗುತ್ತಿದೆ ಎಂದರೆ, ಇಡೀ ಆಡಳಿತ ವ್ಯವಸ್ಥೆಯಲ್ಲೇ ಲೋಪ ಇದೆ. ಈ ಲೋಪವನ್ನು ಸರಿಪಡಿಸಿಕೊಳ್ಳಲು ಇದು ಸಕಾಲ.