ಬೆಂಗಳೂರು: ಸಾರ್ವಜನಿಕರ ಆಕ್ರೋಶದ ನಡುವೆಯೂ ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆ ಬಿಎಂಆರ್‌ಸಿಎಲ್(BMRCL) ನಮ್ಮ ಮೆಟ್ರೋ(Namma Metro) ಟಿಕೆಟ್ ದರವನ್ನು ಮತ್ತು ಶೇಕಡಾ 5ರಷ್ಟು ಹೆಚ್ಚಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ. ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

ಇನ್ನು ಬಿಎಂಆರ್‌ಸಿಎಲ್ ಸಂಸ್ಥೆ ಮೆಟ್ರೋ ರೈಲ್ವೇ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ಫೇರ್ ಫಿಕ್ಸೇಷನ್ ಕಮಿಟಿ (FFC) ಶಿಫಾರಸಿನ ಮೇರೆಗೆ ಈ ದರ ಪರಿಷ್ಕರಣೆ ಮಾಡಿದ್ದು, ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಅಲ್ಲದೇ ಹೊಸ ದರ ಫೆಬ್ರವರಿ 9ರಿಂದ ಜಾರಿಗೆ ಬರಲಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.







