ಕರ್ನಾಟಕ ಸರ್ಕಾರ ಈಗ ಮುಗಿದ ಅಧಿವೇಶನದಲ್ಲಿ ಪಾಲಿಟಿಕಲ್ ಗಿಮಿಕ್ ಎನ್ನಬಹುದಾದ ಎರಡು ವಿವಾದಾತ್ಮಕ ಮಸೂದೆಗಳನ್ನು ಮಂಡಿಸಿದೆ. ರಾಜ್ಯದ ಜನರ ಸಂಕಷ್ಟಗಳು ಮತ್ತು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯಲು ಸಿಎಂ ಬಸವರಾಜ ಬೊಮ್ಮಾಯಿ ಈ ‘ಸಾಹಸ’ ಮಾಡಿದ್ದಾರೆ. ಇದು ಸಂಘ ಪರಿವಾರದ ಅಣತಿಯಂತೆ ನಡೆದಿರುವ ಗಿಮಿಕ್. ಬೊಮ್ಮಾಯಿಯವರಿಗೆ ಕೂಡ ಸಂಘ ಪರಿವಾರವನ್ನು ಮೆಚ್ಚಿಸಬೇಕಾದ ಅನಿವಾರ್ಯತೆ ಇದೆ.
ಅಧಿವೇಶನದ ಕೊನೆಯ ದಿನ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಕಾಯ್ದೆ ತಾತ್ಕಾಲಿಕ ಎಂದು ಸರ್ಕಾರ ಹೇಳಿದ್ದು ನೋಡಿದರೆ ಇದು ಗಿಮಿಕ್ ಎನ್ನುವುದರಲ್ಲೆ ಸಂಶಯವಿಲ್ಲ.
ಮತಾಂತರ ನಿಷೇಧ ಜಾರಿಯೂ ಕೂಡ ಅಂಥದ್ದೇ. ಈ ಸರ್ಕಾರಕ್ಕೆ ಯೋಗಿ ಆದಿತ್ಯನಾಥ ಸರ್ಕಾರವೇ ಮಾಡೆಲ್ ಗಲಭೆಕೋರರ ಆಸ್ತಿಪಾಸ್ತಿ ಮುಟ್ಟು ಹಾಕಿಕೊಳ್ಳುವ ಯೋಗಿ ಕಾಯ್ದೆಯನ್ನು ತರುವುದಾಗಿ ಸಿ,ಟಿ ರವಿ ಹಿಂದೆ ಹೇಳಿದ್ದರು. ಗೃಹ ಸಚಿವರಾಗಿದ್ದ ಬೊಮ್ಮಾಯಿ ಕೂಡ ಅದನ್ನೇ ಹೇಳಿದ್ದರು. ಯಡಿಯೂರಪ್ಪ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
ಮತಾಂತರ ತಡೆ ಸಾಧ್ಯವೇ?
ಕರ್ನಾಟಕ ಉತ್ತರಪ್ರದೇಶವಲ್ಲ.ಅಲ್ಲಿ ಅಂತರ್ ಧರ್ಮೀಯ ಮದುವೆಯಾದವರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳಲು, ಆ ಮೂಲಕ ಹಿಂದೂಗಳನ್ನು ಓಲೈಸುವ ಕುತಂತ್ರವಿದೆ. ಆದರೆ ಕರ್ನಾಟಕದ ಸಾಮಾಜಿಕ ಸ್ಥಿತಿಯೇ ಬೇರೆ ಇದೆ.
ಇಲ್ಲಿ ಅದು ಜಾರಿಗೆ ಬಂದರೆ ಹಿಂದೂಗಳೇ ಆದ ದಲಿತರಿಗೇ ಹೆಚ್ಚು ಕಷ್ಟ. ಕರ್ನಾಟಕದಲ್ಲಿ ಶಿಕ್ಷಣದ ಅವಕಾಶಕ್ಕಾಗಿ, ಬಡತನದಿಂದ ಮುಕ್ತಿ ಹೊಂದಲು ಮತ್ತು ಅಸ್ಪೃಶ್ಯತೆ ಎಂಬ ಘೋರ ಶಿಕ್ಷೆಯಿಂದ ಹೊರಬರಲು ಸಣ್ಣ ಪ್ರಮಾಣದಲ್ಲಿ ದಲಿತರು ಕ್ರಿಶ್ಚಿಯನ್ ಧರ್ಮಜ್ಜೆ ಮತಾಂತರಗೊಂಡಿದ್ದಾರೆ,
ಇತಿಹಾಸವನ್ನು ನೋಡಿದಾಗ ಮುಸ್ಲಿಮರಾಗಿ ಮತಾಂತರಗೊಂಡವರು ಸಾಮಾಜಿಕ ಬದಲಾವಣೆಗಾಗಿ ಆ ಕ್ರಮಕ್ಕೆ ಮುಂದಾಗುತ್ತ ಬಂದಿದ್ದಾರೆ. ಆದರೆ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡವರು ಶಿಕ್ಷಣ ಮತ್ತು ಉದ್ಯೋಗ ಅವಕಾಶಕ್ಕಾಗಿ ಮತಾಂತರ ಹೊಂದಿದ್ದಾರೆ.
ಈ ಕಾಯ್ದೆ ಜಾರಿ ಬಂದರೆ ದಲಿತರಿಗೇ ಹೆಚ್ಚು ತೊಂದರೆ.. ಹಿಂದುತ್ವದ ರಕ್ಷಕರು ಎನ್ನುವವರು ಇಲ್ಲಿನ ಅಸ್ಪೃಶ್ಯತೆಯನ್ನು ಪೋಷಿಸಿಕೊಂಡೇ ಬಂದಿದ್ದಾರೆ. ಘನತೆಯ ಬದುಕಿಗಾಗಿ ದಲಿತರು ಕ್ರೈಸ್ತ ಧರ್ಮವನ್ನು ಆರಿಸಿಕೊಂಡಿದ್ದಾರೆ.
ಹಾಗೆಯೇ ಕಾಯ್ದೆ ಮೂಲಕ ಮತಾಂತರ ತಡೆಯಲು ಸಾಧ್ಯವಿಲ್ಲ. ಬೌದ್ಧ ಧರ್ಮದತ್ತಲೂ ಚಲಿಸುವ ದಲಿತರನ್ನು ತಡೆಯಲು ಸಾಧ್ಯವಿಲ್ಲ.
ಹೀಗಾಗಿ ಮತಾಂತರ ನಿಷೇಧವೂ ಒಂದು ರಾಜಕೀಯ ಗಿಮಿಕ್ಕೇ ಆಗಿದೆ. ತಮ್ಮ ಕಾರ್ಯಕರ್ತರನ್ನು ಸಂತೋಷಪಡಡಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವುದು ಇದರ ಉದ್ದೇಶವಾಗಿದೆ.
ಯುಪಿ ಕಥೆಯೇನು?
ನವೆಂಬರ್ 2020ರಲ್ಲಿ ಲವ್ ಜಿಹಾದ್ ‘ತಡೆಯಲು’ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೆ ತಂದ ಮತಾಂತರ ವಿರೋಧಿ ಕಾಯ್ದೆ ಮುಸ್ಲಿಂರಲ್ಲಿ ಆತಂಕ ಮೂಡಿಸಿದೆ. ಮುಸ್ಲಿಂ ಪುರುಷರನ್ನು ಟಾರ್ಗೆಟ್ ಮಾಡಲು ಮತ್ತು ಅಂತರ್ಧರ್ಮೀಯ ಸಂಬಂಧಗಳನ್ನು ತಡೆಯಲೆಂದೇ ಈ ಕಾಯ್ದೆ ತರಲಾಗಿದೆ ಎಂಬ ಆತಂಕಗಳು ಮನೆ ಮಾಡಿವೆ.
ಮುಸ್ಲಿಂ ಪುರುಷರು ಆಮಿಷ-ಓಲೈಕೆಗಳ ಮೂಲಕ ಮತ್ತು ಮದುವೆಯ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುವ ಸಂಚು ನಡೆಸುತ್ತಿದ್ದಾರೆ ಎಂಬ ಸಂಘ ಪರಿವಾರದ ಅನಿಸಿಕೆಯನ್ನು ಕಾನೂನಾತ್ಮಕಗೊಳಿಸಲೆಂದೇ ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಗತಿಪರರು ಹೇಳುತ್ತಿದ್ದಾರೆ, ಸಂಘ ಪರಿವಾರದ ಈ ‘ಥಿಯರಿ’ಗೆ ಯಾವುದೇ ಆಧಾರವಿಲ್ಲದಿದ್ದರೂ ( ಲವ್ ಜಿಹಾದ್ ಎಂಬುದು ಇಲ್ಲ ಎಂದು ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದೆ) ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿವೆ, ಇನ್ನು ಹಲವು ರಾಜ್ಯಗಳು ತಯಾರಿಯಲ್ಲಿವೆ.
ಕಳೆದ ವರ್ಷ ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಈ ಕಾಯ್ದೆ ತರುವ ಕುರಿತು ಚರ್ಚೆ ನಡೆದಿತ್ತು. ಯಡಿಯೂರಪ್ಪ ದಕ್ಕೆ ಮುಂದಾಗಿರಲಿಲ್ಲ..
ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಬೊಮ್ಮಾಯಿ ಈ ಗಿಮಿಕ್ ಮಾಡಲು ಹೊರಟಿದ್ದಾರೆ. ಸಂವಿಧಾನ ನೀಡಿರುವ ಧಾರ್ಮಿಕ ಆಯ್ಕೆಯ ಹಕ್ಕನ್ನು ಕಿತ್ತುಕೊಳ್ಳಲಾಗದು ಎಂದು ಹಲವು ಪ್ರಕರಣಗಳಲ್ಲಿ ಅಲಹಾಬಾದ್ ಹೈಕೋರ್ಟ್ ಹೇಳುವ ಮೂಲಕ ಯೋಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಕರ್ನಾಟಕ ಎಂದೂ ಉತ್ತರಪ್ರದೇಶ ಆಗಲಾರದು.