ಕಾಂಗ್ರೆಸ್‌ನಲ್ಲಿ ಅಧಿಕಾರದ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಒಂದು ಕಡೆ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಆಗಬೇಕು ಅನ್ನೋ ಹಂಬಲದಲ್ಲಿ ಓಡಾಡುತ್ತಿದ್ದಾರೆ. ಅದರ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ನಾವು ಜೆಡಿಎಸ್‌ನ 19 ಜನರೂ ಬೆಂಬಲ ನೀಡಲು ಸಿದ್ಧ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಹಿರಂಗವಾಗಿ ಘೋಷಣೆ ಮಾಡಿದ್ದರು. ಇದು ವ್ಯಂಗ್ಯವಾಗಿಯೇ ಆದರೂ D.K ಶಿವಕುಮಾರ್ ಸಿಎಂ ಆಗುವುದಾದರೆ ನಾವು ಬೆಂಬಲ ಕೊಡುತ್ತೇವೆ ಎನ್ನುವ ಮೂಲಕ ಒಂದು ಸಂದೇಶವನ್ನು ಕಳುಹಿಸಯವ ಪ್ರಯತ್ನ ಮಾಡಿದ್ದರು.
ಡಿ.ಕೆ ಶಿವಕುಮಾರ್ ಮನಸ್ಸಲ್ಲಿ ‘ಒಕ್ಕಲಿಗ’ ಶಕ್ತಿ ಬಿತ್ತಿದ HDK
D.K ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಜೆಡಿಎಸ್ ಪ್ರಮುಖವಾಗಿ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲೇ ಮೇಲುಗೈ ಸಾಧಿಸುತ್ತ. ಒಕ್ಕಲಿಗರ ಕೋಟೆಯನ್ನು ಕಟ್ಟಿಕೊಂಡಿದೆ. ಒಂದು ವೇಳೆ ಒಕ್ಕಲಿಗರಾದ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವಾಗ ಜೆಡಿಎಸ್ ಪರೋಕ್ಷವಾಗಿ ಆದರೂ ಬೆಂಬಲಿಸಿದರೂ ಅಚ್ಚರಿಯೇನಲ್ಲ. ಡಿ.ಕೆ ಶಿವಕುಮಾರ್ ಬೆಂಬಲಿಸಿದ್ರೆ ಒಕ್ಕಲಿಗ ನಾಯಕನನ್ನು ಪಕ್ಷಾತೀತವಾಗಿ ಬೆಂಬಲಿಸಿದ್ದಕ್ಕೆ ಒಕ್ಕಲಿಗರ ಪ್ರೀತಿ ಮತ್ತಷ್ಟು ಹೆಚ್ಚಿಸಿಕೊಳ್ಳಲು ಕುಮಾರಸ್ವಾಮಿ ದಾಳ ಉರುಳಿಸಿದರೂ ಅಚ್ಚರಿ ಏನಿಲ್ಲ. ಜೆಡಿಎಸ್ ಈಗ ಎನ್‌ಡಿಎ ಮೈತ್ರಿಕೂಟದಲ್ಲಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ಕೊಟ್ಟಿರಬಹುದು. ಆದರೂ ರಾಜಕೀಯದಲ್ಲಿ ನಿರ್ಧಾರಗಳು ಅದಲು ಬದಲಾಗುವುದು ಅಸಾಧ್ಯವೇನಲ್ಲ.
ದಲಿತ ಮುಖ್ಯಮಂತ್ರಿ ಕೂಗಿಗೆ ಸುರೇಶ್‌ಗೌಡರ ಶಕ್ತಿ..
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕೇಳಿಬರುತ್ತಿರುವ ಸಮಯದಲ್ಲೇ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಡಾ ಜಿ ಪರಮೇಶ್ವರ್ ಸಿಎಂ ಆಗ್ತಾರೆ ಎನ್ನುವ ಸಚಿವ ರಾಜಣ್ಣ ಹೇಳಿಕೆ ಬೆನ್ನಲ್ಲೇ, ಪರಮೇಶ್ವರ್ ಮುಖ್ಯಮಂತ್ರಿ ಆದರೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಮಧುಗಿರಿಯಲ್ಲಿ ಹೇಳಿದ್ದಾರೆ. ನಾನು ಈ ಹಿಂದೆ ಗೋವಿಂದ ಕಾರಜೋಳ ಅವರನ್ನ ಮುಖ್ಯಮಂತ್ರಿ ಮಾಡಿ ಅಂತ ಬಿಜೆಪಿ ನಾಯಕರಿಗೇ ಕೇಳಿಕೊಂಡಿದ್ದೆ. ಈಗ ಡಾ ಜಿ. ಪರಮೇಶ್ವರ್ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಚರ್ಚೆಗೆ ಬಂದಿದೆ. ಸ್ವಾತಂತ್ರ ಬಂದು ಇಷ್ಟು ವರ್ಷ ಆದರೂ ತುಮಕೂರಿನಿಂದ ಯಾರೊಬ್ಬರೂ ಮುಖ್ಯಮಂತ್ರಿ ಆಗಿಲ್ಲ. ಹಿಗಾಗಿ ಪರಮೇಶ್ವರ್‌ಗೆ ನಮ್ಮ ಸಂಪೂರ್ಣ ಬೆಂಬಲ ಎಂದಿದ್ದಾರೆ.
ಜೆಡಿಎಸ್ ‘ಒಕ್ಕಲಿಗ ಅಸ್ತ್ರ’ ಬಿಜೆಪಿ ‘ದಲಿತ ಅಸ್ತ್ರ’
ಜೆಡಿಎಸ್ ಒಕ್ಕಲಿಗರನ್ನೇ ನೆಚ್ಚಿಕೊಂಡಿರುವ ಪಾರ್ಟಿ. ಹೀಗಾಗಿ ಒಕ್ಕಲಿಗ ನಾಯಕನಿಗೆ ಸಪೋರ್ಟ್ ಮಾಡುವ ಮೂಲಕ ರಾಜಕೀಯ ದಾಳ ಉರುಳಿಸಿದೆ. ಅದೇ ರೀತಿ ಬಿಜೆಪಿ ನಾಯಕರು ದಲಿತ ನಾಯಕನನ್ನು ಸಿಎಂ ಮಾಡುವುದಾದರೆ ನಮ್ಮ ಬೆಂಬಲ ಎನ್ನುವ ಮೂಲಕ ದಲಿತಾಸ್ತ್ರ ಪ್ರಯೋಗ ಮಾಡಿದೆ. ಜೆಡಿಎಸ್ ಹಾಗು ಬಿಜೆಪಿ ಇಬ್ಬರಿಗೂ ಬೇಕಿರುವುದು ಒಂದೇ ಕೆಲಸ. ಅದು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರಬಾರದು ಅಷ್ಟೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದಲಿತ ಸಮುದಾಯದ ನಾಯಕರಾದರೂ ಸರಿ. ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ನೇತೃತ್ವದ ಒಕ್ಕಲಿಗ ಸಮುದಾಯದ ಶಾಸಕರಾದರೂ ಸರಿ ತಿರುಗಿ ಬೀಳಬೇಕು ಎನ್ನುವ ಉದ್ದೇಶ ಅಡಗಿದೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ.