ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂಬುದನ್ನು ಇದೀಗ ಬಿಜೆಪಿ ಹಿರಿಯ ನಾಯಕರೇ ಬಹಿರಂಗವಾಗಿ ಮಾತನಾಡತೊಡಗಿದ್ದಾರೆ. ಅದಕ್ಕೆ ತಕ್ಕಂತೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ವರಿಷ್ಠರು ಹೇಳಿದ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.
ಹಾಗಾಗಿ, ಈಗ ನಾಯಕತ್ವ ಬದಲಾಗುವುದೆ? ಅಥವಾ ಇಲ್ಲವೇ ಎಂಬುದು ಚರ್ಚೆಯ ವಿಷಯವಾಗಿ ಉಳಿದಿಲ್ಲ. ಬದಲಾಗಿ ಯಾವಾಗ ಬದಲಾವಣೆ? ಯಡಿಯೂರಪ್ಪ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಜು.26ರ ಆಸುಪಾಸಿನಲ್ಲೇ ಬದಲಾವಣೆ ಸಂಭವಿಸುವುದೇ ? ಅಥವಾ ಒಂದೆರಡು ತಿಂಗಳು ಮುಂದಕ್ಕೆ ಹೋಗುವುದೆ ? ಎಂಬುದಷ್ಟೇ ಈಗಿರುವ ಕುತೂಹಲ.
ಆದರೆ, ಮುಖ್ಯಮಂತ್ರಿ ಬದಲಾವಣೆಯ ಬಿಜೆಪಿಯ ವರಿಷ್ಠರ ಲೆಕ್ಕಾಚಾರಗಳ ಕುರಿತ ಚರ್ಚೆಯಲ್ಲಿ ಇದೀಗ ಬಹಳ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವ ಅಂಶ ಎಲ್ಲರ ಗಮನ ಸೆಳೆದಿದೆ. ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಹರ್ಯಾಣ, ಬಿಹಾರ ಮುಂತಾದ ಉತ್ತರದ ರಾಜ್ಯಗಳಲ್ಲಿ ಇಡಿಯಾಗಿ, ಇಲ್ಲವೇ ಭಾಗಶಃ ಆಡಳಿತ ಹಿಡಿದಿದ್ದರೂ, ಅಲ್ಲಿ ತನ್ನದೇ ತಂತ್ರಗಾರಿಕೆಯ ಮೂಲಕ ಅಲ್ಲಿನ ನಾಯಕತ್ವಗಳ ಹಿಡಿತ ಸಾಧಿಸಿರುವ ಬಿಜೆಪಿ ಹೈಕಮಾಂಡ್, ಆ ರಾಜ್ಯಗಳಲ್ಲಿ ಬಹುತೇಕ ತನ್ನದೇ ವರಸೆಯ ಆಡಳಿತ ವ್ಯವಸ್ಥೆ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಉತ್ತರಪ್ರದೇಶ. ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ಬದುಕು ಎಷ್ಟು ಒಂದಾಗಿಹೋಗಿವೆ ಎಂದರೆ; ಅಲ್ಲಿನ ಐಎಎಸ್ ಅಧಿಕಾರಿಗೂ, ಸಂಘಪರಿವಾರದ ಸಂಘಟನೆಗಳು ಉಗ್ರ ಹಿಂದುತ್ವವಾದಿ ಹುಡುಗರಿಗೂ ಹೆಚ್ಚಿನ ವ್ಯತ್ಯಾಸವೇ ಕಾಣುವುದಿಲ್ಲ. ಅಷ್ಟರಮಟ್ಟಿಗೆ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಅಂತಹ ದುರ್ಬಲ ವರ್ಗಗಳ ಪರ ದನಿ ಎತ್ತುವ ವಿಚಾರವಂತರು, ಪತ್ರಕರ್ತರು(ನೈಜ), ಪ್ರಗತಿಪರ ಹೋರಾಟಗಾರರ ವಿಷಯದಲ್ಲಿ ಅಲ್ಲಿನ ಆಡಳಿತ ಮತ್ತು ಸಂಘಪರಿವಾರದ ಮಂದಿ ನಡೆದುಕೊಳ್ಳುವ ರೀತಿ ಬಹುತೇಕ ಒಂದೇ ಆಗಿರುತ್ತದೆ.
ಅಷ್ಟೇ ಅಲ್ಲ; ಬಿಜೆಪಿಯ ಮತಬ್ಯಾಂಕ್ ಆದ ವ್ಯಾಪಾರೋದ್ಯಮಿಗಳು ಮತ್ತು ಮೇಲ್ವರ್ಗದ ಹಿತವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತಂದ ಹೊಸ ಕಾರ್ಮಿಕ ಕಾನೂನು, ಕೃಷಿ ಕಾನೂನು, ದಲಿತರ ಹಕ್ಕು ಮೊಟಕು ಕಾನೂನು ತಿದ್ದುಪಡಿಯಂತಹ ವಿಷಯಗಳಲ್ಲಿ ಕೂಡ ಅಲ್ಲಿನ ರಾಜ್ಯ ಸರ್ಕಾರಗಳು ನಡೆದುಕೊಂಡು ರೀತಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಸರ್ವಾಧಿಕಾರಿ ಧೋರಣೆ ಎಂಬುದು ಗಮನಾರ್ಹ.
ಕೋವಿಡ್ ಸಂಕಷ್ಟದ ನಡುವೆ ಜಾಹಿರಾತಿಗಾಗಿ ಬರೋಬ್ಬರಿ 160 ಕೋಟಿ ವ್ಯಯಿಸಿದ ಯೋಗಿ ಸರ್ಕಾರ
ಜೊತೆಗೆ ಆ ರಾಜ್ಯಗಳಲ್ಲಿ, ಬಿಹಾರವನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಆಯಾ ಸರ್ಕಾರ ಮತ್ತು ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಗಳಿದ್ದರೂ, ವಾಸ್ತವವಾಗಿ ಅಲ್ಲಿನ ಬಹುತೇಕ ಆಡಳಿತದ ಸೂತ್ರ ಇರುವುದು ದೆಹಲಿಯ ಬಿಜೆಪಿ ವರಿಷ್ಠರ ಕೈಯಲ್ಲಿ. ಹಾಗಾಗಿ ಬಿಜೆಪಿ ಆಡಳಿತದ ಆ ರಾಜ್ಯಗಳಲ್ಲಿ ನಾಮಾಕಾವಸ್ಥೆಗೆ ಒಬ್ಬ ಮುಖ್ಯಮಂತ್ರಿ, ಒಂದು ಸಚಿವ ಸಂಪುಟ ಎಂದಿದ್ದರೂ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಿಂದಲೇ ಎಲ್ಲವನ್ನೂ ನಿಭಾಯಿಸಲಾಗುತ್ತಿದೆ. ಆ ಮೂಲಕ ಬಹುತೇಕ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ನೇರವಾಗಿ ಕೇಂದ್ರ ಸರ್ಕಾರವೇ ಆಡಳಿತ ನಡೆಸುತ್ತಿರುವ ಪರಿಸ್ಥಿತಿ ಇದೆ. ಅಂದರೆ, ‘ಒಂದು ದೇಶ, ಒಂದು ಸರ್ಕಾರ’ ಎಂಬ ತನ್ನ ನೀತಿಯನ್ನು ಆರ್ ಎಸ್ ಎಸ್ ಉತ್ತರ ರಾಜ್ಯಗಳಲ್ಲಿ ಈ ರೀತಿಯಲ್ಲಿ ಈಗಾಗಲೇ ಜಾರಿಗೆ ತಂದಿದೆ.
ಆದರೆ, ದಕ್ಷಿಣದ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮತ್ತು ಅಲ್ಲಿನ ರಾಜಕೀಯ ನಾಯಕರ ವೈಯಕ್ತಿಕ ವರ್ಚಸ್ಸು ಮತ್ತು ವ್ಯಕ್ತಿಗತ ನಿಲುವಿನ ಕಾರಣಕ್ಕೆ ಬಿಜೆಪಿ ಮತ್ತು ಅದರ ಮಾತೃಸಂಘಟನೆ ಆರ್ ಎಸ್ ಎಸ್ ಗೆ ಆ ತನ್ನ ‘ಒಂದು ದೇಶ, ಒಂದು ಸರ್ಕಾರ’ ಅಜೆಂಡಾವನ್ನು ಜಾರಿಗೊಳಿಸುವುದು ಕಷ್ಟಸಾಧ್ಯವಾಗಿದೆ. ಮೊದಲನೆಯದಾಗಿ ಕರ್ನಾಟಕವನ್ನು ಹೊರತುಪಡಿಸಿ ಉಳಿದ ಕಡೆ ಅಧಿಕಾರ ಹಿಡಿಯುವುದೇ ಕನಸಿನ ಮಾತಾಗಿದೆ. ಕರ್ನಾಟಕದಲ್ಲಿ ಎರಡು ಅವಧಿಗೆ ಅಧಿಕಾರ ಹಿಡಿದರೂ, ಸಂಪೂರ್ಣ ತನ್ನ ಬಲದ ಮೇಲೆ ಅಲ್ಲ. ಬದಲಾಗಿ ಪಕ್ಷೇತರರರು ಮತ್ತು ಆಪರೇಷನ್ ಕಮಲದ ಮೂಲಕ ಕೋಟಿ ಕೋಟಿ ಸುರಿದು ಖರೀದಿಸಿ ತಂದ ಶಾಸಕರನ್ನು ಕೂಡಿಟ್ಟುಕೊಂಡು ಅಧಿಕಾರ ಹಿಡಿಯಲಾಗಿದೆ. ಜೊತೆಗೆ ಎರಡೂ ಬಾರಿಯೂ ಬಿ ಎಸ್ ಯಡಿಯೂರಪ್ಪನಂತಹ ಜನನಾಯಕನ ನೇತೃತ್ವದಲ್ಲಿ ಸರ್ಕಾರ ರಚಿಸಲಾಗಿದೆ. ಅವರಿಗೆ ಕಟ್ಟರ್ ಹಿಂದುತ್ವವಾದದಲ್ಲಾಗಲೀ, ಹಿಂಸಾವಾದದಲ್ಲಾಗಲೀ ನಂಬಿಕೆ ಇಲ್ಲ. ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರುದ್ಧ ದಾರಿಯಲ್ಲಿ ಹಿಂದುತ್ವವಾದಿ ಸರ್ಕಾರವನ್ನು ನಡೆಸುವ ಮನಸ್ಥಿತಿಯವರೂ ಅವರಲ್ಲ. ಹಾಗಾಗಿ ಅಲ್ಲಿನ ಸರ್ಕಾರ ಮತ್ತು ಆಡಳಿತದ ಮೇಲೆ ಉತ್ತರಪ್ರದೇಶದ ಮಾದರಿಯಲ್ಲಿ ಸಂಪೂರ್ಣ ಸಂಘಪರಿವಾರದ ಹಿಡಿತ ಸಾಧಿಸುವುದು ಎರಡೂ ಅವಧಿಯಲ್ಲಿ ಸಾಧ್ಯವಾಗಿಲ್ಲ.
Also Read: ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮಠೀಯ ವ್ಯವಸ್ಥೆಯ ಸವಾರಿ?
ಆದರೆ, ದಕ್ಷಿಣ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪಾಲಿಗೆ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ತಾವು ಇಡೀ ಅಧಿಕಾರವನ್ನು ತಮ್ಮ ಹಿಡಿತಕ್ಕೆ ಪಡೆಯದೇ ಹೋದರೆ, ಕೇಂದ್ರದ ಅಧಿಕಾರವನ್ನು ದೇಶದ ಎಲ್ಲಾ ರಾಜ್ಯಗಳ ಮೇಲೆ ಹೇರುವ ಮತ್ತು ಹಂತಹಂತವಾಗಿ ರಾಜ್ಯದ ಆಡಳಿತವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ರಾಜ್ಯ ಸರ್ಕಾರಗಳನ್ನು ನಾಮಕಾವಸ್ಥೆಯ ಅಲಂಕಾರಿಕ ವ್ಯವಸ್ಥೆಯಾಗಿ ಬದಲಾಯಿಸುವ ತಮ್ಮ ಅಜೆಂಡಾ ಫಲಿಸದು ಎಂಬುದು ಗೊತ್ತಿದೆ. ಹಾಗಾಗಿಯೇ ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರ ಹಿಡಿದ ದಿನದಿಂದಲೂ ಪರೋಕ್ಷವಾಗಿ ಬಿಜೆಪಿ ವರಿಷ್ಠರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲೇ ಭಿನ್ನಮತೀಯ ಚಟುವಟಿಕೆಗಳು ಚಾಲ್ತಿಯಲ್ಲಿದ್ದವು. ಇದೀಗ ಅಂತಹ ಚಟುವಟಿಕೆಗಳ ಅಂತಿಮ ಫಲವಾಗಿ ಸಿಎಂ ಬದಲಾವಣೆ ನಿರ್ಧಾರವಾಗಿದೆ. ಈ ಹಂತದಲ್ಲಿ ತಮ್ಮ ತಾಳಕ್ಕೆ ಕುಣಿಯುವ ಮತ್ತು ರಾಜ್ಯ ಸರ್ಕಾರದ ಮೇಲೆ ಅಧಿಕಾರ ಸ್ಥಾಪಿಸುವ ಮೂಲಕ ಗುಜರಾತ್, ಉತ್ತರಪ್ರದೇಶ ಮಾದರಿಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ಬದುಕನ್ನು ಬದಲಾಯಿಸಲು ಪೂರಕವಾದ ವ್ಯಕ್ತಿಯನ್ನೇ ಸಿಎಂ ಸ್ಥಾನಕ್ಕೆ ಕೂರಿಸಬೇಕು ಎಂಬುದು ಹೈಕಮಾಂಡ್ ಲೆಕ್ಕಾಚಾರ ಎನ್ನಲಾಗುತ್ತಿದೆ.
ಹಾಗೆ ನೋಡಿದರೆ, ಇಂತಹದ್ದೊಂದು ಲೆಕ್ಕಾಚಾರದ ಮೇಲೆ ಕಳೆದ ಆರು ತಿಂಗಳಿಂದಲೇ ಬಿಜೆಪಿ ವರಿಷ್ಠರು ಮತ್ತು ಕೇಂದ್ರ ಸರ್ಕಾರ ಕಾರ್ಯಾಚರಣೆ ಆರಂಭಿಸಿತ್ತು. ಮುಖ್ಯಮಂತ್ರಿ ಬದಲಾವಣೆಯ ಮೂಲಕವೇ ತಾವು ಕರ್ನಾಟಕದ ಆಡಳಿತ ಮತ್ತು ಸಾರ್ವಜನಿಕ ಬದುಕಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಸಾಧ್ಯ. ಯಡಿಯೂರಪ್ಪ ಅವರಂಥ ಜನಪರ ಮತ್ತು ಅನುಭವಿ ನಾಯಕರಿರುವವರೆಗೆ ಅಂತಹದ್ದೊಂದು ಯತ್ನ ಕೈಗೂಡದು ಎಂಬ ಹಿನ್ನೆಲೆಯಲ್ಲಿ, ಆರು ತಿಂಗಳಿಂದಲೇ ಕೆಲವು ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು.
ಗುಜರಾತ್ ಮತ್ತು ಕೇಂದ್ರ ಸೇವೆಯಲ್ಲಿರುವ ಕೆಲವು ಬಿಜೆಪಿ ಮತ್ತು ಆರ್ ಎಸ್ ಎಸ್ ಅಜೆಂಡಾದ ಒಲವಿರುವ ಐಎಎಸ್ ಅಧಿಕಾರಿಗಳನ್ನು ರಾಜ್ಯಕ್ಕೆ ನಿಯೋಜಿಸುವುದು ಕೂಡ ಅಂತಹ ತಯಾರಿಗಳ ಪೈಕಿ ಒಂದು ತಂತ್ರಗಾರಿಕೆ. ಅದರ ಭಾಗವಾಗಿ ಈಗಾಗಲೇ 10-12 ಮಂದಿ ಅಧಿಕಾರಿಗಳಿಗೆ ಕನ್ನಡ ಕಲಿಕೆ ಸೇರಿದಂತೆ ಪೂರ್ವತಯಾರಿಗಳನ್ನು ನೀಡಲಾಗಿದೆ. ಅಧಿಕಾರ ಹಸ್ತಾಂತರಕ್ಕೆ ಮುನ್ನವೇ ಆ ಅಧಿಕಾರಿಗಳು ರಾಜ್ಯಕ್ಕೆ ಬಂದಿಳಿಯಲಿದ್ದಾರೆ. ಈಗಾಗಲೇ ಒಂದಿಬ್ಬರು ಅಂತಹ ಅಧಿಕಾರಿಗಳು ಬಂದಿಳಿದಿದ್ದಾರೆ. ವಿಶೇಷ ಅಧಿಕಾರ ಬಳಸಿ, ರಾಜ್ಯದ ಪ್ರಮುಖ ಇಲಾಖೆಗಳ ಆಯಕಟ್ಟಿನ ಸ್ಥಾನಗಳಲ್ಲಿ ಈ ಅಧಿಕಾರಿಗಳನ್ನು ನಿಯೋಜಿಸಿ, ಆ ಮೂಲಕ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಕೇಂದ್ರದ ಕೈವಶ ಮಾಡಿಕೊಳ್ಳುವ ಎಂದು ಹೇಳಲಾಗಿದೆ.
ಒಂದು ಕಡೆ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ತಯಾರಿಗಳು ನಡೆಯುತ್ತಿರುವ ಹೊತ್ತಿನಲ್ಲೇ ಇತ್ತ, ಮತ್ತೊಂದು ಕಡೆ ಆಡಳಿತ ಯಂತ್ರದ ಮೇಲೆ ಹಿಡಿತ ಪ್ರಯತ್ನಗಳು ದೆಹಲಿ ಮಟ್ಟದಲ್ಲಿ ನಡೆಯುತ್ತಿವೆ ಎಂಬುದು ರಾಜ್ಯದಲ್ಲಿ ಒಂದು ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಅದರ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎಂಥ ಪರಿಸ್ಥಿತಿ ಬರಲಿದೆ ಎಂಬುದನ್ನು ಹೇಳಲಾಗದು. ಎಂಥದ್ದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸಜ್ಜಾಗಿರಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ನಿಯಂತ್ರಣ ಸಾಧಿಸುವ, ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಿ ಕೇಂದ್ರದ ಆಡಳಿತವನ್ನು ರಾಜ್ಯದ ಮೇಲೆ ಹೇರುವ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಈ ಮಾತು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಅದೇ ಹೊತ್ತಿಗೆ, ರಾಜ್ಯದ ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಯ ಹಿನ್ನೆಲೆಯಲ್ಲಿ ಹಲವು ರೀತಿಯ ಚರ್ಚೆಗಳು ಆರಂಭವಾಗಿದ್ದು, ಆ ಪೈಕಿ ಗುಜರಾತ್ ಮತ್ತು ಉತ್ತರಪ್ರದೇಶ ಮಾದರಿಯ ಆಡಳಿತ ಹೇರುವ ನಿಟ್ಟಿನಲ್ಲಿ ಮೋದಿ ಮತ್ತು ಅಮಿತ್ ಶಾ ಜೋಡಿ, ತಮ್ಮ ತಾಳಕ್ಕೆ ಕುಣಿಯದ ಯಡಿಯೂರಪ್ಪ ಅವರನ್ನು ಬದಲಾಯಿಸುತ್ತಿದ್ದಾರೆ. ಅವರ ಸ್ಥಾನಕ್ಕೆ ಕಟ್ಟರ್ ಹಿಂದುತ್ವವಾದಿ ನಾಯಕರನ್ನು ತರುವ ಮೂಲಕ ರಾಜ್ಯಗಳ ಅಧಿಕಾರವನ್ನು ಇಡಿಯಾಗಿ ಕೈವಶ ಮಾಡಿಕೊಳ್ಳುವ ಅಪಾಯಕಾರಿ ಅಜೆಂಡಾ ಜಾರಿಗೆ ತರುವುದು ಅವರ ಉದ್ದೇಶ ಎಂಬ ಚರ್ಚೆ ಕೂಡ ಚಾಲ್ತಿಗೆ ಬಂದಿದೆ.