ಹಾಸನ ಜಿಲ್ಲೆಯ ಬೇಲೂರಿನ 12ನೇ ಶತಮಾನದ ಚೆನ್ನಕೇಶವ ದೇವಸ್ಥಾನದ ಆಡಳಿತ ಸಮಿತಿಯು ದೇಗುಲದ ಆವರಣದಲ್ಲಿ ದಶಕಗಳಿಂದ ಅಂಗಡಿ ನಡೆಸುತ್ತಿದ್ದ ಹಿಂದೂಯೇತರ ವ್ಯಾಪಾರಿ (ಮುಸ್ಲಿಂ ವ್ಯಾಪಾರಿ) ತೆರವು ನೋಟಿಸ್ ಜಾರಿಗೊಳಿಸಿ ಅಂಗಡಿಯನ್ನು ಮುಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ದೇವಾಲಯದ ಸಂಕೀರ್ಣವು ಹೋಟೆಲ್, ಹಾಲಿನ ಬೂತ್ ಮತ್ತು ಗೋದಾಮುಗಳನ್ನು ಹೊಂದಿರುವ 17 ವಾಣಿಜ್ಯ ಮಳಿಗೆಗಳನ್ನು ಹೊಂದಿದೆ. 50 ವರ್ಷಗಳಿಂದ ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡುತ್ತಿರುವ ಮುಸ್ಲಿಂ ವ್ಯಾಪಾರಿಯ ಮೇಲೆ ಮಾರ್ಚ್ 28 ರಂದು ನೋಟಿಸ್ ನೀಡಿ ಅಂಗಡಿಯನ್ನು ಮುಚ್ಚಲಾಗಿದೆ. ಅಂದಿನಿಂದ ಈ ಮುಸ್ಲಿಂ ಕುಟುಂಬದ ಏಕೈಕ ಆದಾಯದ ಮೂಲ ಕಳೆದುಕೊಂಡಂತಾಗಿದೆ. ಈ ದೇವಾಲಯವು ಕರ್ನಾಟಕ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿದೆ.
ಎರಡು ವಾರಗಳ ಹಿಂದೆ ಶಿವಮೊಗ್ಗ ಮಾರಿಕಾಂಬಾ ದೇವಸ್ಥಾನ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರನ್ನು ದೇವಾಲಯದ ಸಂಕೀರ್ಣದಿಂದ ಹೊರಹೋಗುವಂತೆ ಕೇಳಿಕೊಂಡ ನಂತರ ಇದೇ ಮೊದಲ ಭಾರಿಗೆ ಹಳೆ ಮೈಸೂರು ಪ್ರಾಂತ್ಯದ ದೇವಾಲಯದಲ್ಲಿ ಈತರದ ಅಹಿತಕರ ಘಟನೆ ನಡೆದಿದೆ.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಚ್ 28 ರಂದು ಮುಸ್ಲಿಂ ವ್ಯಾಪಾರಿಗೆ ವ್ಯಾಪಾರ ಚಟುವಟಿಕೆಗಳನ್ನು “ತಕ್ಷಣವೇ ನಿಲ್ಲಿಸುವಂತೆ” ಹೇಳಿ ನೋಟಿಸ್ ಜಾರಿ ಮಾಡಿದ್ದರು. ಅದೇ ದಿನ ನೋಟಿಸ್ಗೆ ಉತ್ತರಿಸಿದ ವ್ಯಾಪಾರಿ, ದೇವಾಲಯದ ಅಧಿಕಾರಿಗಳೊಂದಿಗಿನ ಒಪ್ಪಂದವು ಮುಂದಿನ ವರ್ಷ ಕೊನೆಗೊಳ್ಳುವವರೆಗೆ ತನ್ನ ವ್ಯವಹಾರವನ್ನು ಮುಂದುವರಿಸಲು ಅನುಮತಿ ಕೋರಿದ್ದರು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯಾಲತಾ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ, 2002ರ ಅಡಿಯಲ್ಲಿ ನೋಟಿಸ್ ನೀಡಿದ್ದು, ಹಿಂದೂಯೇತರರಿಗೆ ದೇವಾಲಯದ ಸಂಕೀರ್ಣದಲ್ಲಿ ನಿವೇಶನಗಳನ್ನು ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ “ನಾನು ವ್ಯಾಪಾರಿಯ ಉತ್ತರವನ್ನು ನಮ್ಮ ಆಯುಕ್ತರಿಗೆ ಕಳುಹಿಸಿದ್ದೇನೆ” ಎಂದು ಅವರು ಹೇಳಿದ್ದರು. ಆದರೆ ಈಗ ಮುಸ್ಲೀಂ ವ್ಯಾಪಾರಿಯ ಅಂಗಡಿಯನ್ನು ತೆರವುಗೊಳಿಸಲಾಗಿದೆ.

ವಿಎಚ್ಪಿ ಮತ್ತು ಬಜರಂಗದಳ ಕಾರ್ಯಕರ್ತರು ದೇವಸ್ಥಾನದ ಆವರಣದಿಂದ ಹಿಂದೂಯೇತರ ಅಂಗಡಿಕಾರರನ್ನು ಹೊರಹಾಕುವಂತೆ ದೇವಸ್ಥಾನದ ಆಡಳಿತವನ್ನು ಒತ್ತಾಯಿಸಿದ್ದರಿಂದ, ಆಡಳಿತವು ನೋಟಿಸ್ ಜಾರಿ ಮಾಡಿ ಅಂಗಡಿಯನ್ನು ಮುಚ್ಚುವಂತೆ ಆದೇಶಿಸಿದೆ.
ಅಂಗಡಿ ಮಾಲಿಕರಾದ 72 ವರ್ಷದ ನೂರ್ ಜಹಾನ್ ಸುಮಾರು 50 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು. ಸದ್ಯ ಅವರ ಮಗ ಈಗ ರೆಹಮಾನ್ ಷರೀಫ್ ಅವರು ಅಂಗಡಿ ಜವಾಬ್ದಾರಿ ವಹಿಸಿಕೊಂಡಿದ್ದರು ಅಂಗಡಿಯ ತೆರವಿನಿಂದ ಈಗ ಈ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾರ್ಷಿಕ ಜಾತ್ರೆಯ ಸಮಯದಲ್ಲಿ ದೇವಾಲಯದ ರಥವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವ ಮೊದಲು ಎರಡು ನಿಮಿಷಗಳ ಕಾಲ ಕುರಾನ್ನ ಪದ್ಯಗಳ ಪಠಣವನ್ನು ಮಾಡಲು ಅನುಮತಿಸುವ ಮೂಲಕ ದೇವಾಲಯವು ಸಿಂಕ್ರೆಟಿಕ್ ಸಂಪ್ರದಾಯವನ್ನು ಆಚರಿಸುತ್ತದೆ. ‘ಸರ್ವ ಧರ್ಮ ಸಮನ್ವಯ’ ಪರಿಕಲ್ಪನೆಯಡಿಯಲ್ಲಿ ಸಂತ ರಾಮಾನುಜಾಚಾರ್ಯರು ಆರಂಭಿಸಿರುವ ಈ ಸಂಪ್ರದಾಯವನ್ನು ಆಯುಕ್ತರ ಗಮನಕ್ಕೆ ತಂದಿರುವುದಾಗಿ ಅಧಿಕಾರಿ ತಿಳಿಸಿದರು. ದೇವಾಲಯದ ಕೈಪಿಡಿಯು ಈ ಅಭ್ಯಾಸವನ್ನು ಉಲ್ಲೇಖಿಸುತ್ತದೆ ಎಂದು ಅವರು ಹೇಳಿದರು. ದೇವಸ್ಥಾನದ ರಥೋತ್ಸವ ಈ ವರ್ಷ ಆ.13 ಮತ್ತು 14ರಂದು ನಡೆಯಲಿದ್ದು, ದೇವಸ್ಥಾನದ ಸಂಕೀರ್ಣದಲ್ಲಿ ಹಿಂದೂಯೇತರ ವ್ಯಾಪಾರಿಗಳನ್ನು ನಿಷೇಧಿಸುವಂತೆ ಕೋರಿ ಭಜರಂಗದಳದ ಬೇಲೂರು ಘಟಕ ತಹಶೀಲ್ದಾರ್ಗೆ ಮನವಿ ಸಲ್ಲಿಸಿತ್ತು.