ಭಾರತೀಯ ಚಿತರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡುತ್ತಿವೆ ಕನ್ನಡ ಚಿತ್ರಗಳು. ಇತ್ತೀಚಿಗೆ ಬಿಡುಗಡೆಯಾಗಿದ್ದ ಕಾಂತಾರ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇನ್ನು ಅಕ್ಟೋಬರ್ 15ರಂದು ಚಿತ್ರದ ತೆಲುಗು, ತಮಿಳು ಹಾಗೂ ಹಿಂದಿ ಅವತರಣಿಕೆ ಬಿಡುಗಡೆಯಾಗಿದ್ದು ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಇನ್ನು ಟಾಲಿವುಡ್ ಸೆಲೆಬ್ರಿಟಿಗಳು ಹಾಗೂ ಪ್ರೇಕ್ಷಕರು ಚಿತ್ರವನ್ನು ಹಾಡಿ ಹೊಗಳಿದ್ದು #KantaraTelugu ಎಂಬ ಹ್ಯಾಶ್ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಇನ್ನು ಚಿತ್ರದ ಕುರಿತು ಟ್ವೀಟ್ ಮಾಡಿರುವ ಚಿತ್ರ ವಿಮರ್ಶಕ ರಮೇಶ್ ಬಾಲ ಕಾಂತಾರ ಆಂಧ್ರ ಹಾಗೂ ತೆಲಂಗಾಣದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಚಿತ್ರದ ನಾಯಕ ರಿಷಭ್ ಶೆಟ್ಟಿ ತಮಿಳಿನ ಸ್ಟಾರ್ ನಟ ಕಾರ್ತಿರನ್ನು ಭೇಟಿ ಮಾಡಿದ್ದಾರೆ.
ಇನ್ನು KGF ಚಾಪ್ಟರ್ 2ನಂತರ ಹೊಂಬಾಳೆ ಫಿಲಂಸ್ಗೆ ಅತಿ ಯಶಸ್ಸು ತಂದು ಕೊಟ್ಟ ಚಿತ್ರ ಎಂದರೆ ಅದು ಕಾಂತಾರ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು .
ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷದ ಕಥೆಯಾಗಿರುವ ಕಾಂತಾರ ಚಿತ್ರಕ್ಕೆ ರಿಷಭ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು ನಾಯಕನಾಗಿ ನಟಿಸಿದ್ದು ರಿಷಭ್ಗೆ ಜೋಡಿಯಾಗಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.