• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಯುವ ರಾಜಕಾರಣದ ಆಶಯಗಳೂ ರಾಜಕೀಯ ವಾಸ್ತವಗಳೂ

ನಾ ದಿವಾಕರ by ನಾ ದಿವಾಕರ
September 28, 2021
in ದೇಶ, ರಾಜಕೀಯ
0
ಯುವ ರಾಜಕಾರಣದ ಆಶಯಗಳೂ ರಾಜಕೀಯ ವಾಸ್ತವಗಳೂ
Share on WhatsAppShare on FacebookShare on Telegram

ಭಾರತದ ರಾಜಕಾರಣದಲ್ಲಿ ಯುವ ಶಕ್ತಿಯ ಅನಿವಾರ್ಯತೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಸ್ವಾತಂತ್ರ್ಯಾನಂತರದಲ್ಲಿ ಎರಡು ಪೀಳಿಗೆಗಳ ಅಧಿಕಾರ ರಾಜಕಾರಣದ ಸಾಫಲ್ಯ ವೈಫಲ್ಯಗಳನ್ನು ಸಹಿಸಿಕೊಂಡೇ ಬಂದಿರುವ ಭಾರತದ ನವ ಪೀಳಿಗೆಗೆ, ವಿಶೇಷವಾಗಿ ಹೊಸ ಸಹಸ್ರಮಾನದ ಯುವ ಜನತೆಗೆ ಒಂದು ಹೊಸ ರಾಜಕೀಯ ಪರಿಸರವನ್ನು ಕಾಣುವ ಹಂಬಲ ಇದೆ. ಸಾಂಪ್ರದಾಯಿಕ ರಾಜಕಾರಣದ ಕಾರ್ಯವೈಖರಿಯಿಂದ ಯುವ ಜನತೆ ಬೇಸತ್ತಿರುವುದು ಒಂದೆಡೆಯಾದರೆ, ಭರವಸೆಗಳನ್ನು ಹೊತ್ತುಕೊಂಡೇ ದಶಕಗಳ ಕಾಲ ತಮ್ಮ ಬಾಳು ಹಸನಾಗುವ ಕನಸಿನೊಂದಿಗೆ ಬದುಕಿದ ಜನಸಾಮಾನ್ಯರು ಭ್ರಮನಿರಸನಗೊಂಡಿದ್ದಾರೆ. ಜಾತಿ ರಾಜಕಾರಣ, ಮತೀಯವಾದ, ಕೋಮುವಾದಿ ಫ್ಯಾಸಿಸಂ ಮತ್ತು ಅಸ್ಮಿತೆಯ ರಾಜಕಾರಣದ ವಿಭಿನ್ನ ಆಯಾಮಗಳು ಜನರೆದುರು ತೆರೆದುಕೊಂಡಿವೆ. ಏಳುಬೀಳುಗಳ ನಡುವೆಯೇ ದೇಶ ಇಂದು ಪ್ರಗತಿ ಪಥದಲ್ಲಿ ಒಂದು ನಿರ್ಣಾಯಕ ಹಂತವನ್ನು ತಲುಪಿದೆ.

ADVERTISEMENT

ಸ್ಥಾಪಿತ ಬಂಡವಳಿಗ ರಾಜಕೀಯ ಪಕ್ಷಗಳ ಕಾರ್ಯವೈಖರಿಯಿಂದ ಮತ್ತು ಆಡಳಿತ ನೀತಿಗಳಿಂದ ಬೇಸತ್ತ ಜನತೆಗೆ ಹಲವು ಸಂದರ್ಭಗಳಲ್ಲಿ ಸಿನಿಮಾ ಹೀರೋಗಳೂ, ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳೂ, ನಿಷ್ಠಾವಂತ ಪೊಲೀಸ್ ಅಧಿಕಾರಿಗಳೂ ಒಂದು ಆಶಯದ ಕಿಂಡಿಯನ್ನು ತೆರೆದಿದ್ದನ್ನೂ ನಾವು ನೋಡಿದ್ದೇವೆ. ಕರ್ನಾಟಕದಲ್ಲೇ ಸಾಂಗ್ಲಿಯಾನಾ ಅವರಿಂದ ರವಿ ಚೆನ್ನಣ್ಣನವರ್ ಅವರವರೆಗೆ ಈ ಹಾದಿ ನಡೆದುಬಂದಿದೆ. ಅರವಿಂದ ಕೇಜ್ರಿವಾಲ್ ಅವರಂತಹ ನಾಗರಿಕ ಸೇವಾ ಅಧಿಕಾರಿಗಳು ನೇರವಾಗಿ ರಾಜಕೀಯ ಪ್ರವೇಶಿಸಿ ಯಶಸ್ವಿಯಾದದ್ದೂ ನಮ್ಮ ಕಣ್ಣಮುಂದಿದೆ. ಹಾಗೆಯೇ ಚಲನಚಿತ್ರ ಪರದೆಯ ಮೇಲೆ ದುಷ್ಟರನ್ನು ಸದೆಬಡಿಯುವ, ಭ್ರಷ್ಟರನ್ನು ಶಿಕ್ಷಿಸುವ, ಪ್ರಾಮಾಣಿಕತೆಯನ್ನು ಮೆರೆಯುವ ನಾಯಕ ನಟರು ವಾಸ್ತವ ರಾಜಕಾರಣದಲ್ಲಿ ದುಷ್ಟಕೂಟಗಳ ಒಂದು ಭಾಗವಾಗಿ ಭ್ರಷ್ಟ ವ್ಯವಸ್ಥೆಯೊಳಗೇ ಲೀನವಾಗಿರುವುದನ್ನೂ ಕಂಡಿದ್ದೇವೆ. ಹಾಗೆಯೇ ನಾಗರಿಕ ಸೇವಾ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕರಾಗಿ ದುಡಿದು ತಮ್ಮ ನಿಸ್ವಾರ್ಥ ಸೇವೆಯಿಂದ ಜನಾನುರಾಗಿಗಳಾಗಿದ್ದವರು, ಅತ್ಯಂತ ಮಹತ್ವಾಕಾಂಕ್ಷೆಯಿಂದ ರಾಜಕೀಯ ಪ್ರವೇಶಿಸಿ ಭ್ರಷ್ಟ ರಾಜಕಾರಣದಲ್ಲಿ ಕಳೆದುಹೋಗಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ.

ಈ ಗೊಂದಲ, ದ್ವಂದ್ವಗಳ ನಡುವೆಯೇ ಭಾರತದ ಯುವಜನತೆ ರಾಜಕೀಯ ವಲಯದಲ್ಲಿ ಯುವಶಕ್ತಿಗೆ ಪ್ರಾತಿನಿಧ್ಯವನ್ನು ಬಯಸುತ್ತಿದೆ. ಭಾರತದ ಸಹಸ್ರಮಾನ ಪೀಳಿಗೆಯ ಬಹುದೊಡ್ಡ ಸಂಖ್ಯೆಯ ಯುವ ಮನಸುಗಳನ್ನು ಪ್ರಚಲಿತ ಭ್ರಷ್ಟ ರಾಜಕೀಯ ವ್ಯವಸ್ಥೆಯೇ ಆವರಿಸಿರುವ ಹೊತ್ತಿನಲ್ಲೇ ಈ ಜನತೆಗೆ ಒಂದು ಹೊಸ ಬೆಳಕಿಂಡಿಯನ್ನು ತೆರೆಯುವ ಅನಿವಾರ್ಯತೆಯೂ ಪ್ರಜ್ಞಾವಂತ ಸಮುದಾಯದ ಮೇಲಿದೆ. ಅತಿ ಹೆಚ್ಚಿನ ಪ್ರಮಾಣದ ಯುವ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಯುವ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುವ ಒಂದು ನಿರ್ದಿಷ್ಟ ಮಾರ್ಗವನ್ನು ರೂಪಿಸುವ ನಿಟ್ಟಿನಲ್ಲಿ ಸ್ಥಾಪಿತ ಬಂಡವಳಿಗ ರಾಜಕೀಯ ಪಕ್ಷಗಳು ಸೋತಿವೆ. ಈ ಸೋಲನ್ನು ಮರೆಮಾಚಲೆಂದೇ ಜಾತಿ ಸಮೀಕರಣ, ಮತೀಯವಾದ, ಕೋಮುವಾದ ಮತ್ತು ಅಸ್ಮಿತೆಯ ರಾಜಕಾರಣವನ್ನೂ ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ. ಭಾರತದ ಸಂವಿಧಾನ ಆಶಿಸುವಂತಹ ಒಂದು ಶೋಷಣೆ ಇಲ್ಲದ, ಬಡತನ ಇಲ್ಲದ, ದೌರ್ಜನ್ಯಗಳಿಲ್ಲದ ಸಮಾಜವನ್ನು ಕಟ್ಟುವುದರಲ್ಲಿ ವಿಫಲವಾಗಿರುವ ಪ್ರಸ್ತುತ ಆಳುವ ವರ್ಗದ ಪ್ರತಿನಿಧಿಗಳು, ಬಂಡವಾಳಶಾಹಿ ಅರ್ಥವ್ಯವಸ್ಥೆ, ನವ ಉದಾರವಾದದ ಡಿಜಿಟಲೀಕರಣದ ಯುಗ ಮತ್ತು ಜಾತಿ-ಮತಗಳ ಅಸ್ಮಿತೆಗಳನ್ನೇ ಪ್ರಧಾನವಾಗಿಸಿಕೊಂಡು ರಾಜಕೀಯ ಭೂಮಿಕೆಯನ್ನು ನಿರ್ಮಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ತನ್ನ ಹಿಂದುತ್ವ ಸಿದ್ಧಾಂತ ಮತ್ತು ಕೋಮುವಾದಿ ಫ್ಯಾಸಿಸ್ಟ್ ತಂತ್ರಗಳೊಂದೇ ಭವಿಷ್ಯದ ಪೀಳಿಗೆಗೆ ಆಶಾದಾಯಕವಾದುದು ಎಂದು ಸಹಸ್ರಮಾನದ ಪೀಳಿಗೆಯನ್ನು ಮತ್ತು ಬಹುಸಂಖ್ಯೆಯ ಯುವ ಪೀಳಿಗೆಯನ್ನು ನಂಬಿಸುವಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ರಾಜಕಾರಣ ಯಶಸ್ಸು ಕಾಣುತ್ತಿದೆ. ಏಳು ದಶಕಗಳ ಆಡಳಿತ ವೈಫಲ್ಯಕ್ಕೆ ಪರ್ಯಾಯವಾಗಿ ಸರ್ವಾಧಿಕಾರಿ ಧೋರಣೆಯ ಪ್ರಜಾತಂತ್ರವನ್ನು ಮುಂದಿಡಲಾಗುತ್ತಿದೆ. ಸರ್ಕಾರದ ನಿರಂತರ ವೈಫಲ್ಯ ಮತ್ತು ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳ ಹೊರತಾಗಿಯೂ ಮಧ್ಯಮ ವರ್ಗದ ಸುಶಿಕ್ಷಿತ ಯುವ ಪೀಳಿಗೆ ಹಿಂದುತ್ವ ರಾಜಕಾರಣದಲ್ಲಿ ವಿಶ್ವಾಸ ತೋರುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಎಡಪಂಥೀಯ ಧಾರೆಯೂ ಪ್ರವಹಿಸುತ್ತಿದೆ. ಭಾರತದ ಶೋಷಿತ ಸಮುದಾಯಗಳು, ದುಡಿಯುವ ವರ್ಗಗಳು, ಅವಕಾಶವಂಚಿತ ಜನಸಮುದಾಯಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಒಂದು ಪ್ರಜಾಸತ್ತಾತ್ಮಕ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಲೇ ಇದ್ದಾರೆ. ಎಡಪಂಥೀಯ ಯುವ ಸಂಘಟನೆಗಳು ದೇಶಾದ್ಯಂತ ಸಕ್ರಿಯವಾಗಿದ್ದರೂ, ರಾಜಕೀಯ ಪ್ರಜ್ಞೆಯನ್ನು ಗಟ್ಟಿಗೊಳಿಸುವಲ್ಲಿ ಅಷ್ಟೇನೂ ಯಶಸ್ವಿಯಾಗಿಲ್ಲ ಎನ್ನುವುದು ವಾಸ್ತವ.

ಈ ಎರಡು ವಾಹಿನಿಗಳ ನಡುವೆ ಯುವ ರಾಜಕಾರಣದ ಸಂಕಥನವೂ ಚಾಲ್ತಿಯಲ್ಲಿದೆ. ಜೆಎನ್ಯು ಗಲಭೆಗಳ ಸಂದರ್ಭದಲ್ಲಿ ಆಳುವ ವರ್ಗಗಳ ಪಿತೂರಿಗಳಿಗೆ ಬಲಿಯಾಗಿ, ದಿಟ್ಟತನದಿಂದ ಹೊರಹೊಮ್ಮಿದ, ಯುವ ಪೀಳಿಗೆಯ ಆಶಾಕಿರಣ ಎಂದೇ ಬಿಂಬಿಸಲ್ಪಟ್ಟ ಆಜಾದೀ ಘೋಷಣೆಯ ಹರಿಕಾರ ಕನ್ನಯ್ಯ ಕುಮಾರ್ ಈ ಸಂಕಥನದ ಕೇಂದ್ರಬಿಂದುವಾಗಿದ್ದಾರೆ. ಇವರೊಂದಿಗೆ ಗುಜರಾತ್ ರಾಜಕಾರಣದಲ್ಲಿ ಸಂಚಲನ ಮೂಡಿಸಿ ಕಳೆದ ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವ ಮೂಲಕ, ನರೇಂದ್ರ ಮೋದಿಯ ತವರಲ್ಲೇ ಬಿಜೆಪಿಯ ವಿರುದ್ಧ ಒಂದು ಪರ್ಯಾಯ ರಾಜಕೀಯ ಅಲೆ ಸಾಧ್ಯ ಎಂದು ನಿರೂಪಿಸಿದ ಜಿಗ್ನೇಶ್ ಮೆವಾನಿ ಈ ಸಂಕಥನದ ಒಂದು ಅಂಶವಾಗಿದ್ದಾರೆ. ಈ ಇಬ್ಬರು ನಾಯಕರಲ್ಲಿ ಭವಿಷ್ಯದ ಪ್ರಾಮಾಣಿಕ ರಾಜಕಾರಣದ ಭರವಸೆಯನ್ನು ಕಾಣುತ್ತಿದ್ದ ಜನತೆಗೆ ಆಘಾತವಾಗುವ ರೀತಿಯಲ್ಲಿ ಇಬ್ಬರೂ ಯುವನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ಧತೆ ನಡೆಸಿದ್ದಾರೆ. ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿರುವ ಕನ್ನಯ್ಯ ಕುಮಾರ್ ತಮ್ಮ ಹಲವು ಸಂಗಾತಿಗಳೊಡನೆ ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ್ದು, ಇದೇ 28ರಂದು, ಭಗತ್ ಸಿಂಗ್ ಜನ್ಮದಿನದಂದು, ಇದು ಸಾಕಾರಗೊಳ್ಳಲಿದೆ.

ಕನ್ನಯ್ಯ ಕುಮಾರ್

ಕನ್ನಯ್ಯ ಕುಮಾರ್ ಕಾಂಗ್ರೆಸ್ ಸೇರುವುದು ಸರಿಯೋ ತಪ್ಪೋ ಎನ್ನುವ ವಿಚಾರದಲ್ಲಿ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ತಮ್ಮ ಕ್ರಾಂತಿಕಾರಿ ಘೋಷಣೆಯೊಂದಿಗೆ ಜನಮಾನಸದಲ್ಲಿ ಮನೆ ಮಾಡಿದಂತಹ ಒಬ್ಬ ಎಡಪಂಥೀಯ ಧೋರಣೆಯ ಯುವ ನಾಯಕ, ಬಂಡವಳಿಗ ಪಕ್ಷವಾದ ಕಾಂಗ್ರೆಸ್ ಸೇರುವುದು ಉಚಿತವೇ ಎಂಬ ಪ್ರಶ್ನೆ ಸೈದ್ಧಾಂತಿಕವಾದುದು. ಮತ್ತೊಂದೆಡೆ ಭಾರತದ ಪ್ರಸ್ತುತ ಆಡಳಿತ ವ್ಯವಸ್ಥೆ ಮತ್ತು ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ನೈಜ ಪ್ರಜಾಸತ್ತಾತ್ಮಕ ಆಂದೋಲನದ ಅವಶ್ಯಕತೆ ಇರುವ ಸಂದರ್ಭದಲ್ಲಿ ಎಡಪಂಥೀಯ ಚಳುವಳಿಗಳಲ್ಲೇ ಬೆಳೆದುಬಂದ ಒಬ್ಬ ಯುವ ನಾಯಕ, ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿರುವ ಪಕ್ಷಕ್ಕೆ ಸೇರ್ಪಡೆಯಾಗುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್, ಬಿಜೆಪಿ ಮತ್ತಿತರ ಬಂಡವಳಿಗ ಪಕ್ಷಗಳನ್ನು ಹೊರತುಪಡಿಸಿ, ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸುವ ಮೂಲಕ ಈ ದೇಶದ ಶೋಷಿತ ಸಮುದಾಯಗಳೊಡನೆ ಸದಾ ಗುರುತಿಸಿಕೊಂಡಿರುವ ಎಡಪಕ್ಷಗಳೊಡನೆ ಕೈಜೋಡಿಸಬೇಕಾದ ಸಂದರ್ಭದಲ್ಲಿ, ಪರ್ಯಾಯದ ಚಿಂತನೆಯೇ ಇಲ್ಲದ, ಪರಿವರ್ತನೆಯ ಆಶಯಗಳಿಲ್ಲದ ಯಥಾಸ್ಥಿತಿವಾದಿ ಪಕ್ಷವೊಂದಕ್ಕೆ ಕನ್ನಯ್ಯ ಕುಮಾರ್ ಸೇರ್ಪಡೆಯಾಗುತ್ತಿರುವುದು ಅಚ್ಚರಿ ಮೂಡಿಸುವುದರೊಂದಿಗೇ, ವಿಷಾದದ ಛಾಯೆಯನ್ನೂ ಮೂಡಿಸಿದೆ.

ಕನ್ನಯ್ಯ ಕುಮಾರ್ ಅವರ ವ್ಯಕ್ತಿಗತ ನಿಲುವು, ನಿರ್ಧಾರ ಮತ್ತು ತಾತ್ವಿಕ ನಿಲುಮೆಯನ್ನು ಗೌರವಯುತವಾಗಿ ಮಾನ್ಯ ಮಾಡುತ್ತಲೇ, ಸಾರ್ವಜನಿಕವಾಗಿ ಕಾಡಬೇಕಾದ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ. ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಯುವ ಜನತೆಯ ಮುಂದೆ ಎರಡು ಪ್ರಧಾನ ಆಯ್ಕೆಗಳಿವೆ. ಅಧಿಕಾರ ರಾಜಕಾರಣದೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸ್ಥಾಪಿತ ವ್ಯವಸ್ಥೆಯೊಳಗೇ ಸುಧಾರಣೆಗಳನ್ನು ಸಾಧ್ಯವಾಗಿಸುವುದು ಒಂದು ಆಯ್ಕೆಯಾದರೆ, ಸಂವಿಧಾನದ ಆಶಯದಂತೆ ಸಾಮಾಜಿಕ ಸಮಾನತೆಯನ್ನೂ ಸಾಧಿಸಲಾಗದೆ, ಆರ್ಥಿಕ ಸಮಾನತೆಯನ್ನೂ ಸಾಧಿಸಲಾಗದೆ, ನವ ಉದಾರವಾದದ ನೆರಳಲ್ಲಿ ಶೋಷಕ ಬಂಡವಾಳಶಾಹಿ ಆರ್ಥಿಕತೆಯನ್ನು ಅನುಮೋದಿಸುವ ಮೂಲಕ ಭ್ರಷ್ಟ ವ್ಯವಸ್ಥೆಯ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವ ಪ್ರಚಲಿತ ರಾಜಕೀಯ ಶಕ್ತಿಗಳ ವಿರುದ್ಧ ಒಂದು ಜನಪರವಾದ, ಪ್ರಗತಿಪರ, ಸಮ ಸಮಾಜದ ಧ್ಯೇಯವುಳ್ಳ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವುದು ಎರಡನೆಯ ಆಯ್ಕೆ.

ವಿದ್ಯಾರ್ಥಿ ದೆಸೆಯಿಂದಲೂ ಎಡಪಂಥೀಯ ವಿಚಾರಧಾರೆಯಲ್ಲೇ ಬೆಳೆದುಬಂದು, ಜೆಎನ್ಯು ಆವರಣದಲ್ಲಿ ನಡೆದ ಫ್ಯಾಸಿಸ್ಟ್ ಆಕ್ರಮಣವನ್ನು ಎದುರಿಸಿ, ತಮ್ಮ ಆಜಾದಿ ಘೋಷಣೆಯೊಂದಿಗೆ ಮನೆಮಾತಾದ ಕನ್ನಯ್ಯ ಕುಮಾರ್ ಅವರ ಆಯ್ಕೆ ಸಹಜವಾಗಿ ಎರಡನೆಯದೇ ಆಗಬೇಕಿತ್ತು. ಇದು ಬಹುಜನರ ನಿರೀಕ್ಷೆಯೂ ಆಗಿತ್ತು. ಎಡಪಕ್ಷಗಳ ರಾಜಕೀಯ ಪ್ರಾಬಲ್ಯ ಕೆಲವೇ ರಾಜ್ಯಗಳಿಗೆ ಸೀಮಿತವಾಗುತ್ತಿದ್ದು, ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಕನ್ನಯ್ಯ ಕುಮಾರ್ ಪ್ರತಿನಿಧಿಸಿದ ಯುವ ಶಕ್ತಿ ಒಂದು ಪ್ರಬಲ ಅಸ್ತ್ರವಾಗುವ ಸಾಧ್ಯತೆಗಳಿದ್ದವು. ಕಮ್ಯುನಿಸ್ಟ್ ಚಳುವಳಿಗಳು ವ್ಯಕ್ತಿ ಕೇಂದ್ರಿತವಾಗಿ ಬೆಳೆಯುವುದಿಲ್ಲ ಮತ್ತು ಕಮ್ಯುನಿಸ್ಟ್ ಪಕ್ಷಗಳ ಕುಂದಿದ ರಾಜಕೀಯ ಪ್ರಾತಿನಿಧ್ಯದ ಹೊರತಾಗಿಯೂ, ಭಾರತದ ಇಂದಿನ ಸಂದರ್ಭದಲ್ಲಿ ಅಗತ್ಯ ಇರುವುದು ಜನಾಂದೋಲನಗಳನ್ನು ಪ್ರಚೋದಿಸುವ ಚಳುವಳಿಯ ರಾಜಕಾರಣವೇ ಹೊರತು, ಅಧಿಕಾರ ರಾಜಕಾರಣವಲ್ಲ. ಏಕೆಂದರೆ ಸ್ಥಾಪಿತ ರಾಜಕೀಯ ಹಿತಾಸಕ್ತಿಗಳು, ಸಂಸದೀಯ ಪ್ರಜಾತಂತ್ರದ ಭ್ರಮೆಯೊಳಗೆ ಎಲ್ಲ ರಾಜಕೀಯ ಚಿಂತನೆಗಳನ್ನೂ ನುಂಗಿಹಾಕುತ್ತವೆ.

ಕನ್ನಯ್ಯ ಕುಮಾರ್, ಜಿಗ್ನೇಶ್ ಮೆವಾನಿ

ಇದೇ 27ರಂದು ನಡೆಯುತ್ತಿರುವ ದೇಶವ್ಯಾಪಿ ರೈತ ಮುಷ್ಕರವೇ ಈ ವಾದಕ್ಕೆ ಪುಷ್ಟಿ ನೀಡುತ್ತದೆ. ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತ ಮಾತೃಸಮಾನವಾಗಿದೆ ಎಂದು ಪ್ರಧಾನಿ ಮೋದಿ ಅಮೆರಿಕದ ಭೇಟಿಯ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಈ ಮುಷ್ಕರವೇ ಅದನ್ನು ಸುಳ್ಳುಮಾಡುತ್ತಿದೆ. ಭಾರತದ ಸಂಸದೀಯ ಪ್ರಜಾತಂತ್ರ, ನೈಜ ಪ್ರಜಾಪ್ರಭುತ್ವದ ಆಶಯಗಳಿಂದ ವಿಮುಖವಾಗಿ, ಸಾಂವಿಧಾನಿಕ ಚೌಕಟ್ಟಿನಲ್ಲೇ ಸರ್ವಾಧಿಕಾರಿ ಧೋರಣೆಯನ್ನು ಪೋಷಿಸುತ್ತಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರ ನಡುವೆ ರಾಜಕೀಯ ಪ್ರಜ್ಞೆಯನ್ನು ಬಿತ್ತುವ ಮೂಲಕ ಪ್ರಜಾಸತ್ತಾತ್ಮಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಹೊಣೆಗಾರಿಕೆ ಯುವ ರಾಜಕೀಯ ಶಕ್ತಿಗಳ ಮೇಲಿದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ದಲಿತ, ಅಲ್ಪಸಂಖ್ಯಾತ ಮತ್ತು ಮಹಿಳಾ ಸಂಘಟನೆಗಳು, ಎಡಪಕ್ಷಗಳೊಂದಿಗೆ ಕೈಜೋಡಿಸಬೇಕಿದೆ. ಈ ಸಂದಿಗ್ಧತೆಯ ನಡುವೆ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗುತ್ತಿರುವ ಕನ್ನಯ್ಯ ಕುಮಾರ್ ಮತ್ತು ಜಿಗ್ನೇಶ್ ಮೆವಾನಿ, ಅಧಿಕಾರ ರಾಜಕಾರಣದಿಂದಾಚೆಗಿನ ಚಳುವಳಿಯ ರಾಜಕಾರಣವನ್ನು ಅಪ್ಪಿಕೊಳ್ಳಬೇಕಿತ್ತು.

ಸಂವಿಧಾನದ ರಕ್ಷಣೆಗಾಗಿ, ಸಾಂವಿಧಾನಿಕ ಮೌಲ್ಯಗಳ ಸಂರಕ್ಷಣೆಗಾಗಿ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಇಂದು ದೇಶಾದ್ಯಂತ ಒಕ್ಕೊರಲ ದನಿ ಕೇಳಿಬರುತ್ತಿದೆ. ಏಕೆಂದರೆ ಆಡಳಿತ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿರುವ ಬಲಪಂಥೀಯ ಹಿಂದುತ್ವವಾದಿ ಪಕ್ಷವೊಂದು, ನವ ಉದಾರವಾದದ ಶೋಷಕ ನೀತಿಗಳನ್ನು ಪ್ರೋತ್ಸಾಹಿಸುತ್ತಲೇ, ಇತಿಹಾಸವನ್ನು ವಿಕೃತಗೊಳಿಸಿ, ದೇಶದ ಯುವ ಮನಸುಗಳಲ್ಲಿ ಅನ್ಯಮತ ದ್ವೇಷದ ಭಾವನೆಗಳನ್ನು ತುಂಬುತ್ತಿದೆ. ಪ್ರಾಥಮಿಕ ತರಗತಿಯಿಂದ ಉನ್ನತ ವ್ಯಾಸಂಗದ ವಿಶ್ವವಿದ್ಯಾಲಯಗಳವರೆಗೆ ವಿದ್ಯಾರ್ಥಿ-ಯುವ ಜನತೆಯಲ್ಲಿ ಅಸಹಿಷ್ಣುತೆಯನ್ನು ಬೆಳೆಸುವ ನಿಟ್ಟಿನಲ್ಲಿ ಬೃಹತ್ ಬೌದ್ಧಿಕ ಪಡೆಗಳನ್ನೇ ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ ಬಹುಶಃ ಈ ನಿಟ್ಟಿನಲ್ಲಿ ಹೆಚ್ಚಿಗೆ ನೆರವಾಗಲಿದೆ. ಶೋಷಿತ-ಅವಕಾಶವಂಚಿತ ಜನಸಮುದಾಯಗಳ ಜ್ವಲಂತ ಸಮಸ್ಯೆಗಳಿಗೆ ವಿಮುಖರಾಗಿ, ಸಾಂಸ್ಕೃತಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಒಂದು ಫ್ಯಾಸಿಸ್ಟ್ ಸಾಮ್ರಾಜ್ಯದ ನಿರ್ಮಾಣಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಇಲ್ಲಿ ಈ ದೇಶದ ಯುವ ಸಮುದಾಯ ಸಕ್ರಿಯ ಕಾಲಾಳುಪಡೆಗಳಾಗಲಿವೆ.

ದಲಿತರು ಎದುರಿಸುತ್ತಿರುವ ಅಸ್ಪೃಶ್ಯತೆಯ ಸಮಸ್ಯೆ, ಜಾತಿ ತಾರತಮ್ಯಗಳು, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ ಮತ್ತು ಅತ್ಯಾಚಾರ, ಅಲ್ಪಸಂಖ್ಯಾತರ ಮೇಲಿನ ಧಾಳಿಗಳು ಮತ್ತು ಜಾಗತೀಕರಣದ ಪರಿಣಾಮ ಉದ್ಯೋಗವಂಚಿತರಾಗಿರುವ ಬಡ ಜನತೆಯ ಬವಣೆ, ನೂತನ ಕೃಷಿ ಮತ್ತು ಕಾರ್ಮಿಕ ನೀತಿಯಿಂದ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳಲಿರುವ ರೈತ ಕಾರ್ಮಿಕರ ಸಮೂಹ, ಕಾರ್ಪೋರೇಟ್ ಧಾಳಿಯಿಂದ ತಮ್ಮ ನೆಲ-ಜಲ-ಭೂಮಿಯನ್ನು ಕಳೆದುಕೊಳ್ಳುತ್ತಿರುವ ಆದಿವಾಸಿ, ಬುಡಕಟ್ಟು ಸಮುದಾಯಗಳು- ಈ ಸಮಸ್ಯೆಗಳಿಗೆ ಪರಿಹಾರವೆಂದರೆ, ಒಂದು ಪ್ರಜಾಸತ್ತಾತ್ಮಕ ಜನಾಂದೋಲನವನ್ನು ರೂಪಿಸುವುದು ಮತ್ತು ವಿದ್ಯಾರ್ಥಿ-ಯುವಜನರಲ್ಲಿ ಜಾತ್ಯತೀತತೆಯ, ಪ್ರಜಾಪ್ರಭುತ್ವದ, ಸೌಹಾರ್ದತೆಯ ಭಾವನೆಗಳನ್ನು ವ್ಯವಸ್ಥಿತವಾಗಿ ಬಿತ್ತುವುದು. ಹಾಗೆಯೇ ಸಂಘಪರಿವಾರ, ಹಿಂದುತ್ವ ರಾಜಕಾರಣ ಬಿತ್ತುತ್ತಿರುವ ದ್ವೇಷ ರಾಜಕಾರಣದ ಬೀಜಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿ ಗಾಢವಾಗಿ ಬೇರೂರುತ್ತಿರುವ ಮತಾಂಧತೆಯ ಬೇರುಗಳನ್ನು ಬುಡಸಮೇತ ಕಿತ್ತೊಗೆಯುವುದು. ಈ ಹಾದಿಯಲ್ಲಿ ಕ್ರಮಿಸುತ್ತಲೇ ಭಾರತದ ಪ್ರಜಾಸತ್ತೆಯನ್ನು, ಒಕ್ಕೂಟ ವ್ಯವಸ್ಥೆಯನ್ನು ಮತ್ತು ಸಂವಿಧಾನವನ್ನು ರಕ್ಷಿಸುವುದು ಯುವ ಜನಾಂಗದ ಮುಂದಿನ ಗುರಿ, ಆದ್ಯತೆ ಆಗಬೇಕಿದೆ.

ಕನ್ನಯ್ಯ ಕುಮಾರ್, ಜಿಗ್ನೇಶ್ ಮೆವಾನಿ ಮತ್ತು ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಚಿತ್ರ ನಟ ಚೇತನ್ ಅಹಿಂಸಾ ಇಂತಹ ಯುವ ನಾಯಕರಿಗೆ ಈ ವಾಸ್ತವ ಅರ್ಥವಾಗಬೇಕಿದೆ. ಸ್ಥಾಪಿತ ಬಂಡವಳಿಗ ಪಕ್ಷಗಳಲ್ಲಿ ಈ ಹಾದಿಯ ಪರಿಕಲ್ಪನೆಯೂ ಇರುವುದಿಲ್ಲ ಎನ್ನಲು ಹೆಚ್ಚಿನ ಉದಾಹರಣೆಗಳೇನೂ ಬೇಕಿಲ್ಲ. ಪಕ್ಷ-ಅಧಿಕಾರ ರಾಜಕಾರಣದ ಆದ್ಯತೆಗಳಿಗೂ, ಚಳುವಳಿಯ ರಾಜಕಾರಣದ ಆಯ್ಕೆಗಳಿಗೂ ಇರುವ ಅಂತರವನ್ನು ಕನ್ನಯ್ಯಕುಮಾರ್ ಮತ್ತಿತರರು ಯೋಚಿಸಬೇಕಿದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯನ್ನು ಪೋಷಿಸುವ ಯಾವುದೇ ರಾಜಕೀಯ ಶಕ್ತಿ ಭಾರತದಲ್ಲಿ ಅಂಬೇಡ್ಕರ್ ಕನಸಿನ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸಲು ಪೂರಕವಾಗಿರುವುದಿಲ್ಲ ಎಂಬ ಸತ್ಯವನ್ನೂ ಈ ನಾಯಕರು ಗ್ರಹಿಸಬೇಕಿದೆ. ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ ಮತ್ತು ಸಮಾಜದಲ್ಲಿ ಬೇರೂರುತ್ತಿರುವ ಮತಾಂಧತೆಯ ಬೇರುಗಳನ್ನು ಕಿತ್ತೊಗೆಯುವುದರೊಂದಿಗೆ, ದುಡಿಯುವ ವರ್ಗಗಳ ನಡುವೆ, ಶೋಷಿತ ಸಮುದಾಯಗಳ ನಡುವೆ ಸೌಹಾರ್ದತೆಯನ್ನು ರೂಪಿಸುವುದರಿಂದ ಮಾತ್ರವೇ ನವ ಭಾರತದ ನಿರ್ಮಾಣ ಸಾಧ್ಯವಾದೀತು.

Tags: BJPCongress PartyCovid 19ಕನ್ನಯ್ಯ ಕುಮಾರ್ಚೇತನ್ ಅಹಿಂಸಾಜನಪರವಾದಜಿಗ್ನೇಶ್ ಮೆವಾನಿದಲಿತರುನರೇಂದ್ರ ಮೋದಿಪ್ರಗತಿಪರಬಿಜೆಪಿಭಾರತಯುವ ರಾಜಕಾರಣರಾಜಕೀಯಸಮ ಸಮಾಜದಸಂವಿಧಾನದ ರಕ್ಷಣೆಸ್ವಾತಂತ್ರ್ಯಾ
Previous Post

Breaking News – ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

Next Post

ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ

ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada