ಒಂದು ಕಡೆ ತನ್ನ ಸರ್ಕಾರ ಇರುವ ದೇಶದ ಮೂರು ರಾಜ್ಯಗಳಲ್ಲೂ ನಾಯಕತ್ವ ಬಿಕ್ಕಟ್ಟು ಮತ್ತು ತೀವ್ರ ಭಿನ್ನಮತೀಯ ಸಮಸ್ಯೆಯಿಂದ ಹೈರಾಣಾಗಿರುವ ಕಾಂಗ್ರೆಸ್, ಮತ್ತೊಂದು ಕಡೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿ ಮತ್ತು ಪ್ರಶಾಂತ್ ಕಿಶೋರ್ ಅವರಂತಹ ದೇಶದ ಭರವಸೆಯ ನಾಯಕರತ್ತ ಮುಖಮಾಡಿದೆ.
ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷದ ಹಲವು ಯುವ ನಾಯಕರು ವಿವಿಧ ಸಂದರ್ಭಗಳಲ್ಲಿ ಪಕ್ಷ ತೊರೆದಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಸುಶ್ಮಿತಾ ದೇವ್, ಪ್ರಿಯಾಂಕಾ ಚತುರ್ವೇದಿ ಮತ್ತಿತರ ಭರವಸೆಯ ಯುವ ನಾಯಕರು ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ. ತಮ್ಮ ನಿರೀಕ್ಷಿತ ಸ್ಥಾನಮಾನಗಳಿಗೆ ಪಕ್ಷದ ಹಿರಿಯ ತಲೆಗಳೇ ಅಡ್ಡಗಾಲಾಗುತ್ತಿವೆ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಗೆ ವಲಸೆ ಹೋಗಿದ್ದಾರೆ.
ಈ ನಡುವೆ, ಪಂಜಾಬ್ ರಾಜಕೀಯ ಬೆಳವಣಿಗೆಗಳು ಪಕ್ಷದಲ್ಲಿ ಹಿರಿಯ ತಲೆಗಳು ಮತ್ತು ಹೊಸ ತಲೆಮಾರಿನ ನಾಯಕರ ನಡುವಿನ ಸಂಘರ್ಷವನ್ನು ರಾಷ್ಟ್ರವ್ಯಾಪಿ ಬಟಾಬಯಲು ಮಾಡಿದೆ. ಕಳೆದ ಒಂದು ವರ್ಷದಿಂದಲೇ ಜಿ23 ಕೂಟದ ಹೆಸರಿನಲ್ಲಿ ಪಕ್ಷದ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷ ಸ್ಥಾನವೂ ಸೇರಿದಂತೆ ಕಾರ್ಯಕಾರಿಣಿಗೂ ಚುನಾವಣೆ ಮೂಲಕ ಹೊಸ ನಾಯಕರನ್ನು ಆಯ್ಕೆ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ. ಆದರೆ, ಎರಡು ವರ್ಷ ಕಳೆದರೂ ಪಕ್ಷದ ನಾಯಕತ್ವ ಆ ಬಗ್ಗೆ ಗಂಭೀರ ಗಮನ ಹರಿಸಿಲ್ಲ. ಹಾಗಾಗಿ ಈಗಲೂ ಒಲ್ಲದ ಮನಸಿನಿಂದಲೇ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿದಿದ್ದಾರೆ.
ಅಂದರೆ, ಒಂದು ಕಡೆ ಪಕ್ಷದಲ್ಲಿ ಯುವಕರಿಗೆ ಬೆಳೆಯಲು ಅವಕಾಶಗಳಿಲ್ಲ. ಯುವ ನಾಯಕರ ಏಳಿಗೆಗೆ ಪಕ್ಷದ ಹಿರಿಯ ನಾಯಕರೇ ಅಡ್ಡಗಾಲಾಗಿದ್ದಾರೆ. ಹಾಗಾಗಿ ತಮಗೆ ಇಲ್ಲಿ ಭವಿಷ್ಯವಿಲ್ಲ ಎಂದು ಅಧಿಕಾರ ಮತ್ತು ಸ್ಥಾನಮಾನ ವಂಚಿತ ಯುವ ನಾಯಕರಷ್ಟೇ ಅಲ್ಲದೆ, ಯಾವ ಮಹತ್ವದ ಸ್ಥಾನಮಾನದ ನಿರೀಕ್ಷೆ ಇರದ ಭರವಸೆಯ ಯುವ ನಾಯಕರೂ ವಲಸೆ ಹೋಗಿದ್ದಾರೆ. ಮತ್ತೊಂದು ಕಡೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಂಡಾಯವೆದ್ದಿರುವ ಹಿರಿಯ ನಾಯಕರು, ಜಿ 23 ಕೂಟದ ಮೂಲಕ ಪಕ್ಷದ ಮೇಲಿನ ಗಾಂಧಿ ಕುಟುಂಬದ ಹಿಡಿತವನ್ನು ಪರೋಕ್ಷವಾಗಿ ಪ್ರಶ್ನಿಸುತ್ತಿದ್ದಾರೆ.
ರಾಹುಲ್ ಗಾಂಧಿ ಯುವ ನಾಯಕರ ಭರವಸೆ ಎಂಬಂತೆ ಪಕ್ಷ ಬಿಂಬಿಸುತ್ತಿರುವಾಗಲೇ ಯುವ ನಾಯಕರು ಮತ್ತು ಹಿರಿಯ ನಾಯಕರ ನಡುವೆ ಪಕ್ಷದಲ್ಲಿ ಆಂತರಿಕ ಹಗ್ಗಜಗ್ಗಾಟ ಬಿರುಸುಗೊಂಡಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ಬೇಡಿಕೆ ಇಡುವ ಮೂಲಕ ಪಕ್ಷದ ಪುನರುಜ್ಜೀವನಕ್ಕೆ ಜಿ23 ನಾಯಕರು ಪಟ್ಟು ಹಿಡಿದಿರುವ ನಡುವೆಯೇ, ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಯುವ ನಾಯಕರು ಪಕ್ಷ ತೊರೆಯುತ್ತಿರುವ ವಿಪರ್ಯಾಸಕರ ಪರಿಸ್ಥಿತಿ ಕಾಂಗ್ರೆಸ್ಸಿನದು.

ಇಂತಹ ಹೊತ್ತಿನಲ್ಲೇ ಮತ್ತೊಂದು ಕಡೆ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್, ದೇಶದ ಭರವಸೆಯ ಯುವ ನಾಯಕರಾದ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿ ಮುಂತಾದ ನಾಯಕರನ್ನು ಕಾಂಗ್ರೆಸ್ಸಿಗೆ ಕರೆತರುವ ಯತ್ನಗಳು ಬಿರುಸುಗೊಂಡಿವೆ. ಈಗಾಗಲೇ ನಾನಾ ಪಟೋಲೆ, ರೇವಂತ್ ರೆಡ್ಡಿ, ನವಜೋತ್ ಸಿಂಗ್ ಸಿಧು ಸೇರಿದಂತೆ ಹೊಸ ತಲೆಮಾರಿನ ನಾಯಕರನ್ನು ಪಕ್ಷದ ಮುಂಚೂಣಿಗೆ ತರುವ ಯತ್ನ ಮಾಡುತ್ತಿರುವ ರಾಹುಲ್ ಗಾಂಧಿ, ಆ ಮೂಲಕ ಕುಸಿದುಬೀಳುತ್ತಿರುವ ಪಕ್ಷವನ್ನು, ಪಕ್ಷದ ವರ್ಚಸ್ಸನ್ನು ಎತ್ತಿಕಟ್ಟುವ ಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನದ ಮುಂದುವರಿದ ಭಾಗವಾಗಿ ಇದೀಗ ಪ್ರಶಾಂತ್ ಕಿಶೋರ್, ಕನ್ಹಯ್ಯ, ಮೆವಾನಿ ಅವರಂಥ ಹೊಸ ತಲೆಮಾರಿನ ಪ್ರಭಾವಿ ಯುವ ನಾಯಕರನ್ನು ಪಕ್ಷಕ್ಕೆ ಸೆಳಯುವ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರ ಮಾತುಕತೆ ನಡೆಸಿದ್ದಾರೆ. ಕಳೆದ ವಾರ ಕನ್ಹಯ್ಯ ಕತ್ತು ಮೆವಾನಿ ಜೊತೆ ಮಾತುಕತೆಯ ಬಳಿಕ ಆ ಇಬ್ಬರೂ ಕಾಂಗ್ರೆಸ್ ಸೇರುವ ಸುದ್ದಿಗೆ ಮತ್ತೊಂದು ರೆಕ್ಕೆ ಬಂದಿದೆ.
ಈ ನಡುವೆ, ಈಗಾಗಲೇ ಪಕ್ಷದ ಪ್ರಭಾವಿ ನಾಯಕರ ಮಕ್ಕಳೂ ಸೇರಿದಂತೆ ವಿದ್ಯಾರ್ಥಿ ದೆಸೆಯಿಂದಲೇ ಪಕ್ಷಕ್ಕಾಗಿ ದುಡಿದ, ಪಕ್ಷದ ಒಳಹೊರಗನ್ನು ಅರಿತ ಹಲವರಿಗೆ ಅವಕಾಶಗಳನ್ನು ತಪ್ಪಿಸಿ ಅವರು ಪಕ್ಷ ತೊರೆಯುವಂತೆ ಮಾಡಿರುವ ಪಕ್ಷದ ಹಿರಿಯ ಪಟ್ಟಭದ್ರರು, ಬೇರೆ ಪಕ್ಷಗಳಿಂದ, ಇತರೆ ಸಂಘಟನೆಗಳಿಂದ ಪಕ್ಷಕ್ಕೆ ಬರುವ ಈ ಯುವ ನಾಯಕರನ್ನು ಹೇಗೆ ಕಾಣಬಹುದು? ಮತ್ತು ಹಾಗೆ ಬಂದವರು ಪಕ್ಷದ ಆಯಕಟ್ಟಿನ ಸ್ಥಾನಗಳಿಗೇ ನೇಮಕವಾಗಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಹೇಗೆ ನಡೆಸಿಕೊಳ್ಳಬಹುದು ಎಂಬುದು ಈಗ ಇರುವ ಪ್ರಶ್ನೆ.
ಅದರಲ್ಲೂ ಕನ್ಹಯ್ಯ ತವರು ರಾಜ್ಯ ಬಿಹಾರದಲ್ಲಿ ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಆರ್ ಜೆಡಿಯ ತೇಜಸ್ವಿ ಯಾದವ್ ಮತ್ತು ಕನ್ಹಯ್ಯ ನಡುವೆ ತೀವ್ರ ರಾಜಕೀಯ ಪೈಪೋಟಿ ಇದೆ. ಅಲ್ಲದೆ, ಅಲ್ಲಿ ಕಾಂಗ್ರೆಸ್ ತೀರಾ ದುರ್ಬಲ ಸ್ಥಿತಿಯಲ್ಲಿದೆ. ಆ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಜೊತೆ ಕನ್ಹಯ್ಯ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಮುಂದುವರಿಸಿಕೊಂಡು ಹೋಗಲಾರರು ಎಂಬ ಮಾತುಗಳೂ ಇವೆ. ಹಾಗಂತ ದಿಢೀರನೇ ಆರ್ ಜೆಡಿ ಮೈತ್ರಿ ಮುರಿದುಕೊಂಡು ಸ್ವತಂತ್ರವಾಗಿ ರಾಜ್ಯದಲ್ಲಿ ಚುನಾವಣೆ ಎದುರಿಸುವ ಮಟ್ಟಿಗೆ ಪಕ್ಷವನ್ನು ಒಂದೆರಡು ವರ್ಷದಲ್ಲಿ ಬಲಪಡಿಸುವ ಸಾಮರ್ಥ್ಯ ಕನ್ಹಯ್ಯಗೆ ಇದೆಯೇ ಎಂಬುದು ಸ್ವತಃ ಕನ್ಹಯ್ಯ ಕೂಡ ವಿಶ್ವಾಸದಿಂದ ಹೇಳಲಾಗದು. ಅದರಲ್ಲೂ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿ ಕಟ್ಟುವ ನಿಟ್ಟಿನಲ್ಲಿ ತೇಜಸ್ವಿ ಯಾದವ್ ಅವರ ಆರ್ ಜೆಡಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಕಾಂಗ್ರೆಸ್ ಗೆ ಆ ಪರ್ಯಾಯ ರಾಜಕೀಯ ಶಕ್ತಿ ನಿರ್ಣಾಯಕ. ಹಾಗಾಗಿ ಕನ್ಹಯ್ಯ ರಾಜಕೀಯ ಮಹತ್ವಾಕಾಂಕ್ಷೆ, ಆ ಮಹಾತ್ವಾಕಾಂಕ್ಷೆಯ ಕಾರಣಕ್ಕಾಗಿಯೇ ಬಿಹಾರದ ಮತ್ತೊಬ್ಬ ಮಹತ್ವಾಕಾಂಕ್ಷಿ ನಾಯಕ ತೇಜಸ್ವಿ ಯಾದವ್ ಜೊತೆಗಿನ ಅವರ ಪೈಪೋಟಿ, ಬಿಹಾರದ ಕಾಂಗ್ರೆಸ್ ಪರಿಸ್ಥಿತಿ ಮತ್ತು ಆ ದೌರ್ಬಲ್ಯದ ಕಾರಣದಿಂದಾಗಿಯೇ ಅದು ಆರ್ ಜೆಡಿ ಜೊತೆ ಹೊಂದಿರುವ ನಂಟು ಮುಂತಾದ ಕಾರಣಗಳಿಂದಾಗಿ ಕನ್ಹಯ್ಯ ಕಾಂಗ್ರೆಸ್ ಸೇರ್ಪಡೆ ಎಂಬುದು ಸರಳ ಲೆಕ್ಕಾಚಾರದ ರಾಜಕೀಯ ನಡೆಯಾಗಿಲ್ಲ.
ಆದರೆ, ಇದೇ ಮಾತನ್ನು ಗುಜರಾತಿನ ದಲಿತ ಸಮುದಾಯದ ದನಿಯಾಗಿ ರಾಜಕಾರಣ ಆರಂಭಿಸಿದ ಜಿಗ್ನೇಶ್ ಮೆವಾನಿ ಬಗ್ಗೆ ಹೇಳಲಾಗದು. ಅಲ್ಲಿ ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಬಿಜೆಪಿಯ ಭಾರೀ ಅಲೆಯ ನಡುವೆಯೂ ಜಿಗ್ನೇಶ್ ಭರ್ಜರಿ ಜಯ ದಾಖಲಿಸಲು ಅವರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿದ್ದು ಕಾಂಗ್ರೆಸ್ ಪಕ್ಷವೇ. ಮೆವಾನಿ ವಿರುದ್ಧ ಚುನಾವಣಾ ಕಣದಲ್ಲಿ ಯಾವುದೇ ಅಭ್ಯರ್ಥಿಗಳನ್ನು ಹಾಕದೆ ಕಾಂಗ್ರೆಸ್ ಮಾಡಿದ ತಂತ್ರ ಕೂಡ ಬಿಜೆಪಿಯ ಅಬ್ಬರದ ಎದುರು ಏಕಾಂಗಿಯಾಗಿ ಹೋರಾಡಿ ಗೆಲುವು ಪಡೆಯುವುದು ಸಾಧ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಚುನಾವಣಾ ಬಳಿಕವೂ ಮೆವಾನಿ ಕಾಂಗ್ರೆಸ್ ಸೇರಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಮತ್ತೊಬ್ಬ ಗುಜರಾತ್ ಯುವ ನಾಯಕ ಹಾರ್ದಿಕ್ ಪಟೇಲ್ ಒತ್ತಾಸೆಯ ಮೇರೆಗೇ ಮೆವಾನಿ ಕಾಂಗ್ರೆಸ್ ಸೇರಲಿದ್ದಾರೆ. ಈಗಾಗಲೇ ರಾಹುಲ್ ಗಾಂಧಿಯವರು ಮೆವಾನಿಯೊಂದಿಗೆ ಪಕ್ಷ ಸೇರ್ಪಡೆ ಕುರಿತ ಮಾತುಕತೆ ಮುಗಿಸಿದ್ದಾರೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮೆವಾನಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಲಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇನ್ನು ಸದ್ಯದ ಭಾರತದ ರಾಜಕಾರಣದ ಬಹುಚರ್ಚಿತ ಯುವ ನಾಯಕರಲ್ಲಿ ಒಬ್ಬರಾದ ಚುನಾವಣಾ ಪ್ರಚಾರ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ರಾಹುಲ್ ಗಾಂಧಿ ನಡುವೆ ಕಳೆದ ಎರಡು ಮೂರು ತಿಂಗಳುಗಳಿಂದ ನಿರಂತರ ಸಭೆಗಳು ನಡೆಯುತ್ತಲೇ ಇವೆ. ಪ್ರಶಾಂತ್ ಕಿಶೋರ್ ಕೂಡ ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ಸೇರಲಿದ್ದು, ಅವರನ್ನು ಪಕ್ಷದ ಪ್ರಚಾರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರುತರ ಹೊಣೆಗಾರಿಕೆ ಇದಾಗಲಿದ್ದು, ಪ್ರಶಾಂತ್ ಅವರ ಈವರೆಗಿನ ಸೋಲರಿಯದ ಚುನಾವಣಾ ತಂತ್ರಗಾರಿಕೆಯ ಹಿನ್ನೆಲೆಯಲ್ಲಿ ಅವರ ಸೇರ್ಪಡೆ ಪಕ್ಷಕ್ಕೆ ದೊಡ್ಡ ಲಾಭ ತಂದುಕೊಡಲಿದೆ ಎನ್ನಲಾಗುತ್ತಿದೆ. ಜೊತೆಗೆ ಪ್ರಶಾಂತ್ ಕಿಶೋರ್ ಅವರ ಸೇರ್ಪಡೆಯ ವಿಷಯದಲ್ಲಿ ಜಿ23 ಗುಂಪಿನ ಹಿರಿಯ ಕಾಂಗ್ರೆಸ್ಸಿಗರಲ್ಲಿ ಹಲವರು ಸಹಮತ ಹೊಂದಿದ್ದಾರೆ. ಹಾಗಾಗಿ ಪ್ರಶಾಂತ್ ಸೇರ್ಪಡೆ ವಿಷಯ ಕೂಡ ದೆಹಲಿ ಮಟ್ಟದಲ್ಲಿ ಹೆಚ್ಚಿನ ಆಂತರಿಕ ಅಸಮಾಧಾನ ಅಥವಾ ಮುಸುಕಿನ ಗುದ್ದಾಟಕ್ಕೆ ಕಾರಣವಾಗಲಾರದು.

ಆದರೆ, ಕನ್ಹಯ್ಯ ವಿಷಯದಲ್ಲಿ ಮಾತ್ರ ಅವರು ಬಿಹಾರ ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಹೊಂದಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಉದ್ಭವಿಸಬಹುದು. ಆ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ? ಎಂಬ ತಂತ್ರಗಾರಿಕೆಯ ಮೇಲೆ ಕನ್ಹಯ್ಯ ಸೇರ್ಪಡೆಯ ವಿಷಯ ಅಂತಿಮವಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಕನ್ಹಯ್ಯ ಕೂಡ ಸಿಪಿಐ ತೊರೆದು, ಗಾಂಧಿ ಜಯಂತಿಯ ದಿನವೇ ತಮ್ಮ ಗೆಳೆಯ ಮೆವಾನಿ ಜೊತೆಯೇ ಕಾಂಗ್ರೆಸ್ ಸೇರಲಿದ್ದಾರೆ.
ಮೆವಾನಿ ಮತ್ತು ಕನ್ಹಯ್ಯ ಅವರಿಗೆ ದೇಶದ ಯುವ ನಾಯಕರಾಗಿ ಹೊಂದಿರುವ ಪ್ರಭಾವ ಮತ್ತು ಹೊಸ ರಾಜಕೀಯ ಪರಿಭಾಷೆ ಅವರನ್ನು ಕೋಮು, ಜಾತಿ, ಧರ್ಮ, ಪ್ರಾದೇಶಿಕ ಎಲ್ಲೆಗಳನ್ನು ಮೀರಿ ಜನಪ್ರಿಯಗೊಳಿಸಿದೆ. ದೇಶದ ಸದ್ಯದ ಸ್ಥಿತಿಯಲ್ಲಿ ದಮನಕಾರಿ ಆಡಳಿತ ವ್ಯವಸ್ಥೆಯ ವಿರುದ್ಧ ಸಮರ್ಥವಾಗಿ ದನಿ ಎತ್ತುವ ಮತ್ತು ಜನಸಂಘಟನೆ ಮಾಡುವ ಸಾಮರ್ಥ್ಯ ಮತ್ತು ತಿಳಿವಳಿಕೆ ಇರುವ ನಾಯಕರು ಇವರು. ಆ ಕಾರಣಕ್ಕೂ ಈ ನಾಯಕರ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಟಾನಿಕ್ ನೀಡುವುದರಲ್ಲಿ ಅನುಮಾನವಿಲ್ಲ. ಆದರೆ, ಈ ನಾಯಕರನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತದೆ? ಅವರಿಗೆ ಎಷ್ಟು ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ನೀಡುತ್ತದೆ ಎಂಬುದರ ಮೇಲೆ ಆ ಇಬ್ಬರು ನಾಯಕರ ರಾಜಕೀಯ ಬೆಳವಣಿಗೆಯೂ, ಕಾಂಗ್ರೆಸ್ ಪಕ್ಷದ ಪುನರುಜ್ಜೀವನದ ಪ್ರಯತ್ನಗಳ ಯಶಸ್ಸೂ ನಿಂತಿದೆ ಎಂಬುದನ್ನು ತಳ್ಳಿಹಾಕಲಾಗದು.