ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹೇಗಿರಬೇಕು ಅನ್ನೋದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಜನ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿದೆ. ಆಯವ್ಯಯಗಳಿಗೆ ಪೂರಕವಾಗಿ ಸಂಪನ್ಮೂಲ ಒದಗಿಸುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ ಆಗಿದೆ. ಆದರೆ ಇತ್ತಿಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿರುವ ಹಿನ್ನಲೆಯಲ್ಲಿ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದು, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಮುಂಗಾರು ಹಂಗಾಮುಗಳಲ್ಲಿ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾದರೆ, ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ. ಕೇಂದ್ರ ಸರ್ಕಾರವು ಬರ ಪರಿಹಾರದ ಮೊತ್ತವನ್ನು ತಡವಾಗಿ ನೀಡಿತು, ಆದರೂ ರಾಜ್ಯದಲ್ಲಿ ಬರದಿಂದಾಗಿ ಜನರಿಗೆ ಹೆಚ್ಚಿನ ಅನಾನುಕೂಲಗಳು ಆಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಲಾಯಿತು. NDRF ಅಡಿ ಪರಿಹಾರ ಬಿಡುಗಡೆಯಾಗುವ ಮೊದಲೇ ರಾಜ್ಯ ಸರ್ಕಾರ ಬರಗಾಲದಿಂದ ಬಾಧಿತರಾದ ಪ್ರತಿ ರೈತರಿಗೆ 2,000 ರೂಪಾಯಿವರೆಗೆ ಒಟ್ಟು 636.45 ಕೋಟಿ ಮಧ್ಯಂತರ ಪರಿಹಾರವನ್ನು ವಿತರಿಸಿತು. ಒಟ್ಟಾರೆಯಾಗಿ ಬೆಳೆ ನಷ್ಟ ಅನುಭವಿಸಿದ 38 ಲಕ್ಷದ 58 ಸಾವಿರದ 737 ರೈತರಿಗೆ 3,454.66 ಕೋಟಿ ರೂಪಾಯಿ ವಿತರಿಸಿದ್ದೇವೆ ಎಂದಿದ್ದಾರೆ.

ಬೆಳೆಹಾನಿ ಪರಿಹಾರವನ್ನು ಎನ್.ಡಿ.ಆರ್.ಎಫ್. ಅಡಿ ವಿತರಿಸಲಾಗಿದೆ ಎಂದಿರುವ ಸಿಎಂ, ಒಟ್ಟು 17.88 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಒಟ್ಟು 512.83 ಕೋಟಿ ರೂಪಾಯಿ ಜೀವನೋಪಾಯ ಪರಿಹಾರ ವಿತರಿಸಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾನು ಸ್ವತಃ ಭೇಟಿ ನೀಡಿದ್ದೇನೆ. ನಮ್ಮ ಸಚಿವರುಗಳೂ ಜಿಲ್ಲೆಗಳಲ್ಲಿದ್ದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೀವಹಾನಿ, ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ. ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮ ವಹಿಸುತ್ತಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ನಡೆಯನ್ನ ಪ್ರಸ್ತಾಪಿಸಿ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರವನ್ನ ಅಸ್ತಿರಗೊಳಿಸಲು ಯತ್ನಿಸುವುದನ್ನ ಖಂಡಿಸಿರುವ ಸಿದ್ದರಾಮಯ್ಯ, ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ ರಾಜ್ಯಗಳಿಗೆ ಹಣಕಾಸಿನ ಪಾಲನ್ನು ನೀಡಲು ಕೇಂದ್ರ ಮೀನಾಮೇಷ ಎಣಿಸಲಾಗುತ್ತಿದೆ. ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಪರಿಹಾರದ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿರುವುದು ಜನಹಿತಕ್ಕೆ ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇದನ್ನು ಮನಗಂಡು ರಾಜ್ಯಗಳ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕು. ಜನತೆಯ ತೀರ್ಪನ್ನು ಧಿಕ್ಕರಿಸಿ ನಡೆಸುವ ಹಿಂಬಾಗಿಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾಡಿನ ಮಹಾ ಜನತೆ ನೀಡಿದ ತೀರ್ಪನ್ನು ಗೌರವಿಸಬೇಕು ಎನ್ನುವ ಮೂಲಕ ಸರ್ಕಾರ ಪತನ ಮಾಡುವ ಬಿಜೆಪಿ ತಂತ್ರವನ್ನು ಖಂಡಿಸಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭೂಕುಸಿತ ಆತಂಕ ವ್ಯಕ್ತಪಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಪಶ್ಚಿಮ ಘಟ್ಟದ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ 250 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂ ಕುಸಿತ ಸಂಭವಿಸಬಹುದಾದ 1,351 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಭೂ ಕುಸಿತ ತಡೆಗಟ್ಟಲು ಭೂ ವಿಜ್ಞಾನ, ಸರ್ವೇಕ್ಷಣಾ ಸಂಸ್ಥೆ ಅಗತ್ಯ ಕ್ರಮವಹಿಸುತ್ತಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ಇನ್ನೂ ಪರೋಕ್ಷವಾಗಿ ಬಾಂಗ್ಲಾ ಗಲಭೆಯನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಮಹಾತ್ಮ ಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್, ನೆಹರೂರಂತ ಮಹನೀಯರನ್ನು ಸ್ಮರಿಸಬೇಕು. ಅವರ ಆಶಯವನ್ನು ಪಾಲಿಸಬೇಕು. ಇಲ್ಲದಿದ್ದರೆ ನೆರೆಹೊರೆಯ ದೇಶದಲ್ಲಿ ತಲೆದೋರಿರುವ ಪ್ರಕ್ಷುಬ್ಧ ಪರಿಸ್ಥಿತಿ ಇಲ್ಲಿಯೂ ಎದುರಾಗಬಹುದು. ಈ ಬಗ್ಗೆ ಎಚ್ಚರಿಕೆ ನಮ್ಮೆಲ್ಲರಲ್ಲಿ ಇರಬೇಕು ಎನ್ನುವ ಮೂಲಕ, ಸಿದ್ದರಾಮಯ್ಯ ಜನವಿರೋಧಿ ಆಡಳಿತ ಹಾಗು ಸರ್ವಾಧಿಕಾರ ಆಡಳಿತ ನಡೆಯಬಾರದು ಎನ್ನುವ ಸುಳಿವು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರವನ್ನು ಕಾರ್ಯವೈಖರಿ ಮೂಲಕವೇ ಕುಟುಕುವ ಮೂಲಕ ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಕೃಷ್ಣಮಣಿ