2002ರ ಗುಜರಾತ್ ಗಲಭೆ ಮತ್ತು 1984ರ ಸಿಖ್ ವಿರೋಧಿ ದಂಗೆಯ ತನಿಖಾ ಆಯೋಗದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ (ನಿವೃತ್ತ) ಜಿ ಟಿ ನಾನಾವತಿ (೮೬) ಅವರು ಶನಿವಾರ ಬೆಳಗ್ಗೆ ಅಹಮದಾಬಾದ್ ನಿವಾಸದಲ್ಲಿ ನಿಧನರಾಗಿದ್ದಾರೆ.
ನ್ಯಾಯಮೂರ್ತಿ ನಾನಾವತಿ ಅವರನ್ನು ಶನಿವಾರ ಸಂಜೆ 5:15 ರ ಸುಮಾರಿಗೆ ಥಾಲ್ತೇಜ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಗುಜರಾತ್ ಹೈಕೋರ್ಟ್ ವಕೀಲರ ಸಂಘ ತಿಳಿಸಿದೆ.
ಗೋಧ್ರಾ ರೈಲು ದುರಂತ ಮತ್ತು ನಂತರ ಗುಜರಾತ್‌ನಲ್ಲಿ ಸುಮಾರು 1,200 ಜನರ ಸಾವಿಗೆ ಕಾರಣವಾದ ಗಲಭೆಗಳ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ನಾನಾವತಿ ಆಯೋಗವು ಈಗಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಳಿಗೆ, ಪೊಲೀಸರಿಗೆ ಹಾಗೂ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳಕ್ಕೆ 2019 ಸಲ್ಲಿಸಿದ ಅಂತಿಮ ವರದಿಯಲ್ಲಿ ಕ್ಲೀನ್ ಚಿಟ್ ನೀಡಿತ್ತು. ಜೊತೆಗೆ ಆಯೋಗವು ತನ್ನ ವಿಚಾರಣೆಯ ಸಂದರ್ಭದಲ್ಲಿ ಗುಜರಾತ್‌ನ ಆಗಿನ ಸಿಎಂ ಮೋದಿಯವರಿಗೆ ಯಾವುದೇ ಸಮನ್ಸ್ ನೀಡಿರಲಿಲ್ಲ.
ನ್ಯಾಯಮೂರ್ತಿ ನಾನಾವತಿ ಅವರು 1958 ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. ಜುಲೈ 1979 ರಿಂದ ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. 1993 ರಲ್ಲಿ ಒರಿಸ್ಸಾ ಹೈಕೋರ್ಟ್‌ಗೆ ನಾನಾವತಿ ಅವರನ್ನು ವರ್ಗಾಯಿಸಲಾಯಿತು.
1994 ರ ಜನವರಿಯಲ್ಲಿ ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರು. ಸೆಪ್ಟೆಂಬರ್ 1994 ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡರು. ನಂತರ ಅವರು ಮಾರ್ಚ್ 1995 ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡು, 2000 ರಲ್ಲಿ ನಿವೃತ್ತರಾದರು.