ಜೈ ಭೀಮ್ ಚಿತ್ರದಲ್ಲಿನ ವಕೀಲನ ಪಾತ್ರಕ್ಕೆ ನಟ ಸೂರ್ಯನಿಗೆ ಪ್ರೇರಣೆ ನೀಡಿದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು ಅವರೊಡನೆ ಟಿಎನ್ಎನ್ ವೆಬ್ ಪತ್ರಿಕೆಯ ಸಂದರ್ಶನ.
ಟಿಎನ್ಎನ್ : ಜೈ ಭೀಮ್ ಚಿತ್ರ ನೋಡಿ ನಿಮಗೆ ಹೇಗೆನಿಸಿತು ?
ಚಂದ್ರು : ಮೊದಲ ಬಾರಿ ಚಿತ್ರ ನೋಡಿದಾಗ ನಾನೂ ಎಲ್ಲರಂತೆಯೇ ನೋಡುತ್ತಿದ್ದೆ. ಆದರೆ ವಕೀಲನ ಪಾತ್ರವನ್ನು ನೋಡುತ್ತಿದ್ದಂತೆಯೇ ನನ್ನದೇ ಹಾವಭಾವಗಳು ನೆನಪಿಗೆ ಬಂದವು. ಕೆಲವು ಸಂದರ್ಭಗಳಲ್ಲಿನ ನಟನೆ ಮತ್ತು ಸಂಭಾಷಣೆಗಳು ಹಿಂದೊಮ್ಮೆ ನನ್ನದೇ ಆಗಿದ್ದವು ಎಂದು ಭಾಸವಾಗತೊಡಗಿತ್ತು. ಈ ದೃಶ್ಯಗಳು ನನ್ನ ೩೦ ವರ್ಷಗಳ ಹಿಂದಿನ ನೆನಪುಗಳನ್ನು ಮರುಕಳಿಸಿದ್ದವು.
ಟಿಎನ್ಎನ್: ಚಿತ್ರದಲ್ಲಿ ವಕೀಲ ಚಂದ್ರು, ನ್ಯಾಯ ತನ್ನ ಕಕ್ಷಿದಾರಳ ಪರ ಇರುತ್ತದೆ ಮತ್ತು ಆಕೆಗೆ ನ್ಯಾಯ ಒದಗುತ್ತದೆ, ಆದರೆ ಅದನ್ನು ಅನಾವರಣಗೊಳಿಸಬೇಕು ಎಂಬ ದೃಢ ವಿಶ್ವಾಸದಿಂದಿರುತ್ತಾನೆ. ಈ ವಿಚಾರದಲ್ಲಿ ನಿಮ್ಮ ಸ್ವಂತ ಅನುಭವ ಏನು ?
ಚಂದ್ರು : ಸಾಮಾನ್ಯ ಸನ್ನಿವೇಶಗಳಲ್ಲಿ ಸಂತ್ರಸ್ತರು ಅಥವಾ ಪ್ರಭಾವಿತ ಜನರು, ಯಾರೂ ಹೇಳಿಕೊಡದೆ ಇದ್ದರೆ ನಡೆದ ಘಟನೆಗಳನ್ನು ನಡೆದಂತೆಯೇ ಹೇಳುತ್ತಾರೆ. ಅವರ ಕತೆಗೆ ನಿಮ್ಮದೇ ಆದ ಮಸಾಲೆ ಸೇರಿಸುತ್ತಾ ಹೋದರೆ ಅವರು ಗೊಂದಲಕ್ಕೀಡಾಗುತ್ತಾರೆ. ಅಂಥವರಿಗೆ ನೀವು ಎದುರಾದಾಗ ಎಲ್ಲರೂ ಗಮನಿಸುವಂತೆ ವರ್ತಿಸಲಾರಂಭಿಸುತ್ತಾರೆ. ಹಾಗಾಗಿ ಈ ಮಹಿಳೆ ನನ್ನ ಬಳಿಗೆ ಬಂದಾಗ ನಾನು, ನಡೆದ ಘಟನೆಯ ಬಗ್ಗೆ, ಆಕೆಯ ಗಂಡ ನಾಪತ್ತೆಯಾದುದರ ಬಗ್ಗೆ ಆಕೆ ಹೇಳಿದ್ದುದನ್ನೇ ರೆಕಾರ್ಡ್ ಮಾಡಿಕೊಂಡಿದ್ದೆ. ಅದನ್ನು ಆಧರಿಸಿಯೇ ನಾನು ವಕಾಲತ್ತು ಸಿದ್ಧಪಡಿಸಿದ್ದೆ. ನಂತರ ಆಕೆಯ ಹೇಳಿಕೆಯನ್ನು ಓದಿ ಅದನ್ನು ತಮಿಳಿಗೆ ಅನುವಾದ ಮಾಡಿಕೊಂಡು ಆಕೆಯಿಂದ ಪರಿಶೀಲನೆಗೊಳಪಡಿಸಿ ದೃಢಪಡಿಸಿಕೊಂಡೆ. ಹಾಗಾಗಿ ಆಕೆ ಸಾಕ್ಷö್ಯ ನುಡಿಯಲು ಕಟಕಟೆಗೆ ಬಂದು ನಿಂತಾಗ ತನ್ನ ಅರ್ಜಿಯಲ್ಲಿ ಏನಿತ್ತೋ ಅದನ್ನೇ ನಿಖರವಾಗಿ ಹೇಳಿದ್ದಳು, ಇದನ್ನು ಪ್ರತಿವಾದಿ ವಕೀಲರು ಒಮ್ಮೆಯೂ ವಿರೋಧಿಸಲಾಗಲಿಲ್ಲ.
ಅವಕಾಶವಂಚಿತರು ಮತ್ತು ಬಡ ಜನತೆ ನ್ಯಾಯಾಲಯಗಳಲ್ಲಿ ನ್ಯಾಯ ಗಳಿಸುವ ಸಾಧ್ಯತೆಗಳು ಕ್ಷೀಣಿಸುತ್ತಲೇ ಇವೆ. ನಾವು ವ್ಯತಿರಿಕ್ತ ವಾತಾವರಣದ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದ್ದೆವು. ನಿಮ್ಮ ಕಕ್ಷಿದಾರರು ಈ ನ್ಯಾಯಾಂಗ ಪ್ರಕ್ರಿಯೆಯ ಚಿತ್ರಹಿಂಸೆಯನ್ನು ಎಷ್ಟು ಕಾಲ ಸಹಿಸಿಕೊಂಡಿರಬಲ್ಲರು ಎಂಬ ಪ್ರಶ್ನೆಗೆ ನಾವು “ ಅವರಿಗೆ ನ್ಯಾಯ ದೊರೆಯುವವರೆಗೂ, ಹೋರಾಟ ಮುಂದುವರೆಯುತ್ತದೆ ” ಎಂದು ಉತ್ತರಿಸುತ್ತಿದ್ದೆವು. ಈ ದಿಟ್ಟ ಹೆಜ್ಜೆಯೊಂದಿಗೆ ನಾವು ಕೆಲವು ಪೂರ್ವ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆವು. ನಮ್ಮ ಇತಿಮಿತಿಗಳನ್ನು ಆರ್ಥಮಾಡಿಕೊಳ್ಳುವುದರೊಂದಿಗೇ ಕೆಲವೊಮ್ಮೆ ನಮಗೆ ಸಂಪೂರ್ಣ ತೃಪ್ತಿದಾಯಕವಲ್ಲದಿದ್ದರೂ ರಾಜಿ ಮಾಡಿಕೊಳ್ಳುವುದೂ ಅನಿವಾರ್ಯವಾಗಿತ್ತು. ಕೊನೆಯವರೆಗೂ ಹೋರಾಡುವ ದೃಢ ನಿರ್ಧಾರ ನಮ್ಮಲ್ಲಿ ಮೂಡಲು ಕಾರಣ ಎಂದರೆ, ನಾವು ವ್ಯಾಪಕ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡಿದ್ದೆವು, ಪೂರ್ಣ ತೃಪ್ತಿಕರವಾಗಿದೆ ಎಂದು ದೃಢಪಟ್ಟ ನಂತರವೇ ಮೊಕದ್ದಮೆಯನ್ನು ದಾಖಲಿಸಿದ್ದೆವು.
ಟಿಎನ್ಎನ್ : ವಾಸ್ತವಗಳ ಗ್ರಹಿಕೆಯನ್ನಾಧರಿಸಿ ಜನರು ನಿರ್ಣಯ ಕೈಗೊಳ್ಳುತ್ತಾರೆ ಅದನ್ನೇ ಸತ್ಯ ಎಂದೂ ನಂಬುತ್ತಾರೆ. ವಿಭಿನ್ನ ಸಂಗತಿಗಳನ್ನು ಸತ್ಯ ಎಂದು ಭಾವಿಸುವ ಜನರು ಸುಳ್ಳು ಹೇಳುತ್ತಿಲ್ಲ ಎಂದು ನೀವು ಭಾವಿಸಿದರೆ, ಸತ್ಯ ಎನ್ನುವುದೇ ಬಹುಸ್ತರವಾಗುವ ಸಾಧ್ಯತೆಗಳಿರುತ್ತವೆ,,,,,
ಚಂದ್ರು : ಸತ್ಯ ಎಂದಿಗೂ ಸಾಪೇಕ್ಷ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಈ ಸಾಪೇಕ್ಷತೆಯ ಕಾರಣಕ್ಕಾಗಿಯೇ ನಾವು ಸದಾ ಕಾಲವೂ ಸತ್ಯವನ್ನು ಸದೃಶಗೊಳಿಸಬೇಕು ಎಂದೇನಿಲ್ಲ. ಈ ಚಿತ್ರದಲ್ಲಿ ಸೆಂಗಣಿಯ ಪ್ರಕರಣವನ್ನೇ ಗಮನಿಸಿ. ಆಕೆಯ ಗಂಡ ಕಾಣೆಯಾಗುವುದು ಒಂದು ಸತ್ಯ. ಆದ್ದರಿಂದ ಆತನನ್ನು ಜೀವಂತವಾಗಿ ಅಥವಾ ಮೃತನಾಗಿ ವಾಪಸ್ ಕರೆತರುವುದು ನಮ್ಮ ಗುರಿಯಾಗಿತ್ತು. ಹೇಬಿಯಸ್ ಕಾರ್ಪಸ್ ಎಂದರೆ ಅಕ್ಷರಶಃ “ ಆಸಾಮಿಯನ್ನು ಹಾಜರುಪಡಿಸುವುದು ” ಎಂದರ್ಥ. ಹಾಗಾಗಿ ನಾವು ಹೈಕೋರ್ಟ್ನಲ್ಲಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ರಾಜಕಣ್ಣು ಎಂಬ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ವಿನಂತಿಸಿಕೊAಡಿದ್ದೆವು. ಆತನನ್ನು ಕಡೆಯ ಬಾರಿ ನೋಡಿದ್ದು ಪೊಲೀಸ್ ಠಾಣೆಯಲ್ಲಿ ಆದ್ದರಿಂದ ಆತನ ಇರುವಿಕೆಯ ಬಗ್ಗೆ ಅಥವಾ ಎಲ್ಲಿದ್ದಾನೆ ಎನ್ನುವುದರ ಬಗ್ಗೆ ನ್ಯಾಯಾಲಯಕ್ಕೆ ಉತ್ತರಿಸುವ ಹೊಣೆ ಪೊಲೀಸ್ ಇಲಾಖೆಯದ್ದಾಗಿತ್ತು.
ತಮ್ಮ ಘೋರಾಪರಾಧವನ್ನು ಪೊಲೀಸರು ಮುಚ್ಚಿಡಲು ಹವಣಿಸುತ್ತಿದ್ದುದರಿಂದಲೇ ಸತ್ಯವನ್ನು ಅನಾವರಣಗೊಳಿಸಬೇಕು ಎಂಬ ಸವಾಲು ಸಹ ಉದ್ಭವಿಸಿತ್ತು. ಇಂತಹ ಸನ್ನಿವೇಶಗಳಲ್ಲಿ ಸತ್ಯ ಎನ್ನುವುದು ಗ್ರಹಿಕೆಗೆ ನಿಲುಕದಂತಾಗುವುದಿಲ್ಲ ಬದಲಾಗಿ ದೋಷರಹಿತವಾಗಿರುತ್ತದೆ. ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ ನಂತರ, ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡ ಮೇಲೆ, ಪೊಲೀಸರೇ ಲಾಕಪ್ಪಿನಲ್ಲಿ ಆರೋಪಿಯ ಹತ್ಯೆ ಮಾಡಿದ್ದಾರೆ ಎಂದು ನಿರೂಪಿಸುವ ಯಾವುದೇ ದಾಖಲೆ/ಮಾಹಿತಿ ನನ್ನ ಬಳಿ ಲಭ್ಯವಿರಲಿಲ್ಲ. ಹೊಸ ಕತೆಗಳನ್ನು ಹುಟ್ಟುಹಾಕಲು ಅವರ ಬಳಿ ಎಲ್ಲ ರೀತಿಯ ಪರಿಕರಗಳೂ ಇದ್ದವು. ಹಾಗಾಗಿ ನಾವು ರಾಜಕಣ್ಣುವಿಗೆ ಸಂಬAಧಪಟ್ಟ, ಕಾಣೆಯಾಗಿದ್ದ, ಇನ್ನಿಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದೆವು.
ಅಲ್ಲಿಗೆ ನನ್ನ ವಕೀಲಿಕೆಗೆ ವಿರಾಮ ನೀಡಿ ಅಪರಾಧ ಶೋಧ ಕಾರ್ಯಕ್ಕೆ ಮುಂದಾಗಿದ್ದೆ. ದೂರದ ಕೇರಳದಲ್ಲಿ ಇನ್ನಿಬ್ಬರನ್ನು ಕಂಡ ನಂತರ ನಾವು ಅವರಿಬ್ಬರನ್ನೂ ಕರೆತಂದು ಲಾಕಪ್ನಲ್ಲಿ ನಡೆದ ಘಟನೆಗಳ ಬಗ್ಗೆ ವಿವರವಾಗಿ ಹೇಳುವಂತೆ ಮಾಡಿದೆವು. ಈ ಹಂತದಲ್ಲಿ ಮೊಕದ್ದಮೆಯ ಎರಡನೆಯ ಹಂತ ಆರಂಭವಾಗಿತ್ತು. ಈ ಅರ್ಥದಲ್ಲಿ ನೋಡಿದಾಗ ಸತ್ಯ ಗ್ರಹಿಕೆಗೆ ನಿಲುಕದಂತಾಗಿತ್ತು ಹಾಗೂ ಇಂತಹ ಪ್ರತಿಕೂಲ ಸಂದರ್ಭಗಳಲ್ಲಿ ನಾವು ಈ ಸತ್ಯಶೋಧನೆಗಾಗಿ ಹಠತೊಟ್ಟು ಮುಂದಾಗುವುದು ಅನಿವಾರ್ಯವಾಗಿತ್ತು.
ಟಿಎನ್ಎನ್ : ಓರ್ವ ವಕೀಲರು ಯಾವುದರ ವಿರುದ್ಧ ಎಚ್ಚರವಹಿಸಬೇಕು ?
ಚಂದ್ರು : ವಕೀಲಿ ವೃತ್ತಿಯಲ್ಲಿ ಪ್ರಗತಿ ಸಾಧಿಸಬೇಕೆಂದರೆ ಸಿಕ್ಸ್ ಪ್ಯಾಕ್ ದೇಹಧಾಡ್ರö್ರ್ಯತೆಯ ಅವಶ್ಯಕತೆ ಇಲ್ಲ ಆದರೆ ಆರು ಔನ್ಸ್ ಇರುವ ಮೆದುಳನ್ನು ಚುರುಕಾಗಿಟ್ಟುಕೊಂಡಿರಬೇಕು ಎಂದು ನಾನು ಯುವ ವಕೀಲರಿಗೆ ಸದಾ ಹೇಳುತ್ತಿರುತ್ತೇನೆ. ಸುಲಭ ಹಣಗಳಿಕೆಯ ಲಾಲಸೆ ಮತ್ತು ಆಮಿಷದ ವಿರುದ್ಧ ಸದಾ ಎಚ್ಚರದಿಂದಿರಬೇಕು, ಐಷಾರಾಮಿ ಜೀವನ ಶೈಲಿಯ ವಿರುದ್ಧ ಎಚ್ಚರದಿಂದಿರಬೇಕು ಮತ್ತು ಕಾನೂನು ಸಾಕ್ಷರತೆ ಅಥವಾ ಜ್ಞಾನದ ಕೊರತೆಯ ಬಗ್ಗೆ ಎಚ್ಚರದಿಂದಿರಬೇಕು. ಕಾನೂನು ವೃತ್ತಿಯಲ್ಲಿ ಯುವ ವಕೀಲರಿಗೆ ಸಾಕಷ್ಟು ಹಣ ಸಂಪಾದಿಸಲು ಅವಶ್ಯವಾದ ಕಲಿಕೆಯ ಅವಧಿ ಕೊಂಚ ದೀರ್ಘವಾದದ್ದೇ. ಹಾಗಾಗಿಯೇ ವಕೀಲರ ಕುಟುಂಬದಿAದಲೇ ಬಂದವರು ಮೊದಲ ಪೀಳಿಗೆಯ ವಕೀಲರಿಗಿಂತಲೂ ಮುಂಚೂಣಿಯಲ್ಲಿರುತ್ತಾರೆ.
ಟಿಎನ್ಎನ್ : ಜನರನ್ನು, ಕಾನೂನು ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ಯುವ ವಕೀಲರಾಗಿ ನೀವು ಯಾವ ಕ್ರಮಗಳನ್ನು ಕೈಗೊಂಡಿದ್ದಿರಿ ?
ಚಂದ್ರು : ನಾನು ವಕೀಲನಾಗುವ ಕನಸನ್ನೂ ಕಂಡವನಲ್ಲ. ಮೂಲತಃ ನಾನು ಎಡಪಂಥೀಯ ಚಳುವಳಿಯ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದೆ. ಪದವಿ ಮುಗಿಸಿದ ನಂತರ ಸಮುದಾಯ ಸೇವೆಯಲ್ಲಿ ತೊಡಗಲು ಯೋಚಿಸಿದ್ದು ಪೂರ್ಣಾವಧಿಯ ರಾಜಕೀಯ ಕಾರ್ಯಕರ್ತನಾಗಲು ಬಯಸಿದ್ದೆ. ತಮಿಳುನಾಡು ರಾಜ್ಯಾದ್ಯಂತ ಸಂಚರಿಸಿದ್ದೆ. ವಿಭಿನ್ನ ರೀತಿಯ ಜನರೊಡನೆ ಜೀವನ ನಡೆಸಿದ್ದರಿಂದ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಆಂತರಿಕ ಬಹುತ್ವದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು.
ತದನಂತರ, ನಾನು ಕಾನೂನು ಪದವಿ ವ್ಯಾಸಂಗ ಮಾಡಲು ನಿರ್ಧರಿಸಿದ್ದರೂ, ಅದು ನನ್ನ ವಿದ್ಯಾರ್ಥಿ ರಾಜಕಾರಣವನ್ನು ಮುಂದುವರೆಸುವ ಸಲುವಾಗಿಯೇ ಇತ್ತು. ಆದರೆ ನನ್ನ ವಿದ್ಯಾರ್ಥಿ ದೆಸೆಯಲ್ಲಿ, ತುರ್ತುಪರಿಸ್ಥಿತಿ (೧೯೭೫-೭೭) ಘೋಷಣೆಯಾಗಿತ್ತು. ಅಸಂಖ್ಯಾತ ಜನರು ಅವರ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾದರು. ಈ ಹಂತದಲ್ಲಿ ನಾನು ಕಾನೂನನ್ನು ಜನರ ಹಕ್ಕುಗಳನ್ನು ಪಡೆಯುವ ಒಂದು ಅಸ್ತçದಂತೆ ಬಳಸಬೇಕು ಎಂದು ನಿರ್ಧರಿಸಿದೆ.