ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಪತ್ರಕರ್ತ ನವೀನ್ ಸೂರಿಂಜೆ ಬೆಂಬಲಿಸಿದ್ದಾರೆ.
ಈ ಕುರಿತು ಸೋಮವಾರ (ಸೆಪ್ಟಂಬರ್ 4) ಹೇಳಿಕೆ ನೀಡಿರುವ ಅವರು, ಉದಯನಿಧಿ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದರೆ ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕು ಎಂದರ್ಥ. ಸನಾತನ ಧರ್ಮದ ನಿರ್ಮೂಲನೆಯೆಂದರೆ ಹಿಂದೂ ಧರ್ಮದ ಸುಧಾರಣಾವಾದವಷ್ಟೆ ಎಂದು ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿರುವ ಬಾಲ್ಯವಿವಾಹ, ಸತೀ ಪದ್ದತಿ, ಅಸ್ಪೃಶ್ಯತೆ, ಜಾತಿಯತೆಯನ್ನು ತೊಡೆದುಹಾಕುವುದೇ ಹಿಂದೂ ಸುಧಾರಣಾವಾದದ ಗುರಿಯಾಗಿತ್ತು. ಈ ರೀತಿಯ ಸುಧಾರಣಾವಾದವನ್ನು ಒಪ್ಪದಿರುವುದನ್ನು ಸನಾತನವಾದ ಎನ್ನುತ್ತಾರೆ ಎಂದು ವಿವರಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿರುವುದನ್ನು ವಿರೋಧಿಸುವಾಗ “ಉದಯನಿಧಿಯ ತಾಯಿ ಶಿವ ಭಕ್ತೆ. ಪ್ರತೀ ದಿನ ದೇವಸ್ಥಾನಕ್ಕೆ ಹೋಗುತ್ತಾರೆ” ಎಂಬ ಮಾಹಿತಿಯನ್ನು ವೈರಲ್ ಮಾಡಲಾಗುತ್ತಿದೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದರೆ ಹಿಂದೂ ಧರ್ಮವನ್ನೂ, ಹಿಂದೂ ದೇವರನ್ನೂ ನಿರ್ಮೂಲನೆ ಮಾಡಬೇಕು ಎಂದರ್ಥವಲ್ಲ ! ಶಿವ ಸನಾತನಿಯಲ್ಲ ಎಂದು ನವೀನ್ ಸೂರಿಂಜೆ ತಿಳಿಸಿದರು.
ಬ್ರಾಹ್ಮಣ್ಯದ ದೇವರುಗಳು, ಹಿಂದೂ ಧರ್ಮದಲ್ಲಿರುವ ಬ್ರಾಹ್ಮಣ ದೇವರುಗಳ ಆಚರಣೆಯನ್ನೇ ಸನಾತನ ಧರ್ಮ ಎನ್ನುವುದಾದರೆ, ದಕ್ಷಿಣ ಭಾರತದ ದೈವ ದೇವತಾರಾಧನೆಗೂ ಬ್ರಾಹ್ಮಣ ದೇವತಾರಾಧನೆಗೂ ವ್ಯತ್ಯಾಸ ಇದೆ. ಬ್ರಾಹ್ಮಣ ದೇವತಾರಾಧನೆಯೇ ಸನಾತನ ಧರ್ಮವಾದರೆ, ನಮ್ಮ ದೈವಾರಾಧನೆ ಪುರಾತನವಾದುದು. ಕರಾವಳಿಯ ಪಂಜುರ್ಲಿ, ಕೋಟಿ ಚೆನ್ನಯ್ಯ ಸೇರಿದಂತೆ ಸಾವಿರದೊಂದು ದೈವಗಳೂ ಸೇರಿದಂತೆ ಶಿವ, ಅಣ್ಣಮ್ಮ, ಸಿದ್ದಪ್ಪಾಜಿ, ಮುರುಗನ್, ಮುತ್ತಪ್ಪನ್ ದೈವಗಳೆಲ್ಲವೂ ಸನಾತನ ಧರ್ಮಕ್ಕಿಂತಲೂ ಪುರಾತನವಾದವುಗಳು. ಹಾಗಾಗಿ ಸನಾತನ ಧರ್ಮದ ನಿರ್ಮೂಲನೆಯೆಂದರೆ ಪುರಾತನ ಧರ್ಮವನ್ನು ಪ್ರೋತ್ಸಾಹಿಸುವುದು, ಹಿಂದೂ ಧರ್ಮವನ್ನು ರಕ್ಷಿಸುವುದು ಎಂದರ್ಥ ಎಂದು ಹೇಳಿದರು.



