ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಹಾಸ್ಟೆಲ್ ಆವರಣದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮತ್ತಿತರೆ ವಿದ್ಯಾರ್ಥಿನಿಯರ ಮೇಲೆ ನಡೆದ ಹಲ್ಲೆ ಮತ್ತು ನಂತರ ನಡೆದ ಹಿಂಸಾಚಾರ ಪ್ರಕರಣಗಳನ್ನು ನೋಡಿಯೂ ಮೂಕ ಪ್ರೇಕ್ಷಕರಾಗಿದ್ದ ಪೊಲೀಸರ ನಡೆ ಬಗ್ಗೆ ದೇಶಾದ್ಯಂತ ಹಲವು ಅನುಮಾನಗಳು ಮೂಡತೊಡಗಿವೆ.
ಮುಸುಕುಧಾರಿಗ ಗೂಂಡಾಗಳು ಜೆಎನ್ ಯು ಆವರಣದಲ್ಲಿ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ರಾಜಾರೋಷವಾಗಿ ಸುತ್ತಾಡುತ್ತಾ ದೌರ್ಜನ್ಯ ಎಸಗುತ್ತಿದ್ದರೂ ಅದನ್ನು ತಡೆಯಲು ದೆಹಲಿ ಪೊಲೀಸರು ಮುಂದಾಗಲಿಲ್ಲ. ಅವರು ಯಾವುದೋ ಒತ್ತಡಕ್ಕೆ ಮಣಿದು ಉದ್ದೇಶಪೂರ್ವಕವಾಗಿಯೇ ಮೂಕವೀಕ್ಷಕರಾಗಿ ನಿಂತಿದ್ದರು ಎಂದು ಜೆಎನ್ ಯು ವಿದ್ಯಾರ್ಥಿ ಸಂಘ ಮತ್ತು ಜೆಎನ್ ಯು ಬೋಧಕರ ಸಂಘಗಳು ಆರೋಪಿಸಿವೆ. ಅಂದರೆ, ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೈಯಲ್ಲಿ ಕಬ್ಬಿಣದ ರಾಡ್ ಗಳನ್ನು ಹಿಡಿದು ವಿವಿ ಆವರಣವೆಲ್ಲಾ ಸುತ್ತಾಡಿ ಎದುರಿಗೆ ಬಂದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಮತ್ತು ಅವರಿಗೆ ಬೆಂಬಲವಾಗಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಗೂಂಡಾಗಳು ಅವರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದ ಪರಿಣಾಮ 31 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಬ್ಬನೇ ಒಬ್ಬ ಆರೋಪಿಯನ್ನು ಬಂಧಿಸಲು ಮುಂದಾಗಿಲ್ಲ ಮತ್ತು ಆ ಕ್ಷಣಕ್ಕೆ ಪ್ರಕರಣ ದಾಖಲು ಮಾಡಲೂ ಹಿಂದೇಟು ಹಾಕಿದ್ದರು. ಘಟನೆಯಾದ ಮೂರು ದಿನಗಳ ನಂತರ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಹೊರ ಬಂದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ವಿರುದ್ಧವೇ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಇದು ಸಂಪೂರ್ಣ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯಡಿ ಕೆಲಸ ಮಾಡುವ ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ರೀತಿ ಕರ್ತವ್ಯಲೋಪ ಎಸಗಿದ್ದಾರೆ ಎಂಬುದಕ್ಕೆ ಇಲ್ಲಿ ಕೆಲವು ಉದಾಹರಣೆಗಳಿವೆ. ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಟೀಕೆಗಳು ಮತ್ತು ಆಕ್ರೋಶಗಳು ವ್ಯಕ್ತವಾದ ನಂತರ ನಾಲ್ಕು ಎಫ್ಐಆರ್ ಗಳನ್ನು ದಾಖಲು ಮಾಡಲಾಗಿದ್ದು, ಪ್ರಕರಣದ ತನಿಖೆ ಜವಾಬ್ದಾರಿಯನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚಿಗೆ ವರ್ಗಾವಣೆ ಮಾಡಲಾಗಿದೆ.
ಮತ್ತೊಂದು ಎಫ್ಐಆರ್ ಅನ್ನು ಜೆಎನ್ ಯು ಭದ್ರತಾ ವಿಭಾಗ ನೀಡಿದ ದೂರಿನ ಆಧಾರಲ್ಲಿ ದಾಖಲು ಮಾಡಲಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭದ್ರತಾ ಇಲಾಖೆ ಕಡೆಯಿಂದ ಗೂಂಡಾವರ್ತನೆ ಮಾಡಿದ ಗೂಂಡಾಗಳ ವಿರುದ್ಧ ಕಂಪ್ಲೇಂಟ್ ಕೊಡಿಸಿಲ್ಲ. ಬದಲಾಗಿ ಕಳೆದ ಕೆಲವು ವಾರಗಳಿಂದ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಇಳಿದ ವಿದ್ಯಾರ್ಥಿಗಳ ಗುಂಪು ವಿವಿಯ ಕಚೇರಿಗಳಿಗೆ ನುಗ್ಗಿ ಕಂಪ್ಯೂಟರ್ ಸರ್ವರ್ ರೂಂಗಳನ್ನು ಧ್ವಂಸ ಮಾಡಿದೆ ಮತ್ತು ಆನ್ ಲೈನ್ ಸೆಮಿಸ್ಟರ್ ರಿಜಿಸ್ಟ್ರೇಶನ್ ಅನ್ನು ಹಾನಿಗೊಳಿಸಿದೆ ಎಂಬ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಆದರೆ, ಈ ಎಫ್ಐಆರ್ ನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮತ್ತು ಇತರೆ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯ ವಿರುದ್ಧದ ಒಂದಂಶವೂ ದಾಖಲಾಗಿರದೇ ಇರುವುದು ಸೋಜಿಗದ ಸಂಗತಿಯಾಗಿದೆ.
ದೆಹಲಿ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಪ್ರಕಾರ ಆಡಳಿತ ಕಚೇರಿ ಬ್ಲಾಕ್ ಬಳಿ ನಿಯೋಜನೆಯಾಗಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಅವರ ತಂಡಕ್ಕೆ ಪೆರಿಯಾರ್ ಹಾಸ್ಟೆಲ್ ಸಮೀಪ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಮತ್ತು ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಲಾಗುತ್ತಿದೆ ಎಂಬ ಮಾಹಿತಿ ಬರುತ್ತದೆ. ದೂರು ನೀಡಿರುವ ಪೊಲೀಸರ ಪ್ರಕಾರ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ 40-50 ಜನರ ತಂಡ ಮುಖಕ್ಕೆ ಮಾಸ್ಕ್ ಧರಿಸಿ ಬಡಿಗೆಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿತ್ತು. ಪೊಲೀಸರು ಅಲ್ಲಿಗೆ ಹೋಗುತ್ತಿದ್ದಂತೆಯೇ ಆ ತಂಡ ಅಲ್ಲಿಂದ ಪರಾರಿಯಾಗಿದೆ.
ಇದೇ ವೇಳೆ ಜೆಎನ್ ಯು ಆಡಳಿತ ಮಂಡಳಿ ಸದಸ್ಯರು ಪೊಲೀಸರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಮನವಿ ಮಾಡುತ್ತಾಅರೆ. ಜೆಎನ್ ಯು ಮಂಡಳಿಯ ಈ ಮನವಿ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ಎಫ್ಐಆರ್ ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಸಂಜೆ 7 ಗಂಟೆ ಸುಮಾರಿಗೆ ಸಾಬರಮತಿ ಹಾಸ್ಟೆಲ್ ಗೆ ನುಗ್ಗಿದ ದಾಳಿಕೋರರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ವಿದ್ಯಾರ್ಥಿಗಳ ಕೊಠಡಿಗಳಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟೇ ಮನವಿ ಮಾಡಿದರು 50-60 ಮಂದಿ ಇದ್ದ ದಾಳಿಕೋರರ ತಂಡವು ವಿದ್ಯಾರ್ಥಿಗಳ ಮೇಲೆ ಬಡಿಗೆಗಳಿಂದ ಹಲ್ಲೆ ಮಾಡುವುದನ್ನು ನಿಲ್ಲಿಸಲೇ ಇಲ್ಲ. ಆ ತಂಡ ಹಿಂಸಾಚಾರವನ್ನು ಮುಂದುವರಿಸುತ್ತಲೇ ಇತ್ತು ಎಂದು ಪೊಲೀಸ್ ಎಫ್ಐಆರ್ ನಲ್ಲಿ ಗಿಳಿಪಾಠ ಒಪ್ಪಿಸುವರ ರೀತಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಹಾಗಾದರೆ ದೆಹಲಿ ಪೊಲೀಸರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡುವರೇ?
ಈ ಹಿಂಸಾಚಾರ ಮತ್ತು ರೌಡಿಗಳ ದುಂಡಾವರ್ತನೆ ವಿಚಾರದಲ್ಲಿ ಪೊಲೀಸರು ನೀಡಿದ ಪ್ರತಿಕ್ರಿಯೆಯ ನಂತರ ಇದೇ ಪೊಲೀಸರು ಸಾರ್ವಜನಿಕ ವಲಯದಲ್ಲಿ ಮೂಡಿ ಬಂದಿರುವ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ನೀಡುವರೇ?
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲೇ ವ್ಯತಿರಿಕ್ತ ಹೇಳಿಕೆಗಳು ದಾಖಲಾಗಿವೆ. ರೌಡಿ ಪಡೆ ನಡೆಸಿದ ಹಿಂಸಾಚಾರದ ವೇಳೆ ಪೊಲೀಸರು ಎಷ್ಟೇ ಮನವಿ ಮಾಡಿದರೂ ಹಿಂಸಾಚಾರ ಮುಂದುವರಿದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಆ ಹಿಂಸಾಚಾರವನ್ನು ತಡೆಯಲು ಏಕೆ ಮುಂದಾಗಲಿಲ್ಲ? ಏಕೆ ಅಂತಹ ಹೀನಕೃತ್ಯ ಎಸಗಿದ ಪಡೆಯ ಮೇಲೆ ದಾಳಿ ನಡೆಸಲಿಲ್ಲ?
ದೆಹಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್.ರಾಂಧವ ಅವರ ಪ್ರಕಾರ, ಅಂದು ಸಂಜೆ 7.45 ರ ವೇಳೆಗೆ ಜೆಎನ್ ಯು ಆಡಳಿತ ಕಚೇರಿಯ ಅಧಿಕಾರಿಗಳು ಫೋನ್ ಮಾಡಿ ಹಿಂಸಾಚಾರ ನಡೆಯುತ್ತಿದೆ. ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು. ನಾವು ಸಾಮಾನ್ಯವಾಗಿ ಆಡಳಿತ ಕಚೇರಿ ಇರುವ ಕಟ್ಟಡದ ಬಳಿ ಪೊಲೀಸ್ ಭದ್ರತಾ ಪಡೆಯನ್ನು ನಿಯೋಜಿಸುತ್ತೇವೆ. ಆಡಳಿತ ಕಚೇರಿ ಅಧಿಕಾರಿಗಳು ಕರೆ ಮಾಡಿದ ತಕ್ಷಣ ನಾವು ಪರಿಸ್ಥಿತಿಯನ್ನು ತಹಬದಿಗೆ ತಂದೆವು. ಈ ಕುರಿತು ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಎಫ್ಐಆರ್ ನಲ್ಲಿ ಪೊಲೀಸ್ ಅಧಿಕಾರಿ ಹೇಳಿರುವುದಕ್ಕೂ, ರಾಂಧವ ನೀಡಿರುವ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ. ಜೆಎನ್ ಯು ಆಡಳಿತ ಮಂಡಳಿಯ ಅಧಿಕಾರಿಗಳು ಮಧ್ಯಾಹ್ನ 3.45 ಕ್ಕೆ ಕರೆ ಮಾಡಿ ಮುಸುಕುಧಾರಿಗಳು ವಿವಿಯೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣ ಮಾಡುವಂತೆ ಮನವಿ ಮಾಡಿದ್ದರು ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ. ಆದರೆ, ವಾಸ್ತವವಾಗಿ ಘಟನೆ ನಡೆದಿರುವುದು ಸಂಜೆ 6 ರಿಂದ 9 ಗಂಟೆಯ ವೇಳೆಯಲ್ಲಿ. ಮಧ್ಯಾಹ್ನವೇ ಈ ಬಗ್ಗೆ ಮಾಹಿತಿ ಪಡೆದರೂ ಪೊಲೀಸರು ಏನೂ ಕ್ರಮ ಕೈಗೊಳ್ಳದೇ, ಮುಂಜಾಗ್ರತೆ ವಹಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆಡಳಿತ ಮಂಡಳಿ ಕಚೇರಿ ಬಳಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳು ಮಧ್ಯಾಹ್ನವೇ ಈ ಮುಸುಕುಧಾರಿ ತಂಡವನ್ನು ಎರಡು ಬಾರಿ ನೋಡಿದ್ದಾರೆ. ಮಧ್ಯಾಹ್ನ 3.45 ರ ವೇಳೆಗೆ ಪೆರಿಯಾರ್ ಹಾಸ್ಟೆಲ್ ಬಳಿ ಮತ್ತು ಸಂಜೆ 7 ರ ವೇಳೆಗೆ ಸಾಬರಮತಿ ಹಾಸ್ಟೆಲ್ ಬಳಿ ನೋಡಿದ್ದಾರೆ. ಆಗಲೇ ಈ ಗುಂಪನ್ನು ಹೊಡೆದೋಡಿಸಬಹುದಿತ್ತು ಅಥವಾ ತಕ್ಷಣವೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ಗುಂಪನ್ನು ಚದುರಿಲು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಹೊಣೆಗೇಡಿ ಪೊಲೀಸರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿದ್ದು ರಾತ್ರಿ 8 ಗಂಟೆಯ ನಂತರ. ಅಷ್ಟರಲ್ಲಾಗಲೇ ಮುಸುಕುಧಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಂತರ.
ಈ ಬಗ್ಗೆ ದಾಖಲಾಗಿರುವ ಎಫ್ಐಆರ್ ನಲ್ಲಿ ಲೋಪವಾಗಿದೆ ಎಂಬುದನ್ನು ಸೌತ್-ವೆಸ್ಟ್ ದೆಹಲಿ ಉಪಪೊಲೀಸ್ ಆಯುಕ್ತ ದೇವೇಂದ್ರ ಆರ್ಯ ಒಪ್ಪಿಕೊಂಡಿದ್ದಾರೆ. ನಮಗೆ ಹಿಂಸಾಚಾರವನ್ನು ನಿಯಂತ್ರಣ ಮಾಡಲು ಅನುಮತಿ ಸಿಕ್ಕಿದ್ದೇ ರಾತ್ರಿ 7.45 ರ ವೇಳೆಗೆ. ಇದಾದ ಕಾಲು ಗಂಟೆಯಲ್ಲಿ ಅಂದರೆ 8 ಗಂಟೆ ವೇಳೆಗೆ ನಮ್ಮ ಸಿಬ್ಬಂದಿ ಕ್ಯಾಂಪಸ್ ಪ್ರವೇಶಿಸಿದೆ. ಈಗಾಗಲೇ ಎಫ್ಐಆರ್ ದಾಖಲಾಗಿದೆ. ಅದನ್ನು ತಿದ್ದುಪಡಿ ಮಾಡಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ದಾಖಲಾಗಿರುವ ಅಧಿಕೃತ ಎಫ್ಐಆರ್ ಗೆ (ರಾತ್ರಿ 7.45) ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ ಅವರು.
ವಿಶ್ವವಿದ್ಯಾಲಯದ ಸಮುದಾಯದಿಂದ ಗಲಭೆಯನ್ನು ನಿಯಂತ್ರಿಸುವಂತೆ ಪದೇಪದೆ ಮನವಿಗಳು ಬಂದಿದ್ದರೂ ಮೇಲಧಿಕಾರಿಗಳಿಂದ ಅನುಮತಿ ಬರುವವರೆಗೆ ನಾವು ಏನೂ ಮಾಡುವಂತಿರಲಿಲ್ಲ ಎನ್ನುತ್ತಾರೆ ಈ ಅಧಿಕಾರಿ. ಹಾಗಾದರೆ, ಪೊಲೀಸ್ ಅಧಿಕಾರಿಗಳು ಗಲಭೆ ನಡೆಯುವವರೆಗೆ ಕಾದು ನೋಡುವ ತಂತ್ರಕ್ಕೆ ಶರಣಾದರೆ? ಎಂಬ ಮತ್ತೊಂದು ಪ್ರಶ್ನೆ ಮೂಡುತ್ತಿದೆ.
ಹಾಗಾದರೆ, ಸಿಎಎ ವಿರುದ್ಧ ಪ್ರತಿಭಟನೆಗಿಳಿದಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ದೆಹಲಿ ಪೊಲೀಸರು ಏಕಾಏಕಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್ ನೊಳಗೆ ನುಗ್ಗಿ ಸಿಕ್ಕ ಸಿಕ್ಕ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರಲ್ಲಾ, ಅದಕ್ಕೂ ಅನುಮತಿ ಪಡೆದುಕೊಂಡಿದ್ದರೇ? ಈ ಮೂಲಕ ಪೊಲೀಸರು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯನ್ನು ನಿಯಂತ್ರಿಸಲು ಯಾವುದೇ ಪೂರ್ವಾನುಮತಿ ಪಡೆಯುವುದಿಲ್ಲ, ಸಂಘಪರಿವಾರ ಬೆಂಬಲಿತ ರೌಡಿ ಪಡೆ ಗಲಭೆ ಸೃಷ್ಟಿಸುವಾಗ ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತು ಅನುಮತಿಗಾಗಿ ಕಾಯುವ ದೆಹಲಿ ಪೊಲೀಸರು ಈ ವಿಚಾರದಲ್ಲಿ ಪಕ್ಷಪಾತಿ ನಿಲುವನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಕೃಪೆ: ದಿ ವೈರ್