ವರ್ಷಾರಂಭದಲ್ಲಿ JNUವಿನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಮಲಯಾಳಂ ಸಿನಿಮಾ ‘ವರ್ತಮಾನಂ’ಗೆ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿದೆ.
ಪ್ರಶಸ್ತಿ ವಿಜೇತೆ ನಟಿ ಪಾರ್ವತಿ ತಿರುವೋತ್ ನಟಿಸಿರುವ, ಸಿದ್ದಾರ್ಥ್ ಶಿವ ನಿರ್ದೇಶಿಸಿರುವ ಈ ಸಿನಿಮಾ ಕೇರಳದ ಮಹಿಳೆಯೊಬ್ಬರು JNU ಗೆ ಓದು ಹೋಗುವ ಕಥೆಯನ್ನು ಹೊಂದಿದೆ. ಆರ್ಯದನ್ ಶೌಕತ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು ಸಂಭಾಷಣೆಯನ್ನೂ ಬರೆದಿದ್ದಾರೆ.
ಸೆನ್ಸಾರ್ ಮಂಡಳಿ ಸಿನಿಮಾದ ಅನುಮತಿ ನಿರಾಕರಣೆಗೆ ಯಾವುದೇ ಕಾರಣ ನೀಡಿಲ್ಲ ಎನ್ನುವ ಅವರು ಸಿನಿಮಾವನ್ನು ಮುಂಬೈಯ ಸೆನ್ಸಾರ್ ಮಂಡಳಿಯ ರಿವೈಸಿಂಗ್ ಕಮಿಟಿಯ ಮುಂದೆ ಪ್ರಸ್ತುತ ಪಡಿಸಲಾಗುವುದು ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಲವಾರು ತಿಂಗಳುಗಳ ಅಧ್ಯಯನ ಮತ್ತು ಪರಿಶೋಧನೆಯ ಬಳಿಕ ನಿರ್ಮಿಸಿದ ಸಿನಿಮಾ ಇದಾಗಿದ್ದು JNUವಿನ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಅಭ್ಯಸಿಸಲು ಹಲವು ದಿನಗಳನ್ನು ಕಾಲೇಜಿನ ಕ್ಯಾಂಪಸ್ಸಿನಲ್ಲಿ ಕಳೆದಿದ್ದೇನೆ ಎನ್ನುತ್ತಾರೆ ಅವರು.
“ಡಿಸೆಂಬರ್ 31ಕ್ಕೂ ಮುನ್ನ ಸೆನ್ಸಾರ್ ಮಂಡಳಿಯ ಅನುಮತಿ ದೊರಕದಿದ್ದರೆ ನಾವು ಸಿನಿಮಾವನ್ನು ಯಾವ ಪ್ರಶಸ್ತಿಗೂ ಕಳುಹಿಸಲಾಗುವುದಿಲ್ಲ” ಎನ್ನುತ್ತಾರೆ ಶೌಕತ್. ರಾಜಕೀಯ ಕಾರಣಗಳಿಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದೂ ಅವರು ಸಂಶಯಿಸುತ್ತಾರೆ.
ಸೆನ್ಸಾರ್ ಮಂಡಳಿಯ ಸದಸ್ಯರಾಗಿರುವ ವಿ ಸಂದೀಪ್ ಕುಮಾರ್ ಅವರು ಶೌಕತ್ ಅವರು ಸಿನಿಮಾವನ್ನು ನಿರ್ಮಿಸಿರುವುದರಿಂದ ಸಿನಿಮಾಗೆ ಅನುಮತಿ ನಿರಾಕರಿಸಲಾಗಿದೆ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದರು.
“ಸೆನ್ಸಾರ್ ಮಂಡಳಿಯ ಸದಸ್ಯನಾಗಿ ಸಿನಿಮಾ ವೀಕ್ಷಿಸಿದ್ದೆ. ಸಿನಿಮಾದ ವಸ್ತು JNUವಿನಲ್ಲಿ ಮುಸ್ಲಿಮರಿಗೆ ಮತ್ತು ದಲಿತರಿಗೆ ನೀಡಲಾದ ಕಿರುಕುಳವಾಗಿತ್ತು. ಅದಕ್ಕಾಗಿಯೇ ನಾನು ವಿರೋಧಿಸಿದೆ. ಯಾಕೆಂದರೆ ಆರ್ಯದನ್ ಶೌಕತ್ ಈ ಚಿತ್ರದ ನಿರ್ಮಾಕರು ಮತ್ತು ಸಂಭಾಷಣೆಗಾರರು. ಖಂಡಿತವಾಗಿಯೂ ಸಿನಿಮಾ ದೇಶವಿರೋಧಿ ಥೀಮ್ನ್ನು ಹೊಂದಿತ್ತು” ಎಂದು ಟ್ವೀಟ್ ಮಾಡಿ ಆನಂತರ ಡಿಲೀಟ್ ಮಾಡಿದ್ದರು.
ಈ ವರ್ಷದ ಜನವರಿಯಲ್ಲಿ ಮುಸುಕುಧಾರಿ ವ್ಯಕ್ತಿಗಳು JNU ಪ್ರವೇಶಿಸಿ ಶುಲ್ಕ ಹೆಚ್ಚಳವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನಡೆಸುತ್ತಿದ್ದ ಪ್ರತಿಭಟನೆಯ ಮೇಲೆ ದಾಳಿ ಮಾಡಿದ್ದರು. ಪೊಲೀಸರು ನಿಷ್ಕ್ರಿಯರಾಗಿ ದಾಳಿಕೋರರನ್ನು ಬೆಂಬಲಿಸಿದ್ದರು. ಇಡೀ ಘಟನೆಯು ವಿಶ್ವಾದ್ಯಂತ ಖಂಡನೆಗೆ ಒಳಗಾಗಿತ್ತು.
ಈ ಬಗ್ಗೆ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಶೌಕತ್ “ವಿದ್ಯಾರ್ಥಿಗಳಿಗಾದ ಕಿರುಕುಳದ ಬಗ್ಗೆ ಸಿನಿಮಾ ನಿರ್ಮಿಸಿದರೆ ಅದು ದೇಶ ವಿರೋಧಿ ಹೇಗಾಗುತ್ತದೆ? ನಾವಿನ್ನೂ ಜನತಂತ್ರದ, ಜಾತ್ಯಾತೀತ, ಸಮಾಜವಾದಿ ಭಾರತದಲ್ಲಿ ಬದುಕುತ್ತಿದ್ದೇವೆ. ಸ್ಕ್ರಿಪ್ಟ್ ರೈಟರ್ ಯಾರು ಅನ್ನುವುದರ ಮೇಲೆ ಸೆನ್ಸಾರ್ ಮಂಡಳಿಯ ಅನುಮತಿ ನಿರ್ಧಾರವಾಗಬೇಕೇ? ಸಾಂಸ್ಕೃತಿಕ ವಲಯದಲ್ಲಿನ ಅಘೋಷಿತ ತುರ್ತುಪರಿಸ್ಥಿತಿ ಯಾವ ಕಾರಣಕ್ಕೂ ಸ್ವೀಕಾರಾರ್ಹ ಅಲ್ಲ” ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ಇಂಡಸ್ಟ್ರಿಯಿಂದ ಬಂದಿರುವ ಸೆನ್ಸಾರ್ ಮಂಡಳಿಯ ಇಬ್ಬರು ಸದಸ್ಯರು ಸಿನಿಮಾದ ಪರ ಇದ್ದರೆ, ರಾಜಕೀಯವಾಗಿ ನಿಯುಕ್ತರಾಗಿರುವ ಉಳಿದಿಬ್ಬರು ಚಿತ್ರಕ್ಕೆ ಅನುಮತಿ ನೀಡುವಲ್ಲಿ ವಿರೋಧ ಮಾಡಿದರು ಎಂದು ಸಿನಿಮಾ ಮೂಲಗಳು PTIಗೆ ತಿಳಿಸಿದ್ದಾರೆ.