ಬೆಂಗಳೂರು: ನಗರದ ಪಬ್‌ನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ(Jnanabharathi Police Station) ದೂರು, ಪ್ರತಿ ದೂರು ದಾಖಲಾಗಿದೆ.

ಬೆಂಗಳೂರಿನ ನಾಗರಬಾವಿ ರಸ್ತೆಯಲ್ಲಿರುವ ಸೈಕಲ್ ಗ್ಯಾಪ್ ರೆಸ್ಟೊ ಬಾರ್ & ಪಬ್‌ನಲ್ಲಿ ನನ್ನೆ ತಡರಾತ್ರಿ 12.30ರ ಸುಮಾರಿಗೆ ಉಮೇಶ್ ಮತ್ತು ಹೇಮಂತ್ ಎನ್ನುವವರ ನಡುವೆ ಗಲಾಟೆ ನಡೆದಿದೆ. ಮೊದಲು ಉಮೇಶ್ ಎನ್ನುವಾತ ಪಬ್‌ಗೆ ಬಂದ ಹುಡುಗಿಯರ ಫೋನ್ ನಂಬರ್ ಕೇಳಿದ್ದಾನೆ. ಈ ವೇಳೆ ನಂಬರ್ ನೀಡಲು ಯುವತಿಯರು ನಿರಾಕರಿಸಿದ್ದಕ್ಕೆ ಅವರ ಜೊತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ.

ಉಮೇಶ್ ವರ್ತನೆ ಬಗ್ಗೆ ಹೇಮಂತ್ ಪಬ್ ಸಿಬ್ಬಂದಿಗೆ ತಿಳಿಸಿದ್ದು, ನಂತರ ಉಮೇಶ್ ಟೇಬಲ್‌ಅನ್ನು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಉಮೇಶ್ ಪಾರ್ಟಿ ಮುಗಿದು ಹೊರ ಬರುತ್ತಿದ್ದಂತೆ ಹೇಮಂತ್‌ಗೆ ಬೈದಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಹೇಮಂತ್, ಉಮೇಶ್ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಉಮೇಶ್ ಕಡೆಯ ಮತ್ತೊಂದಿಷ್ಟು ಜನ ಹುಡುಗರು ಬಂದು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಉಮೇಶ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹೇಮಂತ್ ವಿರುದ್ಧ ಹಲ್ಲೆ ದೂರು ದಾಖಲಿಸಿದ್ದು, ಉಮೇಶ್ ವರ್ತನೆ ವಿರುದ್ಧ ಹೇಮಂತ್ ಜೊತೆಗಿದ್ದ ಯುವತಿ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಕಡೆಯವರು ನೀಡಿರುವ ದೂರು ಪಡೆದಿರುವ ಪೊಲೀಸರು ಘಟನೆ ಬಗ್ಗೆ ಪ್ರತ್ಯೇಕವಾಗಿ ಎರಡು ಕೇಸ್ ದಾಖಲಿಸಿದ್ದಾರೆ.











