ಬೆಂಗಳೂರು: ರಾಜ್ಯ ಸರ್ಕಾರದ ‘ಬಿಡದಿ ಟೌನ್‌ಶಿಪ್’ ಯೋಜನೆ ವಿರೋಧಿಸಿ ಜೆಡಿಎಸ್ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ಬದಲಾವಣೆ ಮಾಡಲಾಗಿದೆ.ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಯಾವೆಲ್ಲ ರಸ್ತೆಗಳಲ್ಲಿ ಬದಲಾವಣೆ?
ಮೈಸೂರು ಬ್ಯಾಂಕ್ ವೃತ್ತ:
ಕೆ.ಜಿ. ರಸ್ತೆಯಿಂದ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ತೆರಳುವ ವಾಹನಗಳು ಬಲತಿರುವು ಪಡೆದು ಪ್ಯಾಲೇಸ್ ರಸ್ತೆ–ಮಹಾರಾಣಿ ಅಂಡರ್‌ಪಾಸ್ ಮಾರ್ಗ ಬಳಸಬೇಕು.
ಫ್ರೀಡಂ ಪಾರ್ಕ್ ಜಂಕ್ಷನ್:
ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಹೋಗುವ ಹಾಗೂ ಬರುವ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಖೋಡೆ ಜಂಕ್ಷನ್:
ಖೋಡೆ ಜಂಕ್ಷನ್‌ನಿಂದ ಕೆ.ಆರ್. ಸರ್ಕಲ್ ಕಡೆಗೆ ತೆರಳುವ ವಾಹನ ಸವಾರರು ಸಂಚಾರ ದಟ್ಟಣೆ ತಪ್ಪಿಸಲು ಹಳೆ ಜೆಡಿಎಸ್ ಕಚೇರಿ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.
ಸುಬ್ಬಣ್ಣ ಜಂಕ್ಷನ್–ಎಂ.ಟಿ.ಆರ್ ಜಂಕ್ಷನ್:
ಸದ್ಯ ಏಕಮುಖ ಸಂಚಾರವಿರುವ ಈ ರಸ್ತೆಯನ್ನು ಪ್ರತಿಭಟನೆಯ ದಿನ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯಾಗಿ ಪರಿವರ್ತಿಸಲಾಗುತ್ತದೆ. ಗಾಂಧಿನಗರ ಕಡೆಗೆ ತೆರಳುವ ವಾಹನಗಳು ಈ ಮಾರ್ಗ ಬಳಸಬಹುದು.

ಈ ರಸ್ತೆಗಳಲ್ಲಿ ಪಾರ್ಕಿಂಗ್ ಇಲ್ಲ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ ಯಾವುದೇ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
- ವೈ. ರಾಮಚಂದ್ರ ರಸ್ತೆ
- ಕಾಳಿದಾಸ ರಸ್ತೆ
- ಪ್ಯಾಲೇಸ್ ರಸ್ತೆ
- ಕೆ.ಜಿ. ರಸ್ತೆ
ಮೆಜೆಸ್ಟಿಕ್, ಗಾಂಧಿನಗರ, ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಹೃದಯಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.





