ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ‘ಅಗ್ನಿಪರೀಕ್ಷೆ’ ಹೊಸ ಕುತೂಹಲ ಮೂಡಿಸಿದೆ. ಈ ಬಾರಿ ವಿಶೇಷವಾಗಿ ಜನಸಾಮಾನ್ಯರಿಗೂ ದೊಡ್ಮನೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆ ಪ್ರಕ್ರಿಯೆ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ. ಸಾಮಾನ್ಯವಾಗಿ ಬಿಗ್‌ಬಾಸ್ ಮನೆಗೆ ಸೆಲೆಬ್ರಿಟಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಚಿತ ವ್ಯಕ್ತಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ ಸೀಸನ್ 13ರಲ್ಲಿ ಕಾಮನ್‌ಮ್ಯಾನ್‌ಗೂ ಅವಕಾಶ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಆಸಕ್ತರಿಂದ ವಿಡಿಯೊ ಮತ್ತು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಧಿಕೃತ ಆಡಿಷನ್ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿ ಕಲರ್ಸ್ ಕನ್ನಡ ತಿಳಿಸಿತ್ತು.
ಆಡಿಷನ್ ಪ್ರಕ್ರಿಯೆಯ ಮೂಲಕ ಆಯ್ಕೆಯಾದವರ ಪೈಕಿ ಸುಮಾರು 60 ಮಂದಿಯನ್ನು ‘ಅಗ್ನಿಪರೀಕ್ಷೆ’ ವೇದಿಕೆಗೆ ಕರೆತರಲಾಗಿದೆ. ಆದರೆ ಈ 60 ಮಂದಿಗೂ ನೇರವಾಗಿ ಬಿಗ್‌ಬಾಸ್ ಮನೆ ಪ್ರವೇಶ ಸಿಗುವುದಿಲ್ಲ. ವೇದಿಕೆಯಲ್ಲಿ ವಿವಿಧ ಸವಾಲುಗಳನ್ನು ಎದುರಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು.ಸ್ಪರ್ಧಿಗಳ ಆಟದ ಕೌಶಲ್ಯ, ವ್ಯಕ್ತಿತ್ವ, ಸಮಯಪ್ರಜ್ಞೆ, ಚಾಕಚಕ್ಯತೆ ಹಾಗೂ ಸವಾಲು ಎದುರಿಸುವ ಸಾಮರ್ಥ್ಯವನ್ನು ಆಧರಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತಿದೆ.

‘ಅಗ್ನಿಪರೀಕ್ಷೆ’ಯಲ್ಲಿ ಸ್ಪರ್ಧಿಗಳ ಆಯ್ಕೆಯ ಜವಾಬ್ದಾರಿ ಮಾಜಿ ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ, ಶ್ರುತಿ, ಸಂಗೀತಾ ಶೃಂಗೇರಿ ಮತ್ತು ಚಂದನ್ ಶೆಟ್ಟಿ ಅವರ ಮೇಲಿದೆ. ಈ ನಾಲ್ವರು ತೀರ್ಪುಗಾರರಾಗಿ ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಕಾರ್ಯಕ್ರಮವನ್ನು ನಿರಂಜನ್ ದೇಶಪಾಂಡೆ ನಿರೂಪಿಸುತ್ತಿದ್ದಾರೆ.ಈ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ವಿವಿಧ ಕಠಿಣ ಟಾಸ್ಕ್‌ಗಳನ್ನು ನೀಡಲಾಗುತ್ತಿದ್ದು, ತಮ್ಮದೇ ಆದ ರೀತಿಯಲ್ಲಿ ಗಮನ ಸೆಳೆಯುವ ಅವಕಾಶವೂ ಸಿಗುತ್ತಿದೆ.

ಅಗ್ನಿಪರೀಕ್ಷೆಯ ಮೊದಲ ಹಂತದಲ್ಲಿ ಚರಣ್ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ. ಪೂರ್ಣಿಮಾ ಹಾಗೂ ಮಾಡರ್ನ್ ಕವಿ ಮಂಜ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ದೀಕ್ಷಾ ಶೆಟ್ಟಿ ಮತ್ತು ಇಶಾ ಅವರನ್ನು ಸದ್ಯ ‘ಹೋಲ್ಡ್’ನಲ್ಲಿ ಇರಿಸಲಾಗಿದೆ.ಇದೇ ವೇಳೆ 72 ವರ್ಷದ ರತ್ನ ಹಾಗೂ 20 ವರ್ಷದ ಕುಮಾರಿ ಅವರಂತಹ ವಿಭಿನ್ನ ವಯೋಮಾನದ ಸ್ಪರ್ಧಿಗಳ ಆಯ್ಕೆಯೂ ಗಮನ ಸೆಳೆದಿದೆ. ಇದರಿಂದ ಈ ಬಾರಿ ಬಿಗ್‌ಬಾಸ್ ಸಾಮಾನ್ಯ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡುತ್ತಿದೆ ಎಂಬ ಚರ್ಚೆ ಆರಂಭವಾಗಿದೆ.

ಒಂದೆಡೆ ಸಾಮಾನ್ಯ ಜನರಿಗೂ ಬಿಗ್‌ಬಾಸ್ ಮನೆ ಪ್ರವೇಶದ ಅವಕಾಶ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ‘ಅಗ್ನಿಪರೀಕ್ಷೆ’ಯ ಆಯ್ಕೆ ಪ್ರಕ್ರಿಯೆ ಕುರಿತು ಕೆಲ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು ಸ್ಪರ್ಧಿಗಳಿಗೆ ವೇದಿಕೆಯಲ್ಲಿ ನೀಡಲಾಗುತ್ತಿರುವ ವರ್ತನೆ ಮತ್ತು ತೀರ್ಪುಗಾರರ ಮೌಲ್ಯಮಾಪನದ ರೀತಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ‘ಕಾಮನ್‌ಮ್ಯಾನ್’ಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದ್ದರೂ, ಕೆಲ ಸ್ಪರ್ಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಇನ್‌ಫ್ಲುಯೆನ್ಸರ್‌ಗಳಾಗಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.‘ಅಗ್ನಿಪರೀಕ್ಷೆ’ಯಲ್ಲಿ ಇನ್ನೂ ಹಲವು ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ಯಾರು ಬಿಗ್‌ಬಾಸ್ ಮನೆ ಪ್ರವೇಶಿಸುತ್ತಾರೆ, ಯಾರ ಕನಸು ಇಲ್ಲಿಯೇ ಅಂತ್ಯವಾಗಲಿದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.





