ಹಾಸನ ಜಿಲ್ಲೆಯ ಅರಕಲಗೂಡು ಹಾಗು ಅರಸೀಕೆರೆ ಗೊಂದಲದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದರು. ಅರಕಲಗೂಡಿನ ಶಾಸಕ ಎ.ಟಿ ರಾಮಸ್ವಾಮಿ ಹಾಗು ಅರಸೀಕೆರೆಯಲ್ಲಿ ಶಿವಲಿಂಗೇಗೌಡ ಕಳೆದ 2 ವರ್ಷಗಳಿಂದ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗಾಗಲೇ ಅರಕಲಗೂಡಿನಲ್ಲಿ ನಾವು ಎ ಮಂಜು ಜೊತೆಗೆ ಚರ್ಚೆ ಮಾಡಿದ್ದೇವೆ. ಅವರಿಗೆ ಟಿಕೆಟ್ ಕ್ಲಿಯರ್ ಮಾಡುತ್ತೇವೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಎ ಮಂಜು ಕೂಡ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಾಗು ರೇವಣ್ಣ ಹಾಗು ಕುಮಾರಸ್ವಾಮಿಗೆ ನಾನು ಆಭಾರಿ ಆಗಿರುತ್ತೇನೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಅರಕಲಗೂಡು ಹಾಲಿ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಜೆಡಿಎಸ್ ತನ್ನ ಮನೆಗೆ ತಾನೇ ಬೆಂಕಿ ಹಾಕಿಕೊಂಡಿದೆ. ಮುಂದಿನ ದಿನಗಳಲ್ಲಿ ಹೇಗೆ ಸುಡಲಿದೆ ಎನ್ನುವುದನ್ನು ಕಾದು ನೋಡಿ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಸೇರುವ ತಯಾರಿ ಮಾಡಿಕೊಂಡು ಕೋಪವೇಕೆ..?
ಶಾಸಕ ಎ.ಟಿ ರಾಮಸ್ವಾಮಿ ಈಗಾಗಲೇ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಿಂದಲೂ ಆಹ್ವಾನ ಬಂದಿದೆ ಎನ್ನುವ ಮಾಹಿತಿ ಇದೆ. ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಎ.ಟಿ ರಾಮಸ್ವಾಮಿ, ಹತ್ತಾರು ಸಭೆ ಸಮಾರಂಭದಿಂದ ದೂರ ಉಳಿದಿದ್ದರು. ಇದೀಗ ಎ ಮಂಜು ಆಯ್ಕೆ ಮಾಡಿದ್ದೇವೆ ಎನ್ನುತ್ತಿದ್ದ ಹಾಗೆ ಎ.ಟಿ ರಾಮಸ್ವಾಮಿ ಅವರು ತಿರುಗಿ ಬಿದ್ದಿದ್ದಾರೆ. ಕುಮಾರಸ್ವಾಮಿ ಮಾತು ನಿರೀಕ್ಷಿತ ಆದಂತಹ ಮಾತುಗಳು. ನಾನು ಇದನ್ನು ಬಹಳ ಹಿಂದೆಯೇ ನಿರೀಕ್ಷೆ ಮಾಡಿದ್ದೆ. ರಾಜ್ಯ ರಾಜಕಾರಣ ತುಂಬ ಕೆಟ್ಟಿದೆ. ನಾನು ರಾಜಕಾರಣ ಮಾಡಿಕೊಂಡು ಬಂದಿರುವುದು ನನಗಾಗಿ ಅಲ್ಲ, ಜನರಿಗಾಗಿ. ಆಡಳಿತ ಚೆನ್ನಾಗಿಲ್ಲ, ರಾಜಕೀಯ ಚೆನ್ನಾಗಿಲ್ಲ, ಶಾಸಕಾಂಗವೂ ಚೆನ್ನಾಗಿಲ್ಲ. ಇದೀಗ ಅರಕಲಗೂಡು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿ ಮಾಡ್ಕೊಂಡು, ಸ್ವಾರ್ಥ ರಾಜಕಾರಣ ಮಾಡಲಿಕ್ಕೆ ಮುಂದಾಗಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆ ಅಂದುಕೊಂಡು ಬಂದವನು ನಾನು. ನನ್ನ ಕ್ಷೇತ್ರವೇ ದೇವಾಲಯ, ಜನರ ಸೇವೆ ಮಾಡೋದು ದೇವರ ಪೂಜೆ ಅನ್ಕೊಂಡು ಇದ್ದೇನೆ. ನಾನು ನೇರವಾಗಿ ಮಾತನಾಡಿದ್ದೀನಿ. ಅದು ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷದಲ್ಲಿ ಕೂತಿರಲಿ ತಪ್ಪನ್ನು ತಪ್ಪು ಎಂದು ಖಂಡಿಸಿಕೊಂಡು ಬಂದಿದ್ದೀನಿ ಎಂದಿದ್ದಾರೆ. ತಪ್ಪನ್ನ ಎತ್ತಿ ಹೇಳೋದೆ ನನ್ನ ತಪ್ಪು ಎನ್ನೋದಾದ್ರೆ ಅದನ್ನು ಜನರ ತೀರ್ಮಾನಕ್ಕೆ ಬಿಡ್ತಿನಿ. ಇದು ಒಂದು, ಒಂದೂವರೆ ವರ್ಷದ ಹಿಂದೆ ನಡೆದುಕೊಂಡು ಬಂದಿರುವ ಒಳಸಂಚು. ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಹಾಕಿದ್ರು. ಆಮೇಲೆ ವಾಪಸ್ ತೆಗ್ಸಿದ್ರು. ಯಾರ ಹಿತವನ್ನು ಕಾಪಾಡಲಿಕ್ಕೆ..? ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಯ ಹಿತವನ್ನು ಕಾಪಾಡಲಿಕ್ಕೆ ಎಂದು ಗುಟ್ಟು ರಟ್ಟು ಮಾಡಿದ್ದಾರೆ.

ದೇವೇಗೌಡರನ್ನು ಹಾಸನದಿಂದ ಹೊರಕ್ಕೆ ಕಳಿಸಿದ್ದಕ್ಕೆ ವಿರೋಧ ಇದೆ..!
ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ಸುಳ್ಳು ಹೇಳಲಿಕ್ಕೆ ತುಂಬಾ ಭಯ ಪಡ್ತಿನಿ ನಾನು, ಸತ್ಯ ಹೇಳಲಿಕ್ಕೆ ಏನು ಹಿಂಜರಿಯುವುದಿಲ್ಲ. ನಾನು ನೆಮ್ಮದಿಯಾಗಿ, ಸಂತೋಷವಾಗಿ, ಖುಷಿಯಾಗಿದ್ದೀನಿ ಎಂದಿರುವ ಎ.ಟಿ ರಾಮಸ್ವಾಮ, ನನಗೆ ದೇವೇಗೌಡರು ಹಾಸನ ಜಿಲ್ಲೆಯನ್ನು ಬಿಟ್ಟು ತುಮಕೂರು ಜಿಲ್ಲೆಗೆ ಹೋಗುವುದು ಇಷ್ಟವಿರಲಿಲ್ಲ. ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಚನ್ನಪಟ್ಟಣದಲ್ಲಿ ಒಂದು ಪೂರ್ವಭಾವಿ ಸಭೆ ನಡೆದಿತ್ತು. ಎಲ್ಲರೂ ಕೂಡ ಪ್ರಜ್ವಲ್ ರೇವಣ್ಣ ಹೆಸರು ಹೇಳಿದ್ರು. ನಾನು ಹೇಳಲಿಲ್ಲ. ದೇವೇಗೌಡರಂತಹ ಹಿರಿಯ ಮುತ್ಸದ್ದಿಯನ್ನ ಜಿಲ್ಲೆಯಿಂದ ಹೊರಗೆ ಕಳುಹಿಸಲು ನನ್ನ ಆತ್ಮ ಒಪ್ತಿರಲಿಲ್ಲ, ಆತ್ಮಸಾಕ್ಷಿಯಂತೆ ಪ್ರಜ್ವಲ್ ಹೆಸರು ಹೇಳಲಿಲ್ಲ. ಅದಕ್ಕೆ ಕೆಲವರಿಗೆ ಕೋಪ ಇರಬಹುದು ಎಂದಿದ್ದಾರೆ. ರೇವಣ್ಣ ನಮ್ಮ ಮನೆಗೆ ಎರಡು ದಿನ ಬಂದಿದ್ರು, ನಾನು ದೊಡ್ಡವರ ಜೊತೆ ಮಾತನಾಡೋಣ ಅಂತ ಹೇಳಿದ್ದೆ, ಕೆಲವು ಗೊಂದಲಗಳು, ಸಮಸ್ಯೆಗಳಿವೆ ಅದನ್ನು ಬಗೆಹರಿಸಿಕೊಳ್ಳೋಣ ಅಂದಿದ್ದೆ. ಆಯ್ತು ಅಂತ ಹೋಗಿದ್ರು, ಜನವರಿ 22 ರಂದು ದೊಡ್ಡ ಕಾರ್ಯಕ್ರಮ ಇತ್ತು, ಜನವರಿ 21 ರಂದು ಏನು ಸಂಚು ನಡೀತು ಅನ್ನೋದು ಗೊತ್ತಿದೆ ಎಂದಿದ್ದಾರೆ. ಮನೆಯೊಳಗೆ ಇರುವಂತಹ ಜನ, ತಾನೇ ಮನೆ ಹಾಳು ಮಾಡೋದು, ಅವರ ಮನೆಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದು ಯಾರನ್ನು ಸುಡುತ್ತದೆ ಅಂತ ಕಾದು ನೋಡಿ ಎಂದು ಭವಿಷ್ಯ ನುಡಿದಿದ್ದಾರೆ.

ಪಕ್ಷದಲ್ಲಿ ಭಾಗಿಯಾಗುವುದೂ ಇಲ್ಲ, ಕೋಪ ಯಾಕೆ..?
ಶಾಸಕನಾಗಿ ಆಯ್ಕೆ ಆದ ಬಳಿಕ ಬೇರೊಂದು ಪಕ್ಷಕ್ಕೆ ಹೋದರೆ ಜನರು ಮುಂದಿನ ಬಾರಿ ಮತ ನೀಡುವುದಿಲ್ಲ ಎನ್ನುವುದು ಈಗಾಗಲೇ ಹತ್ತಾರು ಕ್ಷೇತ್ರಗಳಲ್ಲಿ ಅದರಲ್ಲೂ ಜೆಡಿಎಸ್ ಶಾಸಕರಿಗೆ ಮನವರಿಕೆ ಆಗಿದೆ. ಇದೇ ಕಾರಣಕ್ಕೆ ಎ.ಟಿ ರಾಮಸ್ವಾಮಿ ಹಾಗು ಶಿವಲಿಂಗೇಗೌಡ ಕಾಂಗ್ರೆಸ್ ಜೊತೆಗೆ ಆತ್ಮೀಯ ಸಂಬಂಧ ಇರಿಸಿಕೊಂಡು ಕ್ಷೇತ್ರದಲ್ಲಿ ಗುಟ್ಟು ಗುಟ್ಟಾಗಿ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ದೈಹಿಕವಾಗಿ ಜೆಡಿಎಸ್ ಶಾಸಕರಾಗಿದ್ದರೂ ಮಾನಸಿಕವಾಗಿ ಕಾಂಗ್ರೆಸ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಜನರಿಗೆ ನನ್ನನ್ನು ಪಕ್ಷದಿಂದ ಕುಮಾರಸ್ವಾಮಿಯೇ ಹೊರ ಹಾಕಿದ್ರು. ನಾನು ಪಕ್ಷದಲ್ಲೇ ಇದ್ದೆ. ಕೆಲವೊಂದು ಗೊಂದಲಗಳನ್ನು ಬಗೆಹರಿಸಿದ್ದರೆ ನಾನು ಜೆಡಿಎಸ್ನಲ್ಲೇ ಉಳಿಯುತ್ತಿದೆ ಎಂದು ಕಾರ್ಯಕರ್ತರನ್ನು ಮರಳು ಮಾಡುವ ಪ್ರಯತ್ನ ಅಷ್ಟೆ ಎನ್ನುತ್ತಾರೆ ಕ್ಷೇತ್ರದ ಜನತೆ. ಇನ್ನು ಕೆಲವೇ ದಿನಗಳಲ್ಲಿ ಎ.ಟಿ ರಾಮಸ್ವಾಮಿ ಕೂಡ ಬೇರೊಂದು ಪಕ್ಷವನ್ನು ಸೇರಲಿದ್ದು, ಚುನಾವಣೆಗೆ ತಯಾರಿ ಮಾಡಿಕೊಳ್ತಿದ್ದಾರೆ. ಆದರೆ ಜೆಡಿಎಸ್ ದೂರಬೇಕಿರುವುದು ಅವರ ರಾಜಕೀಯ ಧರ್ಮ ಅದನ್ನು ಮಾಡಲಿ ಅನ್ನೋದು ಜೆಡಿಎಸ್ ನಾಯಕರ ಮಾತು.
ಕೃಷ್ಣಮಣಿ