ಲಕ್ನೋ: ಉತ್ತರಪ್ರದೇಶದ ಫರೂಕಾಬಾದ್‌ನಲ್ಲಿರುವ ಫತೇಘರ್ ಜೈಲಿನಲ್ಲಿ ಕೈದಿಗಳ ಸಂದರ್ಶಕರ ಕೈಗೆ ‘ಜೈ ಶ್ರೀ ರಾಮ್’ ಎಂದು ಮುದ್ರೆ ಹಾಕಲಾಗುತ್ತಿದೆ. ಇಈ ಮೂಲಕ ಕೈದಿಗಳ ಧಾರ್ಮಿಕ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗುತ್ತಿದ್ದು, ಇದು ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದೆ. ಮಾತ್ರವಲ್ಲ, ಜೈಲಿನಲ್ಲಿ ಭಜನೆ , ಕೀರ್ತನೆ, ರಾಮಯಾಣದ ಸುಂದರಕಾಂಡ ಪಠಣದಂತಹ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜೈಲು ಅಧೀಕ್ಷಕ ಭೀಮಸೇನ್ ಮುಕುಂದ್, ಕೈದಿಗಳ ಭೇಟಿಗೆ ಆಗಮಿಸುವ ಸಂದರ್ಶಕರನ್ನು ಗುರುತಿಸಲು ಅವರ ಕೈಗಳಿಗೆ ಹಚ್ಚಲಾಗುತ್ತಿದ್ದ ಮಾಮೂಲಿ ಸ್ಟಾಂಪ್ ಮುದ್ರೆಯ ಬದಲಿಗೆ ಜೈಲಾಧಿಕಾರಿಗಳು ಕೇಸರಿ ಬಣ್ಣದ ಶಾಯಿಯಿಂದ ಬರೆದಿರುವ ‘ಜೈಶ್ರೀರಾಮ್’ ಮುದ್ರೆಯನ್ನು ಹಾಕಲಾಗುತ್ತಿದೆ. ಕಳೆದ ಒಂದು ವಾರದಿಂದ ಈ ಪದ್ದತಿ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.

ಕೈದಿಗಳ ಮನಪರಿವರ್ತನೆ ಪ್ರಯತ್ನಗಳ ಭಾಗವಾಗಿ ಜೈಲಿನಲ್ಲಿ ರಾಮಯಾಣದ ಸುಂದರಕಾಂಡ ಪಠಣದಂತಹ ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸಲಾಗುತ್ತಿದೆ ಮತ್ತು ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಡಿ ಬ್ಲಾಕ್ ಪ್ರಿಂಟಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಹಿಂದೂ ಮತ್ತು ಮುಸ್ಲಿಂ ಕೈದಿಗಳು ಭಗವಾನ್ ರಾಮನ ಧ್ವಜಗಳನ್ನು ಬ್ಲಾಕ್ ಪ್ರಿಂಟ್ ಮಾಡುವಲ್ಲಿ ಸಹಕರಿಸುತ್ತಿದ್ದಾರೆ, ಇದನ್ನು ಸಂದರ್ಶಕರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಭದ್ರತಾ ಕಾರಣಗಳಿಗಾಗಿ ನಾವು ಸ್ಟಾಂಪ್ ವಿನ್ಯಾಸವನ್ನು ಬದಲಾಯಿಸುತ್ತಲೇ ಇದ್ದೇವೆ. ನಾವು ಇಂತಹ ಮುದ್ರೆಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಹಬ್ಬದ ಸಮಯದಲ್ಲಿ ನಾವು ‘ಹ್ಯಾಪಿ ದೀಪಾವಳಿ’ ಮುದ್ರೆಗಳನ್ನು ಬಳಸಿದ್ದೇವೆ. ಒಬ್ಬ ಖೈದಿಯನ್ನು ಭೇಟಿಯಾಗಲು ಅವನ ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ಸಂಬಂಧಿಕರು ಬಂದಾಗ ಅವರ ಕೈಯಲ್ಲಿ ‘ಜೈ ಶ್ರೀ ರಾಮ್’ ಮುದ್ರೆಯನ್ನು ಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ ಜ.22ರಂದು ಕಾರಾಗೃಹದಲ್ಲಿ ಕೈದಿಗಳಿಗೆ ಪ್ರಾಣ ಪ್ರತಿಷ್ಠಾನ ಸಮಾರಂಭವನ್ನು ನೇರವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಸ್ಥಳದಲ್ಲಿ ದೊಡ್ಡ ಟಿವಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೈಲಿನೊಳಗೆ ಕೈದಿಗಳು ಸುಮಾರು ಒಂದು ವಾರ ಕಾಲ ಸುಂದರ ಕಾಂಡವನ್ನು ಪಠಿಸಿದ್ದಾರೆ. ಭಜನೆ , ಕೀರ್ತನೆ, ಪ್ರಸಾರ ವಿತರಣೆ ಹಾಗೂ ಭೋಜನಕೂಟಗಳನ್ನು ಈ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.










