ಇದು ಸುದ್ದಿ ಹಿಂದಿನ ರಾಜಕೀಯ ಆದರೆ ಮೇಲ್ನೋಟಕ್ಕೆ ಕಾಣುವಷ್ಟು ಸಾಧಾರಣವಾಗಿಲ್ಲ.
ಕಳೆದ ವಾರದಿಂದ ಹೊಸಪೇಟೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಸುದ್ದಿ ಇದು. ಸಚಿವ ಆನಂದಸಿಂಗ ಸೋದರಳಿಯ ಸಂದೀಪಸಿಂಗ್ ಎಂಬಾತ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ವಿಷಯ ಎತ್ತಿ ಸರಣಿ ಪೋಸ್ಟ್ಗಳನ್ನು ಮಾಡಿದ್ದು, ವಾಲ್ಮೀಕಿ ಸಮುದಾಯ ಒಂದಿಷ್ಟು ನಾಯಕರು ಸಂದೀಪಸಿಂಗ್ ಕ್ಷಮೆಗೆ ಪಟ್ಟು ಹಿಡಿದಿದ್ದಾರೆ.
ರಮೇಶ ಜಾರಕಿಹೊಳಿ ಆನಂದಸಿಂಗ್ ನಡುವಿನ ಸಂಬಂಧ ಕೆಟ್ಟಿದ್ದೇಕೆ? ರೆಸಾರ್ಟಿನಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್ ಮತ್ತು ಕಂಪ್ಲಿಯ ಶಾಸಕ ಗಣೇಶ್ ಬಡಿದಾಡಿಕೊಂಡಿದ್ದು ಏಕೆ? ಈ ಒಟ್ಟೂ ರಾಜಕಾರಣದ ಹಿಂದೆ ಒಂದು ಹಿನ್ನೆಲೆ ಸ್ಟೋರಿ ಇದೆ. ಈಗ ಆನಂದಸಿಂಗ್ ಸೋದರಳಿಯ ಮಾಡಿರುವ ಪೋಸ್ಟ್ಗಳ ಹಿಂದೆ ಬಳ್ಳಾರಿ-ಹೊಸಪೇಟೆ ಜಿಲ್ಲೆಗಳಲ್ಲಿ ನಡೆದಿರುವ ತಿಕ್ಕಾಟದ ಕತೆಯಿದೆ.
ಕಂಪ್ಲಿ ಶಾಸಕ ಗಣೇಶ ರೆಸಾರ್ಟಿನಲ್ಲಿ ಆನಂದಸಿಂಗ್ಗೆ ಬಿಯರ್ ಬಾಟಲ್ನಿಂದ ಹೊಡೆದಿದ್ದು ಏಕೆ? ಅಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಕೂಡ ಇದ್ದರು. ಆಗ ಇವರೆಲ್ಲ ಕಾಂಗ್ರೆಸ್ ಶಾಸಕರು. ಅದಾದ ಮೇಲೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಿದೆ. ಅದು ಕೊಚ್ಚೆ ನೀರು ಎಂಬುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ನಲ್ಲಿದ್ದ ರಮೇಶ ಜಾರಕಿಹೊಳಿ ಮತ್ತು ಆನಂದ್ಸಿಂಗ್ ಈಗ ಬಿಜೆಪಿಯಲ್ಲಿದ್ದಾರೆ.
ಬಿಜೆಪಿಯಲ್ಲೇ ಇರುವ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕಳೆದ ವಾರ ಸತತವಾಗಿ ನಿಂದನೆಯ ಪೋಸ್ಟ್ಗಳನ್ನು ಮಾಡಿದ ಸಂದೀಪಸಿಂಗ್ ಹಿಂದೆ ಸಚಿವ ಆನಂದಸಿಂಗ್ ಇದ್ದೇ ಇದ್ದಾರೆ. ಹೀಗಾಗಿ ಈ ಪೋಸ್ಟ್ಗಳ ವಿರುದ್ಧ ಪ್ರತಿಭಟಿಸಿ ದೂರು ನೀಡಲು ಹೋದ ವಾಲ್ಮೀಕಿ ಸಮುದಾಯದವರಿಗೆ, ಎರಡು ದಿವಸ ಟೈಮ್ ಕೊಡಿ; ಎಂದು ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ. ಅದನ್ನು ನಂಬಿಕೊಂಡು ವಾಲ್ಮೀಕಿ ಸಮುದಾಯದ ನಾಯಕರು ವಾಪಸ್ ಬಂದಿದ್ದಾರೆ.
ದೂರು ಕೊಟ್ಟ ತಕ್ಷಣ ಸ್ವೀಕರಿಸಬೇಕಿದ್ದ ಪೊಲೀಸರು ಎರಡು ದಿನ ಟೈಮ್ ಕೊಡಿ ಎಂದಿದೇಕೆ? ಇವರಿಗೆ ಆ ಅಧಿಕಾರ ಎಲ್ಲಿಂದ ಬಂತು? ಇದನ್ನು ಕೇಳಿಕೊಂಡು ವಾಪಸ್ಸಾದ ವಾಲ್ಮೀಕಿ ಮುಖಂಡರು ಬಹುಷಃ ರಮೇಶ ಜಾರಕಿಹೊಳಿಯ ಮೆಚ್ಚುಗೆ ಪಡೆಯಲಷ್ಟೇ ಈ ಪ್ರತಿಭಟನೆ ಮಾಡಿದಂತಿದೆ.
ಯಾರೀ ಸಂದೀಪ್ಸಿಂಗ್? ಆತನ ಪೋಸ್ಟ್ ಏನು?
ಈ ಸಂದೀಪಸಿಂಗ್ ಕಡಿಮೆ ಕುಳವೇನಲ್ಲ. ಸಚಿವ ಆನಂದಸಿಗ್ ಸೋದರಳಿಯ. ತಾನೂ ಎಂಎಲ್ಎ ಆಗಬೇಕು ಎಂದು 2018ರಿಂದ ಪ್ರಯತ್ನ ಮಾಡುತ್ತಿದ್ದಾನೆ.
ಅದಿರಲಿ, ಕಳೆದ ವಾರ ಈತ ಮಾಡಿದ ಪೋಸ್ಟ್ಗಳ ಸಂದರ್ಭ ನೋಡಿ. ಮೈಸೂರು ರೇಪ್ ಕೇಸ್ ಬಹಿರಂಗವಾದ ಹೊತ್ತು. ಆಗ ಈತ ರಮೇಶ್ ರಕಿಹೊಳಿಯ ಸಿಡಿ ವಿಷಯ ಎತ್ತಿ ಪೋಸ್ಟ್ಗಳನ್ನು ಹಾಕತೊಡಗಿದ. ಸುರಪುರ ಶಾಸಕ ರಾಜೂಗೌಡರಿಗೆ ಸಚಿವ ಸ್ಥಾನ ಕೊಡಬೇಕು. ಅವರದು ಯಾವುದು ಸಿಡಿ ಇಲ್ಲ ಇತ್ಯಾದಿ ಪೋಸ್ಟ್ ಹಾಕಿದ.
ಇಲ್ಲಿ ಜಾರಕಿಹೊಳಿ ಸಾಚಾ ಏನೂ ಅಲ್ಲ. ಜಾರಕಿಹೊಳಿ ಮತ್ತು ಆನಂದಸಿಂಗ್ ಒಟ್ಟಿಗೆ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಬಂದವರು.
ಜಾರಕಿಹೊಳಿ, ಆನಂದ್ಸಿಂಗ್ ದ್ವೇಷದ ಮೂಲ
ನಿಮಗೆ ನೆನಪಿರಬಹುದು ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಮತ್ತು ಆನಂದಸಿಂಗ್ ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿದ್ದು. ಒಂದೆರಡು ದಿನ ಕಂಪ್ಲಿ ಗಣೇಶ ಬಂಧನವೂ ಆಗಿತ್ತು. ಮೂಲಗಳ ಪ್ರಕಾರ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರ ಪರ ಕಂಪ್ಲಿ ಗಣೇಶ ನಿಂತಿದ್ದೇ ಈ ಹೊಡೆದಾಟದ ಮೂಲ. ಆನಂದಸಿಂಗ್ ಗಣೇಶರ ಮೇಲೆ ಮೊದಲು ಅಟ್ಯಾಕ್ ಮಾಡಿದ್ದು. ನಂತರ ಮುಂಗೋಪಿ ಗಣೇಶ ಬಿಯರ್ ಬಾಟಲ್ನಿಂದ ಆನಂದಸಿಂಗ್ ತಲೆಗೆ ಹೊಡೆದಿದ್ದು.
ಕಂಪ್ಲಿ ಗಣೇಶ್ ಜೈಲಲ್ಲಿ ಇರುವಾಗ, ಹೊಸಪೇಟೆಯಲ್ಲಿರುವ ಗಣೇಶ್ ಮನೆಗೆ ಭೇಟಿ ನೀಡಿದ ರಮೇಶ ಜಾರಕಿಹೊಳಿ ಗಣೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅಲ್ಲಿಂದ ಆನಂದಸಿಂಗ್ ಮತ್ತು ಜಾರಕಿಹೊಳಿ ನಡುವಿನ ಸಂಬಂಧ ಹದಗೆಟ್ಟಿದ್ದು ಬಹಿರಂಗವಾಗಿತು. ಅದು ಈಗ ಸಂದೀಪ್ಸಿಂಗ್ ಪೋಸ್ಟ್ಗಳ ಮುಲಕ ಹೊಸ ರೂಪ ಪಡೆದಿದೆಯಷ್ಟೇ.
ಹಗರಿಬೊಮ್ಮನಹಳ್ಳಿ ಮೇಲೆ ಸಂದೀಪ್ ಕಣ್ಣು
ಹಗರಿಬೊಮ್ಮನಹಳ್ಳಿಯಿಂದ ತನ್ನ ಪತ್ನಿಯನ್ನು ಎಂಎಲ್ಎ ಮಾಡಲು 2018ರಿಂದ ಸಂದೀಪ್ಸಿಂಗ್ ಯತ್ನಿಸುತ್ತ ಬಂದಿದ್ದಾನೆ. ಎಸ್ಸಿ ಮೀಸಲು ಕ್ಷೇತ್ರದಲ್ಲಿ ಸಂದೀಪ್ ಸ್ಪರ್ಧೆ ಮಾಡುವಂತಿಲ್ಲ. ಸಂದೀಪ್ ಪತ್ನಿ ಲಂಬಾಣಿ ಸಮುದಾಯಕ್ಕೆ ಸೇರಿದ್ದು ಪತ್ನಿಯನ್ನು ಶಾಸಕಿ ಮಾಡುವ ಇರಾದೆಯಿದೆ. ಹಿಂದೆ ಅಲ್ಲಿನ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ಗೆ ಟಿಕೆಟ್ ತಪ್ಪಿಸಿ ಪತ್ನಿಗೆ ಟಿಕೆಟ್ ಕೊಡಿಸಲು ಸಂದೀಪ್ ವಿಫಲನಾಗಿದ್ದ ಆಗ ಆನಂದಸಿಂಗ್ ಕೂಡ ಕಾಂಗ್ರೆಸ್ನಲ್ಲೇ ಇದ್ದರು. ಮುಂದೆ ಹಗರಿಬೊಮ್ಮನಹಳ್ಳಿಯಲ್ಲಿ ’ಆನಂದ್ಸಿಂಗ್ ಅಭಿಮಾನಿ ಬಳಗ’ ಹೆಸರಲ್ಲಿ ಸಂದೀಪ್ಸಿಂಗ್ ಒಂದು ಕಚೇರಿ ತೆಗೆದ ನಂತರ, ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದರು. ಆಗ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಪರ ಕಂಪ್ಲಿ ಶಾಸಕ ಗಣೇಶ್ ನಿಂತಿದ್ದರು. ಜಾರಕಿಹೊಳಿ ಗಣೇಶರನ್ನು ಬೆಂಬಲಿಸಿದ್ದರು.
ಹೀಗಾಗಿ ಈಗ ಸುದ್ದಿಯಾಗಿರುವ ಪೋಸ್ಟ್ಗಳ ಹಿಂದೆ ಈ ಜಿದ್ದಾಜಿದ್ದಿಯ ಕತೆಯಿದೆ. ಇಲ್ಲಿ ಆನಂದಸಿಂಗ್ ಆಗಲಿ, ಸಂದೀಪ್ಸಿಂಗ್ ಆಗಲಿ ಮತ್ತು ಸಿಡಿ ಕುಖ್ಯಾತಿಯ ಜಾರಕಿಹೊಳಿಯಾಗಲಿ, ಯಾರೂ ಸಾಚಾ ಅಲ್ಲ ಎಂಬುದು ಪುಟ್ಟಾಪೂರಾ ಸತ್ಯ!. ಇದು ಪೋಸ್ಟ್ಗಳ ಹಿಂದಿನ ಹಿನ್ನೆಲೆ ಕತೆಯಷ್ಟೇ