ಓಮೈಕ್ರಾನ್ ಭೀತಿಯಿಂದ ಮೂರನೇ ಅಲೆ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ನೀಡಿ ಆಕ್ಸಿಜನ್, ಬೆಡ್, ಆಂಬುಲೆನ್ಸ್ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದೆ. ಇದರ ನಡುವೆಯೇ ಮಕ್ಕಳಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದು, ಮಕ್ಕಳ ಪೈಕಿ 15 ವರ್ಷದಿಂದ 18 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ನೀಡಲು ಸೂಚಿಸಿದೆ. ಈ ಹಿನ್ನೆಲೆ ರಾಜಧಾನಿ ಬೆಂಗಳೂರಲ್ಲೂ ಕೂಡ ಜನವರಿ 3ರಿಂದ ಮಕ್ಕಳಿಗೆ ಲಸಿಕೆ ನೀಡಲು ಬಿಬಿಎಂಪಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ.
ಜನವರಿ 3 ರಿಂದ ಮಕ್ಕಳಿಗೂ ಲಸಿಕೆ ನೀಡಲು ಸಿದ್ಧತೆ
ಬೆಂಗಳೂರು ನಗರದಲ್ಲಿ 15 ರಿಂದ 18 ವರ್ಷದೊಳಗಿನ ಅಂದರೆ SSLC ಇಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳಿಗೆ ಲಸಿಕೆ ನೀಡಿಕಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದೆ ಕಾಲೇಜುಗಳಲ್ಲಿ ಲಸಿಕೆ ನೀಡಿದ ಮಾದರಿಯಲ್ಲಿ ಶಾಲೆಗಳಲ್ಲಿ ವ್ಯಾಕ್ಸಿನ್ ಹಾಕಲು ಕ್ರಮವಹಿಸಲಾಗಿದೆ. ಲಸಿಕೆ ನೀಡಿಕೆಗಾಗಿ ಕೇಂದ್ರದ ತಂಡದಿಂದ ಸಲಹೆಯನ್ನು ಪಾಲಿಕೆ ಅಧಿಕಾರಿಗಳು ಈಗಾಗಲೇ ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಮೊದಲ ಬಾರಿಗೆ ವ್ಯಾಕ್ಸಿನ್ ಹಾಕುವ ಹಿನ್ನೆಲೆಯಲ್ಲಿ 30 ನಿಮಿಷ ಕಾಯುವ ಕೋಣೆಗೆ ಆದ್ಯತೆ ನೀಡಲಾಗಿದೆ. ಮಕ್ಕಳ ನಿಗಾ ದೃಷ್ಟಿಯಿಂದ ಲಸಿಕೆ ನೀಡುವ ಎಲ್ಲಾ ಶಾಲೆಗಳ ಬಳಿ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಿದೆ ಬಿಬಿಎಂಪಿ. ಮೊದಲ ಹಂತದಲ್ಲಿ ಸರ್ಕಾರಿ ಹಾಗೂ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಲಸಿಕೆ ವಿತರಣೆಯಾಗಲಿದೆ. ನಂತರ ಖಾಸಗಿ ಶಾಲೆ ಕಾಲೇಜಿನ ಮಕ್ಕಳಿಗೆ ಪಾಲಿಕೆ ವ್ಯಾಕ್ಸಿನ್ ನೀಡಲಿದೆ.
ರಾಜಧಾನಿಯ 7 ಲಕ್ಷ ಮಕ್ಕಳಿಗೆ ಮೊದಲು ಲಸಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವಯಸ್ಸಿನ 7 ಲಕ್ಷ ಮಕ್ಕಳನ್ನೂ ಗುರುತಿಸಿರುವ ಪಾಲಿಕೆ, ಪ್ರತಿ ದಿನ ಒಂದು ಶಾಲಾ ಕಾಲೇಜಿನಲ್ಲಿ 100 ಮಕ್ಕಳಿಗೆ ಲಸಿಕೆ ವಿತರಣೆ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿದೆ. ಶಾಲೆ ಹೊರತಾಗಿ ಆನ್ಲೈನ್ ಕ್ಲಾಸ್ ಕೇಳುವ ಮಕ್ಕಳಿಂದ ಲಸಿಕೆ ಪಡೆಯಲು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ನಂತರ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಚಿಂತನೆಯೂ ಪಾಲಿಕೆಗಿದೆ. ಹೀಗಾಗಿ ಅನ್ ಲೈನ್ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಮಾಹಿತಿಯನ್ನು ಪಾಲಿಕೆ ಸಂಗ್ರಹಿಸುತ್ತಿದೆ. ಅಲ್ಲದೆ ನಗರಲ್ಲಿನ ಖಾಸಗಿ ಶಾಲೆ ಹಾಗೂ ಕಾಲೇಜುಗಳಿಗೆ ವಿಶೇಷ ಲಸಿಕಾ ಕ್ಯಾಂಪ್ಗಳನ್ನು ನಡೆಸಲು ಸೂಚಿಸಲಾಗಿದೆ. ಈ ಹಿನ್ನೆಲೆ ಶಾಲೆ ಕಾಲೇಜುಗಳ ಅಡಳಿತ ಮಂಡಳಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸಭೆಯನ್ನೂ ನಡೆಸಿದ್ದಾರೆ.
ಲಸಿಕೆ ಪಡೆದ ಮಕ್ಕಳಿಗೆ ಮರು ದಿನ ರಜೆ
ಪಾಲಿಕೆಯಿಂದ ಮಕ್ಕಳು ಲಸಿಕೆ ಪಡೆಯಲು ವಿಭಿನ್ನ ತಂತ್ರದ ಮೊರೆ ಹೋಗಲಾಗಿದೆ. ವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗೆ ಮರು ದಿನ ಶಾಲೆ / ಕಾಲೇಜು ರಜೆ ನೀಡಬೇಕು ಎಂದು ಪಾಲಿಕೆ ಆದೇಶಿಸಿದೆ. ಪೋಷಕರು ತಮ್ಮ ಮಕ್ಕಳಿಗೆ ಖಾಸಗಿ ಅಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿದಕ್ಕೂ ಪಾಲಿಕೆ ಅನುಮತಿ ಕೊಟ್ಟಿದೆ. ಒಟ್ಟಾರೆ ಪಾಲಿಕೆ ಗೊತ್ತು ಮಾಡಿರುವ 7 ಲಕ್ಷ ಮಕ್ಕಳಿಗೂ ಲಸಿಕೆ ನೀಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಒಟ್ಟಾರೆ ಮಕ್ಕಳಿಗೂ ಲಸಿಕೆ ಬಂದಿರುವುದು ಸಂತಸದ ವಿಚಾರ. ಇದರ ಜೊತೆಯಲ್ಲೇ ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಕೋಮಾರ್ಬಿಟ್ ರೋಗಿಗಳಿಗೆ ಬೂಸ್ಟರ್ ಡೋಸ್ ಎಂದರೆ ಮೂರನೇ ಡೋಸ್ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಓಮೈಕ್ರಾನ್ ನಿಂದ ಮೂರನೇ ಅಲೆ ಸೃಷ್ಟಿಯಾಗಿರುವ ಹಿನ್ನೆಲೆ ಮಕ್ಕಳಿಗೂ ಕೇಂದ್ರ ಸರ್ಕಾರ ಲಸಿಕೆ ನೀಡಲು ಮುಂದಾಗಿದೆ. ಆದರೆ ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಅಪಸ್ವರಗಳೂ ಕೇಳಿ ಬರುತ್ತಿವೆ.