ಭಾರತೀಯ ಸಮಾಜ ತನ್ನ ಪರ್ವಕಾಲದಲ್ಲಿರುವಂತೆಯೇ ಕಾಣುತ್ತಿದೆ. ಶತಮಾನಗಳ ಚಾರಿತ್ರಿಕ ಹೆಜ್ಜೆಗಳನ್ನು ದಾಟಿ ಬಂದಿರುವ ಒಂದು ಸಾಂಪ್ರದಾಯಿಕ ಸಮಾಜ ತನ್ನ ಪರಂಪರೆಯ ಕವಚಗಳನ್ನು ಸುಭದ್ರವಾಗಿರಿಸಿಕೊಂಡೇ, ಅಂತರಂಗದೊಳಗಿನ ಮಲಿನಗಳನ್ನು ತೊಡೆದುಹಾಕುತ್ತಾ, ಈ ನೆಲದ ಮೂಲ ಜನಸಾಂಸ್ಕೃತಿಕ ನೆಲೆಗಳನ್ನು ಮತ್ತೆ ಮತ್ತೆ ಮುನ್ನೆಲೆಗೆ ತಂದುಕೊಳ್ಳುತ್ತಾ, ಸಮಾಜದ ಗರ್ಭದಲ್ಲೇ ಅಡಗಿರಬಹುದಾದ ತರತಮಗಳನ್ನು, ಅಸಮಾನತೆಗಳನ್ನು ಹೋಗಲಾಡಿಸಲು ಆಗಿಂದ್ದಾಗ್ಗೆ ಪ್ರತಿರೋಧದ ನೆಲೆಗಳನ್ನೂ ಹುಟ್ಟುಹಾಕುತ್ತಲೇ ಬಂದಿದೆ. ಸಾಂಸ್ಕೃತಿಕ ಸಂಘರ್ಷಗಳೂ ತಾತ್ವಿಕ ನೆಲೆಯಲ್ಲಿ ಉಚ್ಛ್ರಾಯ ಸ್ತರದಲ್ಲಿ ನಡೆದಿರುವುದನ್ನು ಸಹ ಈ ದೇಶ ಕಂಡಿದೆ. ಈ ಸಂಘರ್ಷಗಳ ನಡುವೆಯೇ ಚರಿತ್ರೆಯ ಪ್ರತಿಯೊಂದು ಕಾಲಘಟ್ಟದಲ್ಲೂ ಹೊಸ ಜಗತ್ತಿಗೆ ತೆರೆದುಕೊಳ್ಳುವ ಅವಕಾಶಗಳನ್ನೂ ಕಲ್ಪಿಸುತ್ತಾ ಬರಲಾಗಿದೆ. ಇದರ ನಡುವೆಯೇ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಿಂತನೆಗಳನ್ನು ಸಮೀಕರಿಸುವ ಪ್ರಯತ್ನಗಳೂ ನಡೆಯುತ್ತಿದ್ದು ʼಸಂಸ್ಕೃತಿʼಯ ಭೌತಿಕ-ಬೌದ್ಧಿಕ ಆವರಣವನ್ನು ಹಿಗ್ಗಿಸುತ್ತಾ, ಮೌಲಿಕ ನೆಲೆಯನ್ನು ಸಂಕುಚಿತಗೊಳಿಸಲಾಗುತ್ತಿದೆ.
ಇಂದು ಭಾರತದಲ್ಲಿ ಮಾನವ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಆಯಾಮಗಳಿಂದಲೂ, ಪ್ರಾಚೀನ ಸಾಮಾಜಿಕ ಮೌಲ್ಯಗಳು ಮರುಕಳಿಸುತ್ತಿವೆ. ನವ ಭಾರತ ನಿರ್ಮಾಣಕ್ಕಾಗಿ ಶ್ರಮವಹಿಸಿದ ಸ್ವಾತಂತ್ರ್ಯಪೂರ್ವದ ಚಿಂತನಾವಾಹಿನಿಗಳನ್ನು ನೇಪಥ್ಯಕ್ಕೆ ಸರಿಸುವ ಮೂಲಕ, 21ನೆಯ ಶತಮಾನದ ಭಾರತ ಸಮನ್ವಯದ ಭಾರತಕ್ಕಾಗಿ ಅವಿರತ ಶ್ರಮಿಸಿದ ಹಿರಿಯ ಚೇತನಗಳನ್ನು ನಿರಾಕರಿಸುವ De-iconisation ಪ್ರಕ್ರಿಯೆಯಲ್ಲಿ ತೊಡಗಿದೆ. ಈ ನೆಲದ ಮೂಲ ಸಂಸ್ಕೃತಿಯನ್ನು ಯಾವುದೋ ಒಂದು ನಿರ್ದಿಷ್ಟ ಧಾರ್ಮಿಕ ಚೌಕಟ್ಟಿನಲ್ಲಿಟ್ಟು, ಇದೇ ಸಂಸ್ಕೃತಿಯ ಅಂಶಿಕ ಭಾಗವಾಗಿರುವ ಇಡೀ ಧಾರ್ಮಿಕ-ಸಾಮುದಾಯಿಕ-ಸಾಂಸ್ಕೃತಿಕ ನೆಲೆಗಳನ್ನು ನಿರಾಕರಿಸುವ ಪ್ರಯತ್ನದಲ್ಲಿ, ಇತಿಹಾಸದ ಒಳಗಿನಿಂದಲೇ ಹೊಸ ಪ್ರತಿಮೆಗಳನ್ನು ಸೃಷ್ಟಿಸಲಾಗುತ್ತಿದೆ. ಆಳವಾದ ಇತಿಹಾಸದ ಅಧ್ಯಯನವೂ ಇಲ್ಲದೆ, ಸಮಕಾಲೀನ ವಸ್ತುಸ್ಥಿತಿಯನ್ನು ಅರಿತು ಮುನ್ನಡೆಯುವ ತಾಳ್ಮೆ ಮತ್ತು ವ್ಯವಧಾನವೂ ಇಲ್ಲದಿರುವ ಯುವ ತಲೆಮಾರಿನ ಬೃಹತ್ ಜನಸಂಖ್ಯೆ ನಮ್ಮ ನಡುವೆ ಸೃಷ್ಟಿಯಾಗಿದೆ. ಈ ಯುವ ತಲೆಮಾರಿಗೆ ಸಂಸ್ಕೃತಿಯ ಮೂಲ ಅರ್ಥವನ್ನು ಮನಗಾಣಿಸುವ ಪ್ರಯತ್ನವನ್ನು ಸಮಕಾಲೀನ ಸಾಹಿತ್ಯ ಲೋಕ ಮಾಡಬೇಕಿದೆ.
ಜಾತಿ-ಮತ-ಧರ್ಮ-ಲಿಂಗ ಮತ್ತು ಇತರ ಸಾಂಸ್ಥಿಕ ವಲಯದಲ್ಲಿರಬಹುದಾದ ತರತಮಗಳ ಮೂಲ ಯಾವುದೆಂದು ಅರಿಯುವುದಷ್ಟೇ ಅಲ್ಲದೆ ವರ್ತಮಾನದ ಆಧುನಿಕತೆಯ ನಡುವೆಯೂ ಈ ವಲಯಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ತಾರತಮ್ಯ ಮತ್ತು ಅಸಮಾನತೆಗಳನ್ನು ಮನಗಾಣಿಸುವುದು ಇಂದಿನ ಹಿರಿಯ ತಲೆಮಾರಿನ ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿಯನ್ನು ಮೂಲತಃ ಹೊರಬೇಕಾಗಿರುವುದು ಸುಶಿಕ್ಷಿತ ವಲಯವೇ ಆದರೂ, ಅಕ್ಷರವೆಂಬ ಅಸ್ತ್ರವನ್ನು ವಿದ್ವತ್ತಿನ ಬತ್ತಳಿಕೆಯಲ್ಲಿಟ್ಟು ಬೆನ್ನಿಗೆ ಕಟ್ಟಿಕೊಂಡಿರುವ ಅಕ್ಷರ ಲೋಕದ ಪರಿಚಾರಕರೆಂದೇ ಕರೆಯಲ್ಪಡುವ ಸಾಹಿತ್ಯವಲಯ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗಿದೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪ್ರಮಾದಗಳನ್ನು ಹಾಗೂ ತನ್ನ ಸಾಹಿತ್ಯಕ ಸ್ವರೂಪವನ್ನೇ ಕಳೆದುಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಧೋರಣೆಗಳನ್ನು ಬದಿಗಿಟ್ಟು ನೋಡಿದಾಗ, ಸಾಹಿತ್ಯ ವಲಯ ತನ್ನ ಈ ಜವಾಬ್ದಾರಿಯನ್ನು ವ್ಯಕ್ತಿಗತ ಸ್ವಾಯತ್ತತೆಯ ನೆಲೆಯಲ್ಲಿ ನಿಭಾಯಿಸಬೇಕಿತ್ತು ಎನಿಸುವುದು ಸಹಜ, ಹಾಗೆಯೇ ನಿಭಾಯಿಸಲು ವಿಫಲವಾಗಿದೆ ಎನ್ನುವುದೂ ಅಷ್ಟೇ ಸತ್ಯ.

ಸಾಹಿತ್ಯ-ಸಮಾಜ ಮತ್ತು ಚರಿತ್ರೆ
ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ ಎಂಬ ಧೋರಣೆಯೊಂದಿಗೇ “ ಕಲೆಗಾಗಿ ಕಲೆ ಸಾಹಿತ್ಯಕ್ಕಾಗಿ ಸಾಹಿತ್ಯ ” ಎಂಬ ಪ್ರಮೇಯಕ್ಕೆ ಅಂಟಿಕೊಂಡಿರುವ ಒಂದು ಬೃಹತ್ ಸಾಹಿತ್ಯ ವಲಯ ನಮ್ಮ ನಡುವೆ ಇದೆ. ಆದರೆ ಇತಿಹಾಸದ ಪುಟಗಳು ಈ ಪ್ರಮೇಯವನ್ನು ಪ್ರಮಾಣೀಕರಿಸುವುದಿಲ್ಲ. ನಾವು ಸುಧಾರಣೆ ಎಂಬ ವಿದ್ಯಮಾನವನ್ನು ಯಾವ ನೆಲೆಯಲ್ಲಿ ನಿಂತು ನೋಡುತ್ತೇವೆ ಎನ್ನುವುದರ ಮೇಲೆ ಈ ಪ್ರಮೇಯವೂ ಬಳಕೆಯಾಗುತ್ತದೆ. ಹಾಗೆಂದ ಮಾತ್ರಕ್ಕೆ ಸಾಹಿತ್ಯದಿಂದ ಎಲ್ಲವನ್ನೂ ಬದಲಿಸಬಹುದು ಎಂಬ ಭ್ರಮೆಯೂ ಇರಬೇಕಿಲ್ಲ. ಆದರೆ ಮಾನವ ಸಮಾಜದ ಸಾಮಾಜಿಕ-ಸಾಂಸ್ಕೃತಿಕ ಅಭ್ಯುದಯದ ಹೆಜ್ಜೆಗಳನ್ನು ಆಯಾ ಚಾರಿತ್ರಿಕ ಸಂದರ್ಭದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸುವ ಮೂಲಕ, ಅಂದಿನ ಕಾಲಘಟ್ಟದ ಸ್ಥಿತ್ಯಂತರಗಳನ್ನು ನಿರ್ವಚಿಸುವ ಜವಾಬ್ದಾರಿ ಸಾಹಿತ್ಯ ವಲಯದ ಮೇಲಿರುತ್ತದೆ.
ಹಾಗೆಯೇ ವರ್ತಮಾನದಲ್ಲಿ ನಾವು ಕಾಣುತ್ತಿರುವ ತರತಮಗಳ ಮೂಲ ನೆಲೆಗಳನ್ನು ಇದೇ ಚಾರಿತ್ರಿಕ ಪುಟಗಳಲ್ಲಿ ಶೋಧಿಸಿ, ಭವಿಷ್ಯದ ತಲೆಮಾರಿಗೆ ಅತ್ಯವಶ್ಯವಾದ ಒಂದು ಸಂವೇದನಾಶೀಲ ಸಾಮಾಜಿಕ ಭೂಮಿಕೆಯನ್ನು ನಿರ್ಮಿಸುವ ಜವಾಬ್ದಾರಿಯೂ ಇರುತ್ತದೆ. ಈ ಜವಾಬ್ದಾರಿಯ ನಿರ್ವಹಣೆಯಲ್ಲಿನ ಸಾಫಲ್ಯ ವೈಫಲ್ಯಗಳ ಹೊರತಾಗಿ, ಇಂತಹ ಪ್ರಯತ್ನಗಳಾದರೂ ನಡೆದಿರುವುದನ್ನು ನಾವು ಗಮನಿಸಬೇಕಿದೆ. ಈ ಪ್ರಯತ್ನಗಳ ಫಲವೇ ಇಂದಿನ ದ್ವೇಷಪೂರಿತ ವಾತಾವರಣದಲ್ಲೂ ಸಂಯಮ, ಸೌಜನ್ಯ, ಸಂವೇದನೆ ಮತ್ತು ಸೂಕ್ಷ್ಮತೆಗಳ ನೆಲೆಗಳು ಜೀವಂತಿಕೆಯಿಂದಿರುವುದನ್ನು ನಾವು ಒಪ್ಪಲೇಬೇಕಿದೆ. ಈ ಸೂಕ್ಷ್ಮತೆಯ ನೆಲೆಗಳೇ ಸಾಮಾಜಿಕ ಬದಲಾವಣೆಗೆ ಅಡಿಗಲ್ಲುಗಳಾಗುತ್ತವೆ ಎಂಬ ವಿಶ್ವಾಸವನ್ನು ಅಕ್ಷರ ಲೋಕದ ಬತ್ತಳಿಕೆ ಹೊತ್ತಿರುವ ಪ್ರತಿಯೊಬ್ಬರೂ ಹೊಂದಿರಬೇಕು. ಈ ಬತ್ತಳಿಕೆಯ ನೆರವಿನಿಂದಲೇ ಸಮಕಾಲೀನ ಚರಿತ್ರೆ ಮತ್ತು ವರ್ತಮಾನದ ಸಮಾಜದಲ್ಲಿ ನಡೆದಿರುವ/ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ, ತಾರತಮ್ಯಗಳ ವಿರುದ್ಧ, ದೌರ್ಜನ್ಯ, ಅತ್ಯಾಚಾರ, ಅಸಮಾನತೆ ಮತ್ತು ಅಸ್ಪೃಶ್ಯತೆಯಂತಹ ಹೀನ ಆಚರಣೆಗಳ ವಿರುದ್ಧ ದಾಖಲಿಸುವುದು ಸಾಹಿತ್ಯ ಲೋಕದ ನೈತಿಕ ಕರ್ತವ್ಯವೂ ಹೌದು, ಕಾಲದ ಅನಿವಾರ್ಯತೆಯೂ ಹೌದು.
ಈ ಹಿನ್ನೆಲೆಯಲ್ಲಿ ನೋಡಿದಾಗ ಬೆಂಗಳೂರಿನಲ್ಲಿ ಸಮಾರೋಪಗೊಂಡ, ಯುವ ತಲೆಮಾರಿನ ಒಂದು ಪ್ರಯತ್ನ ಜನಸಾಹಿತ್ಯ ಸಮ್ಮೇಳನ, ಮನ್ವಂತರ ಹಾದಿಯ ಒಂದು ಪುಟ್ಟ ಮೈಲಿಗಲ್ಲಿನಂತೆ ಕಾಣುತ್ತದೆ. ಹಾವೇರಿಯ ಮಾರ್ಗದಲ್ಲಿ ಎದುರಾದ ಕಂದಕಗಳನ್ನು ದಾಟಬಹುದು ಎಂಬ ಆತ್ಮವಿಶ್ವಾಸವನ್ನು ಈ ಸಮ್ಮೇಳನ ಮೂಡಿಸಿರುವುದು ಸ್ಪಷ್ಟ. ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಅಭಿವ್ಯಕ್ತಿಸಲಾದ ಸಂಯಮಪೂರ್ಣ ಸಂವೇದನಾಶೀಲ ಮಾತುಗಳ ಹಿಂದೆ ಹತಾಶೆ, ಆಕ್ರೋಶ, ನಿರಾಸೆ ಮಡುಗಟ್ಟಿದಂತೆ ಕಂಡುಬಂದರೂ ಭವಿಷ್ಯತ್ತಿಗೆ ಅತ್ಯವಶ್ಯವಾದ ಭರವಸೆಯ ಛಾಯೆಯನ್ನೂ ಅದರಲ್ಲಿ ಕಾಣುವಂತಾದುದು ಸಮ್ಮೇಳನದ ಹಿರಿಮೆ. ನಮ್ಮ ಸುತ್ತಲೂ ದಿನನಿತ್ಯ ನಡೆಯುತ್ತಿರುವ ಮಹಿಳಾ ದೌರ್ಜನ್ಯ ಮತ್ತು ಅಸ್ಪೃಶ್ಯತೆಯೇ ಮುಂತಾದ ಅಮಾನುಷ ವಿದ್ಯಮಾನಗಳು ಏಕೆ ಸಾಹಿತ್ಯ ಲೋಕದಲ್ಲಿ ಬಿಂಬಿಸಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಕೊಂಚ ಮಟ್ಟಿಗಾದರೂ ಈ ಮಾತುಗಳಲ್ಲಿ ಉತ್ತರ ಗುರುತಿಸಬಹುದು.

ಸಾಹಿತ್ಯ ಮತ್ತು ಮನುಜಸೂಕ್ಷ್ಮತೆ
ಆದರೂ ಸಂವೇದನಾಶೀಲತೆ ಮತ್ತು ಸಮನ್ವಯತೆಯನ್ನು ಬಯಸುವ ಮನಸುಗಳ ಮುಂದೆ ಹೆಬ್ಬಂಡೆಯಂತಹ ಸವಾಲುಗಳಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕಲೆ ಮತ್ತು ಸಾಹಿತ್ಯ ಎರಡೂ ಸಹ ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಪ್ರಭುತ್ವದ ದಾಸ್ಯಕ್ಕೊಳಗಾಗದೆ ಇರುವುದು ಇಂದಿನ ಕಾಲಘಟ್ಟದ ತುರ್ತು ಎನ್ನುವುದನ್ನು ಮನಗಾಣಬೇಕಿದೆ. ಏಕೆಂದರೆ ಭಾರತದ ಬಹುತ್ವ ಅಥವಾ ಬಹುಸಾಂಸ್ಕೃತಿಕ ನೆಲೆಗಳು ಶತಮಾನಗಳಿಂದಲೂ ಪ್ರಭುತ್ವದ ನೆಲೆಗಳಿಂದ ಅಂತರವನ್ನು ಕಾಪಾಡಿಕೊಂಡೇ ಬಂದಿವೆ. ಹಾಗಾಗಿಯೇ ಪ್ರಭುತ್ವದ ಲಕ್ಷಣಗಳು ನೂರಾರು ರೂಪಾಂತರಗಳನ್ನು ಪಡೆದುಕೊಂಡು, ಜಾತಿ ಶ್ರೇಣೀಕರಣ, ತತ್ಸಂಬಂಧಿತ ಗುಲಾಮಗಿರಿ ಮತ್ತು ದಾಸ್ಯ, ಊಳಿಗಮಾನ್ಯತೆ, ರಾಜಪ್ರಭುತ್ವ, ವಸಾಹತುಶಾಹಿಯ ಶೋಷಕ ನೆಲೆಗಳನ್ನು ದಾಟಿಕೊಂಡು ಭಾರತ 1949ರಲ್ಲಿ ತನ್ನದೇ ಆದ ಸಂವಿಧಾನವನ್ನು ತನಗೆ ತಾನೇ ಅರ್ಪಿಸಿಕೊಂಡಿದೆ. ಈ ಸಂವಿಧಾನದ ಮೂಲ ಆಶಯವನ್ನು ಭಾರತದ ನೆಲಸಂಸ್ಕೃತಿಗೆ/ಜನಸಂಸ್ಕೃತಿಗೆ ಮುಖಾಮುಖಿಯಾಗಿಸುವುದು ಸಾಧ್ಯವಾಗುವುದಾದರೆ ನಾವು ಬಯಸುವ ಸೌಹಾರ್ದತೆ, ಸಮನ್ವಯ, ಸೋದರತ್ವ ಮತ್ತು ಮನುಜ ಸೂಕ್ಷ್ಮತೆಯ ನೆಲೆಗಳನ್ನು ಸಹ ಶೋಧಿಸಬಹುದು.
ದುರಾದೃಷ್ಟವಶಾತ್ ಇತಿಹಾಸವನ್ನು ಬಗೆದುನೋಡುವಾಗ ಪ್ರಭುತ್ವಗಳಿಂದ ನಡೆದಿರಬಹುದಾದ ಚಾರಿತ್ರಿಕ ಪ್ರಮಾದಗಳನ್ನು ಹೆಕ್ಕಿತೆಗೆದು ಸಮಕಾಲೀನ ಚೌಕಟ್ಟಿನೊಳಗಿಟ್ಟು ರಾಜಪ್ರಭುತ್ವದ ಊಳಿಗಮಾನ್ಯತೆಯನ್ನು ಪ್ರಜಾಪ್ರಭುತ್ವದ ಸಮಾನತೆಯ ನೆಲೆಯಲ್ಲಿ ನಿರ್ವಚಿಸಲು ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ನಮಗೆ ಇಂದು ನಮ್ಮ ಸುತ್ತಲೂ ನರ್ತಿಸುತ್ತಿರುವ ಶೋಷಕ-ದುಷ್ಟಕೂಟಗಳತ್ತ ಕಣ್ಣೆತ್ತಿಯೂ ನೋಡಲಾಗದಂತೆ ಮಾಡಿ, ಚಾರಿತ್ರಿಕ ವ್ಯಕ್ತಿಗತ ದುಷ್ಟತನವನ್ನು ಯುವ ತಲೆಮಾರಿನ ಮುಂದಿಡಲಾಗುತ್ತಿದೆ. ಇದೇ ವೇಳೆ ಇದೇ ಚರಿತ್ರೆಯ ಪುಟಗಳಲ್ಲಿ ಕಾಣಬಹುದಾದಂತಹ ಸಾಂಸ್ಕೃತಿಕ-ಧಾರ್ಮಿಕ-ಸಾಮುದಾಯಿಕ ದೌರ್ಜನ್ಯಗಳ, ಅಸ್ಪೃಶ್ಯತೆಯಂತಹ ಹೀನಾಚರಣೆಗಳ, ಸ್ತ್ರೀವಿರೋಧಿ ಕ್ರೌರ್ಯಗಳ ಮುಖಾಮುಖಿಗೆ ಬೌದ್ಧಿಕವಾಗಿ ಹಿಂಜರಿಯುತ್ತಿದ್ದೇವೆ. ಹಾಗಾಗಿಯೇ ಆಗಿಹೋದ ಸಾಮ್ರಾಟರ ಮತಾಂಧತೆ ಮತ್ತು ಕ್ರೌರ್ಯ ಗೋಚರಿಸುವಷ್ಟು ಸುಲಭವಾಗಿ ಅದೇ ಕಾಲದ/ವರ್ತಮಾನದ ಸ್ತ್ರೀ ಸ್ವಾತಂತ್ರ್ಯ ಹರಣ, ಅಸ್ಪೃಶ್ಯತೆ ಮತ್ತಿತರ ಅಮಾನುಷ ಪದ್ಧತಿಗಳು ಮತ್ತು ತಳಸಮುದಾಯಗಳು, ದುರ್ಬಲ ವರ್ಗಗಳು ಅನುಭವಿಸಿದ ನೋವು, ಯಾತನೆ, ವೇದನೆ ಮತ್ತು ಅಪಮಾನಗಳು ಗೋಚರಿಸುವುದಿಲ್ಲ.
ಇಂದಿಗೂ ಈ ಅಮಾನುಷ ನೆಲೆಗಳು ಜೀವಂತವಾಗಿದೆ ಎಂದಾಗ, ಅದರ ಹಿಂದಿನ ಚರಿತ್ರೆಯ ಪುಟಗಳನ್ನು ತೆರೆದು ನೋಡಿ, ವಸ್ತುನಿಷ್ಠವಾಗಿ ಸಾಮಾಜಿಕ-ಸಾಂಸ್ಕೃತಿಕ ವಿದ್ಯಾಮಾನಗಳನ್ನು ನಿರ್ವಚಿಸಿ, ವರ್ತಮಾನದ ಸಾಮಾಜಿಕ ಚೌಕಟ್ಟಿನಲ್ಲಿ ಈ ತರತಮಗಳನ್ನು ದಾಖಲಿಸಿ, ಭವಿಷ್ಯದ ತಲೆಮಾರು ಇಂತಹ ಅಮಾನುಷ ಪರಿಸರದಿಂದ ಮುಕ್ತವಾಗಿ ಬದುಕುವಂತಹ, ಸಂಯಮದ ಮಾರ್ಗಗಳನ್ನು ನಿರ್ಮಿಸಬೇಕಿದೆ. ಕನ್ನಡ ಸಾಹಿತ್ಯ ಲೋಕ ಈ ನಿಟ್ಟಿನಲ್ಲಿ ವಿಪುಲವಾದ ಅಕ್ಷರ ಕಣಜವನ್ನು ಹೊಂದಿದೆ. ಆದರೆ ವರ್ತಮಾನದ ಸಾಹಿತ್ಯ ವಲಯ ಈ ಹಾದಿಗೆ ವಿಮುಖವಾಗಿರುವುದೇ ಅಲ್ಲದೆ , ಹಿಮ್ಮುಖ ಚಲನೆಯನ್ನು ಕಾಣುತ್ತಿದೆ. ಹಾಗಾಗಿಯೇ ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವ ಹೀನ ಕೃತ್ಯಗಳು, ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು, ತಳಸಮುದಾಯಗಳ ಅಸ್ಪೃಶ್ಯತೆಯ ಅನುಭವಗಳು, ಬಂಡವಾಳಶಾಹಿ ಆರ್ಥಿಕತೆಯ ಶೋಷಣೆಗೆ ಬಲಿಯಾಗುತ್ತಿರುವ ಶ್ರಮಜೀವಿಗಳು, ಕೋವಿದ್ ಸಂದರ್ಭದಲ್ಲಿ ತಮ್ಮ ಬದುಕಿನ ನೆಲಸೂರುಗಳನ್ನು ಕಳೆದುಕೊಂಡ ಲಕ್ಷಾಂತರ ವಲಸೆ ಕಾರ್ಮಿಕರು, ಸಮಕಾಲೀನ ಸಾಹಿತ್ಯದ ವಸ್ತು ಆಗಿಲ್ಲ/ಆಗುತ್ತಿಲ್ಲ (ಕೆಲವೇ ಅಪವಾದಗಳಿದ್ದರೂ ಇರಬಹುದು).
ಬಳ್ಳಾರಿಯ ಗಣಿಗಳಿಂದ ಕೋಲಾರದ ಚಿನ್ನದ ಗಣಿಯವರೆಗೆ ವಿಸ್ತರಿಸುವ ಮನುಜ ಶೋಷಣೆಯ ಲೋಕವನ್ನು ಮತ್ತು ದೌರ್ಜನ್ಯ ತಾರತಮ್ಯಗಳ ಜಗತ್ತನ್ನು ಭವಿಷ್ಯದ ತಲೆಮಾರಿಗೆ ಪರಿಚಯಿಸದೆ ಹೋದರೆ, ಇಡೀ ಪೀಳಿಗೆಯೇ ಇಂದು ಸೃಷ್ಟಿಯಾಗುತ್ತಿರುವ ಕಲ್ಪಿತ ಇತಿಹಾಸ ಮತ್ತು ಚಾರಿತ್ರಿಕ ಮಿಥ್ಯೆಗಳಿಂದ ಪ್ರಭಾವಿತವಾಗಿ ತನ್ನ ನಿರ್ವಚನೆ ಮತ್ತು ನಿಷ್ಕರ್ಷೆಯ ಸಾಮರ್ಥ್ಯವನ್ನೇ ಕಳೆದುಕೊಂಡುಬಿಡುತ್ತದೆ. ಈ ನಿಟ್ಟಿನಲ್ಲಿ ವರ್ತಮಾನದ ಕನ್ನಡ ಸಾಹಿತ್ಯ ಏಕೆ ಸೋತಿದೆ ಎಂಬ ಪ್ರಶ್ನೆಗೆ ಹಾವೇರಿಯ ಬೆಳವಣಿಗೆಗಳು ಉತ್ತರ ನೀಡಿದರೆ, ಬೆಂಗಳೂರಿನ ಜನಸಾಹಿತ್ಯ ಸಮ್ಮೇಳನ ಭರವಸೆಯ ಪರಿಹಾರೋಪಾಯಗಳನ್ನೂ ನಮ್ಮ ಮುಂದಿಡುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಪರಿಚಾರಕರು ಸೋತಿರುವುದೆಲ್ಲಿ ಎಂಬ ಪ್ರಶ್ನೆಗೂ ಇಲ್ಲಿಯೇ ಉತ್ತರ ಕಂಡುಕೊಳ್ಳಬಹುದು. ಪರ್ಯಾಯ, ಪ್ರತಿರೋಧ ಮುಂತಾದ ಪದಪುಂಜಗಳ ನಡುವೆಯೇ, ಈ ದೇಶದ ಜನಸಂಸ್ಕೃತಿಯನ್ನು ಜತನದಿಂದ ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ಜನಸಾಹಿತ್ಯ ಮೇಳ ಒಂದು ಸಣ್ಣ ಭರವಸೆಯ ಕಿಡಿಯನ್ನು ಹೊತ್ತಿಸಿದೆ. ಹಿಮ್ಮುಖ ಚಲನೆಯಲ್ಲಿರುವ ಸಮಾಜದ ಸಾಂಸ್ಕೃತಿಕ ಚಿಂತನಾ ಲಹರಿಯನ್ನು ಪುನಃ ಭವಿಷ್ಯಮುಖಿಯನ್ನಾಗಿ ಮಾಡುವುದರೊಂದಿಗೇ ಸಮಾಜಮುಖಿಯಾಗಿ, ಮನುಷ್ಯಮುಖಿಯಾಗಿ ಮಾಡುವತ್ತ ಯುವ ತಲೆಮಾರಿನ ಸಾಹಿತಿ ಕಲಾವಿದರು ಯೋಚಿಸಬೇಕಿದೆ. ಮನುಜ-ಲಿಂಗ ಸೂಕ್ಷ್ಮತೆ, ಸಂವೇದನೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರಚೋದಿಸುವ ಅಕ್ಷರಾಸ್ತ್ರವನ್ನು ತಮ್ಮ ಸಾಹಿತ್ಯಕ ಬತ್ತಳಿಕೆಗಳಿಂದ ಹೊರತೆಗೆದು, ಎಲ್ಲರನ್ನೂ ಒಳಗೊಳ್ಳುವಂತಹ ಒಂದು ಸಮನ್ವಯದ ಜಗತ್ತನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಯುವ ಸಮೂಹ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿರುವುದು ಜನಸಾಹಿತ್ಯ ಸಮ್ಮೇಳನದಲ್ಲಿರುವುದನ್ನು ಸೂಕ್ಷ್ಮಗ್ರಾಹಿಗಳಾದ ಯಾರಾದರೂ ಗ್ರಹಿಸಬಹುದು. ಈ ಹೆಜ್ಜೆಯೊಡನೆ ಹೆಜ್ಜೆ ಹಾಕುತ್ತಲೇ ಒಂದು ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ , ದ್ವೇಷಾಸೂಯೆ ಮತ್ಸರ ಮತ್ತು ಹಗೆತನದಿಂದ ಮುಕ್ತವಾಗಲು ಸಮಾಜಕ್ಕೆ ಹೆಗಲು ನೀಡುವ ಜವಾಬ್ದಾರಿ ಹಿರಿಯ ತಲೆಮಾರಿನ ಸಾಹಿತಿ, ಕಲಾವಿದರು ಮತ್ತು ನಾಗರಿಕರ ಮೇಲಿದೆ. ನಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯೋಣ