ಬೆಂಗಳೂರು : ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಗಣಿನಾಡಿನಲ್ಲಿ ಇದೀಗ ಗುಂಡಿನ ಸದ್ದು ಕೇಳಿ ಬಂದಿದ್ದು, ಬಳ್ಳಾರಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್ ಕಟುವ ವಿಚಾರವಾಗಿ ಗುರುವಾರ ರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಗುಂಡು ತಗುಲಿ ಭರತ್ ರೆಡ್ಡಿ ಆಪ್ತ ರಾಜುಶೇಖರ ಸಾವನ್ನಪ್ಪಿದ್ದಾರೆ. ಸದ್ಯ ಬಳ್ಳಾರಿಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಅಪ್ತ ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ತಂದೆ ನಾರಾ ಸೂರ್ಯನಾರಾಣರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ನಿವಾಸದ ಮುಂದೆ ಗನ್ ಮ್ಯಾನ್ ಗಳಿಂದ ಗುಂಡಿನ ದಾಳಿ ಮಾಡಿದ್ದಾರೆ. ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಗುಂಡಿನ ದಾಳಿ ಆರಂಭಿಸಿದ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ನಾಲ್ಕಾರು ರೌಂಡ್ ಪೈರ್ ಮಾಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಭರತ್ ರೆಡ್ಡಿಯಿಂದ ದಬ್ಬಾಳಿಕೆ..
ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ ಹೆಸರಲ್ಲಿ ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗಡುಕರನ್ನು ಹಿಂದಿಟ್ಟುಕೊಂಡು ಶಾಸಕ ಭರತ್ ರೆಡ್ಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ನಾರಾ ವಿರುದ್ಧ ಗಂಗಾವತಿ ಶಾಸಕ ಕಿಡಿ ಕಾರಿದ್ದಾರೆ. ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸೋಮಶೇಖರ್ ರೆಡ್ಡಿ, ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್‌ಗಳಿಂದಲೇ ಬುಲೆಟ್ ಹೊರ ಬಿದ್ದಿದೆ. ಖಾಸಗಿ ಗನ್ ಮ್ಯಾನ್‌ಗಳೆಂದರೆ ಅದು ಸತೀಶ ರೆಡ್ಡಿ ಗನ್ ಮ್ಯಾನ್‌ಗಳೇ ಹೀಗಾಗಿ ಗಲಾಟೆಯಲ್ಲಿ ಫೈರಿಂಗ್ ಮಾಡಿದ್ದು ಸತೀಶ್ ರೆಡ್ಡಿ ಗನ್ ಮ್ಯಾನ್ ಎಂದು ದೂರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿಗೆ ಭರತ್ ರೆಡ್ಡಿ ಬೆಂಬಲಿಗರೇ ಕಾರಣ. ಕಾರ್ಯಕರ್ತನ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದು ಸೋಮಶೇಖರ್ ರೆಡ್ಡಿ ಒತ್ತಾಯಿಸಿದ್ದಾರೆ.

ಬುಲೆಟ್ ಪ್ರದರ್ಶಿಸಿದ ರೆಡ್ಡಿ..
ಅಲ್ಲದೆ ಪೈರ್ ಮಾಡಿದ ಬುಲೆಟ್ ಅನ್ನು ಶಾಸಕ ಜನಾರ್ದನ ರೆಡ್ಡಿ ಪ್ರದರ್ಶಿಸಿದ್ದಾರೆ. ಆದರಲ್ಲಿ ಒಂದು ಗುಂಡು ರಾಜಶೇಖರನ ಎದೆಗೆ ತಗುಲಿದ್ದು, ಇದೀಗ ಈ ಗುಂಡು ಯಾರದ್ದು ಎಂದು ಎಫ್‌ಎಸ್‌ಎಲ್ ತಂಡದಿಂದ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಶಾಸಕ ನಾರಾ ಭರತ್ ರೆಡ್ಡಿ ಆಗಮಿಸಿ ಮೃತ ಆಪ್ತ ರಾಜಶೇಖರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಜನವರಿ 3 ರಂದು ವಾಲ್ಮೀಕಿ ಅನಾವರಣ ಕಾರ್ಯಕ್ರಮ ನಡೆಯಲಿರುವ ಬಳ್ಳಾರಿಯು ಸದ್ಯಕ್ಕೆ ರಾಜಕೀಯ ವೈರುದ್ಧ್ಯದ ಸಂಘರ್ಷದ ಕೊತ ಕೊತ ಕುದಿಯುತ್ತಿದೆ. ಘಟನೆಯ ಕುರಿತು ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟ ಜೋರಾಗಿ ನಡೆಯುತ್ತಿದೆ. ಆದರೆ ಇಬ್ಬರು ರಾಜಕೀಯ ನಾಯಕರ ನಡುವಿನ ರಾಜಕೀಯ ವೈಷಮ್ಯದಲ್ಲಿ ಅನ್ಯಾಯವಾಗಿ ಜೀವವೊಂದು ಉಸಿರು ನಿಲ್ಲಿಸಿರುವುದು ನಿಜಕ್ಕೂ ವಿಪರ್ಯಾಸವೇ ಸರಿ..!













