ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆ ಜಾರಿಗೆ ಕೌಂಟ್ಡೌನ್ ಆರಂಭವಾಗಿದೆ. ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆಯಾಗೋದು ನಿರ್ಧಾರ ಆಗಿದ್ದು, ಸೋಮವಾರವೇ ಸಂಪುಟ ಸಭೆಯೂ ಒಪ್ಪಿಗೆಯ ಮುದ್ರೆ ಹಾಕಲಿದೆ ಎನ್ನಲಾಗಿದೆ. ಕ್ರೈಸ್ತ ಸಮುದಾಯ ಹಾಗೂ ವಿಪಕ್ಷಗಳ ವಿರೋಧದ ನಡುವೆಯೂ ಕಾಯ್ದೆ ಜಾರಿಗೆ ಸರ್ಕಾರ ಸಜ್ಜಾಗಿದೆ.
ಉತ್ತರ ಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಕ್ರೈಸ್ತ ಸಮುದಾಯ, ವಿಪಕ್ಷಗಳ ವಿರೋಧವನ್ನೂ ಲೆಕ್ಕಿಸದ ಸರ್ಕಾರ, ಕಾಯ್ದೆ ಜಾರಿಗೊಳಿಸಲು ಟೊಂಕ ಕಟ್ಟಿ ನಿಂತಿದೆ. ರಾಜಕೀಯ ನಾಯಕರ ವಾಕ್ಸಮರಕ್ಕೆ ವೇದಿಕೆ ಒದಗಿಸಿಕೊಟ್ಟಿದ್ದ ಮತಾಂತರ ನಿಷೇಧ ಕಾಯ್ದೆ ನಿರ್ಣಾಯಕ ಹಂತ ತಲುಪಿದ್ದು, ಚಳಿಗಾಲದ ಅಧಿವೇಶನದಲ್ಲೇ ಮತಾಂತರ ಮಸೂದೆ ಮಂಡನೆಯಾಗೊದು ಫೈನಲ್ ಆಗಿದೆ.
ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಮಸೂದೆಗೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಬಳಿಕ ಚಳಿಗಾಲದ ಅಧಿವೇಶನದಲ್ಲೇ ಅಂಗೀಕಾರ ಪಡೆದು ಮಸೂದೆಗೆ ಕಾಯ್ದೆಯ ರೂಪ ನೀಡಲು ಸರ್ಕಾರ ಸಜ್ಜಾಗಿದೆ. ಇನ್ನು ಮತಾಂತರ ಕಾಯ್ದೆಯಲ್ಲಿ ಯಾವ್ಯಾವ ನಿಯಮಗಳಿರಲಿವೆ ಅನ್ನೋ ಮಾಹಿತಿ ಪ್ರತಿಧ್ವನಿಗೆ ಲಭ್ಯವಾಗಿದೆ.
ಮತಾಂತರಕ್ಕೆ ಪ್ರತ್ಯೇಕ ಅರ್ಜಿ
ಮತಾಂತರಕ್ಕೆ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಸೆಕ್ಷನ್ 9 ರ (1) ರಡಿಯಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು. ಮತಾಂತರಕ್ಕೂ ಮೊದಲಿದ್ದ ಪೂರ್ಣ ಹೆಸರು, ವಿಳಾಸ ಹಾಗೂ ಮತಾಂತರದ ನಂತರದ ಹೆಸರು, ವಿಳಾಸವನ್ನು ನೀಡಬೇಕು. ತಂದೆ, ತಾಯಿ ಹೆಸರು ವಿಳಾಸದ ಮಾಹಿತಿ ನೀಡಬೇಕು. ಉದ್ಯೋಗ ಮತ್ತು ಆದಾಯದ ಬಗ್ಗೆಯೂ ಮಾಹಿತಿ ನೀಡಬೇಕು. ವಿವಾಹ ಆಗಿದೆಯೋ ಇಲ್ಲವೋ ಎನ್ನುವುದನ್ನೂ ತಿಳಿಸಬೇಕು. ಮತಾಂತರ ನಡೆದ ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನೂ ನೀಡಬೇಕು.

ಮತಾಂತರಕ್ಕೆ ಕಠಿಣ ನಿಯಮ:
- ಯಾವುದೇ ರೀತಿಯ ತಪ್ಪು ನಿರೂಪಣೆ, ಒತ್ತಡ, ಅನಗತ್ಯ ಪ್ರಭಾವ
- ಆಕರ್ಷಣೆ ಅಥವಾ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ
- ವಸ್ತುಗಳ ಆಮಿಷ, ಚರ ಅಥವಾ ಸ್ಥಿರ ಆಸ್ತಿ ನೀಡುವ ಹಾಗಿಲ್ಲ
- ಯಾವುದೇ ಧಾರ್ಮಿಕ ಒಡೆತನದ ಶಿಕ್ಷಣ ಸಂಸ್ಥೆಗಳು ಮಾಡುವ ಹಾಗಿಲ್ಲ
- ಯಾವುದೇ ಕಾರಣಕ್ಕೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವಂತಿಲ್ಲ
- ಮತಾಂತರ ಅಂದರೆ ಸ್ವಧರ್ಮ ಬಿಟ್ಟು ಇನ್ನೊಂದು ಧರ್ಮ ಸ್ವೀಕರಿಸುವುದು
- ಮಾತೃ ಧರ್ಮಕ್ಕೆ ಘರ್ ವಾಪಸ ಆದರೆ ಈ ಕಾಯಿದೆ ಅನ್ವಯವಾಗುವುದಿಲ್ಲ ಒಂದು ವೇಳೆ ಬಲವಂತದ ಮತಾಂತರ ಮಾಡಿದ್ದು ಕಂಡುಬಂದ್ರೆ ಅಂಥವರಿಗೆ ದಂಡದ ಜೊತೆಗೆ ಜೈಲುಶಿಕ್ಷೆ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶವಿರಲಿದೆ.
ಬಲವಂತದ ಮತಾಂತರಕ್ಕೆ ಶಿಕ್ಷೆ
- 3 ರಿಂದ 5 ವರ್ಷದವರೆಗೆ ದಂಡ ಸಹಿತ ಸೆರೆವಾಸ ಜಾರಿ
- ಕಿರಿಯ ವಯಸ್ಸಿನವರಾದರೆ 3 ರಿಂದ 10 ವರ್ಷದವರೆಗೆ ಶಿಕ್ಷೆ
- ಸಮುದಾಯ ಮತಾಂತರಕ್ಕೆ ದಂಡ ಸಹಿತ 3 ರಿಂದ 10 ವರ್ಷ
- ಮತಾಂತರ ಆಮಿಷ ಒಡ್ಡುವವರಿಂದ 5 ಲಕ್ಷದವರೆಗೆ ಜೀವನಾಂಶ
- ಎರಡನೇ ಬಾರಿಗೂ ತಪ್ಪು ಮರುಕಳಿಸಿದರೆ ಶಿಕ್ಷೆ ಎರಡು ಪಟ್ಟಾಗಲಿದೆ
- ಮತಾಂತರದ ಉದ್ದೇಶದಿಂದ ಮದುವೆ ಮಾಡಿದರೆ, ಆ ಮದುವೆಗೆ ಮಾನ್ಯತೆ ಇಲ್ಲ
ಸಾಕಷ್ಟು ವಿರೋಧದ ಮಧ್ಯೆಯೂ ಮತಾಂತರ ನಿಷೇಧ ಮಸೂದೆ ಜಾರಿಗೆ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ. ಶತಾಯ-ಗತಾಯ ಕಾಯ್ದೆ ಜಾರಿಗೊಳಿಸಲು ಕಟ್ಟಿಬದ್ಧವಾಗಿದೆ. ಮತಾಂತರದ ವಿಷಯಕ್ಕೆ ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ಒಂದು ಸುತ್ತಿನ ಧರ್ಮಯುದ್ಧ ನಡೆದುಹೋಗಿದ್ದು, ಸದ್ಯ ಮತ್ತೊಂದು ಸುತ್ತಿನ ಕದನಕ್ಕೆ ಸುವರ್ಣಸೌಧ ಸಾಕ್ಷಿಯಾಗುವುದಂತೂ ನಿಶ್ಚಿತ.