ಇತ್ತೀಚೆಗೆ ನಡೆದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳು ಮತ್ತು ದೆಹಲಿಯ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳು ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣದ ಸೂಚನೆಯಾಗಿ ಕಾಣುತ್ತದೆ. ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬ ಘೋಷಣೆಯೊಂದಿಗೇ ಆಡಳಿತ ನಡೆಸುತ್ತಿರುವ ಬಿಜೆಪಿ, ಕಲ್ಪಿತ ನರೇಂದ್ರ ಮೋದಿ ಅಲೆಯ ಹೊರತಾಗಿಯೂ ಹಿಮಾಚಲ ಪ್ರದೇಶದಲ್ಲಿ ಆಡಳಿತವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲಾಗದೆ ಸೋಲನುಭವಿಸಿದೆ. ಗುಜರಾತ್ ಚುನಾವಣೆಗಳಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ನಿರೀಕ್ಷಿತವೇ ಆಗಿದ್ದರೂ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣವಾಗಿ ನೆಲೆಯನ್ನು ಕಳೆದುಕೊಂಡಿಲ್ಲ ಎನ್ನುವುದೂ ಸ್ಪಷ್ಟವಾಗಿದೆ. ಗುಜರಾತ್ ಚುನಾವಣೆಗಳಲ್ಲಿ ಶೇ 27ರಷ್ಟು ಮತ ಗಳಿಸಿರುವ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಪ್ರವೇಶದಿಂದ ತನ್ನ ಮತಬ್ಯಾಂಕುಗಳನ್ನು ಕಳೆದುಕೊಂಡಿರುವುದು ಸ್ಪಷ್ಟ.
ಕಳೆದ ಗುಜರಾತ್ ಚುನಾವಣೆಗಳಲ್ಲಿ ಶೇ 41.5ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಶೇ 14ರಷ್ಟು ಮತಗಳನ್ನು ಕಳೆದುಕೊಂಡಿರುವುದು ಪಕ್ಷದ ದೃಷ್ಟಿಯಿಂದ ಗಂಭೀರ ಸವಾಲಾಗಿ ಕಾಣಲಿದೆ. ಆದರೆ ಗುಜರಾತ್‌ನಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಉದಯಿಸುತ್ತಿರುವ ಅರವಿಂದ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಪಕ್ಷದ ಮತಗಳನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು, ತನ್ನ ಪದಾರ್ಪಣೆಯಲ್ಲೇ ಶೇ 13ರಷ್ಟು ಮತಗಳನ್ನು ಗಳಿಸಿದೆ. ಈ ಕುಸಿತದ ಪರಿಣಾಮ ಕಾಂಗ್ರೆಸ್ 60 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಯ ಮತಗಳಿಕೆಯಲ್ಲಿ ಅಲ್ಪಪ್ರಮಾಣದ ಶೇ 3.5ರಷ್ಟು ಮಾತ್ರವೇ ಹೆಚ್ಚಳವಾಗಿದ್ದು, ವಿರೋಧ ಪಕ್ಷಗಳ ಐಕ್ಯತೆಯ ಕೊರತೆಯೇ ಬಿಜೆಪಿಯ ದಿಗ್ವಿಜಯಕ್ಕೆ ಕಾರಣವಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದೆಹಲಿ, ಪಂಜಾಬ್ ನಂತರ ಈಗ ಗುಜರಾತ್‌ನಲ್ಲಿ ತನ್ನ ಛಾಪು ಮೂಡಿಸುವ ಮೂಲಕ ಆಮ್ ಆದ್ಮಿ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯನ್ನು ಪ್ರತಿನಿಧಿಸುವಂತೆ ತೋರುತ್ತಿದೆ.
ಆದರೆ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದಿರುವುದು ಪಕ್ಷದ ದೃಷ್ಟಿಯಿಂದ ಆಶಾದಾಯಕವಾಗಿದೆ. ಆದರೆ ಭಾರತದ ಅಧಿಕಾರ ರಾಜಕಾರಣದಲ್ಲಿ 1970-80ರ ದಶಕದ ಆಯಾರಾಂ-ಗಯಾರಾಂ ಪರಂಪರೆ ಕಳೆದ ಒಂದು ದಶಕದಲ್ಲಿ ರೂಪಾಂತರ ಹೊಂದಿದ್ದು, ಬಹುಮತ ಹೊಂದಿರುವ ಸರ್ಕಾರಗಳನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಜನಪ್ರತಿನಿಧಿಗಳು ತಮ್ಮ ಪಕ್ಷ ನಿಷ್ಠೆಯನ್ನು ಬದಿಗೊತ್ತಿ ಅಧಿಕಾರದ ಲಾಲಸೆಗೆ ಬಲಿಯಾಗುತ್ತಿದ್ದಾರೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ, ಹಿಮಾಚಲ ಪ್ರದೇಶ ಸುರಕ್ಷಿತವಾಗಿ ಕಾಂಗ್ರೆಸ್ ಕೈಯ್ಯಲ್ಲಿ ಉಳಿಯವುದೇ ಕಾದು ನೋಡಬೇಕಿದೆ. ಆದಾಗ್ಯೂ ಈ ರಾಜ್ಯದ ಗೆಲುವಿನೊಂದಿಗೆ ಕಾಂಗ್ರೆಸ್ ಸೋಲಿನ ಸರಪಳಿಯ ನಡುವೆ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ದೆಹಲಿ ಎಂಸಿಡಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳಲ್ಲಿ ಕಾಣುವ ಸಮಾನ ಅಂಶ ಎಂದರೆ, ಒಂದು ಪರ್ಯಾಯ ಪ್ರಾದೇಶಿಕ ಪಕ್ಷ ಪ್ರಬಲವಾಗಿದ್ದೆಡೆ ಕಾಂಗ್ರೆಸ್ ಬಲಹೀನವಾಗುತ್ತಿದೆ. ಪ್ರಾದೇಶಿಕ ಮಟ್ಟದಲ್ಲಿ ಜನಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸುವ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಾಪಾಡುವ ಭರವಸೆ ನೀಡುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗುತ್ತಿದೆ. ಅಧಿಕಾರ ಕಳೆದುಕೊಂಡು ಒಂಬತ್ತು ವರ್ಷಗಳಾಗುತ್ತಿದ್ದರೂ ಕಾಂಗ್ರೆಸ್ ಪ್ರಸಕ್ತ ಭಾರತಕ್ಕೆ ಅತ್ಯವಶ್ಯವಾದ ಒಂದು ರಾಷ್ಟ್ರೀಯ ಪರ್ಯಾಯವನ್ನು ಮುಂದಿಡುವಲ್ಲಿ ವಿಫಲವಾಗಿರುವುದು ಢಾಳಾಗಿ ಕಾಣುತ್ತಿದೆ.
ಗುಜರಾತ್‌ನಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ, ರಾಜ್ಯದ ಜನತೆ ಸ್ಥಳೀಯ ನಾಯಕರಿಗಿಂತಲೂ ಹೆಚ್ಚಾಗಿ, ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿಶ್ವಾಸ ಇರಿಸಿರುವುದು ಈ ಚುನಾವಣೆಗಳಲ್ಲಿ ಸಾಬೀತಾಗಿದೆ. ಗುಜರಾತ್ ಮಾದರಿ ಎನ್ನುವ ಒಂದು ಕಲ್ಪಿತ ಆಡಳಿತ ವೈಖರಿ ಅಥವಾ ಆರ್ಥಿಕ ಅಭಿವೃದ್ಧಿಯ ಮಾದರಿಯೂ ಸಹ ಹಿಮಾಚಲಪ್ರದೇಶದ ಚುನಾವಣೆಗಳಲ್ಲಿ ಪ್ರಭಾವ ಬೀರಿಲ್ಲ ಎನ್ನುವುದು ಗಮನಾರ್ಹ ಅಂಶ. ಆರ್ಥಿಕತೆಯನ್ನು ಸಂಪೂರ್ಣವಾಗಿ ಕಾರ್ಪೋರೇಟೀಕರಣಗೊಳಿಸುವ ಮೂಲಕ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಸಾರ್ವಜನಿಕ ಔದ್ಯಮಿಕ ವಲಯವನ್ನು ಖಾಸಗೀಕರಣಕ್ಕೊಳಪಡಿಸುವ ಮೂಲಕ ಕಾರ್ಪೋರೇಟ್ ಪ್ರೇರಿತ ಮಾರುಕಟ್ಟೆ ಆರ್ಥಿಕತೆಯನ್ನು ಗುಜರಾತ್ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುತ್ತಿದೆ. ನವ ಉದಾರವಾದದ ಈ ಆರ್ಥಿಕ ನೀತಿಗಳ ಪರಿಣಾಮವಾಗಿಯೇ ಗುಜರಾತ್‌ನಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ ಪರಾಕಾಷ್ಠೆ ತಲುಪಿದೆ. ಆದಾಗ್ಯೂ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದ್ದರೂ ಬಿಜೆಪಿ ಗುಜರಾತ್‌ನಲ್ಲಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷವನ್ನಾಗಲೀ, ಭಾರತದ ಇತರ ರಾಷ್ಟ್ರೀಯ/ಪ್ರಾದೇಶಿಕ ವಿರೋಧ ಪಕ್ಷಗಳನ್ನಾಗಲೀ ಕಾಡಬೇಕಾಗಿರುವ ಪ್ರಶ್ನೆ ಇದು. ಡಿಜಿಟಲ್ ಯುಗ ಭಾರತದ ಆರ್ಥಿಕತೆಯ ದೃಷ್ಟಿಯಿಂದ ಆಶಾದಾಯಕವಾಗಿ ಕಾಣುತ್ತಿದ್ದರೂ, ಕ್ಷಿಪ್ರ ಗತಿಯ ಕಾರ್ಪೋರೇಟೀಕರಣ ಮತ್ತು ಉದಾರವಾದಿ ಆರ್ಥಿಕ ನೀತಿಗಳು ದೇಶದ ತಳಮಟ್ಟದ ಜನಸಾಮಾನ್ಯರ ಪಾಲಿಗೆ ಕರಾಳ ದಿನಗಳನ್ನೇ ಸೂಚಿಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಉದಯಿಸುತ್ತಿರುವ ಆಮ್ ಆದ್ಮಿ ಪಕ್ಷ ಆರ್ಥಿಕ ನೀತಿಗಳು ಮತ್ತು ಸಾಂವಿಧಾನಿಕ ಜಾತ್ಯತೀತ ನಿಲುವುಗಳ ಬಗ್ಗೆ ತನ್ನ ಸ್ಪಷ್ಟ ಪ್ರಣಾಳಿಕೆಯನ್ನು ಈವರೆಗೂ ಜನರ ಮುಂದಿಟ್ಟಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಚುನಾವಣಾ ರಾಜಕಾರಣದ ಮತದಾನ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಹಿತವಲಯದ ಮಧ್ಯಮ ವರ್ಗಗಳನ್ನು ಹಾಗೂ ಔದ್ಯಮಿಕ ಶ್ರೀಮಂತ ವರ್ಗಗಳನ್ನು ಓಲೈಸುವ ಆರ್ಥಿಕ ಸೌಲಭ್ಯ, ಸವಲತ್ತು ಮತ್ತು ರಿಯಾಯಿತಿಗಳನ್ನು ನೀಡುವ ಮೂಲಕವೇ ಆಮ್ ಆದ್ಮಿ ಪಕ್ಷವು ತನ್ನ ರಾಜಕೀಯ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ನವ ಉದಾರವಾದದಲ್ಲಿ ಸಾರ್ವಜನಿಕರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹೊಣೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವ ನೀತಿಗಳಿಗೆ ವ್ಯತಿರಿಕ್ತವಾಗಿ ಕೇಜ್ರಿವಾಲ್ ಶಿಕ್ಷಣ, ವಿದ್ಯುತ್ ಸೌಲಭ್ಯ, ಆರೋಗ್ಯ ಮತ್ತಿತರ ಸೌಲಭ್ಯಗಳನ್ನು ಸರ್ಕಾರದ ಮೂಲಕವೇ ಒದಗಿಸುತ್ತಿರುವುದು ಜನಸಾಮಾನ್ಯರಿಗೆ ಆಕರ್ಷಣೀಯವಾಗಿ ಕಾಣುವುದು ಸಹಜ. ಆದರೆ ಈ ಔದಾರ್ಯದ ನಡುವೆಯೇ ಉತ್ಪಾದನೆಯ ಮೂಲಗಳು ಮತ್ತು ಉತ್ಪಾದನಾ ಸಾಧನಗಳು ಕ್ರಮೇಣ ಕಾರ್ಪೋರೇಟ್ ಪಾಲಾಗುತ್ತಿರುವ ಅಪಾಯವನ್ನೂ ಗಮನಿಸಬೇಕಿದೆ. ಆಮ್ ಆದ್ಮಿ ಈ ಅಂಶವನ್ನು ಪ್ರಸ್ತಾಪಿಸದೆಯೇ, ಜನಪ್ರಿಯ ನೀತಿಗಳ ಮೂಲಕ ಜನಾಕರ್ಷಣೆ ಪಡೆಯುತ್ತಿದೆ.
ಮಾರುಕಟ್ಟೆ ಆರ್ಥಿಕ ನೀತಿ ಮತ್ತು ಸರ್ಕಾರಗಳ ಊಳಿಗಮಾನ್ಯ ಔದಾರ್ಯದ ನೀತಿ, ಇವೆರಡರ ನಡುವೆ ಏರ್ಪಟ್ಟಿರುವ ನಿರ್ವಾತವೇ ಮುಂಬರುವ ದಿನಗಳಲ್ಲಿ ಭಾರತದ ದುಡಿಯುವ ವರ್ಗಗಳ ಪಾಲಿಗೆ ನಿರ್ಣಾಯಕವಾಗಲಿವೆ. ಈ ನಿರ್ವಾತವನ್ನು ತುಂಬುವುದೆಂದರೆ, ನರಸಿಂಹರಾವ್ ಸರ್ಕಾರ ಆರಂಭಿಸಿದ, ವಾಜಪೇಯಿ ಸರ್ಕಾರ ಪೋಷಿಸಿ ಸಲಹಿದ, ಮನಮೋಹನ್ ಸಿಂಗ್ ಸರ್ಕಾರ ಗಟ್ಟಿಗೊಳಿಸಿದ, ನರೇಂದ್ರ ಮೋದಿ ಸರ್ಕಾರ ಪೂರ್ತಿಯಾಗಿ ಅನುಷ್ಟಾನಗೊಳಿಸಿದ ಆರ್ಥಿಕ ಸುಧಾರಣಾ ನೀತಿಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುವುದಕ್ಕಿಂತಲೂ ಹೆಚ್ಚಾಗಿ, ತಮ್ಮ ನಿತ್ಯ ಜೀವನದಲ್ಲಿ ಸುಸ್ಥಿರ ಬದುಕು ರೂಪಿಸಿಕೊಳ್ಳಲಾಗದೆ, ಸುಭದ್ರ ಉದ್ಯೋಗ ಗಳಿಸಲಾಗದೆ, ಸುರಕ್ಷಿತ ವಸತಿ ನೆಲೆ ಕಾಣಲಾಗದೆ, ಮಾರುಕಟ್ಟೆ ಆರ್ಥಿಕತೆಯ ವ್ಯತ್ಯಯಗಳ ನಡುವೆಯೇ ತಮ್ಮ ಜೀವನೋಪಾಯದ ಮಾರ್ಗಗಳನ್ನು ಅರಸುತ್ತಿರುವ ಕೋಟ್ಯಂತರ ಶ್ರಮಜೀವಿಗಳ ಪಾಲಿಗೆ ಈ ಆರ್ಥಿಕ ನೀತಿಗಳು ಎಷ್ಟರ ಮಟ್ಟಿಗೆ ಸಹಾಯಕವಾಗಿರುತ್ತವೆ ಎಂದು ನಿರೂಪಿಸುವುದು ಮುಖ್ಯವಾಗುತ್ತದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಅವಶ್ಯ ವಸ್ತುಗಳ ಬೆಲೆಗಳು ಸಮಾಜದಲ್ಲಿ ಸೃಷ್ಟಿಸುತ್ತಿರುವ ಅನಿಶ್ಚಿತತೆ ಸಾಮಾಜಿಕವಾಗಿ ಅಪಾಯಕಾರಿ ಸ್ಥಿತಿಯನ್ನು ತಲುಪುತ್ತಿದ್ದು, ಪಾತಕೀಕರಣದ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ.
ಅಧಿಕಾರ ಕೇಂದ್ರೀಕರಣ, ಮಾರುಕಟ್ಟೆಯ ಧೃವೀಕರಣ ಮತ್ತು ಸಾರ್ವಜನಿಕ ಸ್ವತ್ತುಗಳ ಕಾರ್ಪೋರೇಟಿಕರಣದ ನಡುವೆ ಒಂದು ಬೃಹತ್ ಸಮೂಹ ವಿಭಿನ್ನ ಆಯಾಮಗಳಲ್ಲಿ ಪಾತಕೀಕರಣಕ್ಕೊಳಗಾಗುತ್ತಿದೆ. ಈ ನಡುವೆಯೇ ಆರ್ಥಿಕ ಅಭದ್ರತೆಯ ಪರಿಣಾಮ ಯುವ ಪೀಳಿಗೆ ಎರಡು ರೀತಿಯಲ್ಲಿ ವಿಘಟನೆಯನ್ನು ಎದುರಿಸುತ್ತಿದೆ. ಒಂದು ಮಾರ್ಗದಲ್ಲಿ ಜಾತಿ ಮತ್ತು ಮತೀಯ ರಾಜಕಾರಣ ಯುವ ಮನಸುಗಳಲ್ಲಿ ದ್ವೇಷಾಸೂಯೆಗಳ ಬೀಜ ಬಿತ್ತುತ್ತಿದ್ದರೆ ಮತ್ತೊಂದು ಮಾರ್ಗದಲ್ಲಿ ಡಿಜಿಟಲ್ ಮಾರುಕಟ್ಟೆಯ ವಂಚಕ ಕಾರ್ಯಾಚರಣೆಗಳಿಗೆ ಬಲಿಯಾಗುತ್ತಿರುವ ಒಂದು ಗುಂಪು ಹಣಗಳಿಕೆಯ ಬೆನ್ನಟ್ಟಿ ತನ್ನ ಸ್ವಂತಿಕೆಯನ್ನೇ ಕಳೆದುಕೊಂಡು, ಸಮಾಜಘಾತುಕ ಶಕ್ತಿಗಳ ವಶವಾಗುತ್ತಿದೆ. ಈ ಎರಡೂ ಸಮೂಹಗಳಲ್ಲಿ ಸೃಷ್ಟಿಯಾಗುವ ದಿಕ್ಕುತಪ್ಪಿದ ಯುವ ಪೀಳಿಗೆ ಅಧಿಕಾರ ರಾಜಕಾರಣದಲ್ಲಿ, ಅಸ್ಮಿತೆಗಳ ರಾಜಕಾರಣದಲ್ಲಿ, ಜಾತಿ, ಮತ , ಧರ್ಮ ಮತ್ತು ಭಾಷಿಕ ನೆಲೆಗಳಲ್ಲಿ ಹರಿದು ಹಂಚಿ ಹೋಗುತ್ತಿದೆ. ಶತಮಾನದ ಪೀಳಿಗೆ ಎನ್ನಲಾಗುವ ಯುವ ತಲೆಮಾರು ರಾಜಕೀಯ ಕಾಲಾಳುಗಳಾಗಿ, ಮತೀಯ ಕಾವಲುಪಡೆಗಳಾಗಿ ತನ್ನ ನೆಲೆ ಕಂಡುಕೊಳ್ಳುತ್ತಿದೆ.
ಈ ತಲೆಮಾರು ಭಾರತದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಲಿದೆ. ದೇಶದ ಆಂತರಿಕ ವ್ಯವಸ್ಥೆಯನ್ನು ಅಭದ್ರಗೊಳಿಸುವಂತಹ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಸದಾ ಸಜ್ಜಾಗಿರುತ್ತವೆ. ಆದರೆ ಸಮಾಜದ ಆಂತರ್ಯವನ್ನೇ ಹಾಳುಗೆಡವಿ, ಶತಮಾನಗಳಿಂದ ಭಾರತ ಸಂಪಾದಿಸಿಕೊಂಡು ಬಂದಿರುವ ಸಮನ್ವಯ, ಸೌಹಾರ್ದತೆಯ ನೆಲೆಗಳನ್ನು ಧ್ವಂಸಗೊಳಿಸುವ ಶಕ್ತಿಗಳು ನಿರ್ಭಿಡೆಯಿಂದ ಕಾರ್ಯಪ್ರವೃತ್ತವಾಗಿವೆ. ಮತ್ತೊಂದೆಡೆ ಸಾಮಾಜಿಕ ಸ್ವಾಸ್ಥ್ಯ ಮತ್ತು ಬೌದ್ಧಿಕ ಚಲನಶೀಲತೆಯನ್ನು ನಾಶಪಡಿಸುವ ಪಿತೃಪ್ರಧಾನ ಧೋರಣೆ, ಸ್ತ್ರೀ ವಿರೋಧಿ ಮನೋಭಾವ, ಸ್ತ್ರೀ ದ್ವೇಷ, ಜಾತಿ ಶ್ರೇಷ್ಠತೆ ಮತ್ತು ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯನ್ನು ಜೀವಂತವಾಗಿಡುವ ಜಾತಿ ತಾರತಮ್ಯದ ನೆಲೆಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದನ್ನೂ ಸರ್ಕಾರಗಳು ಗಂಭೀರವಾಗಿ ಗಮನಿಸುತ್ತಿಲ್ಲ. ಕಳೆದ ಒಂದು ತಿಂಗಳಲ್ಲೆ ವ್ಯಕ್ತಿಯನ್ನು ಹತ್ಯೆಗೈದು, ದೇಹವನ್ನು ತುಂಡುತುಂಡು ಮಾಡಿ ಬಿಸಾಡುವ ನಾಲ್ಕೈದು ಪ್ರಕರಣಗಳು ವರದಿಯಾಗಿರುವುದನ್ನು ಗಮನಿಸಿದರೆ, ನಮ್ಮ ಸಮಾಜವನ್ನು ಕಾಡುತ್ತಿರುವ ವ್ಯಾಧಿ ಎಷ್ಟು ಆಳವಾಗಿದೆ ಎನ್ನುವುದು ಅರ್ಥವಾದೀತು.
ಈ ವ್ಯಾಧಿಗೆ ಚಿಕಿತ್ಸೆ ಇರುವುದು ಕೇವಲ ಆಡಳಿತ ನೀತಿಗಳಲ್ಲಿ ಮಾತ್ರವಲ್ಲ. ಚಿಕಿತ್ಸಕ ಗುಣ ಇರುವಂತಹ ಪ್ರತಿಯೊಂದು ಸಾರ್ವಜನಿಕ ಚಟುವಟಿಕೆಯಲ್ಲೂ ಇದಕ್ಕೆ ಪರಿಹಾರವಿದೆ. ಆದರೆ ಅಧಿಕಾರ ರಾಜಕಾರಣದ ಅಮಲು , ಸಾಂಸ್ಕೃತಿಕ ರಾಜಕಾರಣದ ಮೇಲರಿಮೆಗೆ ಬಲಿಯಾಗುತ್ತಿರುವ ಭಾರತೀಯ ಸಮಾಜ ತನ್ನೊಳಗಿನ ಚಿಕಿತ್ಸಕ ಗುಣವನ್ನೂ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಭಾರತೀಯ ಸಮಾಜವು ಈ ಚಿಕಿತ್ಸಕ ಗುಣವನ್ನು ಮರಳಿ ಪಡೆಯಬೇಕಾದರೆ, ದೇಶದ ರಾಜಕಾರಣವೂ ಸಮಾಜಮುಖಿಯಾಗುವುದು ಅತ್ಯವಶ್ಯ. ಮತೀಯ ಹಾಗೂ ಜಾತಿ ರಾಜಕಾರಣದ ಅಸ್ಮಿತೆಗಳ ಚೌಕಟ್ಟಿನಲ್ಲಿ ಭಾರತೀಯ ಸಮಾಜ ಇನ್ನೂ ವಿಘಟಿತವಾಗುತ್ತಿರುವುದರೊಂದಿಗೇ, ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಆರ್ಥಿಕ ಅಸಮಾನತೆ ಮತ್ತು ತರಗಮಗಳು ಜನಸಾಮಾನ್ಯರ ನಡುವೆ ಸಾಮಾಜಿಕ ಮತ್ತು ಆರ್ಥಿಕ ಅಂತರವನ್ನು ಹೆಚ್ಚಿಸುತ್ತಲೇ ಇವೆ. ಈ ವಿಷಮ ಸನ್ನಿವೇಶದಲ್ಲಿ ಭಾರತದ ರಾಜಕಾರಣ ತನ್ನ ಸಮಾಜಮುಖಿ ಚಿಕಿತ್ಸಕ ಗುಣವನ್ನು ಮರಳಿ ಪಡೆಯುವುದೇ ? ಈ ಗಹನವಾದ ಪ್ರಶ್ನೆಗೆ ಉತ್ತರ ಶೋಧಿಸುತ್ತಲೇ ಪರ್ಯಾಯ ರಾಜಕಾರಣದ ನೆಲೆಗಳನ್ನೂ ಶೋಧಿಸಬೇಕಿದೆ.
ಮುಖ್ಯವಾಹಿನಿಯ ರಾಜಕೀಯ ಪರಂಪರೆಯಿಂದ ಭಿನ್ನವಾದ, ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಇಚ್ಚಿಸುವ ಒಂದು ಪರ್ಯಾಯ ರಾಜಕಾರಣ ಇಂದಿನ ಅಗತ್ಯತೆಯಾಗಿದೆ. ದುಡಿಯುವ ವರ್ಗಗಳನ್ನೂ ಜಾತಿ-ಮತ-ಧರ್ಮಗಳ ಅಸ್ಮಿತೆಗಳಲ್ಲಿ ಸಿಲುಕಿಸುತ್ತಾ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೇರೂರಿರುವಂತಹ ಸಮನ್ವಯದ ನೆಲೆಗಳನ್ನೂ ಭಗ್ನಗೊಳಿಸುತ್ತಿರುವ ಮತಾಂಧತೆ, ಜಾತೀಯತೆ ಮತ್ತು ಮತದ್ವೇಷದ ಶಕ್ತಿಗಳ ವಿರುದ್ಧ, ಸಂವಿಧಾನ ಪ್ರಜಾಪ್ರಭುತ್ವ ಮತ್ತು ಮಾನವಪ್ರಜ್ಞೆಯನ್ನು ಕಾಪಾಡುವಂತಹ ಒಂದು ಸಮಾಜವನ್ನು ರೂಪಿಸಲು ಭಾರತದ ಪ್ರಜ್ಞಾವಂತ ಜನತೆ ಮುಂದಾಗಬೇಕಿದೆ. ಆರ್ಥಿಕವಾಗಿ ಸುಭದ್ರ ನೆಲೆ ಇಲ್ಲದ ಯಾವುದೇ ಸಮಾಜ ಸುಲಭವಾಗಿ ವಿಚ್ಚಿದ್ರಕಾರಕ ಶಕ್ತಿಗಳಿಗೆ ಅಡಗುತಾಣವಾಗುತ್ತದೆ ಎನ್ನುವ ಚಾರಿತ್ರಿಕ ವಾಸ್ತವವನ್ನು ನಾವು ಮನಗಾಣಬೇಕಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 70ಕ್ಕೂ ಹೆಚ್ಚಾಗಿರುವ ದುಡಿಯುವ ವರ್ಗಗಳಿಗೆ ಈ ವಾಸ್ತವವನ್ನು ಮನದಟ್ಟು ಮಾಡಬೇಕಿದೆ.
ನವ ಉದಾರವಾದ, ಮಾರುಕಟ್ಟೆ ಆರ್ಥಿಕತೆ, ಕಾರ್ಪೋರೇಟ್ ಔದ್ಯಮಿಕ ಜಗತ್ತು, ಮತಾಂಧತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಪಿತೃಪ್ರಧಾನ ಧೋರಣೆ ಮತ್ತು ಇವೆಲ್ಲವನ್ನೂ ಪೋಷಿಸುವ ಅಸ್ಮಿತೆಯ ನೆಲೆಗಳು ಸಾಮಾಜಿಕ ವಿಘಟನೆ, ಸಾಂಸ್ಕೃತಿಕ ಅಧಃಪತನ ಮತ್ತು ರಾಜಕೀಯ ನಿರಂಕುಶಾಧಿಕಾರಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸುತ್ತಲೇ ಇರುತ್ತವೆ. ಮುಂಬರುವ ದಶಮಾನದಲ್ಲಿ ಭಾರತದಲ್ಲಿ ಪರ್ಯಾಯ ರಾಜಕಾರಣದ ಕನಸು ಕಾಣುವ ಯಾವುದೇ ಪಕ್ಷ ಅಥವಾ ಗುಂಪು, ಈ ಅಸ್ಮಿತೆಗಳ ಚೌಕಟ್ಟುಗಳನ್ನು ಭೇದಿಸಿ, ಡಾ ಬಿ. ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಮುಂತಾದ ನಾಯಕರು ಕನಸುಕಂಡಂತಹ ಸಮನ್ವಯ-ಸೌಹಾರ್ದತೆಯ ಸಮ ಸಮಾಜವನ್ನು ಕಟ್ಟಲು ಮುಂದಾಗಬೇಕಿದೆ. ಎಡಪಕ್ಷಗಳು, ಪ್ರಗತಿಪರ ಶಕ್ತಿಗಳು ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲ ಸಮುದಾಯಗಳೂ ಈ ಕೈಂಕರ್ಯದಲ್ಲಿ ಕೈಜೋಡಿಸುವುದು ಅನಿವಾರ್ಯವೂ ಆಗಿದೆ.