~ ಡಾ. ಜೆ ಎಸ್ ಪಾಟೀಲ.
ಬೆಂಗಳೂರು :ಏ.೦೪: ಲಿಂಗಾಯತ ಧರ್ಮವು ಏಕದೇವೋಪಾಸಕ ಮತ್ತು ವಿಗ್ರಹ ಆರಾಧಕರಲ್ಲದ ಜಗತ್ತಿನ ಪ್ರಗತಿಪರ ಧರ್ಮಗಳಲ್ಲಿ ಒಂದು. ಅದಕ್ಕೆ ಲಿಂಗಾಯತ ಧರ್ಮೀಯರಲ್ಲಿ ಕಂಡುಬರುವ ಇಷ್ಟಲಿಂಗ ಪೂಜಾ ವಿಧಾನ ಪುಷ್ಟಿಯೊದಗಿಸುತ್ತದೆ. ಇಷ್ಟಲಿಂಗಾರಾಧನೆಯನ್ನು ತ್ರಾಟಕಯೋಗ/ಅನಿಮಿಷದೃಷ್ಟಿಯೋಗ/ ಶಿವಯೋಗ ಸಾಧನೆ/ಲಿಂಗಾಂಗಯೋಗ ಎನ್ನುತ್ತೇವೆ. ಶಿವಯೋಗ ಸಾಧನೆಯ ಭಾಗವಾಗಿ ನಾವು ಇಷ್ಟಲಿಂಗವನ್ನು ಧ್ಯಾನಿಸುತ್ತೇವೆ. ಇದು ಕರಸ್ಥಲದಲ್ಲಿರುವ ಲಿಂಗದ ಮೇಲೆ ತದೇಕಚಿತ್ತವಾದ ದೃಷ್ಟಿ ಇಡುವುದೇ ಆಗಿದೆ. ಇದನ್ನು ಅನುಭಾವದ ಪಾರಿಭಾಷೆಯಲ್ಲಿ ಶರಣರು ಲಿಂಗನಿರೀಕ್ಷಣೆ ಎನ್ನುತ್ತಾರೆ. ಕೆಲವು ಕ್ಷಣ ಲಿಂಗ ನಿರೀಕ್ಷಣೆ ಮಾಡಿದ ಮೇಲೆ ಎರಡನೆ ಹಂತದಲ್ಲಿ ಲಿಂಗಧ್ಯಾನ ಮಾಡಲಾಗುತ್ತದೆ.
ಇಷ್ಟಲಿಂಗಾರಾಧನೆಯು ವೈಜ್ಞಾನಿಕ ಆಧಾರದಲ್ಲಿ ವಿವಿಧ ಹಂತಗಳನ್ನೊಳಗೊಂಡಿದೆ. ಇಷ್ಟಲಿಂಗ ಧ್ಯಾನದ ಸಂದರ್ಭದಲ್ಲಿ ಉಸಿರನ್ನು ನಿಯಂತ್ರಿಸುವುದು ಅತ್ಯಗತ್ಯ. ನಿಯಂತ್ರಿತ ಶ್ವಾಸೋಚ್ಚಾಸ, ತದೇಕ ಚಿತ್ತದ ನೋಟ ಮತ್ತು ಮಂತ್ರಾನುಸಂಧಾನದಿಂದ ಸಾಧಕ ಅಂತರ್ಮುಖಿಯಾಗುತ್ತಾನೆ. ಸತತ ಸಾಧನೆಯಿಂದ ಮೂಲಾಧಾರ ಚಕ್ರದ ಕುಂಡಲಿನಿ ಶಕ್ತಿ (ಲಿಂಗಶಕ್ತಿ/ಆಚಾರಲಿಂಗ) ಜಾಗೃತಗೊಂಡು ೩ನೇ ಕಣ್ಣು ತೆರೆಯುತ್ತದೆ (Opening of the third eye) ಎಂದು ನಂಬಲಾಗುತ್ತದೆ. ಅನಿಮಿಷದೃಷ್ಟಿಯು ಬಹಳ ಮಹತ್ವಪೂರ್ಣವಾದ ಹಂತವಾದ್ದರಿಂದ ಇದನ್ನು ದೃಷ್ಟಿಯೋಗ, ತ್ರಾಟಕಯೋಗ ಅಥವ ಅನಿಮಿಷಯೋಗವೆಂತಲೂ ಕರೆಯುತ್ತಾರೆ. ಈ ಸಾಧನಾ ಪರಿಕಲ್ಪನೆಯನ್ನು ಚಿನ್ಮಯಜ್ಞಾನಿ ಚನ್ನಬಸವಣ್ಣನವರ ವಚನದಲ್ಲಿ ಮಾರ್ಮಿಕವಾಗಿ ವಿವರಿಸ್ಪಟ್ಟಿದೆ:
“ಕರಸ್ಥಲದಲ್ಲಿ ಲಿಂಗಸ್ಥಾಪನವಾದ ಬಳಿಕ,
ಲಿಂಗದಲ್ಲಿ ಅನಿಮಿಷ ದೃಷ್ಟಿಯಾಗಬೇಕು.
ತನ್ನ ತಾನೆ ಅನಿಮಿಷವಾಗಬೇಕು.
ಲಿಂಗದಲ್ಲಿ ಅನಿಮಿಷವಾಗಬೇಕು.
ಜಂಗಮದ ನಿಲುಕಡೆಯನರಿಯಬೇಕು.
ಪ್ರಸಾದದಲ್ಲಿ ಪರಿಪೂರ್ಣನಾಗಬೇಕು.
ಹಿರಣ್ಯಕ್ಕೆ ಕೈಯಾನದಿರಬೇಕು
ತನ್ನ ನಿಲುಕಡೆಯ ತಾನರಿಯಬೇಕು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಕರಸ್ಥಲದ ನಿಜವನರಿವರೆ ಇದು ಕ್ರಮ.”
ಈ ರೀತಿಯಾಗಿ ತ್ರಾಟಕಯೋಗ/ಶಿವಯೋಗವನ್ನು ಚೆನ್ನಬಸವಣ್ಣನವರು ವರ್ಣಿಸಿದ್ದಾರೆ. ಅವರ ಇನ್ನೊಂದು ವಚನ ಇನ್ನೂ ಘಾಡವಾಗಿ ಈ ಪರಿಕಲ್ಪನೆಯನ್ನು ವಿವರಿಸುತ್ತದೆ:
“ಕತ್ತಲಮನೆಯಲ್ಲಿರ್ದ ಮನಜನು,
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ?
ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ
ಹತ್ತಿ ಹರಿಯದನ್ನಕ್ಕ?
ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ?
ಹಾಂಗೆ, ಸಮ್ಯಗ್‍ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ,
ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವನು?
(ಸ.ವ.ಸಂ: 3ˌ ವ.ಸಂ: 1090)
ಚೆನ್ನಬಸವಣ್ಣನವರು ಈ ಚಿಕ್ಕ ವಚನದಲ್ಲಿ ಶಿವಯೋಗ ಸಾಧನೆಯ ಅಘಾದವಾದ ಅರ್ಥವನ್ನು ಹಿಡಿದಿಟ್ಟಿದ್ದಾರೆ. ಕತ್ತಲೆಯ ಮನೆಯಲ್ಲಿ ಕುಳಿತು ಬೆಳಕನ್ನು ನೆನೆದರೆ ಬೆಳಕು ಕಾಣಬಾರದು. ಅದಕ್ಕಾಗಿ ಬೆಂಕಿ ಹೊತ್ತಿಸಲೇಬೇಕು. ಮರದ ಮೇಲಿರುವ ಫಲವು ನಮ್ಮ ನೋಟ ಮಾತ್ರಕ್ಕೆ ಉದುರಿ ಬೀಳದು. ಅದು ಮರ ಹತ್ತಿ ಹರಿದಾಗಲೆ ದೊರಕುವುದು. ಹುಟ್ಟು ಕುರುಡನೊಬ್ಬನೇ ಎಷ್ಟೊತ್ತು ನಡೆದರೂ ತನ್ನ ಇಚ್ಚಿತ ಪಟ್ಟಣವನ್ನು ಮುಟ್ಟಲಾರ. ಅದಕ್ಕಾಗಿ ಆತ ಕಣ್ಣಿದ್ದವನ ಕೈಹಿಡಿದು ನಡೆಯಲೇಬೇಕಾಗುವುದು. ಹಾಗೆ ಇಷ್ಟಲಿಂಗ ಸಾಧನೆಯಲ್ಲಿ ಚೈಚನ್ಯ ಸ್ವರೂಪಿಯಾದ ದೇವನ ನೆನಹುˌ ಆತನ ನಿರೀಕ್ಷಣೆ ಮತ್ತು ಪೂಜೆಗಳು ಬಿಡಿಬಿಡಿಯಾಗಿ ಒಂದೊಂದೆ ಮಾಡುವುದು ಅಪೂರ್ಣ. ಸಮ್ಯಜ್ಞಾನಾತ್ಮಕವಾದ ಲಿಂಗಾರ್ಚನ (ನೆನಹು), ಲಿಂಗ ನಿರೀಕ್ಷಣ (ನಿರೀಕ್ಷಣೆ) ಮತ್ತು ಲಿಂಗಧ್ಯಾನಗಳು (ಧ್ಯಾನ ಅಥವ ಪೂಜೆ) ಇವು ವಿವಿಧ ಹಂತಗಳಲ್ಲಿ ಮಾಡಿದಾಗ ಮಾತ್ರ ಯೋಗಸಾಧನೆ ಪರಿಪೂರ್ಣಗೊಳ್ಳುತ್ತದೆ ಎನ್ನುವ ವಿಷಯ ಚೆನ್ನಬಸವಣ್ಣನವರ ಮೇಲಿನ ವಚನದಲ್ಲಿ ಮಾರ್ಮಿಕವಾಗಿ ಮೂಡಿಬಂದಿದೆ.
ಹಾಗಾಗಿ ಗುರು ಬಸವಣ್ಣನವರಿಂದ ಅವಿಷ್ಕಾರಗೊಂಡಿರುವ ಇಷ್ಟಲಿಂಗಾರಾಧನೆಯು ಜಗತ್ತಿನ ಏಕೈಕ ವೈಜ್ಞಾನಿಕ ಆಧಾರದಲ್ಲಿ ರೂಪಿತವಾದ ಪೂಜಾವಿಧಾನವೆಂದು ಅನೇಕ ಜನ ಪ್ರಾಜ್ಞರು ಗುರುತಿಸಿದ್ದಾರೆ.
~ಡಾ. ಜೆ ಎಸ್ ಪಾಟೀಲ.