ಭಾರತ ಇಡೀ ವಿಶ್ವದಲ್ಲಿ ಯಾವುದೇ ದೇಶ ಮಾಡದೆ ಇರುವ ಸಾಧನೆಯ ಮೈಲಿಗಲ್ಲು ಮುಟ್ಟಿದೆ. ಚಂದ್ರದ ದಕ್ಷಿಣ ಧ್ರುವದಲ್ಲಿ ಸೂರ್ಯನನ್ನೇ ಕಾಣದ ಧ್ರುವ ಪ್ರದೇಶಕ್ಕೆ ಲ್ಯಾಂಡರ್ ಇಳಿಸುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಭಾರತದ ಇಸ್ರೋ ವಿಜ್ಞಾನಿಗಳ ತಂಡ. ಆಂಧ್ರದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ರಾಕೇಟ್ ಉಡಾವಣೆ ಆದರೂ ಚಂದ್ರಯಾನ – 03 ಸಂಪೂರ್ಣ ಯಶಸ್ಸಿನ ಹೊಣೆಯನ್ನು ಹೊತ್ತುಕೊಂಡಿದ್ದು ಬೆಂಗಳೂರಿನ ಇಸ್ರೋ ಕೇಂದ್ರದ ವಿಜ್ಞಾನಿಗಳು. ಇದೀಗ ಚಂದ್ರಯಾನ – 02 ಯಶಸ್ಸು ಸಾಧಿಸಿದ್ದು, ಹಿರಿಹಿರಿ ಹಿಗ್ಗುವಂತೆ ಮಾಡಿದೆ. ಇದರ ನಡುವೆ ರಾಜಕೀಯವೂ ರಂಗು ಪಡೆದುಕೊಂಡಿದೆ.
ಒಂದು ನಿಮಿಷವೂ ಹೆಚ್ಚು ಕಡಿಮೆ ಆಗದಂತೆ ಜಾಣ್ಮೆ..!
ಭಾರತದ ಚಂದ್ರಯಾನದ ಬಳಿಕ ರಷ್ಯಾ ಕೂಡ ಚಂದ್ರಯಾನ ಲೂನಾ – 25 ಹೆಸರಿನಲ್ಲಿ ರಾಕೆಟ್ ಲಾಂಚ್ ಮಾಡಿತ್ತು. ಭಾರತದ ರಾಕೆಟ್ಗೂ ಮುನ್ನವೇ ಅಂದರೆ ಆಗಸ್ಟ್ 21ರಂದು ಚಂದ್ರ ಮೇಲೆ ರಷ್ಯಾ ಬಾವುಟ ಹಾರಬೇಕಿತ್ತು. ಆದರೆ ರಷ್ಯಾ ಚಂದ್ರಯಾನ ಒಂದು ದಿನ ಮುಂಚಿತವಾಗಿಯೇ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಒಳಗಾಯ್ತು. ಇದೀಗ ಭಾರತ ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದ್ದು, ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಪುಟಿನ್. ಇನ್ನು ಭಾರತದ ಇಸ್ರೋ ವಿಜ್ಞಾನಿಗಳು ನಿಗದಿಯಂತೆ ಸಂಜೆ 6 ಗಂಟೆ 04 ನಿಮಿಷಕ್ಕೆ ಶಿಸ್ತುಬದ್ಧವಾಗಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಈಗಾಗಲೇ ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಇಳಿದಿದ್ದು, ಬೆಂಗಳೂರಿನ ಪೀಣ್ಯಾ ISRO ಕೇಂದ್ರಕ್ಕೆ ಫೋಟೋಗಳನ್ನು ರವಾನೆ ಮಾಡಿದೆ. ಲ್ಯಾಂಡಿಂಗ್ ವೇಳೆ ವೆಲಾಸಿಟಿ ಕ್ಯಾಮರಾ ಮೂಲಕ ಸ್ಥಳ ಪರಿಶೀಲನೆಗೆ ತೆಗೆದಿದ್ದ ಫೋಟೋ ಭೂಮಿಗೆ ತಲುಪಿವೆ. ಈ ನಡುವೆ ರಾಜಕೀಯ ಶುರುವಾಗಿದೆ.

ಚಂದ್ರಯಾನ – 03 ಇಳಿಯುತ್ತಿದ್ದಂತೆ ಮೋದಿ ಭಾಷಣ..!
ಕಳೆದ ಬಾರಿ ಚಂದ್ರಯಾನ 02 ಲ್ಯಾಂಡಿಂಗ್ ವೇಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಪೀಣ್ಯಾ ಇಸ್ರೋ ಕೇಂದ್ರಕ್ಕೇ ಆಗಮಿಸಿದ್ರು. ಆದರೆ ಚಂದ್ರಯಾನ 02 ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ ಕೆಲವೇ ಅಂತರದಲ್ಲಿ ಅಪಘಾತಕ್ಕೆ ಈಡಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದಿದ್ದರಿಂದಲೇ ವಿಜ್ಞಾನಿಗಳು ಒತ್ತಡದಿಂದ ಕೈಚೆಲ್ಲಬೇಕಾಯ್ತು ಅನ್ನೋ ಟೀಕೆಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ BRICS ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಆನ್ಲೈನ್ ಮೂಲಕವೇ ಭಾಗಿಯಾಗಿದ್ದರು. ಇಸ್ರೋ ವಿಜ್ಞಾನಿಗಳ ಕೆಲಸವನ್ನು ಕಣ್ತುಂಬಿಕೊಂಡರು. ಆ ಬಳಿಕ ಇಡೀ ದೇಶವನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದರು. ಭಾರತದ ಮುಂದಿನ ಟಾರ್ಗೆಟ್ಸೂರ್ಯ ಮತ್ತು ಶುಕ್ಲ ಎಂದು ಘೋಷಣೆಯನ್ನೂ ಮಾಡಿದರು. ಆದರೆ ಮೋದಿ ದೇಶದಲ್ಲಿ ಇಲ್ಲದಿದ್ದರಿಂದಲೇ ಚಂದ್ರಯಾನ 03 ಯಶಸ್ಸು ಸಾಧಿಸಿದೆ ಎಂದು ಜಾಲತಾಣದಲ್ಲಿ ಪೋಸ್ಟ್ಗಳನ್ನು ಹರಿಯಬಿಡಲಾಗ್ತಿದೆ.
ಮೋದಿಗೂ ಮುನ್ನವೇ ರಾಜ್ಯ ನಾಯಕರ ಭೇಟಿ..!
ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ಶುರು ಮಾಡಿದ ವಿಶ್ವದ ಮೊದಲ ರಾಷ್ಟ್ರ ಭಾರತ. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಇಸ್ರೋ ವಿಜ್ಞಾನಿಗಳ ತಂಡವನ್ನು ಅಭಿನಂದಿಸಲು ಶನಿವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಬ್ರಿಕ್ಸ್ ಶೃಂಗಸಭೆ ಬಳಿಕ ಗ್ರೀಸ್ ದೇಶಕ್ಕೆ ತೆರಳಲಿರುವ ನರೇಂದ್ರ ಮೋದಿ, ನೇರವಾಗಿ ಬೆಂಗಳೂರಿಗೆ ಬರಲಿದ್ದು, ಶನಿವಾರ ಸಂಜೆ ಪೀಣ್ಯಾದ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳ ಜೊತೆ ಚರ್ಚಿಸಲಿದ್ದಾರೆ. ಈ ನಡುವೆ ಇಂದೇ ಸಿಎಂ ಸಿದ್ದರಾಮಯ್ಯ ಇಸ್ರೋ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಇಸ್ರೋ ವಿಜ್ಞಾನಿಗಳ ತಂಡವನ್ನು ಅಭಿನಂದಿಸಲಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಗೌರವಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಮೊದಲೂ ಬುಧವಾರ ಸಂಜೆಯೇ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ, ಗೌರವಿಸುವ ಕೆಲಸ ಮಾಡಿದ್ದಾರೆ.
ನಮ್ಮದೇ ಸಾಧನೆ.. ನಮ್ಮದೇ ಸಾಧನೆ ಅನ್ನೋ ರಾಜಕೀಯ..
ಚಂದ್ರಯಾನ 03 ಯಶಸ್ವಿಯಾಗಿದೆ ಅಂದರೆ ನಮ್ಮ ಭಾರತ ದೇಶದ ಇಸ್ರೋ ವಿಜ್ಞಾನಿಗಳ ತಂಡದ ಶ್ರಮ. ಆದರೆ ನರೇಂದ್ರ ಮೋದಿ ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಇದರ ನಡುವೆ ಇಸ್ರೋ ಪಂಡಿತ್ ಜವಾಹರಲಾಲ್ ನೆಹರೂ ಅವರ ಕನಸು. ಇಂದು ಚಂದ್ರಯಾನ 03ರ ಮೂಲಕ ಸಾಕಾರಗೊಮಡಿದೆ ಅನ್ನೋ ಪೋಸ್ಟರ್ಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ರಾಜಕೀಯ ಏನೇ ಇರಲಿ, ಇಡೀ ವಿಶ್ವದಲ್ಲಿ ಯಾವುದೇ ದೇಶ ಮಾಡಲು ಸಾಧ್ಯವಾಗದ್ದನ್ನು ನಮ್ಮ ವಿಜ್ಞಾನಿಗಳ ತಂಡ ಮಾಡಿದೆ ಎನ್ನುವುದೇ ಹೆಮ್ಮೆಯ ವಿಚಾರ. ಅದನ್ನು ಸಂಭ್ರಮಿಸಬೇಕೇ ವಿನಃ ರಾಜಕಾರಣ ಮಾಡಿದರೆ ಪ್ರಯೋಜನ ಇಲ್ಲ ಅಲ್ಲವೇ..?






