ಬೀದರ್: ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದರು.ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆಯಾದ ಯುವತಿಯ ಮನೆಗೆ ಸಚಿವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಯುವತಿಯ ಕೊಲೆ ಘಟನೆಯು ನಮ್ಮೆಲ್ಲರ ಮನಸ್ಸು ಮಿಡಕಿಸಿದೆ.
ಇದು ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು ಮೃತಳ ಆತ್ಮಕ್ಕೆ ಶಾಂತಿ ಸಿಗಲಿ. ಅವಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸಿದರು.
ಯುವತಿಯ ಕುಟುಂಬಸ್ಥರು ಬಡವರಾಗಿದ್ದು ಘಟನೆಯಿಂದ ನೊಂದ ಕುಟುಂಬಕ್ಕೆ ಸಹಾಯವಾಗಲೆಂದು ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಇಂದು ಮಧ್ಯಾಹ್ನದವರೆಗೆ ಸರ್ಕಾರದ ವತಿಯಿಂದ ಹೆಚ್ಚಿನ 4 ಲಕ್ಷ ರೂ. ಗಳ ಚೆಕ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ಹಂತದಲ್ಲಿ ಹೆಚ್ಚಿನ ಪರಿಹಾರ ಜೊತೆಗೆ ಎಲ್ಲಾ ಅಗತ್ಯ ನೆರವು ನೀಡುವದಾಗಿ ಭರವಸೆ ನೀಡಿದರು.
ಪ್ರಕರಣ ಗಮನಕ್ಕೆ ಬಂದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೊಲೆ ಮಾಡಿರುವ ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದೆ.ಈಗಾಗಲೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಆರೋಪಿಗಳಿಗೆ ಕಾನೂನು ಅಡಿಯಲ್ಲಿ ಅತಿ ಕಠಿಣ ಶಿಕ್ಷೆ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಸಚಿವ ಖಂಡ್ರೆ ತಿಳಿಸಿದರು.