ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ (Vote) ಮಾಡುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕು ಹಾಗೂ ಕರ್ತವ್ಯವಾಗಿದೆ. ಯಾವುದೇ ಚುನಾವಣೆಯಲ್ಲಿ ಹಕ್ಕು ಚಲಾಯಿಸಬೇಕಾದರೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಪ್ರಸ್ತುತ ಹಲವು ಚುನಾವಣೆಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು (Name) ಇದೆಯೇ ಅಥವಾ ಕೈಬಿಟ್ಟು ಹೋಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕೇವಲ ಒಂದು ಸರಳ ಎಸ್ಸೆಮ್ಮೆಸ್ (SMS) ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಕೆಲವೇ ಕ್ಷಣಗಳಲ್ಲಿ ನಿಮ್ಮ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದು.
SMS ಮೂಲಕ ಮತದಾರರ ಪಟ್ಟಿ ಪರಿಶೀಲನೆ ಹೇಗೆ?
ಮೊಬೈಲ್ ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಸಾಮಾನ್ಯ ಸಂದೇಶದ ಮೂಲಕ ನಿಮ್ಮ ಮತದಾನದ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ ನಿಮ್ಮ ಮೊಬೈಲ್ ಮೆಸೇಜ್ ಬಾಕ್ಸ್ ತೆರೆದು ECI (ಅಥವಾ ESI) ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ, ನಂತರ ನಿಮ್ಮ ಮತದಾರರ ಗುರುತಿನ ಚೀಟಿ (Voter ID) ಸಂಖ್ಯೆಯನ್ನು ನಮೂದಿಸಬೇಕು. ಈ ಸಂದೇಶವನ್ನು 1950 ಸಂಖ್ಯೆಗೆ ರವಾನಿಸಬೇಕು.
ಸಂದೇಶ ಕಳುಹಿಸಿದ ಕೆಲವೇ ಸೆಕೆಂಡುಗಳಲ್ಲಿ ಚುನಾವಣಾ ಆಯೋಗದಿಂದ ಮರುಸಂದೇಶ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು, ಮತಗಟ್ಟೆ ವಿವರ, ವಿಧಾನಸಭಾ ಕ್ಷೇತ್ರ ಹಾಗೂ ಮತದಾರರ ಪಟ್ಟಿಯಲ್ಲಿರುವ ನಿಮ್ಮ ಸರಣಿ ಸಂಖ್ಯೆ ಲಭ್ಯವಾಗುತ್ತದೆ. ಈ ವಿವರಗಳು ಬಂದರೆ ನಿಮ್ಮ ಹೆಸರು ಪಟ್ಟಿಯಲ್ಲಿದೆ ಎಂದರ್ಥ. ಒಂದು ವೇಳೆ ಯಾವುದೇ ಮಾಹಿತಿ ಬರದಿದ್ದರೆ ನಿಮ್ಮ ಬೂತ್ ಮಟ್ಟದ ಅಧಿಕಾರಿಯನ್ನು (BLO) ಸಂಪರ್ಕಿಸಿ ಪರಿಶೀಲಿಸಿಕೊಳ್ಳುವುದು ಉತ್ತಮ.
ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪರಿಶೀಲಿಸುವ ವಿಧಾನ
ಆನ್ಲೈನ್ ಮೂಲಕ ಪರಿಶೀಲಿಸಲು ಭಾರತೀಯ ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ ಆದ electoralsearch.eci.gov.in ಗೆ ಭೇಟಿ ನೀಡಬೇಕು. ಅಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ, ವೈಯಕ್ತಿಕ ವಿವರಗಳು ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಹುಡುಕುವ ಆಯ್ಕೆಗಳು ಕಾಣಿಸುತ್ತವೆ.
ಅನುಕೂಲಕರ ಭಾಷೆಯನ್ನು ಆಯ್ಕೆ ಮಾಡಿಕೊಂಡು, ನೀವು ಬಯಸಿದ ವಿಧಾನಕ್ಕೆ ತಕ್ಕಂತೆ ವಿವರಗಳನ್ನು ನಮೂದಿಸಬೇಕು. ವೈಯಕ್ತಿಕ ವಿವರಗಳ ಮೂಲಕ ಹುಡುಕುವಾಗ ಹೆಸರು, ಸಂಬಂಧಿಕರ ಹೆಸರು, ಜನ್ಮ ದಿನಾಂಕ, ವಯಸ್ಸು, ಲಿಂಗ, ಜಿಲ್ಲೆ ಮತ್ತು ಕ್ಷೇತ್ರದ ಮಾಹಿತಿಯನ್ನು ನೀಡಬೇಕು. ಬಳಿಕ ಪರದೆಯ ಮೇಲಿರುವ ಕ್ಯಾಪ್ಚಾ ಕೋಡ್ ದಾಖಲಿಸಿ ಸರ್ಚ್ ಬಟನ್ ಕ್ಲಿಕ್ ಮಾಡಿದರೆ ಮತದಾರರ ಪಟ್ಟಿಯ ಸಂಪೂರ್ಣ ವಿವರಗಳು ಪರದೆಯ ಮೇಲೆ ತೆರೆದುಕೊಳ್ಳುತ್ತವೆ. ಅಲ್ಲಿಯೂ ಮಾಹಿತಿ ಸಿಗದಿದ್ದಲ್ಲಿ ಸ್ಥಳೀಯ ಬಿಎಲ್ಒ ಅಥವಾ ಚುನಾವಣಾ ಸಹಾಯವಾಣಿ 1950 ಕ್ಕೆ ಕರೆ ಮಾಡಿ ನೆರವು ಪಡೆಯಬಹುದು.
ಮಕ್ಕಳಿಗೂ ಇಂಟರ್ನೆಟ್ ಬಳಸುವ ಮೂಲಭೂತ ಹಕ್ಕಿದೆ : ಸುಪ್ರೀಂ ಕೋರ್ಟ್ | Supreme Court






