ಸಹಬಾಳ್ವೆಯ ಸಂಯಮ ಕಳೆದುಕೊಂಡಿರುವ ಸಮಾಜದಲ್ಲಿ ʼ ಸೌಜನ್ಯ ʼ ಕಾಣುವುದಾದರೂ ಹೇಗೆ ?
ಸಾಮಾಜಿಕ ಅಂತಃಸಾಕ್ಷಿಯ ಪ್ರಶ್ನೆ
ಒಂದು ಪ್ರಬುದ್ಧ ಸಮಾಜ ನೋಡಬೇಕಿರುವುದು ಈ ಪಾತಕ ಕೃತ್ಯಗಳನ್ನು ಸೃಷ್ಟಿಸುವಂತಹ ವಾತಾವರಣದತ್ತ ಅಲ್ಲವೇ ? ಹತ್ಯೆಗಿಂತಲೂ ಘೋರವಾಗಿ ಮೃತ ದೇಹವನ್ನು ತುಂಡರಿಸಿ ಎಸೆಯುವ ಪ್ರಕರಣಗಳು ದೆಹಲಿಯ ಶ್ರದ್ಧಾ ವಾಲ್ಕರ್ ಘಟನೆಯ ನಂತರ ಹೆಚ್ಚಾಗುತ್ತಿರುವುದನ್ನು ಅತಿಸೂಕ್ಷ್ಮತೆಯಿಂದ ಗಮನಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಹಾಗೆಯೇ ಯುವ ಸಮೂಹವು ಮಾರಣಾಂತಿಕ ಆಯುಧಗಳನ್ನು ಬಳಸುವ ಪ್ರವೃತ್ತಿಯೂ ಹೆಚ್ಚಾಗುತ್ತಿರುವುದನ್ನೂ ಗಮನಿಸಬೇಕಿದೆ. ಸಾಂಸ್ಥಿಕವಾಗಿ ಒಂದು ನಿರ್ದಿಷ್ಟ ಧರ್ಮದ ಉಳಿವಿಗಾಗಿ ಹೋರಾಡಲು ಸಜ್ಜಾಗುವ ಯುವ ಮನಸುಗಳು ಅದೇ ಧರ್ಮದ ತಾತ್ವಿಕ ಮೂಲ ನೆಲೆಗಳನ್ನು ಉಲ್ಲಂಘಿಸುತ್ತಿರುವುದನ್ನು ಕಂಡೂ ಕಾಣದಂತೆ ಸಮಾಜ ಮೌನವಾಗಿದೆ. ಈ ಯುವ ಮನಸುಗಳನ್ನು ನೆಟ್ಟಾರು, ಇದ್ರಿಸ್ ಪಾಷ, ಹರ್ಷ, ವೇಣುಗೋಪಾಲ್ ಅವರ ಹತ್ಯೆಗಳ ಹಿಂದೆ ಗುರುತಿಸಬಹುದಾಗಿದೆ. ಇಂತಹ ಒಂದು ವಿಕೃತ ಮನಸ್ಥಿತಿಯಿಂದಲೇ ಇಡೀ ಸಮಾಜವೇ ಹಿಂಸಾತ್ಮಕ ಮಾರ್ಗ ಹಿಡಿಯುವ ವಿದ್ಯಮಾನಗಳನ್ನು ಸಮಕಾಲೀನ ಚರಿತ್ರೆಯಲ್ಲೇ ಜಗತ್ತಿನ ಇತರೆಡೆ ಗುರುತಿಸಬಹುದು.
ಧರ್ಮ ರಕ್ಷಣೆಗಾಗಿ ನಡೆಯುವ ಹತ್ಯೆಗಳನ್ನು ಸಮರ್ಥಿಸಿಕೊಳ್ಳುವ ಯಾವುದೇ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನೂ ಸಹ ಸಮರ್ಥಿಸಿಕೊಳ್ಳಲು ಅದೇ ಸಾಂಸ್ಥಿಕ ಧರ್ಮದ ನೆರಳಲ್ಲೇ ಸೃಷ್ಟಿಯಾಗುವ ಪಿತೃಪ್ರಧಾನತೆ ಮತ್ತು ಪುರುಷಾಧಿಪತ್ಯವೂ ನೆರವಾಗುತ್ತದೆ. ಹಾಗಾಗಿಯೇ ನಾವು ಯಾವುದೇ ಕೋಮುಗಲಭೆಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳನ್ನೂ ಹೆಚ್ಚಾಗಿ ಕಾಣುತ್ತೇವೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಪಾತಕಿಗಳಿಗೆ ಸಮ್ಮಾನ ನೀಡುವ ಸಮಾಜವೇ ಮತ್ತೊಂದೆಡೆ ಮಗದೊಂದು ರೂಪದಲ್ಲಿ ಸೌಜನ್ಯ ಪ್ರಕರಣದಲ್ಲೂ ಜೀವಂತವಾಗಿರುತ್ತದೆ. ಪಿತೃಪ್ರಧಾನತೆ, ಸಾಮಾಜಿಕ-ಆರ್ಥಿಕ ಅಂತಸ್ತು ಮತ್ತು ಜಾತಿ-ಧರ್ಮ ಶ್ರೇಷ್ಠತೆಯ ತಾತ್ವಿಕ ಚಿಂತನೆಗಳೇ ದುರ್ಬಲರ ಅಥವಾ ಅಮಾಯಕರ ಮೇಲೆ ನಡೆಯುವ ಎಲ್ಲ ರೀತಿಯ ಅನ್ಯಾಯಗಳ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯ ಸಮಾಜವೂ ಸಹ ಈ ಪ್ರವೃತ್ತಿಗೆ ಕುರುಡಾಗಿರುತ್ತದೆ.

ಇಂದಿಗೂ ನಮ್ಮ ಸಮಾಜದಲ್ಲಿ ಕಾಣಬಹುದಾದ ಜೀವಪರ ಮನಸುಗಳನ್ನು ಕಾಡಬೇಕಿರುವುದು ಈ ಪ್ರವೃತ್ತಿಯ ಉಗಮ, ಪೋಷಣೆ ಮತ್ತು ಅದರ ಹಿಂದಿನ ವಿಕೃತಿಗಳು. ಸಾಂಸ್ಥಿಕ ಧರ್ಮ ಅಥವಾ ಜಾತಿಯ ನೆಲೆಗಳನ್ನು ಸಂರಕ್ಷಿಸುವ ನೆಪದಲ್ಲಿ ಯುವ ಮನಸುಗಳನ್ನು ಹಿಂಸೆಗೆ ಪ್ರೇರೇಪಿಸುವುದರಿಂದ ಒಂದು ಸಮಾಜ ತನ್ನ ಒಡಲನ್ನೇ ಸೀಳುವಂತಹ ದೊಡ್ಡ ಪಡೆಗಳನ್ನೇ ಸೃಷ್ಟಿಸಿಬಿಡುತ್ತದೆ. ಈ ಬೆಳವಣಿಗೆಯನ್ನು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟುಗಳಲ್ಲಿಟ್ಟು ನೋಡುವುದರ ಬದಲು ವಿಶಾಲ ಸಮಾಜದ ನೆಲೆಯಲ್ಲಿಟ್ಟು ಪರಾಮರ್ಶಿಸಿದಾಗ ನಮಗೆ ಈ ಎಲ್ಲ ಪಾತಕಿ ಕೃತ್ಯಗಳು ಒಂದು ಸಾಮಾಜಿಕ ವ್ಯಾಧಿಯಂತೆ ಕಾಣುತ್ತವೆ. ಈ ವ್ಯಾಧಿಯು ಉಲ್ಬಣಿಸುವಂತೆ ಮಾಡುವ ದುಷ್ಟ ಶಕ್ತಿಗಳು ಇರುವಂತೆಯೇ ಶಮನ ಮಾಡುವ ಮಾನವೀಯ ಮನಸುಗಳೂ ಇದ್ದೇ ಇವೆ. ಈ ಮಾನವೀಯ ಮನಸುಗಳು ತಮ್ಮ ಸಾಮುದಾಯಿಕ ಅಸ್ಮಿತೆಗಳನ್ನು ಕೊಡವಿಕೊಂಡು ಸಮಷ್ಟಿ ಪ್ರಜ್ಞೆಯೊಂದಿಗೆ ಮುನ್ನಡೆದಾಗ, ವ್ಯಾಧಿಯು ವ್ಯಸನವಾಗಿ ಪರಿಣಮಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಚಿಕಿತ್ಸಕ ಸಮಾಜದ ಅಗತ್ಯತೆ

ಸಾಮಾಜಿಕ ಅಪರಾಧಗಳನ್ನು ಸಾಂಸ್ಕೃತಿಕ ಚೌಕಟ್ಟಿನಲ್ಲಿಟ್ಟು ನೋಡುವುದರ ಬದಲು ನಮ್ಮ ನಿತ್ಯ ಬದುಕಿನ ವಾತಾವರಣದ ನಡುವೆಯೇ ಗುರುತಿಸಲು ಪ್ರಯತ್ನಿಸಿದಾಗ ಸಮಾಜದ ಆಂತರ್ಯದೊಳಗೇ ನಮಗೆ ಹಲವು ವಿಕೃತಿಗಳು ಕಂಡುಬರುತ್ತವೆ. ವಿಶಾಲ ನೆಲೆಯಲ್ಲಿ ಈ ವಿಕೃತಿಗಳನ್ನು ಪುರುಷಾಧಿಪತ್ಯ, ಮತಾಂಧತೆ, ಜಾತಿ ಶ್ರೇಷ್ಠತೆ ಮುಂತಾಗಿ ಗುರುತಿಸಬಹುದಾದರೂ, ಮಾನವ ಸಮಾಜವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಸದಸ್ಯನಲ್ಲೂ ಅಂತರ್ಗತವಾಗಿರಬಹುದಾದ ಮೌಲ್ಯಗಳನ್ನು ಉದ್ಧೀಪನಗೊಳಿಸುವ ಪ್ರಯತ್ನಗಳು ವರ್ತಮಾನದ ತುರ್ತು. ಈ ಮಾನವೀಯ ಮೌಲ್ಯಗಳಿಗೆ ಯಾವುದೇ ಧರ್ಮ-ಸಿದ್ಧಾಂತ-ತತ್ವಗಳಿಗಿಂತಲೂ ಹೆಚ್ಚಾಗಿ ನೆರವಾಗುವುದು ಮನುಜ ಪ್ರೀತಿ ಮತ್ತು ಜೀವಪರ ಚಿಂತನೆ. ಈ ಮೌಲ್ಯಗಳ ಬೀಜಗಳನ್ನು ನೆಡುವ ಕೆಲಸವನ್ನು ಇಡೀ ಸಮಾಜವೇ ಮಾಡಬೇಕಿದೆ.
ಕಾನೂನು ಮತ್ತು ಆಡಳಿತ ವ್ಯವಸ್ಥೆ ಪ್ರತಿಯೊಂದು ಅಪರಾಧವನ್ನೂ ಸಾಕ್ಷ್ಯಾಧಾರಗಳ ನೆಲೆಯಲ್ಲಿ ನಿಷ್ಕರ್ಷೆ ಮಾಡುತ್ತದೆ. ಅಲ್ಲಿ ಆರೋಪಿಗಳು ಅಪರಾಧಿಗಳಾಗಿ ಸಾಬೀತಾಗುವ ಸುದೀರ್ಘ ಪ್ರಕ್ರಿಯೆಯಲ್ಲಿ ಸತ್ಯ ಎಲ್ಲೊ ಮರೆಯಾಗಿಹೋಗುತ್ತದೆ. ಸೌಜನ್ಯ ಪ್ರಕರಣ ಇದನ್ನು ನಮ್ಮೆದುರು ಇಟ್ಟಿದೆ. ಆದರೆ ಸದಾ ಕಣ್ತೆರೆದಿರುವ ಸಮಾಜಕ್ಕೆ ಈ ಪಾತಕ ಕೃತ್ಯಗಳು ಏಕೆ ಸಂಭವಿಸುತ್ತವೆ ಎಂದು ಖಚಿತವಾಗಿಯೂ ತಿಳಿದಿರುತ್ತದೆ. ಸಾಮಾಜಿಕ ವ್ಯಾಧಿ ಎಂದೇ ಗುರುತಿಸಬಹುದಾದ ಈ ವಿಕೃತ ಮನಸ್ಥಿತಿಗೆ ಕಾರಣಗಳೂ ತಿಳಿದಿರುತ್ತದೆ. ಇದನ್ನು ಶಮನ ಮಾಡಲು ಕಾನೂನಾತ್ಮಕ ಮದ್ದು ಅರೆಯಲಾಗುವುದಿಲ್ಲ. ಸಮಾಜವೇ ಮದ್ದು ಕಂಡುಕೊಳ್ಳಬೇಕಿದೆ. ರಾಜಕೀಯ-ಸೈದ್ಧಾಂತಿಕ ಅಸ್ಮಿತೆ-ಒಲವುಗಳಿಂದಾಚೆಗೆ ನೋಡುವ ದಾರ್ಷ್ಟ್ಯವನ್ನು ಸಮಾಜವೊಂದು ಬೆಳೆಸಿಕೊಳ್ಳುವುದೇ ಆದರೆ ಹಾದಿ ತಪ್ಪುತ್ತಿರುವ ಯುವ ಸಮೂಹವನ್ನು, ಮೌಲಿಕವಾಗಿ ಅವನತಿಯತ್ತ ಸಾಗುತ್ತಿರುವ ಸಮಾಜವನ್ನು ಸರಿಪಡಿಸಲು ಸಾಧ್ಯವಾದೀತು.ಯಾರಿಗೂ ಸಲ್ಲದವಳಾಗಿರುವ ಸೌಜನ್ಯ ಬರ್ಬರ ಅತ್ಯಾಚಾರ-ಹತ್ಯೆಗೀಡಾದರೂ ಯಾವುದೇ ಅಸ್ಮಿತೆಗಳ ಸೋಂಕಿಲ್ಲದೆ ಅನಾಥೆಯಾಗಿಯೇ ಉಳಿದಿರುವುದೇ ನಮ್ಮ ಸಾಮಾಜಿಕ ವ್ಯಾಧಿಯ ಸಂಕೇತವಾಗಿಯೂ ಕಾಣುತ್ತದೆ. ಕಳೆದ ಒಂದು ದಶಕದಲ್ಲಿ ಧಾನಮ್ಮಳನ್ನೂ ಒಳಗೊಂಡಂತೆ ಹತ್ತು ಹಲವು ಜೀವಗಳು ಈ ವ್ಯಾಧಿಗೆ ಬಲಿಯಾಗಿವೆ. ಚಿಕಿತ್ಸಕ ಗುಣ ಹೊಂದಿರುವ ಯಾವುದೇ ಚಿಂತನಾ ವಾಹಿನಿ ಅಥವಾ ಸಮಾಜ ಈ ವ್ಯಾಧಿಯನ್ನು ಗುಣಪಡಿಸಲು ಸಾಧ್ಯ. ಆದರೆ ಕಲುಷಿತಗೊಂಡಿರುವ ಮನಸುಗಳಲ್ಲಿ ಮಾನವತೆಯ ಮೌಲ್ಯಗಳನ್ನು ಬಿತ್ತುವ, ಸಹಬಾಳ್ವೆ ಮತ್ತು ಸಮನ್ವಯದ ಸಂಯಮವನ್ನು ಮೂಡಿಸುವ ಬಹುದೊಡ್ಡ ಜವಾಬ್ದಾರಿಯೊಂದಿಗೆ ಇದನ್ನು ನಿಭಾಯಿಸಬೇಕಾಗುತ್ತದೆ. ಒಂದು ಸುಶಿಕ್ಷಿತ-ಆಧುನಿಕ-ನಾಗರಿಕತೆಯುಳ್ಳ ಸಮಾಜವಾಗಿ ನಾವು ಇದಕ್ಕೆ ಸಜ್ಜಾಗಿದ್ದೇವೆಯೇ ? ಉತ್ತರ ಶೋಧಿಸಬೇಕಿದೆ.












