ರಾಜ್ಯ ರಾಜಕಾರಣದ ಕಾವು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಜನರ ಮನಸ್ಸು ಯಾವ ಕಡೆಗೆ ವಾಲುತ್ತಿದೆ ಅನ್ನೋ ಪಕ್ಕಾ ಲೆಕ್ಕಾಚಾರ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ನಮ್ಮ ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ಹೇಳಿಕೊಳ್ಳುತ್ತಿದೆ. ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕದ ಜನತೆ ಈಗಾಗಲೇ ಕಾಂಗ್ರೆಸ್ಗೆ ಅಧಿಕಾರ ಕೊಡಲು ತೀರ್ಮಾನ ಮಾಡಿದ್ದಾರೆ. ನಮ್ಮ ಪಕ್ಷದ ಪರವಾಗಿ ಒಲವು ವ್ಯಕ್ತವಾಗ್ತಿದೆ ಎನ್ನುತ್ತಿದ್ದಾರೆ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳ ಸ್ಥಿತಿಗತಿಗಳನ್ನು ನೋಡಿದಾಗ ಸಂಪೂರ್ಣವಾಗಿ ಹೌದು ಎನ್ನುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಹಾಗು ಬಿಜೆಪಿ ಸಮಬಲದ ಪೈಪೋಟಿ ನಡೆಸುತ್ತಿದ್ದು, ಜೆಡಿಎಸ್ ಈ ಭಾರೀ ಮತಗಳಿಕೆ ಪ್ರಮಾಣವನ್ನು ಗಣನೀಯವಾಗಿ ಏರಿಸಿಕೊಳ್ಳುವ ಮುನ್ಸೂಚನೆ ಸಿಗುತ್ತಿದೆ. ಪ್ರಾಂತ್ಯವಾರು ಪಕ್ಷಗಳ ಸದ್ಯದ ಪೈಪೋಟಿ ನೋಡುವುದಾದ್ರೆ..
ಹಳೇ ಮೈಸೂರಲ್ಲಿ ನಿಯಂತ್ರಣಕ್ಕೆ ಸಿಗದ ಜೆಡಿಎಸ್..!
ಹಳೇ ಮೈಸೂರು ಭಾಗದ ಜನರ ಲೆಕ್ಕಾಚಾರವೇ ಬೇರೆ, ಈ ಬಾರಿ ಜೆಡಿಎಸ್ ಭದ್ರಕೋಟೆ ಆಗಿರುವ ಹಳೇ ಮೈಸೂರು ಭಾಗದ ಮೇಲೆ ರಾಜಕೀಯ ದಾಳಿ ಮಾಡಲು ಕಾಂಗ್ರೆಸ್ ಬಿಜೆಪಿ ಹವಣಿಸಿದ್ದವು. ಆದರೆ ಕೆಲವು ಕ್ಷೇತ್ರಗಳು ಕಾಂಗ್ರೆಸ್ಗೆ ದಕ್ಕಿದರೂ ಬಿಜೆಪಿಗೆ ನೆಲೆ ಕಂಡುಕೊಳ್ಳುವುದಕ್ಕೆ ಮಾತ್ರ ಸಾಧ್ಯವಾಗ್ತಿದೆ. ಗೆಲುವು ಅನ್ನೋದು ಸದ್ಯಕ್ಕೆ ಸಿಗದ ಫಲ. ಇನ್ನು ಜೆಡಿಎಸ್ ಕಳೆದ ಬಾರಿಯಷ್ಟು ಸ್ಥಾನಗಳನ್ನು ಗೆಲ್ಲದಿದ್ದರೂ ಅತಂತ್ರ ವಿಧಾನಸಭೆ ಬರುವ ಮುನ್ಸೂಚನೆ ಸಿಗುತ್ತಿರುವ ಕಾರಣ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎನ್ನುವ ಕೂಗು ಎದ್ದಿದೆ. ಸರ್ವೇಗಳಲ್ಲಿ ಬರುತ್ತಿರೋ ಮಾಹಿತಿ ಸುಳ್ಳು ಅನ್ನೋದನ್ನು ಜೆಡಿಎಸ್ ಪ್ರಬಲವಾಗಿ ಜನರ ಮನಸ್ಸಿಗೆ ಮುಟ್ಟುವಂತೆ ರವಾನೆ ಮಾಡಿದೆ. ಅತಂತ್ರ ಸ್ಥಿತಿಯಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವ ಪ್ರಶ್ನೆಗೆ ರಾಜ್ಯಾದ್ಯಂತ ಕುಮಾರಸ್ವಾಮಿ ಅನ್ನೋ ಮಾತೇ ಫೈನಲ್ ಆಗ್ತಿದೆ. ಹೀಗಿರುವಾಗ ಒಕ್ಕಲಿಗರು ಜೆಡಿಎಸ್ ಕಡೆಗೆ ವಾಲುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ.
ಒಟ್ಟು ಸ್ಥಾನ: 57
ಬಿಜೆಪಿ 10
ಕಾಂಗ್ರೆಸ್ 22
ಜೆಡಿಎಸ್ 25
ಕರಾವಳಿ ಕರ್ನಾಟಕದಲ್ಲಿ ಮತ್ತೆ ನೆಲಕಚ್ಚುವ ಕಾಂಗ್ರೆಸ್..!
ಕರಾವಳಿ ಕಳೆದ 2 ಲೋಕಸಭಾ ಚುನಾವಣೆ ಬಳಿಕ ಕಲಮ ಪಾಳಯದ ಕಡೆಗೆ ಕರಾವಳಿ ಜನತೆ ಮುಖ ಮಾಡಿದ್ದಾರೆ. ಈ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕೇಸರಿ ಪಾಳಯ ಉರುಳಿಸಿದ ಹೊಸ ಅಭ್ಯರ್ಥಿಗಳ ದಾಳ ಬಿಜೆಪಿಗೆ ಮತ್ತೆ ಕೈ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. ಜೆಡಿಎಸ್ ಹೇಳಿಕೊಳ್ಳುವ ಮಟ್ಟದಲ್ಲಿ ಮತಗಳನ್ನು ಸೆಳೆಯುವ ಶಕ್ತಿ ಇಲ್ಲದ ಕಾರಣಕ್ಕೆ ಜೆಡಿಎಸ್ ಕರಾವಳಿಯಲ್ಲಿ ಕರಾಮತ್ತು ತೋರಿಸುವ ಸಾಧ್ಯತೆ ಕಡಿಮೆ ಇದೆ. ಕೇಸರಿ ಅಲೆ ವಿರುದ್ಧ ಕಾಂಗ್ರೆಸ್ ಗ್ಯಾರಂಟಿ ಕಳೆದು ಹೋಗಿದ್ದು ಬಿಜೆಪಿ ಅಭ್ಯರ್ಥಿಗಳು ಗೆದ್ದು ಬೀಗುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೆ ಇತ್ತೀಚಿಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧ ವಿಚಾರ ಕರಾವಳಿಯಲ್ಲಿ ಕಿಚ್ಚು ಹೊತ್ತಿಸಿದ್ದು, ಕಾಂಗ್ರೆಸ್ ಗೆಲುವನ್ನೇ ತಡೆಯುವ ಸಾಧ್ಯತೆಯೂ ದಟ್ಟವಾಗಿದೆ.
ಒಟ್ಟು ಸ್ಥಾನ: 19
ಬಿಜೆಪಿ – 15
ಕಾಂಗ್ರೆಸ್ – 03
ಜೆಡಿಎಸ್ – 01
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಮೋದಿ ಅಬ್ಬರ..!
ಕಲ್ಯಾಣ ಕರ್ನಾಟಕ ಹಾಗು ಕಿತ್ತೂರು ಕರ್ನಾಟಕ ಕಾಂಗ್ರೆಸ್ ಪಾಲಿಗೆ ಸಾಕಷ್ಟು ಲಾಭ ತಂದುಕೊಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕಿತ್ತೂರು ಕರ್ನಾಟಕದಲ್ಲಿ ಕಳೆದ ಬಾರಿ ಬಿಜೆಪಿ 30 ಸ್ಥಾನಗಳಲ್ಲಿ ಗೆಲುವು ಕಂಡರೆ, ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಈ ಬಾರಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಸ್ವಲ್ಪ ಸ್ಥಾನ ಕಳೆದುಕೊಳ್ಳುವ ಬಗ್ಗೆ ಸಮೀಕ್ಷೆಗಳಲ್ಲಿ ಕಾಣಿಸಿದರೂ ಕಾಂಗ್ರೆಸ್ ಅಂದುಕೊಂಡಷ್ಟು ಸ್ಥಾನಗಳು ಬರುವುದಿಲ್ಲ ಎನಿಸುತ್ತಿದೆ. ಇನ್ನು ಕಲ್ಯಾಣ ಕರ್ನಾಟಕದಲ್ಲೂ ಕಳೆದ ಬಾರಿ ಕಾಂಗ್ರಸ್ 15 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ ಕೇವಲ 12 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಜೆಡಿಎಸ್ 4 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. ಈ ಬಾರಿಯೂ ಕೂಡ ಕಾಂಗ್ರೆಸ್ ಬಿಜೆಪಿ ಅದೇ ಮಟ್ಟದಲ್ಲಿ ಗೆಲುವು ಕಾಣಲಿದ್ದು, ಬಿಜೆಪಿಗೆ ಹಿನ್ನಡೆ ಆಗುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಿತ್ತೂರು – 50
ಬಿಜೆಪಿ – 21
ಕಾಂಗ್ರೆಸ್ – 27
ಜೆಡಿಎಸ್ – 01
ಇತರೆ – 01
ಕಲ್ಯಾಣ ಕರ್ನಾಟಕ – 31
ಬಿಜೆಪಿ – 08
ಕಾಂಗ್ರೆಸ್ – 20
ಜೆಡಿಎಸ್ – 03
ಇತರೆ – 00
ಬೆಂಗಳೂರು ಮಲೆನಾಡಲ್ಲಿ ಕಾಂಗ್ರೆಸ್ಗೆ ಲಾಭ ಅಸಾಧ್ಯ..!
ಮಲೆನಾಡು ಹಾಗು ಬೆಂಗಳೂರು ಭಾಗದಲ್ಲಿ ಈ ಬಾರಿ ಕಾಂಗ್ರೆಸ್ಗೆ ಲಾಭ ತಂದುಕೊಡುವ ಯಾವುದೇ ಅಂಶಗಳು ಕಾಣಿಸುತ್ತಿಲ್ಲ. ಬಿಜೆಪಿ ಕೂಡ ಕಾಂಗ್ರೆಸ್ ಜೊತೆಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಚಾರ ಮಾಡುತ್ತಿರುವುದು ಬಿಜೆಪಿಗೆ ಮೇಲುಗೈ ತಂದುಕೊಟ್ಟರೂ ಅಚ್ಚರಿಯಿಲ್ಲ. ಸದ್ಯಕ್ಕೆ ಬರ್ತಿರೋ ಸಮೀಕ್ಷೆಗಳು ಜನರ ಒಂದಿಷ್ಟು ಮನಸನ್ನು ಬಿಜೆಪಿ ಸೆಳೆಯುವುದರಲ್ಲಿ ಸಂಶಯವಿಲ್ಲ. ಬಿಜೆಪಿ ಕಾಂಗ್ರೆಸ್ ನಡುವೆ ಅಧಿಕಾರಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು, ಅಧಿಕಾರದ ಸನಿಹಕ್ಕೆ ಯಾರು ಬರಬಹುದು ಅನ್ನೋದನ್ನು ರಾಜ್ಯ ಜನರು ಬಿಡಿಸಿ ಹೇಳಲಿದ್ದಾರೆ.