• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ನಾಗರಿಕ ಜಗತ್ತು ನೈತಿಕವಾಗಿ ಕುಬ್ಜವಾಗುತ್ತಿದೆಯೇ ?

ನಾ ದಿವಾಕರ by ನಾ ದಿವಾಕರ
February 19, 2023
in ಅಂಕಣ
0
ನಾಗರಿಕ ಜಗತ್ತು ನೈತಿಕವಾಗಿ ಕುಬ್ಜವಾಗುತ್ತಿದೆಯೇ ?
Share on WhatsAppShare on FacebookShare on Telegram

ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಬೌದ್ಧಿಕ ದಾರಿದ್ರ್ಯ ಸಮಾಜಕ್ಕೆ ಮಾರಕವಾಗುತ್ತದೆ

ADVERTISEMENT

ನಾಗರಿಕ ಜಗತ್ತು ಎಂದ ಕೂಡಲೇ ನಮ್ಮ ಮನಸ್ಸಿಗೆ ಥಟ್ಟನೆ ಹೊಳೆಯುವುದು ಆಧುನಿಕ ನಾಗರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಒಂದು ಸಮಾಜ. ಈ ಮೌಲ್ಯಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ ನಮ್ಮ ಪ್ರತಿಕ್ರಿಯೆ ಸಾಪೇಕ್ಷವಾಗುವುದೇ ಅಲ್ಲದೆ ನಿರ್ಬಂಧಿತವೂ ಆಗಿಬಿಡುತ್ತದೆ. ವ್ಯಕ್ತಿಗತ ನೆಲೆಯಲ್ಲಿನ ಆತ್ಮರತ ಅಭಿವ್ಯಕ್ತಿಗೂ ಅಂತರ್ಗತವಾದ ಮೌಲಿಕ ನಿರ್ವಚನೆಗಳಿಗೂ ಇರುವ ಸೂಕ್ಷ್ಮ ಅಂತರವನ್ನು ಗಮನಿಸಿದಾಗ, ನಮ್ಮ ಸಮಾಜ ಅನೇಕ ಸಂದರ್ಭಗಳಲ್ಲಿ ಆತ್ಮವಂಚಕವಾಗಿಯೇ ಕಾಣುತ್ತದೆ. ಏಕೆಂದರೆ ವ್ಯಕ್ತಿಗತ ನೆಲೆಯಲ್ಲಿ ನಾವು ಯಾವುದೋ ಒಂದು ತತ್ವ, ಸಿದ್ಧಾಂತ ಅಥವಾ ಅಸ್ಮಿತೆಗಳ ಬಂದಿಗಳಾಗಿ, ಉದಾತ್ತ ಎನ್ನಬಹುದಾದ ಮೌಲಿಕ ಚಿಂತನೆಗಳ ವಾಹಕರಾಗಿ ಕಾಣಿಸಿಕೊಳ್ಳುತ್ತೇವೆ. ಅಥವಾ ನಾವು ಪರಿಭಾವಿಸಿರುವ ಚಿಂತನೆಗಳನ್ನೇ ಅತಿ ಉದಾತ್ತ ಎಂದು ಭಾವಿಸಿರುತ್ತೇವೆ. ಆದರೆ ವಾಸ್ತವಿಕ ನೆಲೆಯಲ್ಲಿ ನೋಡಿದಾಗ, ನಮ್ಮ ಚಟುವಟಿಕೆಗಳು ಹಾಗೂ ಸಾರ್ವಜನಿಕವಾಗಿ ನಾವಾಡುವ ಮಾತುಗಳು ಉದಾತ್ತತೆ ಅಥವಾ ಔನ್ನತ್ಯದ ಚೌಕಟ್ಟಿನಿಂದಾಚೆಗಿರುವಂತೆ ಗೋಚರಿಸುತ್ತವೆ.

ಈ ದ್ವಂದ್ವವನ್ನು ರಾಜಕೀಯ ವಲಯದಲ್ಲಿ ಕಾಣುವುದು ಸಹಜವೇನೋ ಎನ್ನುವಷ್ಟು ಮಟ್ಟಿಗೆ ಭಾರತದ ರಾಜಕಾರಣ ತನ್ನ ಮೌಲಿಕ ನೆಲೆಗಳನ್ನು ಕಳೆದುಕೊಳ್ಳುತ್ತಿದೆ. ಜನಸಾಮಾನ್ಯರ ಬದುಕಿನ ದಿಕ್ಕು ದೆಸೆಯನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಅಧಿಕಾರ ರಾಜಕಾರಣದ ವಾರಸುದಾರರು ಮತ್ತು ಉತ್ತರಾಧಿಕಾರಿಗಳಲ್ಲಿ ಒಂದು ಆರೋಗ್ಯಕರ ಸಮಾಜ ಅಪೇಕ್ಷಿಸುವಂತಹ ಮೌಲ್ಯಯುತ ಧೋರಣೆ, ವರ್ತನೆ ಮತ್ತು ಮಾತಿನ ವೈಖರಿ ಕಾಣದೆ ಹೋದಾಗ ಈ ದ್ವಂದ್ವ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತದೆ. ಸಾಂವಿಧಾನಿಕ ಪರಿಭಾಷೆಯಲ್ಲಿ ʼಜನಪ್ರತಿನಿಧಿʼ ಎನಿಸಿಕೊಂಡು, ಸಾಮಾಜಿಕ ಪರಿಸರದಲ್ಲಿ ʼಜನನಾಯಕ/ಕಿʼ ಎನಿಸಿಕೊಂಡು, ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ಆದ ತಾತ್ವಿಕ ನೆಲೆಗಳಲ್ಲಿ ಗುರುತಿಸಿಕೊಳ್ಳುವ ಚುನಾಯಿತ ವ್ಯಕ್ತಿಗಳಿಗೆ ಈ ದ್ವಂದ್ವದ ಜಟಿಲತೆ ಮತ್ತು ಇದರ ಹಿಂದಿನ ಸೂಕ್ಷ್ಮತೆಗಳೂ ಅರ್ಥವಾಗದೆ ಹೋದರೆ, ಬಹುಶಃ ನಾವು ಅಗೋಚರ ಸೂತ್ರಧಾರಿ ಶಕ್ತಿಗಳಿಂದ ನಿಯಂತ್ರಿಸಲ್ಪಡುವ ರೋಬೋಟ್‌ಗಳನ್ನು ಆಯ್ಕೆ ಮಾಡುತ್ತಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ.

ಮತ-ಧರ್ಮ ಮತ್ತು ಸಂಸ್ಕೃತಿ ಎನ್ನುವ ಔನ್ನತ್ಯದ ನೆಲೆಗಳನ್ನು ಶೂನ್ಯದಿಂದ ಹೊರತಂದು, ನೆಲಮಟ್ಟದಲ್ಲಿರಿಸಿ ತಳಮಟ್ಟದ ಜನಸಮುದಾಯಗಳ ನಿತ್ಯ ಜೀವನದ ಚೌಕಟ್ಟಿನಲ್ಲಿಟ್ಟು ನಿರ್ವಚಿಸುವಾಗ ನಮಗೆ ಸಹಜವಾಗಿಯೂ ಸುತ್ತಲಿನ ಸಾಮಾಜಿಕ ವಾಸ್ತವಗಳ ಪರಿವೆ ಮತ್ತು ಸೂಕ್ಷ್ಮಗಳ ಪರಿಜ್ಞಾನ ಇರಬೇಕಾಗುತ್ತದೆ. ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿ/ಸಂಘಟನೆಗಳಿಗೆ ಇದು ಅತ್ಯವಶ್ಯವೂ ಹೌದು. ಈ ಭೂಮಿಕೆಯಲ್ಲಿ ಒಬ್ಬ ಸಿನಿಮಾ ನಟನಿಂದ ಉನ್ನತ ರಾಜಕೀಯ ಹುದ್ದೆಯಲ್ಲಿರುವ,  ಪಾತ್ರಧಾರಿಗಳಾಗಿ ಕಾಣುವ ಪ್ರತಿ ವ್ಯಕ್ತಿಯಲ್ಲೂ ಈ ಜಾಗ್ರತೆ ಸದಾ ಜಾಗೃತಾವಸ್ಥೆಯಲ್ಲೇ ಇರಬೇಕಾಗುತ್ತದೆ. ಇಲ್ಲವಾದಾಗ ಮಾತು ಮತ್ತು ಕೃತಿಯ ನಡುವೆ ಅಂತರ ಹೆಚ್ಚಾದಂತೆಯೇ, ಪರಿಭಾವಿತ ಸಂಸ್ಕೃತಿ ಮತ್ತು ಅನುಸರಿತ ಸಂಸ್ಕೃತಿ ಪ್ರೇರಿತ ಚಟುವಟಿಕೆಗಳ ನಡುವಿನ ಅಂತರವೂ ಹೆಚ್ಚಾಗುತ್ತಲೇ ಹೋಗುತ್ತದೆ. ಹಿಂಸೆ, ಕ್ರೌರ್ಯ, ದೌರ್ಜನ್ಯ ಇವೆಲ್ಲವನ್ನೂ ತಮ್ಮದಲ್ಲದ ʼಅನ್ಯʼ ಸಾಂಸ್ಕೃತಿಕ ನೆಲೆಗಳಲ್ಲಷ್ಟೇ ಕಾಣುವ ಔನ್ನತ್ಯದ ಪ್ರತಿಪಾದಕರೂ ತಮ್ಮ ಅಭಿವ್ಯಕ್ತಿಯ ಮೂಲಕ ಇವುಗಳನ್ನೇ ಪ್ರಚೋದಿಸುವಂತೆ ಮಾತನಾಡುವುದನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗಿದೆ. ಎರಡು ಶತಮಾನಗಳಿಗೂ ಹಿಂದಿನ ರಾಜಪ್ರಭುತ್ವದ ದೌರ್ಜನ್ಯಗಳನ್ನು ಖಂಡಿಸುತ್ತಲೇ, ಅದೇ ಪ್ರಾಚೀನತೆಯನ್ನು ಬಿಂಬಿಸುವ ರೀತಿಯಲ್ಲಿ ʼಶತ್ರು ದಮನʼದ ಮಾತುಗಳನ್ನಾಡುವುದನ್ನು ಹೀಗೆ ಅರ್ಥೈಸಿದರೆ ಬಹುಶಃ ನಾವು ಎಡವುತ್ತಿರುವುದು ಎಲ್ಲಿ ಎಂದು ಅರ್ಥವಾಗುತ್ತದೆ.

ಪ್ರಜಾಪ್ರಭುತ್ವ ಮತ್ತು ಮಾನವೀಯ  ನೆಲೆ

ರಾಜಪ್ರಭುತ್ವದ ವಿಭಿನ್ನ ಕಾಲಘಟ್ಟಗಳಲ್ಲಿ  ಆಳುವವರು ತಮ್ಮ ವಿರೋಧಿಗಳನ್ನು ಶತ್ರುಗಳಂತೆ ಕಾಣುತ್ತಿದ್ದಾಗ ದಮನ, ನಿಗ್ರಹ, ನಿಯಂತ್ರಣ ಮತ್ತು ಸಂಹಾರ ಎಂಬ ನಾಲ್ಕು ಕ್ರಮಗಳ ಮೂಲಕ ತಮ್ಮ ಆಧಿಪತ್ಯವನ್ನು ಸಾಧಿಸುತ್ತಿದ್ದರು. ಊಳಿಗಮಾನ್ಯ ಸಮಾಜದ ಕ್ರೌರ್ಯ ಮತ್ತು ಸಾಮ್ರಾಜ್ಯಶಾಹಿ ವಿಸ್ತರಣೆಯ ದೌರ್ಜನ್ಯಗಳು ಈ ನಾಲ್ಕೂ ಕ್ರಮಗಳಲ್ಲಿ ವ್ಯಕ್ತವಾಗುತ್ತಿದ್ದವು. ಆಂತರಿಕ ಶತ್ರುಗಳ ದಮನ ನಿಗ್ರಹ ಮತ್ತು ನಿಯಂತ್ರಣ, ಬಾಹ್ಯ ಶತ್ರುಗಳ ದಮನ ಹಾಗೂ ಸಂಹಾರ ರಾಜಪ್ರಭುತ್ವದ ಸಾಮಾನ್ಯ  ನಿಯಮವೂ ಆಗಿತ್ತು. ವಿರೋಧಿಗಳನ್ನು ಅಥವಾ ಶತ್ರುಗಳನ್ನು ಸಂಹರಿಸುವುದು ರಾಜಪ್ರಭುತ್ವದ ಶೌರ್ಯದ ಸಂಕೇತವಾಗಿದ್ದಂತೆಯೇ, ಸಾಮ್ರಾಜ್ಯ ವಿಸ್ತರಣೆಯ ಮಾರ್ಗವೂ ಆಗಿದ್ದುದನ್ನು ಇತಿಹಾಸದುದ್ದಕ್ಕೂ ಗುರುತಿಸಬಹುದು. ಭೂಮಿಯ ಒಡೆತನದ ಲಾಲಸೆ ಮತ್ತು ಸಮಾಜವನ್ನು ತಮ್ಮ ಅಧೀನದಲ್ಲಿ ಹಿಡಿದಿಟ್ಟುಕೊಳ್ಳುವ ಲೋಭ ಬಹುತೇಕ ಎಲ್ಲ ರಾಜಮಹಾರಾಜರುಗಳನ್ನೂ, ಸಾಮ್ರಾಟರನ್ನೂ ಆವರಿಸಿದ್ದ ಸಮಾನ ಲಕ್ಷಣವಾಗಿತ್ತು.

ಇಲ್ಲಿ ಗಮನಿಸಬೇಕಾದ ಒಂದು ಚಾರಿತ್ರಿಕ ಸತ್ಯ ಎಂದರೆ, ಶತ್ರು ಸಂಹಾರದ ಪ್ರಕ್ರಿಯೆಯಲ್ಲಿ, ಕಳಿಂಗ ಯುದ್ಧದಲ್ಲಿ ತನ್ನಿಂದ ಹತರಾದ ಸಾವಿರಾರು ಅಮಾಯಕ ಜೀವಗಳನ್ನು ಕಂಡು, ಪರಿತಪಿಸಿ ತನ್ನಿಂದ ಮತ್ತೊಮ್ಮೆ ಅಂತಹ ಕ್ರೌರ್ಯ ಸಾಧ್ಯವಿಲ್ಲ ಎಂಬ ಪಶ್ಚಾತ್ತಾಪದೊಂದಿಗೆ, ಸಮರಾಂಗಣದಿಂದ ನಿರ್ಗಮಿಸಿದ  ಏಕೈಕ ಸಾಮ್ರಾಟ ಎಂದರೆ ಅಶೋಕ ಮಾತ್ರ . ವಿಪರ್ಯಾಸವೆಂದರೆ ಎರಡು ಸಾವಿರ ವರ್ಷಗಳು ಕಳೆದರೂ ಅಂತಹ ಒಬ್ಬ ದೊರೆಯನ್ನು ಮನುಕುಲ ಸೃಷ್ಟಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಅಶೋಕನ ಪರಿತಾಪಕ್ಕೆ ಕಾರಣವಾದ ಅಮಾಯಕ ಜೀವಗಳ ಮಾರಣ ಹೋಮ 21ನೆಯ ಶತಮಾನದ ಅಧುನಿಕ ಮಾನವ ಜಗತ್ತಿನಲ್ಲೂ ಪರಿತಾಪವನ್ನು ಉಂಟುಮಾಡುತ್ತಿಲ್ಲ ಎನ್ನುವುದು ವಿಡಂಬನೆ ಅಲ್ಲವೇ ? ನಾವು ಅಶೋಕನನ್ನು ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ಕಾಣುತ್ತೇವೆ, ಸಮರಾಂಗಣವನ್ನು ತೊರೆದು ವಿಶ್ವಪ್ರೀತಿಯನ್ನು ಹರಡುವ ಬೌದ್ಧ ವಿಹಾರಗಳಲ್ಲಿ ತನ್ನ ನೆಲೆ ಕಂಡುಕೊಂಡ ಅಶೋಕನ ಹೆಜ್ಜೆ ಗುರುತುಗಳನ್ನು ಇಂದಿಗೂ ಸಹ ಭಾರತದ ಹೆಮ್ಮೆ ಎಂದೇ ಬೆನ್ನುತಟ್ಟಿಕೊಳ್ಳುತ್ತೇವೆ. ಆದರೆ ಒಂದು ಆಧುನಿಕ-ನಾಗರಿಕ ಸಮಾಜವಾಗಿ ನಾವು ಸಮರೋತ್ಸಾಹದ ಅವಗುಣಗಳಿಂದ ಮುಕ್ತರಾಗಿದ್ದೇವೆಯೇ ? ಆಧುನಿಕ ಬಂಡವಾಳ ಜಗತ್ತಿನಲ್ಲಿ ಸಂಪತ್ತಿನ ಸ್ವಾಧೀನಕ್ಕಾಗಿ ನಡೆಯುವ ಅಮಾನುಷ ಯುದ್ಧಗಳನ್ನೂ ಸಹ ನಮ್ಮದೇ ಆದ ಧಾರ್ಮಿಕ-ರಾಜಕೀಯ-ಭೌಗೋಳಿಕ-ಸಾಂಸ್ಕೃತಿಕ ಕಾರಣಗಳಿಗಾಗಿ ಸ್ವಾಗತಿಸುತ್ತೇವೆ. ಯುದ್ಧವಿರೋಧಿಗಳು ಸಮಾಜವಿರೋಧಿಗಳಾದರೆ ಯುದ್ಧ ಪ್ರೇಮಿಗಳು ದೇಶಪ್ರೇಮಿಗಳಾಗುವ ಒಂದು ವಿಶಿಷ್ಟ/ವಿಕೃತ ನಾಗರಿಕತೆಯನ್ನು ನಾವು ಮೈಗೂಡಿಸಿಕೊಂಡಿದ್ದೇವೆ.

ಈ ಚಾರಿತ್ರಿಕ ಹಿನ್ನೆಲೆಯಲ್ಲಿ ನಮ್ಮ ವರ್ತಮಾನದ ಸಮಾಜವನ್ನು ಅವಲೋಕಿಸಿದಾಗ, ಯುದ್ಧೋತ್ಸಾಹ ಅಥವಾ ಸಮರಾಂಗಣದ ನೆಲೆಗಳು ಭೋಗೋಳಿಕ ಚೌಕಟ್ಟುಗಳನ್ನು ದಾಟಿ ಕೌಟುಂಬಿಕ ಚೌಕಟ್ಟುಗಳಲ್ಲಿ ನೆಲೆಸಿರುವುದನ್ನು ಕಾಣಬಹುದಾಗಿದೆ. ಮತ್ತೊಂದು ಜೀವದ ಹತ್ಯೆ ಮಾಡುವುದು ಪಾಪದ ಕತ್ಯ ಎಂಬ ಉದಾತ್ತ ಅಧ್ಯಾತ್ಮವನ್ನು ಬದಿಗಿಟ್ಟು ನೋಡಿದಾಗಲೂ, ಒಂದು ಜೀವಿಗೆ ಜೀವ ಕೊಡುವ ಶಕ್ತಿ ಇಲ್ಲದ ನಮಗೆ ಜೀವ ತೆಗೆಯುವ ಹಕ್ಕು ಇದೆಯೇ ಎಂಬ ಪ್ರಶ್ನೆಯೂ ಸಹ ನಮ್ಮನ್ನು ಕಾಡುತ್ತಿಲ್ಲ. ಸಮಾಜಮುಖಿಗಳಾಗಿ ಭವಿಷ್ಯದೆಡೆಗೆ ನಡೆಯಬೇಕಾದ ಯುವ ಸಮೂಹವನ್ನು ಸಾರಾಸಗಟಾಗಿ ರಣಾಭಿಮುಖಿಗಳಾಗಿ ಮಾಡುತ್ತಿದ್ದೇವೆ ಅಲ್ಲವೇ ? ಮನುಷ್ಯ ಜೀವವನ್ನು ಉಳಿಸಲು ನೂರು ಕಾರಣಗಳು ಕಾಣಬಹುದು ಆದರೆ ಜೀವ ಹರಣ ಮಾಡಲು ದ್ವೇಷವೊಂದೇ ಸಾಕಲ್ಲವೇ ? ಈ ದ್ವೇಷದ ಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಲೇ ಬಂದಿರುವ ಸಮಾಜವನ್ನು ʼ ನಾಗರಿಕ ಸಮಾಜ ʼ ಎಂದು ನಿರ್ವಚಿಸಲು ಸಾಧ್ಯವೇ ? ಈ ಪ್ರಶ್ನೆ ವರ್ತಮಾನದ ಸಂದರ್ಭದಲ್ಲಿ ಪ್ರತಿ ವ್ಯಕ್ತಿಯನ್ನೂ ಕಾಡಬೇಕಿದೆ.

ಈ ತಾತ್ವಿಕ ನಿಂತು ನೋಡಿದಾಗ ಸಾರ್ವಜನಿಕ ಬದುಕಿನಲ್ಲಿ ನಾವು ಉದಾತ್ತ ಎಂದು ಪರಿಭಾವಿಸುವ ಅಥವಾ ಔನ್ನತ್ಯದ ನೆಲೆಯಲ್ಲಿ ನಿರ್ವಚಿಸುವ ಮೌಲ್ಯಗಳನ್ನು ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಗುರುತಿಸಬೇಕೋ ಅಥವಾ ʼವಿಶಾಲ ಸಮಾಜʼ ಎನಿಸಿಕೊಳ್ಳುವ ಜನಸಮೂಹಗಳ ನಡುವೆ ಶೋಧಿಸಬೇಕೋ ಎನ್ನುವ ಜಿಜ್ಞಾಸೆಯೊಂದಿಗೇ ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ವಾತಾವರಣವನ್ನು ಪರಾಮರ್ಶಿಸಬೇಕಿದೆ. ಶತಮಾನಗಳ ಹಿಂದೆ ಜಗತ್ತನ್ನು ಆಳಿದ ಸಾಮ್ರಾಟರಿಗೆ, ರಾಜಮಹಾರಾಜರುಗಳಿಗೆ ತಮ್ಮ ಯಜಮಾನಿಕೆ, ಭೂಮಿಯ ಮೇಲಿನ ಒಡೆತನ, ಜನತೆಯ ಮೇಲಿನ ಆಧಿಪತ್ಯ ಹಾಗೂ ಸಮಸ್ತ ಜಗತ್ತನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳುವ ಹಪಹಪಿ ಇವಿಷ್ಟೇ ಜೀವನಾದರ್ಶಗಳಾಗಿದ್ದವು.  ಹಾಗಾಗಿ ಜೀವ ಜಗತ್ತಿನ ಸಕಲ ಚರಾಚರಗಳೂ ಸಾಮ್ರಾಟರ ರಕ್ತದಾಹಕ್ಕೆ ಬಲಿಯಾಗುತ್ತಿದ್ದುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಇದರ ನಡುವೆಯೂ ʼ ಜನಪರ ʼ ಎನ್ನಬಹುದಾದ ದೊರೆಗಳನ್ನು ಕಾಣಬಹುದೇ ಹೊರತು ʼಜೀವಪರʼ ದೊರೆಗಳನ್ನು ಕಾಣುವುದು ಕಷ್ಟ. ಅಶೋಕನಿಗೆ ಜೀವಪರತೆಯ ಜ್ಞಾನೋದಯವಾದದ್ದು, ಸಾವಿರಾರು ಅಮಾಯಕರ ರಕ್ತದೋಕುಳಿಯ ನಂತರದಲ್ಲಷ್ಟೇ.  ಆದರೆ ಆಶೋಕನ ನಂತರದಲ್ಲಿ ಇಂತಹ ಪ್ರಸಂಗಗಳು ಮರುಕಳಿಸಿಲ್ಲ ಎನ್ನುವುದೂ ಚಾರಿತ್ರಿಕ ಸತ್ಯ.

ಮಾನವ ಸಮಾಜ ಇಂತಹ ಕ್ರೂರ, ದಮನಕಾರಿ ಸಂಸ್ಕೃತಿಗಳನ್ನು ದಾಟಿ ಬಂದಿದೆ. ಗುಲಾಮಗಿರಿ, ಊಳಿಗಮಾನ್ಯ ಪದ್ಧತಿ, ರಾಜಪ್ರಭುತ್ವ, ನಿರಂಕುಶ ಪ್ರಭುತ್ವ ಮತ್ತು ಸರ್ವಾಧಿಕಾರಗಳ ಇತಿಹಾಸವನ್ನು ಹಿಮ್ಮೆಟ್ಟಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಮನುಷ್ಯನ ಜೀವಿಸುವ ಹಕ್ಕನ್ನು ಎಂತಹುದೇ ಪರಿಸ್ಥಿತಿಯಲ್ಲಾದರೂ ಕಾಪಾಡಬೇಕಾದ ಒಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರತಿ ವ್ಯಕ್ತಿಯ ಜೀವ, ಜೀವನೋಪಾಯ ಮತ್ತು ಬದುಕಿನ ನೆಲೆಗಳನ್ನು ಸಂರಕ್ಷಿಸುವ ಹೊಣೆ ಇಡೀ ಸಮಾಜದ ಮೇಲಿರುತ್ತದೆ.  ಈ ಸಮಾಜವನ್ನು ನಿರ್ವಹಿಸುವ, ನಿಯಂತ್ರಿಸುವ ಮತ್ತು ಮುನ್ನಡೆಸುವ ಜವಾಬ್ದಾರಿ, ಪ್ರಜಾಪ್ರಭುತ್ವದಲ್ಲಿ ಚುನಾಯಿತ ಜನಪ್ರತಿನಿಧಿಗಳ ಮೇಲಿರುತ್ತದೆ. ಎರಡು-ಮೂರು ಶತಮಾನಗಳ ಹಿಂದೆ ರಾಜಪ್ರಭುತ್ವದ ಪ್ರತಿನಿಧಿಯೊಬ್ಬ ತನ್ನವರಲ್ಲದವರನ್ನು ಇಲ್ಲವಾಗಿಸಿದ್ದ ಎಂಬ ಕಾರಣಕ್ಕೆ, ಇಂದಿನ ಪ್ರಜಾಪ್ರಭುತ್ವದ ಪ್ರತಿನಿಧಿಯೂ ಅದೇ ಮಾರ್ಗವನ್ನು ಅನುಸರಿಸುವುದಾದರೆ, ನಾವು ನಾಗರಿಕತೆಯಲ್ಲಿ ಮುಂದುವರೆದಿದ್ದೇವೆ ಎಂದು ಹೇಗೆ ಹೇಳಲು ಸಾಧ್ಯ ?

ನಾಗರಿಕತೆಯ ಸಂಕೀರ್ಣತೆಗಳು ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಸಂದರ್ಭದಲ್ಲಿ, ಮಾನವ ಜಗತ್ತಿನ ಸಂವೇದನೆ ಮತ್ತು ಸೂಕ್ಷ್ಮ ಸಂಬಂಧಗಳೂ ಸಹ ನಿರಂತರ ದಾಳಿಗೊಳಗಾಗುತ್ತಿವೆ. ಮನುಷ್ಯ ಸಂಬಂಧಗಳನ್ನು ಶಿಥಿಲಗೊಳಿಸುವ ಪ್ರಾಚೀನ ನಡವಳಿಕೆಗಳು ಮತ್ತು ಪುರಾತನ ಚಿಂತನೆಗಳು ಆಧುನಿಕ ಜಗತ್ತಿನ ʼ ವೈಜ್ಞಾನಿಕ (!)ʼ ಅವಿಷ್ಕಾರಗಳ ಮೂಲಕವೇ ಯುವ ಸಮೂಹದಲ್ಲಿ ಮತ್ತೊಮ್ಮೆ ಮನೆ ಮಾಡುತ್ತಿವೆ. ಜಾತಿ, ಮತ, ಧರ್ಮ ಮತ್ತು ಲಿಂಗ ಭೇದಗಳು ಮಾನವ ಸಮಾಜದಲ್ಲಿ ಇರಬೇಕಾಗಿದ್ದ ಸಹನೆ, ಸಂಯಮ, ಸಭ್ಯತೆ ಮತ್ತು ಸಂವೇದನೆಯ ನೆಲೆಗಳನ್ನು ಹಂತಹಂತವಾಗಿ ಛಿದ್ರಗೊಳಿಸುತ್ತಿವೆ. ರಾಮನಗರದ ಆಸಿಡ್‌ ದಾಳಿಯಿಂದ ದೆಹಲಿಯ ಶ್ರದ್ದಾವಾಲ್ಕರ್‌ ಹತ್ಯೆಯವರೆಗೆ ವಿಸ್ತರಿಸಿರುವ ಕ್ರೌರ್ಯದ ನೆಲೆಗಳು ಶೂನ್ಯದಲ್ಲಿ ಉದ್ಭವಿಸಿಲ್ಲ ಅಥವಾ ನಿರ್ವಾತದಲ್ಲಿ ಉಗಮಿಸಿರುವುದಲ್ಲ. ಅಕ್ಷರ-ಲೇಖನಿ ಹಿಡಿಯಬೇಕಾದ ಯುವ ಮನಸುಗಳು ಚೂರಿ, ಪಿಸ್ತೂಲು, ಆಸಿಡ್‌ಗಳನ್ನು ಹಿಡಿಯುತ್ತಿವೆ. ಈ ಯುವ ಸಮೂಹದಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಇರುವ ಹಿರಿಯ ತಲೆಮಾರು, ಅಪವಾದವೆನ್ನುವಂತೆ ಅಲ್ಲಲ್ಲಿ ಮಾತ್ರವೇ ಸೂಕ್ಷ್ಮವಾಗಿ ಪ್ರತಿಕ್ರಯಿಸುತ್ತಿದೆ.

ತಮ್ಮದೇ ಆದ ಸೈದ್ದಾಂತಿಕ ಕಾರಣಗಳಿಗಾಗಿ ಇತಿಹಾಸವನ್ನು ಮತ್ತು ಚಾರಿತ್ರಿಕ ಘಟನೆಗಳನ್ನು ಮರುನಿರ್ವಚಿಸಲು ಮುಂದಾಗಿರುವ ರಾಜಕೀಯ ಶಕ್ತಿಗಳು ಮಾನವ ಸಮಾಜವನ್ನು ಮತ್ತೊಮ್ಮೆ ಅಂಧಯುಗದತ್ತ ಕರೆದೊಯ್ಯುತ್ತಿವೆ. ದೊಡ್ಡಬಳ್ಳಾಪುರದಲ್ಲಿ ತನ್ನೊಂದಿಗೆ ಆಟ ಆಡುತ್ತಿದ್ದ ಗೆಳೆಯನಿಗೆ ಚೂರಿಯಿಂದ ಇರಿದ ಯುವಕ, ರಾಮನಗರದಲ್ಲಿ ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಯುವತಿಯ ಮೇಲೆ ಆಸಿಡ್‌ ಎರಚಿದ ಯುವಕ, ರಾಜಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳನ್ನು ಜೀವಂತ ದಹನ ಮಾಡಿ ಬಿಸಾಡಿದ ಯುವಕರು ಇವರೆಲ್ಲರೂ ಇದೇ ಅಂಧಯುಗದ ಭವಿಷ್ಯದ ಕಾಲಾಳುಗಳಾಗಿ ಕಾಣುತ್ತಾರೆ. ಜೀವನೋತ್ಸಾಹವನ್ನು ತುಂಬುವ ಜಾಗದಲ್ಲಿ ಸಮರೋತ್ಸಾಹವನ್ನು ತುಂಬಿದರೆ ಏನಾಗಬಹುದು ಎನ್ನುವುದಕ್ಕೆ ಇಂತಹ ಕೆಲವು ಘಟನೆಗಳೇ ಸಾಕ್ಷಿಯಾಗುತ್ತವೆ. ಸಾರ್ವಜನಿಕ ಜೀವನದಲ್ಲಿ ಇಡೀ ಸಮಾಜವೇ ತಮ್ಮತ್ತ ನೋಡುತ್ತಿದೆ ಎಂಬ ಪರಿವೆ ಇರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಮಾತು, ವರ್ತನೆ, ಧೋರಣೆ ಮತ್ತು ಚಟುವಟಿಕೆಗಳು ಈ ಅಪಾಯದ ಅರಿವಿನೊಂದಿಗೆ ಮುಂದುವರೆದರೆ ಸಮಾಜವೂ ಕ್ಷೇಮವಾಗಿರಲು ಸಾಧ್ಯ.

Previous Post

ಮಾ ೩೧ ರಿಂದ ಐಪಿಎಲ್‌ ಹಬ್ಬ ಶುರು..!

Next Post

ಸುರ್ಜೇವಾಲ ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
ಸುರ್ಜೇವಾಲ ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುರ್ಜೇವಾಲ ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Please login to join discussion

Recent News

Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 
Top Story

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

by Chetan
July 10, 2025
ಇಂದು ಕೋರ್ಟ್ ಗೆ ಹಾಜರಾಗಲಿದ್ದಾರಾ ನಟ ದರ್ಶನ್..?! – ನಾಳೆಯಿಂದ ಡೆವಿಲ್ ಫಾರಿನ್ ಟ್ರಿಪ್ ಶುರು 
Top Story

ಇಂದು ಕೋರ್ಟ್ ಗೆ ಹಾಜರಾಗಲಿದ್ದಾರಾ ನಟ ದರ್ಶನ್..?! – ನಾಳೆಯಿಂದ ಡೆವಿಲ್ ಫಾರಿನ್ ಟ್ರಿಪ್ ಶುರು 

by Chetan
July 10, 2025
Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada