ಎರಡನೇ ಮಹಾಯುದ್ಧದ ನಂತರವೂ ಜಗತ್ತು ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಅಪಾರ ತೈಲ ಸಂಪತ್ತಿನ ದಾಹ, ಸಾಮ್ರಾಜ್ಯದ ವಿಸ್ತರಣೆ, ಸಾಂಸ್ಕೃತಿಕ , ಧಾರ್ಮಿಕ, ರಾಜಕೀಯ ಹೀಗೆ ಹಲವು ಕಾರಣಗಳಿಂದ ಯುದ್ಧ ನಡೆದಿದೆ. ರಷ್ಯಾ ಮತ್ತು ಅಮೆರಿಕಗಳೆಂಬ ಎರಡು ದೈತ್ಯ ರಾಷ್ಟ್ರಗಳ ದುರಾಸೆಗೆ ಹತ್ತಾರು ಪುಟ್ಟ ರಾಷ್ಟ್ರಗಳ ನಾಳೆಗಳು ಬಲಿಯಾಗಿವೆ. ಒಂದು ಅಂದಾಜಿನ ಪ್ರಕಾರ 1965ರಿಂದ 1973ರವರೆಗೆ ನಡೆದ ವಿಯೆಟ್ನಾಂ ಯುದ್ಧದಲ್ಲಿ 4,05,000-6,27,000 ವಿಯೆಟ್ನಾಂ ನಾಗರಿಕರು ಮತ್ತು 2003ರಿಂದ 2011ರವೆಗೆ ನಡೆದ ಇರಾಕ್ ಯುದ್ಧದಲ್ಲಿ 1,84,382-2,07,156 ನಾಗರಿಕರು ಬಲಿಯಾಗಿದ್ದಾರೆ. ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಬಳಸಿದ ‘ಆರೆಂಜ್ ಏಜೆಂಟ್’ಗೆ ಒಡ್ಡಿಕೊಂಡ ಸುಮಾರು ಒಂದು ಮಿಲಿಯನ್‌ನಷ್ಟು ಜನರು ಅದರ ವಿಕಿರಣದಿಂದಾಗಿ ಅಂಗವಿಕಲರಾಗಿದ್ದರು ಎನ್ನುತ್ತದೆ ಅಲ್ಲಿನ ರೆಡ್‌ಕ್ರಾಸ್ ಸಂಸ್ಥೆ.
ಆಗ ಅಮೆರಿಕದ ಸಾಮ್ರಾಜ್ಯ ವಿಸ್ತರಿಸುವ ಹಪಹಪಿಯನ್ನು ಮೌನವಾಗಿ ಬೆಂಬಲಿಸಿದ ಪಾಶ್ಚಾತ್ಯ ಮಾಧ್ಯಮಗಳು ಸಂತ್ರಸ್ತ ದೇಶವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದವು. ಅಮೆರಿಕ, ರಷ್ಯಾಗಳು ಸೃಷ್ಟಿಸಿದ ಅನಾಹುತ ಅಲ್ಲಿನ ಮಾಧ್ಯಮಗಳಿಗೆ ಅಪರಾಧ ಅನ್ನಿಸಲಿಲ್ಲ, ಯಾಕೆಂದರೆ ಬಹುತೇಕ ಸಂದರ್ಭಗಳಲ್ಲಿ ಸಂತ್ರಸ್ತ ದೇಶಗಳು ಏಷ್ಯಾದ ಕಪ್ಪು ಜನರನ್ನು ಹೊಂದಿರುವ ಬಡ ದೇಶಗಳೇ ಆಗಿದ್ದವು.
ಉಕ್ರೇನಿನ ಮೇಲೆ ರಷ್ಯಾ ಸಾರಿರುವ ಯುದ್ಧವನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಆದರೆ ಪಶ್ಚಿಮದ ಮಾಧ್ಯಮಗಳಲ್ಲಿ ಅಂತರ್ಗತವಾಗಿರುವ ಜನಾಂಗೀಯತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಈ ಯುದ್ಧ ಹೊರಹಾಕುತ್ತಿದೆ. ಬಿಬಿಸಿಯೂ ಸೇರಿ ಪಶ್ಚಿಮದ ಪ್ರತಿಷ್ಠಿತ ಟಿವಿ ವಾಹಿನಿಗಳು ಜನಾಂಗೀಯ ನಿಂದನಾತ್ಮಕ ರೀತಿಯಲ್ಲಿ ಮಾಡಿರುವ ವರದಿಯನ್ನು MintPress ಪತ್ರಕರ್ತ ಅಲನ್ ಮ್ಯಾಕ್ಲಿಯೋಡ್ ಅವರು ಅತ್ಯಂತ ಹತಾಶೆಯಿಂದ ಮತ್ತು ನೋವಿನಿಂದ ಟ್ವೀಟ್ ಮಾಡಿದ್ದಾರೆ.
“ಯುಕ್ರೇನಿಯನ್ನರ ಸಾವನ್ನು ನೋಡುತ್ತಿರುವುದು ಬಹಳ ನೋವಿನ ದೃಶ್ಯವಾಗಿದೆ. ಇಲ್ಲಿ ನೀಲಿ ಕಣ್ಣುಗಳು ಮತ್ತು ಹೊಂಬಣ್ಣದ ಕೂದಲಿನ ಯುರೋಪಿಯನ್ ಜನರನ್ನು ಕೊಲ್ಲುವುದನ್ನು ನೋಡುವುದಕ್ಕೇ ಆಗುತ್ತಿಲ್ಲ” ಎಂದು ಉಕ್ರೇನ್‌ನ ಡೆಪ್ಯುಟಿ ಚೀಫ್ ಪ್ರಾಸಿಕ್ಯೂಟರ್, ಡೇವಿಡ್ ಸಕ್ವರೆಲಿಡ್ಜ್ ಹೇಳಿರುವುದನ್ನು ಬಿಬಿಸಿ ಹಸಿ ಹಸಿಯಾಗಿಯೇ ತೋರಿಸಿದೆ. ಫ್ರಾನ್ಸ್ ನ ಬಿಎಫ್ಎಂ ಟಿವಿಯ ಆಂಕರ್ “ನಾವೀಗ 21 ನೇ ಶತಮಾನದಲ್ಲಿದ್ದೇವೆ, ನಾವು ಯುರೋಪಿಯನ್ ನಗರದಲ್ಲಿದ್ದೇವೆ ಮತ್ತು ಇರಾಕ್ ಅಥವಾ ಅಫ್ಘಾನಿಸ್ತಾನದಲ್ಲಿದ್ದಂತೆ ಕ್ಷಿಪಣಿ ದಾಳಿಗಳನ್ನು ನೋಡುತ್ತಿದ್ದೇವೆ. ಇದು ಯುರೋಪಿನ ಒಂದು ನಗರದಲ್ಲೇ ನಡೆಯುತ್ತಿದೆಯೆಂದು ಊಹಿಸಲೂ ಸಹ ಕಷ್ಟವಾಗುತ್ತಿದೆ” ಎಂದು ಹೇಳುವ ಕ್ಲಿಪ್ ಅನ್ನೂ ಅಲೆನ್ ಮ್ಯಾಕ್ಲಿಡ್ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ವರದಿಯಲ್ಲಿ ಸಿಬಿಎಸ್ ವರದಿಗಾರ ಚಾರ್ಲಿ ಡಿ’ಅಗಾಟಾ “ಸಾಯುತ್ತಿರುವುದು ಇರಾಕ್ ಅಥವಾ ಅಫ್ಘಾನಿಸ್ತಾನ್ ನ ಜನರಲ್ಲ . ಸಿವಿಲೈಝ್ಡ್ ಜನರಾಗಿರುವ ಯುರೋಪಿಯನ್ನರಾಗಿದ್ದಾರೆ. ಅಲ್ಲಿನ ನಗರಗಳು ದಾಳಿಗೊಳಗಾಗ್ತಿವೆ” ಎಂದು ಅತ್ಯಂತ ಬೇಜವಾಬ್ದಾರಿಯಿಂದ ಹೇಳುತ್ತಾರೆ.
ಮತ್ತೊಂದು ದೇಶದ ನಿರಾಶ್ರಿತರನ್ನು ತನ್ನ ದೇಶದೊಳಕ್ಕೆ ಕರೆದುಕೊಳ್ಳಬೇಕೋ ಬೇಡವೋ ಅನ್ನುವುದು ಆ ದೇಶದ ಆಡಳಿತ ಮಾಡಬೇಕಾದ ನಿರ್ಧಾರ, ಇನ್ನುಳಿದ ಯಾವ ದೇಶಕ್ಕೂ ಅದನ್ನು ಪ್ರಶ್ನಿಸುವ, ವಿರೋಧಿಸುವ ಹಕ್ಕಾಗಲೀ ಇರುವುದಿಲ್ಲ. ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಿಂದ ನಿರಾಶ್ರಿತರನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಪೋಲೆಂಡ್ ಈಗ ನಿರಾಶ್ರಿತರನ್ನು ಏಕೆ ಸ್ವೀಕರಿಸುತ್ತಿದೆ ಎಂಬುದನ್ನು ತೀರಾ ಸಹಜವೆಂಬಂತೆ ವಿವರಿಸುವ ಎನ್‌ಬಿಸಿ ನ್ಯೂಸ್ ವರದಿಗಾರ್ತಿ ಕೆಲ್ಲಿ ಕೊಬಿಯೆಲ್ಲಾ “ಸ್ಪಷ್ಟವಾಗಿ ಹೇಳುವುದಾದರೆ, ಇವರು ಸಿರಿಯಾದಿಂದ ಅಥವಾ ಮಧ್ಯಪ್ರಾಚ್ಯದಿಂದ ವಲಸೆ ಹೋಗುತ್ತಿರುವ ನಿರಾಶ್ರಿತರಲ್ಲ, ಅವರು ಉಕ್ರೇನಿನ ನಿರಾಶ್ರಿತರು. ಅವರು ಕ್ರಿಶ್ಚಿಯನ್ನರು ಮತ್ತು ಬಿಳಿಯರು. ಅವರು ನಮನ್ನೇ ( ಯುರೋಪಿಯನ್ನರನ್ನೇ) ಹೋಲುತ್ತಾರೆ” ಎನ್ನುತ್ತಾರೆ.
ಡೈಲಿ ಟೆಲಿಗ್ರಾಫ್ ನ ಡ್ಯಾನಿಯಲ್ ಹನ್ನನ್ ಒಂದು ಹೆಜ್ಜೆ ಮುದೆ ಹೋಗಿ ಯುದ್ಧವು ಬಡ ದೇಶಗಳನ್ನು ಮಾತ್ರ ಭಾದಿಸಬೇಕು ಎಂಬರ್ಥ ಬರುವಂತೆ “ಉಕ್ರೇನಿಯನ್ನರು ನೋಡಲು ಯುರೋಪಿಯನ್ನರಂತೆಯೇ ಕಾಣುತ್ತಿದ್ದಾರೆ. ಅವರು ಇಂತಹ ದಾಳಿಗೆ ಒಳಗಾಗಿರುವುದನ್ನು ನೋಡುವುದೇ ತುಂಬಾ ಆಘಾತಕಾರಿಯಾಗಿದೆ. ಉಕ್ರೇನ್ ಯುರೋಪಿಯನ್ ದೇಶವಾಗಿದೆ. ಅದರ ಜನರು ನೆಟ್‌ಫ್ಲಿಕ್ಸ್ ಅನ್ನು ವೀಕ್ಷಿಸುತ್ತಾರೆ ಮತ್ತು ಇನ್‍ಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದಾರೆ. ಯುದ್ಧವು ಇನ್ಮುಂದೆ ಬಡ ಮತ್ತು ಹಿಂದುಳಿದ ಜನರನ್ನು ಮಾತ್ರ ಭಾಧಿಸುವುದಲ್ಲ. ಯುರೋಪಿನಲ್ಲೂ ಸಂಭವಿಸಬಹುದು” ಎಂದು ಹೇಳಿರುವುದನ್ನೂ ಅಲೆನ್ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಮುಖ್ಯ ಘಟನೆಯಲ್ಲಿ ಪಶ್ಚಿಮದ ಮಾಧ್ಯಮವೇ ಅಲ್ಲದ ಅಲ್-ಜಝೀರಾ ಸಹ ಇದೇ ರೀತಿಯ ವರದಿಯನ್ನು ಮಾಡಿದ್ದು ಅದರ ವರದಿಗಾರ ಪೀಟರ್ ಡೊಬ್ಬಿ “ಉಕ್ರೇನಿಯನ್ನರವಸ್ತ್ರ ಮತ್ತು ಶರೀರ ಅವರು ಶ್ರೀಮಂತ, ಮಧ್ಯಮ ವರ್ಗದ ಜನರು ಎಂದು ಹೇಳುತ್ತದೆ. ಖಂಡಿತವಾಗಿಯೂ ಅವರು ಮಧ್ಯಪ್ರಾಚ್ಯದಿಂದ ಅಥವಾ ಉತ್ತರ ಆಫ್ರಿಕಾದಿಂದ ಯುರೋಪ್ ಗೆ ನುಗ್ಗಲು ಪ್ರಯತ್ನಿಸುತ್ತಿರುವ ನಿರಾಶ್ರಿತರಲ್ಲ. ಉಕ್ರೇನಿಯನ್ನರು ಯುರೋಪಿಯನ್ನರಂತೆಯೇ ಶ್ರೀಮಂತ ಜನರು” ಎಂದು ವರದಿ ಮಾಡಿರುವುದೂ ಅಲೆನ್ ಟ್ವೀಟ್‌ನಲ್ಲಿ ಉಲ್ಲೇಖವಾಗಿದೆ.
ಯುರೋಪಿನಲ್ಲಿ ವರ್ಣಬೇಧ ನೀತಿ ಇನ್ನೂ ಜೀವಂತವಾಗಿದೆ, ಅವರ ಸಮಾನತೆಯ ನಾಟಕ ಬರಿ ಜಗತ್ತನ್ನು ಮೆಚ್ಚಿಸುವ ನಾಟಕ. ರಷ್ಯಾ ಯುಕ್ರೇನ್ ಯುದ್ಧದ ಮೂಲಕ ಯುರೋಪಿನ ಮುಖವಾಡ ಕಳಚಿ ಬೀಳುತ್ತಿದೆ. ಇನ್ನೊಂದೆಡೆ ಯುಕ್ರೇನಿನ ಅಧ್ಯಕ್ಷರ ಜೀವನವನ್ನಾಧರಿಸಿ ಸಿನೆಮಾ ಮಾಡಬೇಕು ಎನ್ನುವ ಮಾತುಗಳಿಗೂ ಯುರೋಪಿನದೇ ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸಿದ್ದಾರೆ. ಉಕ್ರೇನಿನಂತಹ ಸಣ್ಣ ರಾಷ್ಟ್ರದ ಸಂಕಟವನ್ನು ಮನರಂಜನೆಯ ಸರಕಾಗಿಸುವಷ್ಟು ನಾವು ಸಂವೇದನಾರಹಿತರಾಗಬಾರದಿತ್ತು ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ರಷ್ಯಾ ಸೇನೆ ಕಳುಹಿಸಿ ಉಕ್ರೇನಿನ ಮೇಲೆ ಯುದ್ಧ ಮಾಡಿದರೆ, ಅಮೆರಿಕ ಮತ್ತು ಯುರೋಪ್ ದೇಶಗಳು ರಷ್ಯಾವನ್ನು ಖಳನಾಯಕನನ್ನಾಗಿಸುವ ಹಪಹಪಿಯಲ್ಲಿ ಪರೋಕ್ಷ ಯುದ್ಧ ಸಾರಿದೆ. ಎಲ್ಲಿಗೂ ಸಲ್ಲದವರಂತೆ ಸಾವು ನೋವು ಅನುಭವಿಸುತ್ತಿರುವವರು ಮಾತ್ರ ಉಕ್ರೇನಿಯನ್ನರು. ಅಂತಿಮವಾಗಿ ಯುದ್ಧ ಹುಟ್ಟು ಹಾಕುವುದು ಆಳದ ಗಾಯಗಳನ್ನು ಮಾತ್ರ ಎಂಬುವುದಕ್ಕೆ ವಿಯೆಟ್ನಾಂ, ಇರಾಕ್, ಅಫ್ಫಾನಿಸ್ತಾನ, ಕುವೈಟ್ ಹಿಂದೆ ಸಾಕ್ಷಿಯಾಗಿತ್ತು ಈಗ ಉಕ್ರೇನ್ ಸಾಕ್ಷಿಯಾಗುತ್ತಿದೆ.