ನೀಟ್ ಒಂದು Eligibility Test ಅಲ್ಲವೇ ಅಲ್ಲ. ಅದೊಂದು Elimination Test. ಅದು ಹೇಗೆ ಎಂಬುದು ಈ ಬರಹದ ಕೊನೆ ತಲುಪುವ ವೇಳೆಗೆ ನಿಮಗೆ ಅರ್ಥವಾಗಿರುತ್ತದೆ ಎಂದುಕೊಂಡಿದ್ದೇನೆ.
ನಾನು ಇಲ್ಲಿ ಪ್ರವೇಶ ಪರೀಕ್ಷೆಗಳ ಹಿಸ್ಟರಿ ಚರ್ಚಿಸಲು ಹೋಗುವುದಿಲ್ಲ. ಆದರೆ, ಒಂದು ವಿಚಾರವನ್ನು ಮಾತ್ರ ಇಲ್ಲಿ ದಾಖಲಿಸುತ್ತೇನೆ. 90ರ ದಶಕದ ಆರಂಭದಲ್ಲಿ ಉದಾರೀಕರಣದ ಜೊತೆಜೊತೆಗೆ ಖಾಸಗಿ ಎಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳ ಕ್ಯಾಪಿಟೇಶನ್ ಶುಲ್ಕದ ಭರಾಟೆ ತೀವ್ರಗೊಂಡಾಗ, ಕಾಮನ್ ಎಂಟ್ರಾನ್ಸ್ ಟೆಸ್ಟ್ ಎಂಬ ಸಾಮಾಜಿಕ ನ್ಯಾಯದ ಸುಧಾರಣೆ ಹೊರಟದ್ದು ಉಡುಪಿ ಜಿಲ್ಲೆಯಿಂದಲೇ. ಅದರ ಹರಿಕಾರ, ಆಗ ಮುಖ್ಯಮಂತ್ರಿ ಆಗಿದ್ದ ವೀರಪ್ಪ ಮೋಯಿಲಿಯವರು. ಅದಕ್ಕೆ ತೀವ್ರ ಪ್ರತಿರೋಧ ಹೊರಟದ್ದೂ ದೇಶದ ಪ್ರಮುಖ ಶೈಕ್ಷಣಿಕ ನಗರವಾದ ಉಡುಪಿಯ ಮಣಿಪಾಲದಿಂದಲೇ! ಅದು ಹಳೇ ಕಥೆ. ಈಗ ಖಾಸಗಿಯವರು ಮತ್ತೆ ಮೇಲುಗೈ ಸಾಧಿಸಿದ್ದಾರೆ, ಅದೂ ಬಡ್ಡಿ ಸಮೇತ.
2016ರಲ್ಲಿ ದೇಶದ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಏಕೈಕ “ಪ್ರವೇಶ ಪರೀಕ್ಷೆ” ಎಂಬ ಹೆಗ್ಗಳಿಕೆಯೊಂದಿಗೆ ಆರಂಭಗೊಂಡ NEET ಪರೀಕ್ಷೆಯ ಸ್ವರೂಪವನ್ನು ವಿವರವಾಗಿ ಗಮನಿಸಿದರೆ, ಅದು ವೈದ್ಯಕೀಯ ಶಿಕ್ಷಣವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು. 720 ಅಂಕಗಳ, ಮೂರು ತಾಸಿನ ಈ ರಾಷ್ಟ್ರೀಯ ಪರೀಕ್ಷೆಯಲ್ಲಿ 360 ಅಂಕಗಳು ಬಯಾಲಜಿಗೆ ಮತ್ತು ತಲಾ 170 ಅಂಕಗಳು ಫಿಸಿಕ್ಸ್, ಕೆಮೆಸ್ಟ್ರಿಗೆ. ಇಲ್ಲಿ 180 ಬಹು ಉತ್ತರ ಆಯ್ಕೆಯ ಪ್ರಶ್ನೆಗಳನ್ನು ವಿದ್ಯಾರ್ಥಿ 180 ನಿಮಿಷಗಳಲ್ಲಿ ಉತ್ತರಿಸಬೇಕಿರುತ್ತದೆ. ತಪ್ಪು ಉತ್ತರಕ್ಕೆ ಮೈನಸ್ ಅಂಕ ಇರುತ್ತದೆ.
ಸರಿ ಇದಕ್ಕೆಲ್ಲ ಯಾರದೂ ತಕರಾರಿಲ್ಲ.

ಆದರೆ, ಕಳೆದ ಆರೇಳು ವರ್ಷಗಳಲ್ಲಿ ಈ NEET ಪರೀಕ್ಷೆ ವರ್ಷದಿಂದ ವರ್ಷಕ್ಕೆ ಎಷ್ಟು ಬಿಗಿಗೊಳ್ಳುತ್ತಾ ಬಂದಿದೆ ಎಂದರೆ ವೈದ್ಯಕೀಯ ಪ್ರವೇಶಕ್ಕೆ ವಿದ್ಯಾರ್ಥಿಗೆ ಆಸಕ್ತಿ ಇದೆಯೇ ಎಂಬುದನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳುವ ಪರೀಕ್ಷೆ ಆಗುವ ಬದಲು ಇದು ವಿಜ್ಞಾನದ ಯಾವ್ಯಾವುದೋ ಆಧುನಿಕ ಶಾಖೆಗಳ ಪರಿಣತಿಯನ್ನು ನಿಕಷಕ್ಕೊಡ್ಡುವ ಪರೀಕ್ಷೆ ಆಗಿ ಮಾರ್ಪಟ್ಟಿದೆ. 60 ಸೆಕುಂಡಿನಲ್ಲಿ ಉತ್ತರಿಸಬೇಕಿರುವ ಪ್ರಶ್ನೆಗೆ ಒಂದಿಡೀ ಪುಟ ಲೆಕ್ಕಾಚಾರ ಬೇಕಿರುವ, ವಿಷಯದ ಮೇಲೆ ಉನ್ನತ ಪರಿಣತಿ ಅಗತ್ಯವಿರುವ ಹಾಗೂ ಅದ್ಭುತ “ಬಾಯಿಪಾಠ” ಸಾಮರ್ಥ್ಯ ಅಗತ್ಯ ಇರುವಾಗ ಬಡಪಾಯಿ ವಿದ್ಯಾರ್ಥಿ ಏನು ಮಾಡಬೇಕು?
ಸಹಜವಾಗಿಯೇ, ದೇಶದಾದ್ಯಂತ ಈ ರೀತಿಯ ಪರಿಣತಿ ಒದಗಿಸುವುದಕ್ಕೆಂದೇ ಮೀಸಲಾಗಿರುವ “ಕೋಚಿಂಗ್ ಸೆಂಟರ್” ದಂಧೆ ತಲೆ ಎತ್ತಿದೆ. ಈ ಕೋಚಿಂಗ್ ಸೆಂಟರ್ಗಳ ರಾಜಧಾನಿ, ಸ್ವತಃ ಭಾರತದ ಸಂಸತ್ತಿನ ಸ್ಪೀಕರ್ ಅವರು ಪ್ರತಿನಿಧಿಸುತ್ತಿರುವ ರಾಜಸ್ಥಾನದ “ಕೋಟಾ”. ALLEN, AAKASH, BAIJUS ಎಂಬಿತ್ಯಾದಿ ಹೆಸರುಗಳ, ಪುಟಗಟ್ಟಲೆ ಪತ್ರಿಕಾ ಜಾಹೀರಾತುಗಳನ್ನು ನೀಡುತ್ತಿರುವ ಈ ಕೋಚಿಂಗ್ ಕೇಂದ್ರಗಳು ಇಂದು ದೇಶದಾದ್ಯಂತ ಅಂಗಡಿ ತೆರೆದು ಕುಳಿತಿವೆ. ವಾರ್ಷಿಕ ಒಂದರಿಂದ ಎರಡು ಲಕ್ಷ ರೂಪಾಯಿಗಳ ಶುಲ್ಕವನ್ನಿವು ವಿಧಿಸುತ್ತವೆ. ದೇಶದ ಹಲವೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕೋಚಿಂಗ್ ಪರಿಣತರ ಜೊತೆ ಹೊಂದಾಣಿಕೆ ಮಾಡಿಕೊಂಡು, ಇಂಟೆಗ್ರೇಟೆಡ್ ಶಿಕ್ಷಣವನ್ನೂ (ಅಂದರೆ ಪಿಯು ಶಿಕ್ಷಣದ ಜೊತೆಗೇ ನೀಟ್ ತರಬೇತಿ) ಆರಂಭಿಸಿವೆ. ಈ 24×7 ದರ್ಜೆಯ ತರಬೇತಿ ಉಂಟುಮಾಡುವ ಮಾನಸಿಕ ಒತ್ತಡದ್ದು ಇನ್ನೊಂದೇ ಕಥೆ. ಈ ಎಲ್ಲ ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗದವರು ಪಿಯು ಮುಗಿದ ತಕ್ಷಣ ಒಂದೋ ಎರಡೋ ವರ್ಷ “ಡ್ರಾಪ್ ತೆಗೆದುಕೊಂಡು” (ಅಂದರೆ ಶಿಕ್ಷಣ ಸ್ಥಗಿತಗೊಳಿಸಿಕೊಂಡು) ಈ ಕೋಚಿಂಗ್ ಪಡೆದು ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗೆ ಕಲಿತು 720ರಲ್ಲಿ 720 ಅಂಕ ತೆಗೆದುಕೊಂಡ ಹೀರೋಗಳು ತಮ್ಮ ಕೋಚಿಂಗ್ ಸೆಂಟರಿನ ಲೋಗೋ ಇರುವ ಅಂಗಿ ಧರಿಸಿ ಬಿಲ್ ಬೋರ್ಡ್ ಏರಿದ್ದಾರೆ! ಪ್ರಯತ್ನಗಳ ಬಳಿಕವೂ ಯಶಸ್ಸು ಕಾಣದೆ ಹತಾಶರಾದವರು ಜೀವಕಳೆದುಕೊಂಡು “ವಿದ್ಯಾರ್ಥಿ ಆತ್ಮಹತ್ಯೆ” ಎಂಬ ಸಿಂಗಲ್ ಕಾಲಂ ಸುದ್ದಿ ಆದದ್ದೂ ಇದೆ.
ನನ್ನದೊಂದು ನೇರ ಸವಾಲಿದೆ: ಮುಂದಿನ ವರ್ಷದ ನೀಟ್ ಪರೀಕ್ಷೆಗೆ ಕರ್ನಾಟಕದ ಎಲ್ಲ ಪಿಯು ಶಿಕ್ಷಕರೂ ಪರೀಕ್ಷೆ ಬರೆಯಲಿ. ಅವರಲ್ಲಿ 10%ಮಂದಿಗೆ 720ರಲ್ಲಿ 350ಕ್ಕಿಂತ ಹೆಚ್ಚಿನ ಅಂಕ ಸಿಕ್ಕಿದರೆ ಮತ್ತೆ ಹೇಳಿ.
ಇಂತಹದೊಂದು “ಕಠಿಣಾತಿಕಠಿಣ” ಪರೀಕ್ಷೆಯನ್ನು ಮೆಡಿಕಲ್ ಶಿಕ್ಷಣ ಪ್ರವೇಶಕ್ಕೆ ಇರಿಸಿರುವುದಕ್ಕೆ ಏಕೈಕ ಕಾರಣ- “ಎಲಿಮಿನೇಷನ್”.
ವೈದ್ಯಕೀಯ ಎಂಬುದು ಕೇವಲ ಬುದ್ಧಿಮತ್ತೆ ಆಧರಿತ ಪರಿಣತಿ ಅಲ್ಲ. ಅದರಲ್ಲಿ ಕರ ಕೌಶಲ, ಮಾನಸಿಕ ಕ್ಷಮತೆ, ಕ್ಷಿಪ್ರ ನಿರ್ಧಾರದ ಕೌಶಲ, ವೃತ್ತಿಯ ಬಗ್ಗೆ ಆಸಕ್ತಿ, ರೋಗಿಯ ಬಗ್ಗೆ ಕಾಳಜಿ… ಹೀಗೆ ನೂರಾರು ಅಂಶಗಳು ಒಳಗೊಂಡಿರಬೇಕಾಗುತ್ತದೆ. ಇದಾವುದನ್ನೂ ಪ್ರವೇಶ ಪರೀಕ್ಷೆಯ ವೇಳೆ ಪರಿಗಣಿಸದೇ, ಕೇವಲ ಕೋಚಿಂಗ್ ಸೆಂಟರುಗಳು ಕಟ್ಟಿಕೊಟ್ಟ “ಬೌದ್ಧಿಕ ಸಾಮರ್ಥ್ಯ” ಆಧರಿಸಿದ ಪರೀಕ್ಷೆ ನಡೆಸಿದಾಗ, ನಿಜಕ್ಕೂ ಪ್ರತಿಭಾವಂತ ಬೆರಳೆಣಿಕೆಯ ಮಕ್ಕಳು ಬಿಟ್ಟರೆ, ಉಳಿದವರೆಲ್ಲ ಎಲಿಮಿನೇಟ್ ಆಗಿಬಿಡುತ್ತಾರೆ. ನಗರಗಳು ಮತ್ತು ಹಳ್ಳಿಗಳ ಪ್ರತಿಭೆಗಳ ನಡುವೆ ಅವಕಾಶದ ಕಂದರ ಹುಟ್ಟುವುದೂ ಇಲ್ಲೇ.

ಮತ್ತೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಹೇಗೆ “360 ಡಿಗ್ರಿ ಫ್ಲೆಕ್ಸಿಬಲ್” ಎಂದರೆ, ಮೆಡಿಕಲ್ ಆಗದಿದ್ದರೆ ಡೆಂಟಲ್, ಡೆಂಟಲ್ ಸಿಗದಿದ್ದರೆ ಎಂಜಿನಿಯರಿಂಗ್, ಅದೂ ಸಿಗದಿದ್ದರೆ ಅಗ್ರಿಕಲ್ಚರ್, ಅದೂ ಆಗದಿದ್ದರೆ ಲಾ… ಹೀಗೆ!
ಮಕ್ಕಳ ಆಸಕ್ತಿಯನ್ನು ಎಳವೆಯಲ್ಲೇ ಗುರುತಿಸಿ ಬೆಳೆಸುವ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕೆ ನಮಗೆ ಇಂದಿಗೂ ಸಾಧ್ಯ ಆಗಿಲ್ಲ.
“ಮೆರಿಟ್” ಸೀಟು ಸೀಮಿತ ಸಂಖ್ಯೆಯದಿರುವಾಗ, ಹೆತ್ತವರಲ್ಲಿ ಲಕ್ಷಗಟ್ಟಲೆ ಫೀಸು ಕಟ್ಟುವ ಸಾಮರ್ಥ್ಯ ಇಲ್ಲದಿದ್ದರೆ, ಮಕ್ಕಳು ಮತ್ತೆ ಮತ್ತೆ “ಕೋಚಿಂಗ್” ಪಡೆದು ಪರೀಕ್ಷೆಯಲ್ಲಿ ಮರಳಿ ಯತ್ನವ ಮಾಡುವುದು ಒಂದು ವಿನ್ಯಾಸವಾಗುತ್ತಿದೆ. ಇದು ನೀಟ್ ಪರೀಕ್ಷೆಯಲ್ಲಿ ಒಂದು “ಬಾಟಲ್ ನೆಕ್” ಸೃಷ್ಟಿ ಮಾಡುತ್ತಿದೆ. ಎರಡು-ಮೂರು ವರ್ಷ “ನೀಟ್ ಬರೆಯುವ ತರಬೇತಿ” ಪಡೆದ ಸಾಧಾರಣ ವಿದ್ಯಾರ್ಥಿಯ ಪರಿಣತಿಯ ಎದುರು ಆ ವರ್ಷವಷ್ಟೇ ಪಿಯು ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಯ ಕೌಶಲ ಸೋಲುತ್ತದೆ. ಇಂತಹವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನೀವು ಕಳೆದ ಐದಾರು ವರ್ಷಗಳಲ್ಲಿ ನೀಟ್ ಪರೀಕ್ಷೆ ಬರೆದವರ ಸಂಖ್ಯೆಯಲ್ಲಾಗುತ್ತಿರುವ ಸತತ ಏರಿಕೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಕಳೆದೆರಡು ವರ್ಷಗಳಲ್ಲಿ ಕೊವಿಡ್ ಕಾಲದಲ್ಲಿ ಸುಸೂತ್ರ ಶಿಕ್ಷಣವೂ ಸಿಗದ ವಿದ್ಯಾರ್ಥಿಗಳದಂತೂ ಅಸಹನೀಯ ಪರಿಸ್ಥಿತಿ. ಈ ಎಲ್ಲ ಕಾರಣಗಳಿಂದಾಗಿ ನೀಟ್ ಹೆಸರಲ್ಲಿ ಆತ್ಮಹತ್ಯೆ, ಮಾನಸಿಕ ಸಮಸ್ಯೆಗಳು ಒಂದೇ ಸಮನೆ ಏರಿಕೆ ಕಾಣುತ್ತಿವೆ.
ಒಟ್ಟಿನಲ್ಲಿ ಈ ಕಂತಿನಲ್ಲಿ ನನಗೆ ಹೇಳಬೇಕಾಗಿರುವುದು ಇಷ್ಟು:
೧. ನೀಟ್ ಪರೀಕ್ಷೆ ಬರೆಯಬೇಕಿದ್ದರೆ, ಖಾಸಗಿ ಕೋಚಿಂಗ್ ಸೆಂಟರ್ ಲಾಬಿಗೆ ಕಾಸು ಚೆಲ್ಲಬೇಕು.
೨. ನೀಟ್ ಎಂಬುದು ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹನೋ ಎಂಬ ಪರೀಕ್ಷೆ ಅಲ್ಲ, ಬದಲಾಗಿ ಸಾಧ್ಯವಾದಷ್ಟು ಮಂದಿ ಮಧ್ಯಮವರ್ಗದವರನ್ನು ವೈದ್ಯಕೀಯ ಶಿಕ್ಷಣದಿಂದ “ಎಲಿಮಿನೇಟ್” ಮಾಡುವ ಆಟ.
೩. ಮೇಲ್ತುದಿಯ ಪ್ರತಿಭಾವಂತರು, ಕೆಳತುದಿಯ ಕಾಸಿದ್ದವರು ಹೇಗೋ ನೀಟ್ ಏಣಿಯೇರಿ ಮೆಡಿಕಲ್ ಸ್ಕೂಲ್ ತಲುಪುತ್ತಿದ್ದಾರೆ. ಆದರೆ ನಡುವಿನ ವಿಶಾಲವಾದ ಮಧ್ಯಮವರ್ಗದವರು ತಮ್ಮ ಪ್ರತಿಭೆ, ಮೀಸಲಾತಿಗಳ ಹೊರತಾಗಿಯೂ ವೈದ್ಯಕೀಯ ಶಿಕ್ಷಣ ಪಡೆಯಲು ಏದುಸಿರು ಬಿಡಬೇಕಾಗಿದೆ. ಇದು ದೇಶಕ್ಕೆ ನೀಟ್ ಕೊಟ್ಟ ಕೊಡುಗೆ.
೪. ಈ ಎಲ್ಲ ಕಾರಣಗಳಿಗಾಗಿ ನೀಟ್ ಪರೀಕ್ಷೆ ರದ್ದಾಗಬೇಕು. ಅರ್ಹತೆ, ಆಸಕ್ತಿಗಳನ್ನು ಗುರುತಿಸಿ, ಅರ್ಹರನ್ನು ವೈದ್ಯಕೀಯ ಶಿಕ್ಷಣ ಕೇಂದ್ರಗಳಿಗೆ ತಲುಪಿಸಲು ಹೊಸ ಮಾದರಿಯೊಂದು ರೂಪುಗೊಳ್ಳಬೇಕು.






