ಭಾರತದಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದೆ. ದಿನವೊಂದಕ್ಕೆ 1.2 ಲಕ್ಷಗಳಷ್ಟು ಕರೋನಾ ಪ್ರಕರಣಗಳು ಪತ್ತೆಯಾಗಿವೆ. ನ್ಯೂಝಿಲೆಂಡ್‌ನಂತಹ ರಾಷ್ಟ್ರಗಳು ಭಾರತದ ಯಾತ್ರಿಕರಿಗೆ ನಿರ್ಬಂಧ ಹೇರುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಈ ನಡುವೆ, ಲಸಿಕೆ ಅಭಿಯಾನ ಶುರುವಾಗಿದ್ದರೂ ಹಲವು ರಾಜ್ಯಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತು ಕೇಂದ್ರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಲಸಿಕೆಯ ಕೊರತೆ ಗಂಭೀರ ವಿಷಯವಾಗಿದೆಯೇ ಹೊರತು ಉತ್ಸವ ಅಲ್ಲ ಎಂದು ಟೀಕಾ ಉತ್ಸವ್ ಆಚರಿಸಲು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ.
ಅತೀಹೆಚ್ಚು ಕರೋನಾ ಪ್ರಕರಣಗಳಿಂದ ಬಾಧಿತವಾಗಿರುವ ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿರುವಾಗ ವಿದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಬೇಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಕರೋನಾ ಲಸಿಕೆಗಳ ಕೊರತೆಯಿಂದಾಗಿ ಹಲವು ಚುಚ್ಚುಮದ್ದು ಕೇಂದ್ರಗಳನ್ನು ಮಹಾರಾಷ್ಟ್ರದಲ್ಲಿ ಸ್ಥಗಿತಗೊಳಿಸಲಾಗಿದೆ. ದೆಹಲಿಯ ಹಲವು ಕೇಂದ್ರಗಳಲ್ಲಿ ಲಸಿಕೆ ಇಲ್ಲ, ಎಂದು ಜನರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂದು ವರದಿಯಾಗಿದೆ.

ಕರೋನಾ ಸಂಕಷ್ಟ ಮತ್ತಷ್ಟು ಏರುತ್ತಿರುವುದರಿಂದ ಹಾಗೂ ಲಸಿಕೆಯ ಕೊರತೆಯನ್ನು ನಾವು ಎದುರಿಸುತ್ತಿರುವುದು ಗಂಭೀರ ವಿಷಯವೇ ಹೊರತು, ಉತ್ಸವವಲ್ಲ. ದೇಶದ ಪ್ರಜೆಗಳ ಜೀವವನ್ನು ಅಪಾಯಕ್ಕೆ ತಳ್ಳಿ ಲಸಿಕೆಯನ್ನು ರಫ್ತುಗೊಳಿಸುವುದು ಸರಿಯಾದ ಕ್ರಮವೇ? ಯಾವುದೇ ಪೂರ್ವಾಗ್ರಹವಿಲ್ಲದೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಸಾಂಕ್ರಾಮಿಕ ರೋಗವನ್ನು ನಾವೆಲ್ಲರೂ ಜೊತೆಗೂಡಿ ಸೋಲಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಆರೋಗ್ಯ ಮಂತ್ರಿ ಆರೋಗ್ಯ ಟೋಪೆ, ಕೇಂದ್ರ ಸರ್ಕಾರ ಲಸಿಕೆ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಎಲ್ಲಾ ರಾಜ್ಯಗಳನ್ನೂ ಒಂದೇ ರೀತಿ ಪರಿಗಣಿಸುವಂತೆ ಕೇಂದ್ರವನ್ನು ಕೇಳಿಕೊಂಡಿದ್ದಾರೆ.