ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ಬಡವರು, ದಿನ ದಲಿತರು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಪಾಲಿನ ಆಶಾಕಿರಣ. ಪ್ರತಿವರ್ಷ ಇಲ್ಲಿ ನೂರಾರು ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಮಹಿಳಾ ವಿಶ್ವವಿದ್ಯಾಲಯಕ್ಕೆ ಆದಾಯ ಬರುತ್ತಿಲ್ಲವಂತೆ!
ಮಹಿಳೆರಲ್ಲಿ ಶಿಕ್ಷಣದ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ವಿಶ್ವವಿದ್ಯಾಲಯ ಒಟ್ಟು 821 ಎಕರೆ ವಿಸ್ತೀರ್ಣದಲ್ಲಿದೆ. ವಿವಿಯಲ್ಲಿ ಈಗಾಗಲೆ ವಿವಿಧ 32 ವಿಷಯಗಳ ಅಧ್ಯಯನ ನಡೆಸಲಾಗುತ್ತಿದೆ. ಲಕ್ಷಾಂತರ ಯುವತಿಯರ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾದ ಈ ವಿಶ್ವವಿದ್ಯಾನಿಲಯದಲ್ಲಿ ಲಕ್ಷಾಂತರ ವಿದ್ಯಾರ್ಥಿನಿಯರು ಭವಿಷ್ಯ ರೂಪಿಸಿಕೊಂಡಿದ್ದಾರೆ. ಮಹಿಳಾ ವಿವಿಯಲ್ಲಿನ ವಿದ್ಯಾರ್ಥಿನಿಯರ ಸಂಖ್ಯೆ ನೋಡಿದ್ರೆ ರಾಜ್ಯದ ಎಲ್ಲ ವಿಶ್ವ ವಿದ್ಯಾನಿಯಲಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ 19 ವರ್ಷಗಳಿಂದ ಮಹಿಳಾ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರು ಸಂಶೋಧನೆ ಜೊತೆಗೆ ಉನ್ನತ ಶಿಕ್ಷಣ ಪಡೆಯಲು ಇದು ಸಹಕಾರಿಯಾಗಿದೆ.
ಆದರೆ ಇದೀಗ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವ ಮಾತುಗಳು ಚರ್ಚೆಯಾಗುತಿವೆ. ಇದಕ್ಕೆ ಪ್ರಮುಖ ಕಾರಣ ಮಹಿಳಾ ವಿಶ್ವವಿದ್ಯಾಲಯಕ್ಕೆ ಆದಾಯವೇ ಬರುತ್ತಿಲ್ಲವಂತೆ!. ಹೀಗಾಗಿ ಮಹಿಳಾ ಪದ ತೆಗೆದು ಕೋ ಎಜ್ಯುಕೇಶನ್ ನೀಡುವ ನಿಟ್ಟಿನಲ್ಲಿ ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.. ಸರ್ಕಾರದ ಈ ಚಿಂತನೆ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಈಗ ಆಕ್ರೋಶ ವ್ಯಕ್ತಪಡಿಸಿವೆ. ಇದನ್ನು ಜಾರಿ ಮಾಡಲು ಮುಂದಾದರೆ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿವೆ.
ಕಳೆದ 19 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಮಹಿಳಾ ವಿಶ್ವವಿದ್ಯಾಲಯಕ್ಕೆ ಆದಾಯ ಬರುತ್ತಿಲ್ಲ ಅನ್ನೋ ಒಂದೆ ಕಾರಣಕ್ಕೆ ಮಹಿಳಾ ಪದ ತೆಗೆದರೆ ಹೇಗೆ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆ ಸರ್ಕಾರ ಮಹಿಳಾ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ಕೊಡ್ತಿಲ್ಲ. ಆದ್ರೆ ಮಹಿಳಾ ಶಿಕ್ಷಣ ವಿಚಾರದಲ್ಲಿ ಆದಾಯ ನಿರೀಕ್ಷಿಸುವುದು ಸರಿಯಲ್ಲ ಅನ್ನೋ ಮಾತು ವಿದ್ಯಾರ್ಥಿ ಸಂಘಟನೆಗಳ ವಾದವಾಗಿದೆ.

ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳು ಕೋ ಎಜ್ಯುಕೇಶನ್ ನೀಡುತ್ತಿವೆ. ಆದ್ರೆ ವಿಜಯಪುರದಲ್ಲಿರೋ ಮಹಿಳಾ ವಿಶ್ವವಿದ್ಯಾಲಯ ಮಹಿಳೆಯರಿಗಾಗಿ ಇದೆ. ನಂಜುಂಡಪ್ಪ ವರದಿಯಂತೆ ಹಲವು ಹೋರಾಟಗಳ ಮೂಲಕ ಹಿಂದುಳಿದ ಪ್ರದೇಶದಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆ ಆಗಿದೆ. ಆದ್ರೆ ಸರ್ಕಾರ ಇದೀಗ ಮಹಿಳಾ ಪದ ತೆಗೆದು ಕೋ ಎಜುಕೇಷನ್ ನೀಡೋಕೆ ಮುಂದಾಗಿರೋದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಶ್ವ ವಿದ್ಯಾಲಯದ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದ ಮಟ್ಟದಲ್ಲಿ ಆ ಚಿಂತನೆ ನಡೆದಿದೆ. ಆದರೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ.
2003 ರಲ್ಲಿ ಆರಂಭವಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಒಟ್ಟು 148 ಮಹಾವಿದ್ಯಾಲಯಗಳಿವೆ.
ಮಂಡ್ಯ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ 148 ಮಹಾವಿದ್ಯಾಲಯಗಳಲ್ಲಿ 45,000 ವಿದ್ಯಾರ್ಥಿನಿಯರು ಪದವಿ ನೊಂದಣಿ ಮಾಡಿಕೊಂಡಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ 2700 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಒಟ್ಟು 32 ವಿವಿಧ ವಿಭಾಗಗಳಿವೆ. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ವಿಶ್ವ ವಿದ್ಯಾಲಯ ಪ್ರಮುಖ ಪಾತ್ರ ವಹಿಸಿದೆ.
ಸರ್ಕಾರದ ವಾದ ಏನು? ಜನರ ವಿರೋಧ ಯಾಕೆ?
ಮಹಿಳಾ ವಿಶ್ವ ವಿದ್ಯಾಲಯ ಆರಂಭವಾದಾಗಿನಿಂದಲೂ ಇಲ್ಲಿ ಹಲವು ವಿವಾದಗಳು ನಡೆಯುತ್ತಲೇ ಬಂದಿವೆ. ಇದೀಗ ಮಹಿಳಾ ವಿವಿ ಬದಲಾಗಿ ಕೋ ಎಜುಕೇಷನ್ ಮಾಡಬೇಕು ಎಂಬುದು ಸರ್ಕಾರದ ಚಿಂತನೆ. ಈ ಮೂಲಕ ಈ ಭಾಗದ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ವಾದ. ಜೊತೆಗೆ ವಿವಿ ಯಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಕೋ ಎಜುಕೇಷನ್ ಮಾಡಬೇಕು ಎಂಬ ಚಿಂತನೆ ನಡೆಸಿದೆ.
ಆದರೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಹಿಂದುಳಿದ ಜಿಲ್ಲೆಯಾದ ಕಾರಣ ಮಹಿಳೆಯರಿಗೆ ಅಷ್ಟಾಗಿ ಶಿಕ್ಷಣ ಸಿಕ್ಕಿರಲಿಲ್ಲ. ಆದರೆ ಇದೀಗ ಅಕ್ಕ ಮಹಾದೇವಿ ವಿವಿ ಆರಂಭವಾದಾಗಿನಿಂದ ಈ ಭಾಗದಲ್ಲಿ ಶಿಕ್ಷಣದಲ್ಲಿ ಮಹಿಳೆಯರು ಪ್ರಗತಿ ಸಾಧಿಸಿದ್ದಾರೆ. ಹೀಗಾಗಿ ಮಹಿಳಾ ವಿವಿ ಅಗತ್ಯವಾಗಿದೆ ಎಂದಿದ್ದಾರೆ. ಸದ್ಯ ಪರ ವಿರೋಧದ ನಡುವೆ ಚರ್ಚೆ ನಡೆಯುತ್ತಿದ್ದು, ಮುಂದೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡಬೇಕಾಗಿದೆ.