ವಿಶ್ವ ಹಿಂದು ಪರಿಷತ್ ಮತ್ತು ಇತರ ಹಿಂದುತ್ವ ಪರ ಸಂಘಟನೆಗಳು ನಡೆಸುತ್ತಿದ್ದ ರಾಮಂದಿರ ನಿರ್ಮಾಣ ಹೋರಾಟಕ್ಕೆ ಬಾಹ್ಯ ಬೆಂಬಲ ಮಾತ್ರ ನೀಡುತ್ತಿದ್ದ ಬಿಜೆಪಿ 80ರ ದಶಕದಲ್ಲಿ ನೇರವಾಗಿ ಅಖಾಡಕ್ಕಿಳಿಯಿತು. ಅದರ ಪರಿಣಾಮವೇ 1990ರಲ್ಲಿ ಅಡ್ವಾಣಿ ಕೈಗೊಂಡ ರಥಯಾತ್ರೆ. ಇದೊಂದು ರಥಯಾತ್ರೆ ಭಾರತೀಯ ರಾಜಕಾರಣದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಳ್ಳುತ್ತದೆ. ಯಾಕೆಂದರೆ ಉತ್ತರ ಭಾರತದಾದ್ಯಂತ ಬಿಜೆಪಿಗೆ ನೆಲೆ ಒದಗಲು ಮತ್ತು ಮೊದಲೇ ಇದ್ದ ನೆಲೆ ಗಟ್ಟಿಯಾಗಲು ರಥಯಾತ್ರೆಯೇ ಕಾರಣವಾಯಿತು.
ಅಡ್ವಾಣಿಯವರ ರಥಯಾತ್ರೆಯಷ್ಟೇ ಮಹತ್ವದ ಮತ್ತೊಂದು ರಾಜಕೀಯ ಮೈಲುಗಲ್ಲು 2002ರ ಗೋದ್ರಾ ಮತ್ತು ಗೋದ್ರೋತ್ತರ ಗಲಭೆ. ರಥಯಾತ್ರೆ ಅಡ್ವಾಣಿಯವರಿಗೆ ರಾಜಕೀಯವಾಗಿ ಜನ್ಮ ನೀಡಿದರೆ ಈ ಗಲಭೆ ಮೋದಿಯವರಿಗೆ ರಾಜಕೀಯ ನೆಲೆ ಕಲ್ಪಿಸಿತು.
ಸಾಬರ್ಮತಿ ಎಕ್ಸ್ಪ್ರೆಸ್ನ s6 ದುಷ್ಕರ್ಮಿಗಳು ಬೆಂಕಿ ಹಚ್ಚಿ ಆ ಬೆಂಕಿಗೆ ಅದರಲ್ಲಿದ್ದ 59 ಜನ ಆಹುತಿಯಾಗಿದ್ದರು. ಆ ನಂತರ ನಡೆದ ಗಲಭೆಗಳಿಗೆ ಆ ರಾಜ್ಯದ ಸುಮಾರು ಎರಡು ಸಾವಿರದಷ್ಟು ಜನ ಬಲಿಯಾದರು. ಘಟನೆ ನಡೆದು ಇಪ್ಪತ್ತು ವರ್ಷಗಳೇ ಕಳೆದುಹೋದರೂ ಅದು ನಮ್ಮ ಸಮಾಜದಲ್ಲಿ ಸೃಷ್ಟಿಸಿದ ವಿಘಟನೆ, ಧ್ರುವೀಕರಣ ಇನ್ನೂ ಸರಿಯಾಗಿಲ್ಲ. ಈ ದೇಶದ ಧರ್ಮನಿರಪೇಕ್ಷ ಸ್ವರೂಪಕ್ಕೆ ಗೋಧ್ರಾ ಮತ್ತು ನಂತರದ ಗಲಭೆ ಉಂಟು ಮಾಡಿದ ಹಾನಿ ಅಪಾರ.

ಒಂದು ರೀತಿಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರು ಅಚಾನಕ್ಕಾಗಿ ಕಾಣಿಸಿಕೊಳ್ಳಲು ಮುಖ್ಯ ಕಾರಣವೇ ಗುಜರಾತ್ ಗಲಭೆ ಎನ್ನಬಹುದು. 2001ರಲ್ಲಿ ಗುಜರಾತಿನ ಕಚ್ನಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿತ್ತು. ಈ ಭೂಕಂಪದಲ್ಲಿ ಕಚ್ ಒಂದರಲ್ಲೇ 12,300ರಷ್ಟು ಜನ ಪ್ರಾಣ ಕಳೆದುಕೊಂಡಿದ್ದರು. ಭೂಕಂಪದ ನಂತರ ಅಲ್ಲಿನ ಕಳಪೆ ಆಡಳಿತದಿಂದ ನೊಂದ ಮತದಾರರು ಸಾಬರಮತಿ ಕ್ಷೇತ್ರಕ್ಕೆ ನಡೆದ ನಿರ್ಣಾಯಕ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದರು. ದೀರ್ಘ ಕಾಲದವರೆಗೆ ಪಕ್ಷದ ಭದ್ರ ಕೋಟೆಯಾಗಿದ್ದ ಸಾಬರ್ಮತಿಯಲ್ಲೇ ಸೋತಿರುವುದು ಪಕ್ಷದ ಮುಖಂಡರಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿತ್ತು.
ಇದೇ ಸಮಯದಲ್ಲಿ ಆಗಿನ ಪಕ್ಷದ ವರಿಷ್ಠ ಅಟಲ್ ಬಿಹಾರಿ ವಾಜಪೇಯಿ ಅವರು ಮೋದಿ ಹೆಗಲಿಗೆ ಗುಜರಾತಿನ ಮುಖ್ಯಮಂತ್ರಿಗಳ ಹೊಣೆಯನ್ನು ಹೊರಿಸುತ್ತಾರೆ. ಮುಖ್ಯಮಂತ್ರಿಯಾಗಿ ಉಳಿಯಲೇ ಬೇಕಿದ್ದರೆ ಅವರು ಆರು ತಿಂಗಳುಗಳೊಳಗೆ ಚುನಾವಣೆ ಎದುರಿಸಬೇಕಿತ್ತು. ಚುನಾವಣೆ ನಡೆದು ಅವರು ಜಯವನ್ನೂ ಗಳಿಸಿದರು. ಆದರೆ ಅದೊಂದು ಕ್ಷೇತ್ರ ಹೊರತುಪಡಿಸಿ ಉಳಿದೆರೆಡು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿತು. ಫೆಬ್ರವರಿ 2003 ರಲ್ಲಿ ಗುಜರಾತ್ನಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಬೇಕಾಗಿತ್ತು ಮತ್ತು ಪಕ್ಷದ ಮರು ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಹೆಚ್ಚು ಸಮಯವಿರಲಿಲ್ಲ.
ಅದೇ ಫೆಬ್ರವರಿಯಲ್ಲಿ 27ರ ಬೆಳಗ್ಗೆ ಮೇಲೆ 8.00 ರಿಂದ 8.20 ನಡುವೆ ಕರ ಸೇವಕರಿದ್ದ ರೈಲಿಗೆ ದಾಳಿ ನಡೆಸಲಾಯಿತು. ಬೆಳಿಗ್ಗೆ 9 ಗಂಟೆಗೆ ದುರಂತದ ಬಗ್ಗೆ ನನಗೆ ತಿಳಿಯಿತು ಮತ್ತು ಅಧಿಕಾರಿಗಳು ಮತ್ತು ಆಯ್ದ ಸಚಿವರ ಸಭೆಯನ್ನು ಕರೆಯಲು ಇನ್ನೂ ಒಂದೂವರೆ ಗಂಟೆ ತೆಗೆದುಕೊಂಡಿತು ಎಂದು ಮೋದಿ ಅಂದು ಅಧಿಕೃತ ತನಿಖಾ ಸಮಿತಿಗಳಿಗೆ ತಿಳಿಸಿದ್ದರು. ಅಂದರೆ ನಿರ್ಣಾಯಕ ಸಮಯವೊಂದು ಆಗಲೇ ಕಳೆದುಹೋಗಿತ್ತು. ಒಂದು ರೀತಿಯಲ್ಲಿ ಗುಜರಾತ್ ಗಲಭೆಯ ತೀವ್ರತೆ ಹೆಚ್ಚಲು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾದದ್ದೇ ಕಾರಣ ಎನ್ನಬಹುದು.

ಆನಂತರ ನಡೆಯಲಿದ್ದ 2003ರ ಚುನಾವಣೆಗೆ ಮೋದಿಯವರ ಪ್ರಚಾರದ ವರಸೆಯೇ ಬದಲಾಯಿತು. ಪಕ್ಷದ ಸಾಧನೆ, ಅಭಿವೃದ್ಧಿ ಕಾರ್ಯಗಳು ಪ್ರಚಾರದ ಸರಕಾಗಬೇಕಾದ್ದಲ್ಲಿ ತಳುಬುಡವಿಲ್ಲದ ದ್ವೇಷ ಮುಖ್ಯ ಪ್ರಚಾರವಾಯಿತು. ಕಾಲಾನಂತರದಲ್ಲಿ, ಸರ್ಕಾರ ಬೆಂಬಲಿತ ದ್ವೇಷ ಮತ್ತು ಮುಸ್ಲಿಮರ ವಿರುದ್ಧ ಕೋಮು ಪೂರ್ವಾಗ್ರಹವನ್ನು ಪ್ರಚೋದಿಸುವ ಕ್ರಮವು ಜನರ ಚುನಾವಣಾ ಆಯ್ಕೆಯನ್ನು ನಿರ್ಧರಿಸುವಲ್ಲಿ ಪ್ರಾಥಮಿಕ ಮಾನದಂಡವಾಗಿ ಬದಲಾಯಿತು. ಉಳಿದೆಲ್ಲಾ ವಿಚಾರಗಳಿಗಿಂತ ಕೋಮು ಧ್ರುವೀಕರಣ ಅತ್ಯಂತ ಸುಲಭವಾಗಿ ಓಟು ತಂದುಕೊಡುತ್ತದೆ ಎಂಬುವುದನ್ನು ಅತ್ಯಂತ ಶೀಘ್ರವಾಗಿ ಮೋದಿ ಅರ್ಥ ಮಾಡಿಕೊಂಡರು.
ಸರ್ಕಾರವೇ ಮುಂದೆ ನಿಂತು ಮುಸ್ಲಿಮರ ಮೇಲಿನ ಪ್ರತೀಕಾರದ ದಾಳಿಯನ್ನು ಸಮರ್ಥಿಸಿತು. ಈ ನಡುವೆ ಸಪ್ಟೆಂಬರ್ ಒಂಭತ್ತರ ಭಯೋತ್ಪಾದಕ ದಾಳಿ ಮತ್ತು ಸಂಸತ್ ಭವನದ ಮೇಲಿನ ದಾಳಿಯನ್ನೂ ಮೋದಿ ತನ್ನ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡರು. ಈ ಎರಡೂ ಘಟನೆಗಳು ಬಿಜೆಪಿಗೆ ಅಕ್ಕಪಕ್ಕದ ಮುಸಲ್ಮಾನರನ್ನು ಭಯಪಡಬೇಕಾದ ವ್ಯಕ್ತಿಯಂತೆ ಬಿಂಬಿಸಲು ನೆರವಾಯಿತು. ಮುಸ್ಲಿಮರು ರಾಷ್ಟ್ರಕ್ಕೆ ಅಪಾಯವನ್ನುಂಟುಮಾಡಲು ಕೆಲಸ ಮಾಡುತ್ತಿದ್ದಾರೆ ಮತ್ತು ಗಡಿಯಾಚೆಗಿನ ಶತ್ರುಗಳು ಹಾಗೂ ಜಾಗತಿಕ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ ಎಂದು ನಂಬಿಸಲಾಯಿತು.
ಇದಕ್ಕೆ ಸರಿಯಾಗಿ ಭಾರತದ ಮಾಧ್ಯಮಗಳೂ ಮೋದಿಯವರ ಜೊತೆ ನಿಂತವು. ಒಂದೆಡೆ ಒಬ್ಬ ಮುಖ್ಯಮಂತ್ರಿಯಾಗಿ ಮೋದಿ ಎಷ್ಟು ಸಮರ್ಥ ಎಂದು ಬಿಂಬಿಸುತ್ತಲೇ ಇನ್ನೊಂದೆಡೆ ಈ ದೇಶದ ಅಳಿವನ್ನು ಬಯಸುತ್ತಿರುವ ಮುಸ್ಲಿಮರ ಹುಟ್ಟಡಗಿಸಲು ಮೋದಿಯೇ ಅಧಿಕಾರಕ್ಕೆ ಬರಬೇಕು ಎಂಬ ಅಭಿಪ್ರಾಯ ರೂಪಿಸಲಾಯಿತು. ಮತ್ತೊಂದೆಡೆ, ಗುಜರಾತಿನಲ್ಲಿ ತಮ್ಮನ್ನು ಗೆಲುವಿನ ದಡಕ್ಕೆ ಕೊಂಡೊಯ್ದ ದ್ವೇಷದ ರಾಜಕಾರಣವನ್ನು ಇಡೀ ದೇಶಕ್ಕೆ ವಿಸ್ತರಿಸಲು ಸ್ವತಃ ಮೋದಿಯವರೇ ನಿರ್ಧಾರ ಮಾಡಿದ್ದರು. 2014ರ ಚುನಾವಣಾ ಪ್ರಚಾರದಲ್ಲಿ ದ್ವೇಷ, ಹಗೆತನವೇ ಮೇಲುಗೈ ಸಾಧಿಸಿತು.
ದುರಂತವೆಂದರೆ ಗೋಧ್ರಾ ಘಟನೆ ನಡೆದು ಇಪ್ಪತ್ತು ವರ್ಷಗಳೇ ಕಳೆದುಹೋಗಿವೆ. ದೇಶದ ಧರ್ಮ ನಿರಪೇಕ್ಷ ಸ್ವಭಾವದ ಮೇಲೆ ಅದು ಬೀರಿದ ಪ್ರಭಾವ ಈ ಇಪ್ಪತ್ತು ವರ್ಷಗಳಲ್ಲಿ ಮತ್ತಷ್ಟು ಹೆಚ್ಚಿದೆ. ಗುಜರಾತಿನ ಸಾಮಾನ್ಯ ಶಾಸಕರೊಬ್ಬರನ್ನು ಪ್ರಧಾನ ಮಂತ್ರಿಯ ಖುರ್ಚಿಯ ತನಕ ತಂದು ನಿಲ್ಲಿಸಿದ ಖ್ಯಾತಿ ಗೋಧ್ರಾ ಘಟನೆಗೆ ಸಲ್ಲುವಂತೆ ಈ ದೇಶದ ಸಾಮಾನ್ಯ ಜನತೆಯ ಮಧ್ಯೆ ಅಪನಂಬಿಕೆ ಬೀಜ ಬಿತ್ತಿದ ಕುಖ್ಯಾತಿಯೂ ಗೋಧ್ರಾ ಗಲಭೆಗೆ ಸಲ್ಲುತ್ತದೆ. ಕೋಮು ಹಿಂಸಾಚಾರವೊಂದು ಇಪ್ಪತ್ತು ವರ್ಷ ಕಳೆದ ಮೇಲೂ ಇಷ್ಟು ದೊಡ್ಡ ಪ್ರಜಾಪ್ರಭುತ್ವ ದೇಶವೊಂದರ ರಾಜಕೀಯವನ್ನು ನಿರ್ಧರಿಸುತ್ತದೆ ಎಂದರೆ ನಾವು ಒಂದು ದೇಶವಾಗಿ ಸೋತಿದ್ದೇವೆ ಎಂದೇ ಅರ್ಥ.