ತಮಿಳುನಾಡು (Tamil Nadu) ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (urban local body elections) ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) (Dravida Munnetra Kazhagam) (DMK) ಎಲ್ಲಾ 21 ಮಹಾನಗರ ಪಾಲಿಕೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯತ್‌ಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದೆ. ಪ್ರತಿಪಕ್ಷವಾದ ಎಐಎಡಿಎಂಕೆ (AIADMK) ಎರಡನೇ ಸ್ಥಾನವನ್ನು ಗಳಿಸಿದರೆ, ಬಿಜೆಪಿಯ ತಮಿಳುನಾಡು ಘಟಕವು ಶೇಕಡಾ 5 ಕ್ಕಿಂತ ಹೆಚ್ಚು ಮತ ಹಂಚಿಕೆಯೊಂದಿಗೆ ರಾಜ್ಯದಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿದೆ ಎಂದು ಹೇಳಿಕೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಡಿಎಂಕೆ ಮತ್ತು ಎಐಎಡಿಎಂಕೆ ನಂತರ ಬಿಜೆಪಿ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಆದರೆ ವಾಸ್ತವ ಯಾವತ್ತಿಗೂ ಭಿನ್ನ. ನಿಜಕ್ಕೂ ಬಿಜೆಪಿ ತಮಿಳುನಾಡಿನಲ್ಲಿ ಲಯ ಕಂಡುಕೊಂಡಿದೆಯಾ?
ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 2011 ಕ್ಕೆ ಹೋಲಿಸಿದರೆ ನಾಗರಿಕ ಚುನಾವಣೆಯಲ್ಲಿ ಬಿಜೆಪಿಯ ಒಟ್ಟಾರೆ ಪಾಲು ಶೇಕಡಾ 0.7 ರಷ್ಟು ಸ್ವಲ್ಪ ಹೆಚ್ಚಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಗೆಲುವು ನಾಗರಿಕ ಚುನಾವಣೆಯಲ್ಲಿ ಬಿಜೆಪಿಯ ಲೆಕ್ಕಾಚಾರವನ್ನು ಹೆಚ್ಚಿಸಿದೆ. ಬಿಜೆಪಿ ಗೆದ್ದ 308 ಸ್ಥಾನಗಳಲ್ಲಿ, 200 ಕನ್ಯಾಕುಮಾರಿಯಿಂದ (Kanyakumari) ಬಂದವು, ಹೀಗಾಗಿ ರಾಷ್ಟ್ರೀಯ ಪಕ್ಷವನ್ನು ತಮಿಳುನಾಡಿನಲ್ಲಿ ಕೇವಲ ಒಂದೇ ಜಿಲ್ಲಾ ಕೇಂದ್ರಿತವಾಗಿ ನೋಡಲಾಯಿತು.
2011 ರಲ್ಲಿ 820 ಇದ್ದ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ 2022 ರಲ್ಲಿ 1,374 ಕ್ಕೆ ಏರಿತು. ಆದರೆ 2011 ರಲ್ಲಿ ಕೇವಲ ನಾಲ್ಕು ಕಾರ್ಪೊರೇಷನ್ ವಾರ್ಡ್‌ಗಳನ್ನು ಗೆದ್ದ ಬಿಜೆಪಿ ಈ ಚುನಾವಣೆಯಲ್ಲಿ 22 ವಾರ್ಡ್‌ಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2011 ರಲ್ಲಿ 3,697 ಇದ್ದ ಪುರಸಭೆಯ ಒಟ್ಟು ವಾರ್ಡ್‌ಗಳ ಸಂಖ್ಯೆ 2022 ರಲ್ಲಿ 3,843 ಕ್ಕೆ ಏರಿದೆ. 2011 ರಲ್ಲಿ 3,697 ವಾರ್ಡ್‌ಗಳಲ್ಲಿ 37 ರಲ್ಲಿ ಗೆದ್ದ ಬಿಜೆಪಿ 2022 ರಲ್ಲಿ 3,843 ವಾರ್ಡ್‌ಗಳ ಪೈಕಿ ಕೇವಲ 56 ಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ! ಅಲ್ಲದೆ, ಕಳೆದ 10 ವರ್ಷಗಳಲ್ಲಿ ಬಹುತೇಕ ಪಟ್ಟಣ ಪಂಚಾಯಿತಿಗಳು ಮೇಲ್ದರ್ಜೆಗೇರಿದ ಕಾರಣ, ಪಟ್ಟಣ ಪಂಚಾಯಿತಿಗಳ ಒಟ್ಟು ವಾರ್ಡ್‌ಗಳ ಸಂಖ್ಯೆ 8,299 ರಿಂದ 7,621 ಕ್ಕೆ ಇಳಿಕೆಯಾಗಿದೆ. ಆದರೆ ಮೂರನೇ ಸ್ಥಾನ ಪಡೆದಿರುವುದಾಗಿ ಹೇಳಿಕೊಂಡಿರುವ ಬಿಜೆಪಿ 7,621 ವಾರ್ಡ್‌ಗಳ ಪೈಕಿ ಕೇವಲ 230ರಲ್ಲಿ ಮಾತ್ರ ಗೆದ್ದಿದೆ. 2011ರಲ್ಲಿ 8,299 ಪಟ್ಟಣ ಪಂಚಾಯಿತಿಯ 185 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಅಲ್ಲದೆ 10 ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಕೊಯಮತ್ತೂರು, ನಾಗರ್‌ಕೋಯಿಲ್ ಮತ್ತು ತಿರುಪ್ಪೂರ್‌ಗಳಲ್ಲಿ ಪ್ರಬಲವಾಗಿದೆ ಎಂದು ಹೇಳಿಕೊಂಡ ಬಿಜೆಪಿ ಈ ಪ್ರದೇಶಗಳಲ್ಲಿ ದೊಡ್ಡ ಗೆಲುವು ಸಾಧಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ನಾಗರಕೋಯಿಲ್‌ನಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಆಡಳಿತಾರೂಢ ಡಿಎಂಕೆ ಮೈತ್ರಿಕೂಟದ ಎದುರು ಮಕಾಡೆ ಮಲಗಿದೆ.
ಅಣ್ಣಾಮಲೈ, ಕೇಂದ್ರ ರಾಜ್ಯ ಸಚಿವ ಎಲ್.ಮುರುಗನ್ ಮತ್ತು ಶಾಸಕಿ ವನತಿ ಶ್ರೀನಿವಾಸನ್ ಪ್ರಚಾರಕ್ಕಾಗಿ ಸಾಕಷ್ಟು ಸಮಯವನ್ನು ಕೊಯಮತ್ತೂರಿನಲ್ಲಿ ಮೀಸಲಿಟ್ಟ ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಹೊಂದಿದ್ದರೂ ಕಳಪೆ ಪ್ರದರ್ಶನ ನೀಡಿದೆ. ಕೊಯಮತ್ತೂರಿನಲ್ಲಿ, ಕೇಸರಿ ಪಕ್ಷವು ತಾನು ಸ್ಪರ್ಧಿಸಿದ್ದ 97 ವಾರ್ಡ್‌ಗಳಲ್ಲಿ 80 ರಲ್ಲಿ 1,000 ಕ್ಕಿಂತ ಕಡಿಮೆ ಮತಗಳನ್ನು ಮತ್ತು ಸ್ಪರ್ಧಿಸಿದ 97 ರಲ್ಲಿ 34 ವಾರ್ಡ್‌ಗಳಲ್ಲಿ 500 ಕ್ಕಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದೆ. ಕೊಯಮತ್ತೂರಿನಲ್ಲಿ ಬಿಜೆಪಿ ಸ್ಪರ್ಧಿಸಿದ್ದ 97 ವಾರ್ಡ್‌ಗಳ ಪೈಕಿ ನಾಲ್ಕರಲ್ಲಿ ಮಾತ್ರ 2000ಕ್ಕೂ ಹೆಚ್ಚು ಮತಗಳನ್ನು ಗಳಿಸಿದೆ.
ಏತನ್ಮಧ್ಯೆ, ಚೆನ್ನೈನಲ್ಲಿ ಬಿಜೆಪಿಗೆ ಜನರಲ್ಲಿ ಸ್ವೀಕಾರವಿದೆ ಎಂದು ಪಕ್ಷ ಹೇಳಿಕೊಂಡಿದೆ, ಚೆನ್ನೈ ಪಾಲಿಕೆಯ ಕೇವಲ 134 ನೇ ವಾರ್ಡ್‌ನಲ್ಲಿ ಮಹಾತ್ಮಾ ಗಾಂಧಿಯನ್ನು (Mahatma Gandhi) ಕೊಂದ ಗೋಡ್ಸೆಯನ್ನು ಒಮ್ಮೆ ಹೊಗಳಿದ ಬಿಜೆಪಿಯ ಉಮಾ ಆನಂದನ್ ಅವರು ಕಾಂಗ್ರೆಸ್ ಮತ್ತು ಎಐಎಡಿಎಂಕೆಯನ್ನು ಸೋಲಿಸಿದ್ದಾರೆ. ಆದರೆ ಡಿಎಂಕೆ ಶೇ 90ಕ್ಕಿಂತ ಹೆಚ್ಚು ಸ್ಥಾನಗಳನ್ನು ಹೊಂದಿರುವ ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆದ್ದ ಒಂದು ಸ್ಥಾನ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ (BJP) ಪಡೆದ ಮತಗಳಲ್ಲಿ ಭಾರಿ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ.
ವಾಸ್ತವ ಅಂಕಿ ಅಂಶಗಳು ಹೀಗಿರುವಾಗ ಬಿಜೆಪಿ ತಮಿಳುನಾಡಿನಲ್ಲಿ ಮೂರನೇ ಅತಿ ದೊಡ್ಡ ಪಕ್ಷ ಎಂದು ಬಿಂಬಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯಕರ. ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ಹಾಗೆ ಬಿಜೆಪಿ ವರ್ತಿಸಿದೆ. ಇದನ್ನೇ ಕೆಲವು ಕುರುಡು ಮಾಧ್ಯಮಗಳು ಬಿಜೆಪಿ ಮಹಾನ್ ಸಾಧನೆ ಮಾಡಿದೆ ಅಂತ ವಿಜ್ರಂಭಿಸಿ ವರದಿ ಮಾಡಿವೆ.