ಬಾಯಲ್ಲಿ ಬೆಣ್ಣೆ.. ಬಗಲಲ್ಲಿ ದೊಣ್ಣೆ ಎನ್ನುವುದು ಕರುನಾಡಿನಲ್ಲಿ ಬಾಯಿಂದ ಬಾಯಿಗೆ ಬಂದಿರೋ ಗಾಧೆ ಮಾತು. ವೇದ ಸುಳ್ಳಾದರೂ ಗಾಧೆ ಸುಳ್ಳಾಗದು ಅನ್ನೋ ಮಾತಿದೆ. ಯಾಕಂದ್ರೆ ಜನ ಸಾಮಾನ್ಯರು ತಮ್ಮ ಅನುಭವದಿಂದ ಈ ಮಾತುಗಳನ್ನು ಬಳಕೆ ಮಾಡಿಕೊಂಡು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಂದರೆ ಬಾಯಲ್ಲಿ ಮುದ್ದು ಮುದ್ದಾಗಿ ಮಾತನಾಡಿ, ಬಗಲು ಅಂದ್ರೆ ಕಂಕುಳಲ್ಲಿ ದೊಣ್ಣೆ ಹಿಡಿದು ಬೆದರಿಸುವುದು ಎಂದರ್ಥ. ಇದನ್ನು ಬಿಜೆಪಿ ಹೈಕಮಾಂಡ್ ಅಕ್ಷರಶಃ ಪಾಲನೆ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸೋತು ಸುಣ್ಣ ಆಗಿದ್ದರೂ ಕೂಡ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುವುದನ್ನು ಮಾತ್ರ ಬಿಜೆಪಿ ಹೈಕಮಾಂಡ್ ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ.
ಕಾಂಗ್ರೆಸ್ ವಿರುದ್ಧ ಪ್ರತಿಭಟನೆಗೆ ಬೇಕು ಬಿಎಸ್ ಯಡಿಯೂರಪ್ಪ..!

ಕಾಂಗ್ರೆಸ್ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡುವುದಕ್ಕೂ ಬಿಜೆಪಿಯಲ್ಲಿ ನಾಯಕರು ಇಲ್ಲದ ಪರಿಸ್ಥಿತಿ ಎದುರಾಗಿದೆ. ಇದೇ ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವಂತೆ ಸೂಚಿಸಿತ್ತು. ಮಂಗಳವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿದ್ದರು. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಹೈಕಮಾಂಡ್ ಪರದಾಡುತ್ತಿರುವಾಗಲೂ ಯಡಿಯೂರಪ್ಪ, ಭಾರತೀಯ ಜನತಾ ಪಾರ್ಟಿಯ ದೆಹಲಿ ನಾಯಕರ ಬಗ್ಗೆ ಉತ್ತಮ ಮಾತನ್ನು ಹೇಳಿದ್ದರು. ಆದರೆ ಹೈಕಮಾಂಡ್ ಮಾತ್ರ ಯಡಿಯೂರಪ್ಪನನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸುವ ಲಕ್ಷಣ ಕಾಣಿಸ್ತಿಲ್ಲ.
ರೇಣುಕಾಚಾರ್ಯ ಬಳಿಕ ಮತ್ತೋರ್ವ ಆಪ್ತನಿಗೆ ನೋಟಿಸ್..!

ಹೊನ್ನಾಳಿಯ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮಾಜಿ ಸಿಎಂ ಯಡಿಯೂರಪ್ಪ ಅವರ ಅತ್ಯಾಪ್ತರಲ್ಲಿ ಒಬ್ಬರು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಬೇರೆ ಯಾರಿಗೂ ನೋಟಿಸ್ ನೀಡದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ರೇಣುಕಾಚಾರ್ಯಗೆ ಮಾತ್ರ ನೋಟಿಸ್ ನೀಡಿತ್ತು. ಇದೀಗ ರಾಜ್ಯ ಬಿಜೆಪಿಯಲ್ಲೊ ಕೋಲ್ಡ್ ವಾರ್ ಜೋರಾಗಿದ್ದು, ಮತ್ತೋರ್ವ ಯಡಿಯೂರಪ್ಪ ಆಪ್ತನನ್ನು ಟಾರ್ಗೆಟ್ ಮಾಡಿ ನೋಟಿಸ್ ನೀಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರುದ್ರೇಶ್ ವಿರುದ್ಧ ದೂರು ಕೊಡಲಾಗಿತ್ತು. ಪಕ್ಷ ವಿರೋಧಿ ಕೃತ್ಯವೆಸಗಿದ್ದಾರೆ ಅಂತ ವಿ.ಸೋಮಣ್ಣ ದೂರು ನೀಡಿದ್ದರು. ಇದೀಗ ರುದ್ರೇಶ್‌ಗೆ ಪಕ್ಷವಿರೋಧಿ ಚಟುವಟಿಕೆ ಆರೋಪದ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಇದು ಯಡಿಯೂರಪ್ಪ ಅವರನ್ನು ಕುಗ್ಗಿಸಲು ಹೈಕಮಾಂಡ್ ಮಾಡ್ತಿರೋ ಕುತಂತ್ರ ಅನ್ನೋ ಮಾತು ಬಿಜೆಪಿಯಲ್ಲೇ ಕೇಳಿ ಬರ್ತಿದೆ.
ಪ್ರತಿಭಟನೆ ಮಾಡಿಸಿದ್ದೂ ಬಿಜೆಪಿ, ಗುರ್ ಅಂದಿದ್ದೂ ಬಿಜೆಪಿ..!

ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಳಸಿಕೊಂಡು ಪ್ರತಿಭಟನೆ ಮಾಡಿಸಿದ್ದು ಬಿಜೆಪಿ ನಾಯಕರೇ ಸರಿ. ಆದರೆ ಯಡಿಯೂರಪ್ಪ ಜೊತೆಯಲ್ಲಿ ರುದ್ರೇಶ್ ಕಾಣಿಸಿಕೊಂಡಿದ್ದಕ್ಕೆ ಬಿಜೆಪಿ ನಾಯಕರಲ್ಲಿ ಅಸಮಾಧಾನದ ಕಿಚ್ಚು ಹೊತ್ತಿಕೊಂಡಿದೆ. ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆ ವೇಳೆ ರುದ್ರೇಶ್ ಪ್ರತ್ಯಕ್ಷ ಆಗಿದ್ದಕ್ಕೆ ಮಾಜಿ ಸಚಿವ ವಿ ಸೋಮಣ್ಣ ಅಸಮಧಾನಗೊಂಡಿದ್ದರು. ರುದ್ರೇಶ್ ವೇದಿಕೆ ಹತ್ತುತ್ತಿದ್ದ ಹಾಗೆ ವೇದಿಕೆಯಿಂದ ಸೋಮಣ್ಣ ಆಪ್ತರು ಹೊರನಡೆದಿದ್ದರು. ಇದೀಗ ವಿ.ಸೋಮಣ್ಣ ಹಾಗು ಅರುಣ್ ಸೋಮಣ್ಣ ನೀಡಿದ್ದ ದೂರಿನ ಆಧಾರದಲ್ಲಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಪ್ರತಿಭಟನೆಗೆ ಕರೆದಿದ್ದೂ ಬಿಜೆಪಿ. ಈಗ ಆಪ್ತರನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ಯಡಿಯೂರಪ್ಪನನ್ನು ಟಾರ್ಗೆಟ್ ಮಾಡುತ್ತಿರುವುದು ಕೂಡ ಬಿಜೆಪಿ. ಇದಕ್ಕೇ ಅಲ್ವಾ..? ದೊಡ್ಡವರು ಹೇಳೋದು ಬಾಯಲ್ಲಿ ಬೆಣ್ಣೆ.. ಬಗಲಲ್ಲಿ ದೊಣ್ಣೆ ಅಂತಾ..
ಕೃಷ್ಣಮಣಿ