ಆಗಸ್ಟ್ ಹದಿನೈದರಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡುವುದರೊಂದಿಗೆ ತಾಲಿಬಾನ್ ಕಾಬೂಲನ್ನು ವಶಪಡಿಸಿಕೊಂಡು ಅಧಿಕೃತವಾಗಿ ಅಫ್ಘಾನ್ ಆಡಳಿತವನ್ನು ಕೈಗೆ ತೆಗೆದುಕೊಂಡಿತು. ಆದರೆ ತಾಲಿಬಾನ್ ಕಾಬೂಲ್ ಪ್ರವೇಶಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ “ನಾನು ಎಂದಿಗೂ, ಯಾವುದೇ ಸಂದರ್ಭದಲ್ಲಿ ತಾಲಿಬಾನ್ ಭಯೋತ್ಪಾದಕರಿಗೆ ತಲೆಬಾಗುವುದಿಲ್ಲ. ನನ್ನ ನಾಯಕ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಆತ್ಮ ಮತ್ತು ಪರಂಪರೆಗೆ ನಾನು ಎಂದಿಗೂ ದ್ರೋಹ ಮಾಡುವುದಿಲ್ಲ. ನನ್ನ ಮಾತನ್ನು ಪಾಲಿಸುವ ಲಕ್ಷಾಂತರ ಜನರನ್ನು ನಾನು ನಿರಾಶೆಗೊಳಿಸುವುದಿಲ್ಲ. ನಾನು ಎಂದಿಗೂ ತಾಲಿಬಾನಿಗಳೊಂದಿಗೆ ಒಂದೇ ಸೂರಿನಡಿ ಇರುವುದಿಲ್ಲ” ಎಂದು ಹೇಳಿದ್ದಾರೆ.
ಆ ಸಂದರ್ಭದಲ್ಲಿ ಸಲೇಹ್ ಇರುವಿಕೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಅಂತರರಾಷ್ಟ್ರೀಯವಾಗಿ ಎದ್ದಿದ್ದವು. ಅವರು ಅಫ್ಘಾನಿಸ್ತಾನ ಸರ್ಕಾರದ ಪ್ರಮುಖ ನಾಯಕರ ಕೆಲವು ಚಿತ್ರಗಳಿಂದ ಸ್ಪಷ್ಟವಾಗಿ ಕಾಣೆಯಾಗಿದ್ದರು ಮತ್ತು ಪಾಕಿಸ್ತಾನದ ಪರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳು ಅವರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳನ್ನು ಹರಡಿದ್ದವು. ಸಲೇಹ್ ಹೊರಬಂದು ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಸಲೇಹ್ ಟ್ವೀಟ್ ಮಾಡಿದ ದಿನ ಚಿತ್ರವೊಂದು ಹೊರಬಿದ್ದಿದ್ದು ಪಂಜ್‌ಶಿರ್ ಕಣಿವೆಯಲ್ಲಿ ದಿವಂಗತ ತಾಲಿಬಾನ್ ವಿರೋಧಿ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಮಗ ಅಹ್ಮದ್ ಮಸೂದ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಸಲೇಹ್ ಅನ್ನು ಅದು ತೋರಿಸಿದೆ. ಪಂಜ್‌ಶಿರ್ ಕಣಿವೆಯು ತಾಲಿಬಾನರ ಕೈಯಿಂದ ಹೊರಗಿರುವ ಏಕೈಕ ಪ್ರದೇಶವಾಗಿದ್ದು, ಅದರ ಭೌಗೋಳಿಕ ಸಂರಚನೆಯಿಂದಾಗಿ ಅದು ಇನ್ನೂ ತಾಲಿಬಾನ್ ಕೈವಶವಾಗಿಲ್ಲ. ಈ ಚಿತ್ರ ಪಂಜಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಮೈತ್ರಿಕೂಟ ರಚನೆಯಾಗಿದೆ ಎಂಬ ವರದಿಗೆ ಮತ್ತಷ್ಟು ಇಂಬು ನೀಡಿದೆ.
ಹಿರಿಯ ತಾಜಿಕ್ ಕಮಾಂಡರ್, ಅಹ್ಮದ್ ಷಾ ಮಸೂದ್ ಅವರು ಭಾರತ, ಇರಾನ್ ಮತ್ತು ರಷ್ಯಾ ಸೇರಿದಂತೆ ಗಡಿ ದೇಶಗಳಿಂದ ಸಜ್ಜಿತವಾದ ಉತ್ತರ ಒಕ್ಕೂಟದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದು ತಾಲಿಬಾನ್‌ನ್ನು ಪಂಜಶಿರ್ ಪ್ರದೇಶದಿಂದ ಹೊರಹಾಕುವಲ್ಲಿ ಯಶಸ್ವಿಯಾಗಿತ್ತು. 1990 ರ ದಶಕದಲ್ಲಿ, ಅವರು ಬುರ್ಹಾನುದ್ದೀನ್ ರಬ್ಬಾನಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರೂ ಆಗಿದ್ದರು. ಸೆಪ್ಟೆಂಬರ್ 9, 2001 ರಂದು ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಎರಡು ದಿನಗಳ ಮೊದಲು, ಮಸೂದ್ ಅವರು ತನ್ನ ನಿವಾಸದಲ್ಲಿ ಪತ್ರಕರ್ತರ ಸೋಗಿನಲ್ಲಿ ಬಂದ ಇಬ್ಬರು ಅಲ್ ಖೈದಾ ವ್ಯಕ್ತಿಗಳ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು.
ಪಂಜ್‌ಶಿರ್‌ನಲ್ಲಿ ಜನಿಸಿದ ಸಲೇಹ್ ಅವರು ಇದೇ ಅಹ್ಮದ್ ಶಾ ಮಸೂದ್ ನೇತೃತ್ವದಲ್ಲಿ ಹೋರಾಟ ಮಾಡಿದವರು ಮತ್ತು 1990 ರ ಉತ್ತರಾರ್ಧದಲ್ಲಿ ಉತ್ತರ ಒಕ್ಕೂಟದ ಸದಸ್ಯರಾಗಿ ತಾಲಿಬಾನ್ ವಿಸ್ತರಣೆಯ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು. ಭಾರತೀಯ ಗುಪ್ತಚರ ಸಂಸ್ಥೆಗಳಿಂದ ತರಬೇತಿ ಪಡೆದ ಅವರು ಅಫಘಾನ್ ಸರ್ಕಾರದ ಗುಪ್ತಚರ ಇಲಾಖೆಯ ಮುಖ್ಯಸ್ಥರಾದರು ಮತ್ತು ನಂತರ ಆಂತರಿಕ ಸಚಿವರು ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಾಲಿಬಾನ್ ಮತ್ತು ಸಂಬಂಧಿತ ಸಂಘಟನೆಗಳಿಂದ ಅವರ ಮೇಲೆ ಹಲವಾರು ಬಾರಿ ಹತ್ಯಾಪ್ರಯತ್ನಗಳು ನಡೆದಿವೆ.
ಪಂಜ್‌ಶಿರ್‌ನಲ್ಲಿ ತಾಲಿಬಾನ್ ವಿರೋಧಿ ರಂಗವು ರೂಪುಗೊಳ್ಳುತ್ತಿದೆ ಎಂದು ಬಹುರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಾಷಿಂಗ್ಟನ್ ಪೋಸ್ಟ್ ವರದಿಗಾರ ಎಝ್ಝಾತುಲ್ಲಾಹ್ ಮೆಹರ್ದಾದ್ ಪಂಜ್‌ಶಿರ್‌ನಲ್ಲಿ ತಾಲಿಬಾನ್ ವಿರೋಧಿ ಫ್ರಂಟ್ ರಚನೆಯಾಗುತ್ತಿದೆ ಎಂಬ ಸುದ್ದಿಯನ್ನು ದೃಢಪಡಿಸಿದ್ದಾರೆ. “ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಮತ್ತು ಮಾಜಿ ರಕ್ಷಣಾ ಮಂತ್ರಿ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಅಫ್ಘಾನಿಸ್ತಾನದ ಪಂಜ್‌ಶಿರ್‌ನಲ್ಲಿ ತಾಲಿಬಾನ್ ವಿರುದ್ಧ ಪ್ರತಿರೋಧ ಪಡೆ ರಚಿಸುತ್ತಿದ್ದಾರೆ” ಎಂದು ಅವರು ವರದಿ ಮಾಡಿದ್ದಾರೆ.
ಬಿಬಿಸಿಯ ಯಾಲ್ದಾ ಹಕೀಮ್ ಸಹ ಈ ಸುದ್ದಿಯನ್ನು ದೃಢಪಡಿಸಿದ್ದು, “ಕಾಬೂಲ್‌ನಿಂದ ಸುಮಾರು ಮೂರು ಗಂಟೆಗಳ ಪ್ರಯಾಣದಲ್ಲಿ ಪಂಜಶೀರ್‌ನಲ್ಲಿ ತಾಲಿಬಾನ್ ವಿರೋಧಿ ಒಕ್ಕೂಟವು ಉಪಾಧ್ಯಕ್ಷ ಸಲೇಹ್ ಮತ್ತು ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್‌ರ ನೇತೃತ್ವದಲ್ಲಿ ರಚನೆಯಾಗುತ್ತಿದೆ” ಎಂದು ವರದಿ ಮಾಡಿದ್ದಾರೆ.