ಅತ್ಯಂತ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿರುವ ಛತ್ತೀಸ್ ಘಡದಲ್ಲಿ ಕಬ್ಬಿಣದ ಅದಿರು ಕೂಡಾ ಯಥೇಚ್ಚವಾಗಿ ಲಭ್ಯವಿದೆ. ಈ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಸುಮಾರು 4,920 ಹೆಕ್ಟೇರ್’ನಷ್ಟು ಕಾಡು ಪ್ರದೇಶ ಗಣಿಗಾರಿಕೆಗೆ ಆಹುತಿಯಾಗಿದೆ. ವಿರಳವಾದ ಸಸ್ಯಪ್ರಬೇಧ ಹಾಗು ಪ್ರಾಣಿ ಪ್ರಬೇಧವನ್ನು ಒಳಗೊಂಡಿರುವ ಈ ಅರಣ್ಯ ಪ್ರದೇಶವು ದಿನಗಳೆದಂತೆ ಗಣಿಗಾರಿಕೆಯ ಮುಷ್ಟಿಯೊಳಗೆ ಸಿಲುಕಿ ನರಳಾಡುತ್ತಿದೆ.
ಛತ್ತೀಸ್ ಘಡ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದಾಂತೇವಾಡ, ಬಸ್ತಾರ್, ಕಾನ್ಕೇರ್, ನಾರಾಯಣಪುರ್, ರಾಜನಂದಗಾಂವ್, ದುರ್ಗ್ ಹಾಗೂ ಕಬೀರಧಾಮ್ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಸುಮಾರು 370 ಕಿ.ಮೀ.ಗಳಷ್ಟು ಉದ್ದದ ಖನಿಜ ಸಂಪತ್ತು ಕೈಗಾರಿಕೆಗಳನ್ನು ಕೈಬೀಸಿ ಕರೆಯುತ್ತಿದೆ. ಛತ್ತೀಸ್ ಘಡದಲ್ಲಿ ಸುಮಾರು 4031ಮಿಲಿಯನ್ ಟನ್’ನಷ್ಟು ಹೆಮಟೈಟ್ ಅದಿರು ಲಭ್ಯವಿದೆ. ದೇಶದ ಶೇ. 91ರಷ್ಟು ಕಬ್ಬಿಣದ ಅದಿರು ಛತ್ತೀಸ್ ಘಡದಲ್ಲಿ ಶೇಖರವಾಗಿದೆ.
ಆದರೆ, ಇಲ್ಲಿನ ನಿಜವಾದ ಸಮಸ್ಯೆ ಅಡಗಿರುವುದು ಈ ಕಾಡನ್ನೇ ನಂಬಿ ಬದುಕುತ್ತಿರುವ ಆದಿವಾಸಿ ತಾಂಡಾಗಳಲ್ಲಿ. ಬಸ್ತಾರ್’ನ ದಟ್ಟ ಅರಣ್ಯಗಳ ನಡುವೆ ಆದಿವಾಸಿ ಸಮುದಾಯಗಳು ಹಿಂದಿನಿಂದಲೂ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಾ ಬಂದಿವೆ. ಈಗ ಗಣಿಗಾರಿಕೆಯ ನೆಪದಲ್ಲಿ ಮರಗಳಿಗೆ ಕೊಡಲಿ ಇಡಬೇಕಾದ ಪರಿಸ್ಥಿತಿ ಬಂದಿದ್ದರಿಂದ ಈ ಆದಿವಾಸಿ ಸಮುದಾಯಗಳ ವಾಸ್ತವ್ಯಕ್ಕೆ ಅಪಾಯ ಒದಗಿ ಬಂದಿದೆ. ಹಲವು ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ಗಣಿಗಾರಿಕೆಗೆ ಅನುಮತಿ ಪಡೆಯಲಾಗಿದೆ ಎಂದು ಸ್ಥಳಿಯ ಆದಿವಾಸಿಗಳು ಆರೋಪವನ್ನೂ ಮಾಡಿದ್ದಾರೆ.
ನಾರಾಯಣಪುರ ಜಿಲ್ಲೆಯಲ್ಲಿ ಜೈಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಕಂಪೆನಿಗೆ ಸುಮಾರು 192 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಪ್ರದೇಶದಲ್ಲಿ ಕಬ್ಬಿಣ ಅದಿರಿನ ಶೇಖರಣೆ ದಟ್ಟವಾಗಿತ್ತು. 2016ರಲ್ಲಿ ಸ್ಥಳೀಯ ಜನರ ವಿರೋಧದ ನಡುವೆಯೂ ಇಲ್ಲಿ ಗಣಿಗಾರಿಕೆ ಆರಂಭವಾಗಿತ್ತು. ಐದು ವರ್ಷಗಳ ನಂತರ ಇದೇ ಕಂಪೆನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮರು ಮನವಿ ಸಲ್ಲಿಸಿದೆ. ಮತ್ತೆ ಇಲ್ಲಿನ ಸ್ಥಳೀಯ ಆದಿವಾಸಿಗಳ ವಿರೋಧ ಅರಣ್ಯ ರೋಧನವಾಗಿಯೇ ಉಳಿದಿದೆ.
ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯಿಲ್ಲದೆಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.ಇಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯು ಉಗ್ರ ಸ್ವರೂಪವನ್ನು ತಾಳಿದೆ.
ನಾರಾಯಣಪುರದ ಎನ್ ಜಿ ಒ ಒಂದರ ಸದಸ್ಯರಾಗಿರುವ ರಾಜೇಂದ್ರ ಕುಮಾರ್ ಅವರು ಗಣಿಗಾರಿಕೆಗೆ ಅಲ್ಲಿನ ಆದಿವಾಸಿಗಳು ಒಡ್ಡಿರುವ ವಿರೋಧಕ್ಕೆ ಬೆಂಬಲ ನೀಡಿದ್ದಾರೆ “ಇಲ್ಲಿನ ಆದಿವಾಸಿಗಳು ತಮ್ಮ ಜೀವನಕ್ಕಾಗಿ ಕಾಡನ್ನು ಅವಲಂಬಿಸಿದ್ದಾರೆ. ಬಿದಿರು, ತೆಂಡು ಎಲೆ ಹಾಗೂ ಉರುವಲು ಇವರ ಜೀವನೋಪಾಯವಾಗಿದೆ. ಆದಿವಾಸಿಗಳು ಪವಿತ್ರವೆಂದು ನಂಬಿರುವ ಅರಣ್ಯ ದೇವತೆಗಳ ಅಸ್ಥಿತ್ವಕ್ಕೂ ಗಣಿಗಾರಿಕೆ ಅಪಾಯ ಉಂಟುಮಾಡಿದೆ. ಈ ಕಾರಣಕ್ಕಾಗಿ ಆದಿವಾಸಿಗಳು ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದಾರೆ. ಇದರ ಹೊರತಾಗಿ, ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುವ ಭಯವೂ ಇದೆ,” ಎಂದು ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಗಣಿಗಾರಿಕೆ ಆರಂಭಿಸಿದ ಬಳಿಕ ಆದಿವಾಸಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಈ ಭರವಸೆಯೂ ಈಗ ಪೊಳ್ಳಾಗಿದೆ. ಸ್ಥಳೀಯರಿಗೆ ಯಾವುದೇ ಉದ್ಯೋಗವನ್ನು ನೀಡಲಾಗಿಲ್ಲ ಎಂದು ಅಲ್ಲಿನ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ಕೇವಲ ಅರಣ್ಯವನ್ನೇ ನಂಬಿಕೊಂಡು ಬದುಕುತ್ತಿರುವ ಆದಿವಾಸಿ ಸಮುದಾಯಗಳಿಗೆ ಅರಣ್ಯ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಇಂತಹ ಸಂದರ್ಭಧಲ್ಲಿ ಅವರನ್ನು ಒಕ್ಕಲೆಬ್ಬಿಸುವುದು ಆದಿವಾಸಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅವರ ಬದುಕಿನಲ್ಲಿ ಎಂದೂ ಸರಿಯದ ಕಗ್ಗತ್ತಲು ಆವರಿಸಿಕೊಳ್ಳುವ ಭಯವಿದೆ. ಹಿಂದಿನ ಸರ್ಕಾರ ಖಾಸಗಿ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸಿ ಆದಿವಾಸಿಗಳ ಜೀವನದ ಮೇಲೆ ಬರೆ ಎಳೆದಿತ್ತು. ಇನ್ನಾದರೂ, ಗಣಿಗಾರಿಕೆಯ ಕಾರ್ಮೋಡಗಳು ದೂರ ಸರಿಯುವ ಆಶಾಭಾವನೆಯನ್ನು ಸರ್ಕಾರವು ಆದಿವಾಸಿಗಳಿಗೆ ನೀಡಬೇಕಿದೆ.